logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರತ್ತ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಭರ್ಜರಿ ಜಿಗಿತ

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರತ್ತ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಭರ್ಜರಿ ಜಿಗಿತ

Jayaraj HT Kannada

Feb 28, 2024 03:48 PM IST

google News

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರತ್ತ ಯಶಸ್ವಿ ಜೈಸ್ವಾಲ್

    • ICC Rankings: ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌, ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಂದಿನಿಂದ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಇದೀಗ, ಇಂಗ್ಲೆಂಡ್‌ ವಿರುದ್ಧ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್‌ ಪಂದ್ಯದಲ್ಲೂ ಅಮೋಘ ಪ್ರದರ್ಶನ ನೀಡುವ ಮೂಲಕ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ 10 ರೊಳಗೆ ಪ್ರವೇಶಿಸುವ ಗುರಿ ಹಾಕಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರತ್ತ ಯಶಸ್ವಿ ಜೈಸ್ವಾಲ್
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರತ್ತ ಯಶಸ್ವಿ ಜೈಸ್ವಾಲ್ (REUTERS)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ (India vs England) ಸರಣಿಯಲ್ಲಿ ಭಾರತ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಅಮೋಘ ಫಾರ್ಮ್‌ನಲ್ಲಿದ್ದಾರೆ. ಸರಣಿಯಲ್ಲಿ ಎರಡು ದ್ವಿಶತಕ ಸಿಡಿಸಿದ ಆಟಗಾರ, ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 73 ರನ್ ಗಳಿಸಿದ್ದ ಎಡಗೈ ಬ್ಯಾಟರ್ ಚೇಸಿಂಗ್‌ ವೇಳೆ ಎರಡನೇ ಇನ್ನಿಂಗ್ಸ್‌ನಲ್ಲಿ 37 ರನ್ ಸಿಡಿಸಿದರು. ಇದರೊಂದಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ (ICC Test rankings) ತಮ್ಮ ಸ್ಥಿರ ಏರಿಕೆಯನ್ನು ಮುಂದುವರೆಸಿದ್ದಾರೆ.

ಐಸಿಸಿ ಬಿಡುಗಡೆ ಮಾಡಿದ ಬ್ಯಾಟರ್‌ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನ ಜಿಗಿದು ಅವರು 12ನೇ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ | Photo: ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್; ರಾಜಕುಮಾರಿಯ ಮೊದಲ ಫೋಟೋ ಹಂಚಿಕೊಂಡ ಕಿವೀಸ್‌ ಆಟಗಾರ

ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುತ್ತಿರುವ ಜೈಸ್ವಾಲ್‌, ಶ್ರೆಯಾಂಕದಲ್ಲಿ ಬಲುಬೇಗನೆ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವ ಸಾಧ್ಯತೆ ಇದೆ. ಮುಂದೆ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದರೆ, ತಮ್ಮ 9 ನೇ ಪಂದ್ಯದ ಬಳಿಕ ಅಗ್ರ 10ರೊಳಗೆ ಪ್ರವೇಶಿಸಲಿದ್ದಾರೆ.

ಧ್ರುವ್‌ ಜುರೆಲ್‌ ಅಮೋಘ ಸಾಧನೆ

ಅತ್ತ ಆಂಗ್ಲರ ವಿರುದ್ಧ ನಾಲ್ಕನೇ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಧ್ರುವ್ ಜುರೆಲ್, ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲೇ ಶ್ರೇಯಾಂಕದಲ್ಲಿ ಭಾರಿ ಸುಧಾರಣೆ ಕಂಡಿದ್ದಾರೆ. ಜುರೆಲ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಿಂದಾಗಿ ಪಂದ್ಯದಲ್ಲಿ ಭಾರತವು ಗೆಲುವಿನ ಭರವಸೆ ಉಳಿಸಿಕೊಂಡಿತ್ತು. ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ | T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

ಸದ್ಯ ಐಸಿಸಿ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 31 ಸ್ಥಾನ ಮೇಲಕ್ಕೇರಿರುವ ಜುರೆಲ್‌ ಸದ್ಯ 69ನೇ ಸ್ಥಾನ ಪಡೆದಿದ್ದಾರೆ. ಇದು ಕೇಲವ ಎರಡನೇ ಪಂದ್ಯದ ಬಳಿಕ ಪಡೆದ ಶ್ರೇಯಾಂಕ ಎಂಬುದು ಗಮನಾರ್ಹ.

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾಕ್ ಕ್ರಾಲೆ ನಾಲ್ಕನೇ ಟೆಸ್ಟ್‌ನಲ್ಲಿ 42 ಮತ್ತು 60 ರನ್ ಗಳಿಸಿದರು. ಹೀಗಾಗಿ ಅವರು ಇದೇ ಮೊದಲ ಬಾರಿಗೆ ಅಗ್ರ 20ರೊಳಗೆ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಮತ್ತೆ ಅಗ್ರ ಮೂರನೇ ಸ್ಥಾನ‌ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಅಜೇಯ 122 ರನ್ ಗಳಿಸಿದ್ದರು. ಹೀಗಾಗಿ ಎರಡು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನದಲ್ಲಿದ್ದಾರೆ.

ಅಶ್ವಿನ್‌ ಎರಡನೇ ಸ್ಥಾನ

ಅತ್ತ ರಾಂಚಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್, ಬೌಲರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅಗ್ರ ಶ್ರೇಯಾಂಕ ಉಳಿಸಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ 10 ಸ್ಥಾನ ಮೇಲೇರಿ 32ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಶೋಯೆಬ್ ಬಶೀರ್ 38 ಸ್ಥಾನ ಮೇಲೇರಿ 80ನೇ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ | ಲಂಡನ್‌ಗೆ ಹಾರಿದ ಕೆಎಲ್ ರಾಹುಲ್, ಐದನೇ ಟೆಸ್ಟ್‌ ಆಡೋದು ಅನುಮಾನ; ಧರ್ಮಶಾಲಾ ಟೆಸ್ಟ್‌ಗೆ ಮಾರಕ ವೇಗಿ ಕಂಬ್ಯಾಕ್

ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ ಮತ್ತು ಅಶ್ವಿನ್‌ ಮೊದಲ ಎರಡು ಸ್ಥಾನಗಳಲ್ಲಿ ಮುಂದುವರೆದಿದ್ದಾರೆ. ಆಲ್‌ರೌಂಡರ್‌ಗಳ ಪೈಕಿ ರೂಟ್ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ