ಜೈಸ್ವಾಲ್-ಸಿರಾಜ್ ಇನ್, ದುಬೆ ಔಟ್; ಬಾಂಗ್ಲಾದೇಶ ವಿರುದ್ದದ ಸೂಪರ್ 8 ಪಂದ್ಯಕ್ಕೆ ಭಾರತ ಆಡುವ ಬಳಗ
Jun 21, 2024 08:44 PM IST
ಬಾಂಗ್ಲಾದೇಶ ವಿರುದ್ದದ ಸೂಪರ್ 8 ಪಂದ್ಯಕ್ಕೆ ಭಾರತ ಆಡುವ ಬಳಗ
- India vs Bangladesh: ಬಾಂಗ್ಲಾದೇಶ ವಿರುದ್ಧ ಗೆದ್ದರೆ, ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಹೀಗಾಗಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಬಲಿಷ್ಠ ಆಡುವ ಬಳಗವನ್ನು ಕಣಕ್ಕಿಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಟಿ20 ವಿಶ್ವಕಪ್ 2024ರಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತ ಕ್ರಿಕೆಟ್ ತಂಡವು ಸೂಪರ್ 8ರ ಹಂತದ ತನ್ನ ಎರಡನೇ ಪಂದ್ಯದಲ್ಲಿ ನೆರೆಯ ಬಾಂಗ್ಲಾದೇಶವನ್ನು (India vs Bangladesh) ಎದುರಿಸುತ್ತಿದೆ. ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ 47 ರನ್‌ಗಳ ಬೃಹತ್ ಅಂತರದ ಜಯ ಸಾಧಿಸಿದ ಟೀಮ್ ಇಂಡಿಯಾ, ಆತ್ಮವಿಶ್ವಾಸದಿಂದ ಬೀಗುತ್ತಿದೆ. ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದರೆ, ರೋಹಿತ್ ಶರ್ಮಾ ಪಡೆಯು ಸೆಮಿಫೈನಲ್ ಹಂತಕ್ಕೆ ಬಹುತೇಕ ಹತ್ತಿರವಾಗಲಿದೆ. ಜೂನ್ 22ರ ಶನಿವಾರವು ಆಂಟಿಗುವಾದ ನಾರ್ತ್ ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಭಾರತ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಈವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದರೂ, ತಂಡದ ಬ್ಯಾಟಿಂಗ್ ಪ್ರದರ್ಶನ ಹೇಳಿಕೊಳ್ಳುವಷ್ಟು ಗಮನ ಸೆಳೆದಿಲ್ಲ. ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಾತ್ರವೇ ರನ್ ಹರಿದು ಬಂದಿವೆ. ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವುದು ತಂಡಕ್ಕೆ ಹೆಚ್ಚು ಲಾಭ ತಂದುಕೊಟ್ಟಿಲ್ಲ.
ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟ್ ಕೂಡಾ ಸದ್ದು ಮಾಡಿಲ್ಲ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ರನ್ ಗಳಿಸಲು ಪರದಾಡುತ್ತಿದ್ದಾರೆ. ಪವರ್‌ಪ್ಲೇನಲ್ಲಿ ಅಗತ್ಯ ರನ್‌ರೇಟ್ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕೊಹ್ಲಿಯನ್ನು ಮತ್ತೆ ಮೂರನೇ ಕ್ರಮಾಂಕಕ್ಕೆ ಕಳುಹಿಸಿ, ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕರಾಗಿ ಕರೆತರುವುದು ತಂಡದ ಮುಂದಿನ ಆಯ್ಕೆಯಾಗಿದೆ. ಹೀಗಾಗಿ ಶಿವಂ ದುಬೆ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.
ಅತ್ತ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಿಂದ ಮೊಹಮ್ಮದ್ ಸಿರಾಜ್ ಹೊರಗುಳಿದಿದ್ದರು. ಅವರ ಬದಲಿಗೆ ಕುಲ್ದೀಪ್ ತಂಡ ಸೇರಿಕೊಂಡಿದ್ದರು. ಬಾಂಗ್ಲಾದೇಶ ವಿರುದ್ಧದ ಮುಖಾಮುಖಿಗೆ ಆರ್‌ಸಿಬಿ ವೇಗಿಯನ್ನು ಮತ್ತೆ ಕರೆತರುವ ಸಾಧ್ಯತೆ ಇದೆ. ಅಫ್ಘನ್ ವಿರುದ್ಧ ದುಬಾರಿಯಾಗಿದ್ದ ಅರ್ಷದೀಪ್ ಓ ಪಂದ್ಯಕ್ಕೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಸ್ಪಿನ್ನರ್ ಕುಲ್ದೀಪ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಅವಕಾಶ?
ಟೂರ್ನಿಯಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಇದುವರೆಗೆ ಒಂದೂ ಅವಕಾಶ ಪಡೆದಿಲ್ಲ. ಸ್ಯಾಮ್ಸನ್‌ಗೆ ವಿಂಡೀಸ್‌ನ ಈ ಪರಿಸ್ಥಿತಿಗಳಲ್ಲಿ ಆಡಿದ ಅನುಭವವಿದೆ. ಹೀಗಾಗಿ ಇವರಿಗೆ ಅವಕಾಶ ನೀಡಬೇಕೆಂದರೆ ಮತ್ತೊಬ್ಬ ಬ್ಯಾಟರ್ ಸ್ಥಾನ ಕಳೆದುಕೊಳ್ಳಬೇಕಾಗಿದೆ. ಆದರೆ, ಪಂತ್, ಸೂರ್ಯಕುಮಾರ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸದ್ಯ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಅವಕಾಶಕ್ಕಾಗಿ ಸಂಜು ಮತ್ತೆ ಕಾಯಬೇಕಾಗಿ ಬರಬಹುದು.
ಬಾಂಗ್ಲಾದೇಶ ವಿರುದ್ಧ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ವಿಶ್ವಕಪ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸೂರ್ಯಕುಮಾರ್-ಜಸ್ಪ್ರೀತ್ ಬುಮ್ರಾ ಮಿಂಚು; ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾಗೆ 47 ರನ್‌ಗಳ ಗೆಲುವು