logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚಹಲ್​ರನ್ನು ಭುಜದ ಮೇಲೆತ್ತಿ ಗಿರಗಿರನೇ ತಿರುಗಿಸಿ ಗಿರ್​​ಗಿಟ್ಲೆ ಆಡಿದ ಕುಸ್ತಿಪಟು ಸಂಗೀತಾ ಫೋಗಟ್; ವಿಡಿಯೋ ವೈರಲ್

ಚಹಲ್​ರನ್ನು ಭುಜದ ಮೇಲೆತ್ತಿ ಗಿರಗಿರನೇ ತಿರುಗಿಸಿ ಗಿರ್​​ಗಿಟ್ಲೆ ಆಡಿದ ಕುಸ್ತಿಪಟು ಸಂಗೀತಾ ಫೋಗಟ್; ವಿಡಿಯೋ ವೈರಲ್

Prasanna Kumar P N HT Kannada

Mar 03, 2024 03:08 PM IST

google News

ಚಹಲ್​ರನ್ನು ಭುಜದ ಮೇಲೆತ್ತಿ ಗಿರಗಿರನೇ ತಿರುಗಿಸಿ ಗಿರ್​​ಗಿಟ್ಲೆ ಆಡಿದ ಕುಸ್ತಿಪಟು ಸಂಗೀತಾ ಫೋಗಟ್

    • Yuzvendra Chahal: ಡ್ಯಾನ್ಸ್ ರಿಯಾಲಿಟಿ ಶೋನ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ಕುಸ್ತಿಪಟು ಸಂಗೀತಾ ಫೋಗಟ್ ಅವರು ಚಹಲ್ ಅವರನ್ನು ಭುಜದ ಮೇಲೆತ್ತಿಕೊಂಡು ತಿರುಗಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಚಹಲ್​ರನ್ನು ಭುಜದ ಮೇಲೆತ್ತಿ ಗಿರಗಿರನೇ ತಿರುಗಿಸಿ ಗಿರ್​​ಗಿಟ್ಲೆ ಆಡಿದ ಕುಸ್ತಿಪಟು ಸಂಗೀತಾ ಫೋಗಟ್
ಚಹಲ್​ರನ್ನು ಭುಜದ ಮೇಲೆತ್ತಿ ಗಿರಗಿರನೇ ತಿರುಗಿಸಿ ಗಿರ್​​ಗಿಟ್ಲೆ ಆಡಿದ ಕುಸ್ತಿಪಟು ಸಂಗೀತಾ ಫೋಗಟ್

ಭಾರತದ ಅನುಭವಿ ಆಫ್ ಸ್ಪಿನ್ನರ್ ಯಜ್ವೇಂದ್ರ ಚಹಲ್ (Yuzvendra Chahal) ಅವರು ಝಲಕ್ ದಿಖ್ಲಾ ಜಾ ರ್ಯಾಪ್ ಅಪ್ ಪಾರ್ಟಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ಚಹಲ್ ಅವ​ರನ್ನು ಮಹಿಳಾ ಕುಸ್ತಿಪಟು ಸಂಗೀತಾ ಫೋಗಟ್ (Sangeeta Phogat) ಅವರು ತಮ್ಮ ಭುಜದ ಮೇಲೆತ್ತಿ ಗಿರಗಿರನೇ ತಿರುಗಿಸಿ ಗಿರ್​​ಗಿಟ್ಲೆ ಆಡಿಸಿರುವದನ್ನು ವಿಡಿಯೋದಲ್ಲಿ ಕಾಣಬಹುದು.

ಡ್ಯಾನ್ಸ್ ರಿಯಾಲಿಟಿ ಶೋನ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ಕುಸ್ತಿಪಟು ಸಂಗೀತಾ ಫೋಗಟ್ ಅವರು ಚಹಲ್ ಅವರನ್ನು ಭುಜದ ಮೇಲೆತ್ತಿಕೊಂಡು ತಿರುಗಿಸಿದ್ದಾರೆ. ಕ್ರಿಕೆಟಿಗ ನಿಲ್ಲಿಸುವಂತೆ ವಿನಂತಿಸಿದ ನಂತರ ಅವರನ್ನು ಕೆಳಗಿಳಿಸಿದರು. ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಕಾರ್ಯಕ್ರಮದ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಹೀಗಾಗಿ ಪತ್ನಿಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಚಹಲ್​ ಅವರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಒಪ್ಪಂದ ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಎಂದಿನಂತೆ ಉಲ್ಲಾಸ ಮತ್ತು ಆನಂದದ ಕ್ಷಣಗಳಿಂದ ಕಾಣಿಸಿಕೊಂಡ ಚಹಲ್ ಈಗ ಭಾರಿ ಟ್ರೋಲ್ ಆಗುತ್ತಿದ್ದಾರೆ. ಭಾನುವಾರ ಸಾಮಾಜಿಕ ಮಾಧ್ಯಮ ಹ್ಯಾಂಡಲ್​​ಗಳಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕೆಲವು ದಿನಗಳ ಹಿಂದೆ ಶೋನಿಂದ ಎಲಿಮಿನೇಟ್ ಆದ ಫೋಗಟ್ ಅವರು, ಚಹಲ್​ರನ್ನು ಎತ್ತಿ ಗಿರಗಿರನೆ ತಿರುಗಿಸಿದ್ದು, ಚಹಲ್ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಸಿಲುಕಿದ್ದರು.

ಚಹಲ್ ಐಪಿಎಲ್​ಗೆ ಸಜ್ಜು

17ನೇ ಆವೃತ್ತಿಯ ಐಪಿಎಲ್​ಗೆ ಯುಜ್ವೇಂದ್ರ ಚಹಲ್ ಸಜ್ಜಾಗುತ್ತಿದ್ದಾರೆ. ಮಾರ್ಚ್ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದ್ದು, ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಚಹಲ್ 21 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಮಾರ್ಚ್ 24ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಎದುರು ಸೆಣಸಾಟ ನಡೆಸುವ ಮೂಲಕ ರಾಜಸ್ಥಾನ ತನ್ನ ಅಭಿಯಾನ ಆರಂಭಿಸಲಿದೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್

ಐಪಿಎಲ್ ಇತಿಹಾಸದಲ್ಲಿ ಯುಜ್ವೇಂದ್ರ ಚಹಲ್ ಅತ್ಯಧಿಕ ವಿಕೆಟ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 145 ಐಪಿಎಲ್ ಪಂದ್ಯಗಳಲ್ಲಿ 187 ವಿಕೆಟ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಡ್ವೇನ್ ಬ್ರಾವೋ ಇದ್ದು, 161 ಪಂದ್ಯಗಳಲ್ಲಿ 183 ವಿಕೆಟ್ ಪಡೆದಿದ್ದಾರೆ. ಪಿಯೂಷ್ ಚಾವ್ಲಾ 179, ಅಮಿತ್ ಮಿಶ್ರಾ 173, ಆರ್​ ಅಶ್ವಿನ್ 171 ವಿಕೆಟ್ ಪಡೆದು ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.

ಬಿಸಿಸಿಐ ಒಪ್ಪಂದದಿಂದ ಔಟ್

ಯುಜ್ವೇಂದ್ರ ಚಹಲ್ ಅವರು ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವುದು ಅನುಮಾನವಾಗಿದೆ. ಏಕೆಂದರೆ ಅವರು ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಹೊರಬಿದ್ದಿದ್ದಾರೆ. ಈ ಹಿಂದೆ 2022/23ರ ಋತುವಿನಲ್ಲಿ ಟೀಮ್ ಇಂಡಿಯಾ (ಹಿರಿಯ ಪುರುಷರ) ವಾರ್ಷಿಕ ಆಟಗಾರರ ಒಪ್ಪಂದದಲ್ಲಿ ಗ್ರೇಡ್ ಸಿ ಭಾಗವಾಗಿದ್ದರು. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಿಖರ್ ಧವನ್ ಕೂಡ ಒಪ್ಪಂದವನ್ನು ಕಳೆದುಕೊಂಡಿದ್ದಾರೆ.

ಒಪ್ಪಂದದಲ್ಲಿ ಚಹಲ್ ಹೆಸರು ಇಲ್ಲದಿರುವುದಕ್ಕೆ ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಯುಜ್ವೇಂದ್ರ ಚಹಲ್ ಅವರ ಹೆಸರು ಇಲ್ಲದಿರುವುದು ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್ ಅವರ ಹೆಸರುಗಳು ಏಕಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಚಹಲ್ ಹೆಸರು ಇಲ್ಲ ಎಂಬುದು ಏನನ್ನು ಸೂಚಿಸುತ್ತದೆ ಎಂಬುದೇ ತಿಳಿಯುತ್ತಿಲ್ಲ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

2022ರ ಐಸಿಸಿ ಟಿ20 ವಿಶ್ವಕಪ್​​ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಅವಕಾಶ ಗಿಟ್ಟಿಸಿಕೊಳ್ಳದ ಯುಜ್ವೇಂದ್ರ ಚಹಲ್ ಅವರನ್ನು 2021ರ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಇದೀಗ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಬೆಂಕಿ ಬಿರುಗಾಳಿ ಪ್ರದರ್ಶನ ನೀಡಿದರೆ, ಜೂನ್ 1ರಿಂದ ಶುರುವಾಗುವ ಟಿ20 ವಿಶ್ವಕಪ್​ಗೆ ಆಯ್ಕೆಯಾದರೂ ಅಚ್ಚರಿ ಇಲ್ಲ. ಹೀಗಾಗಿ ಅವರು ವಿಶ್ವಾಸ ಕಳೆದುಕೊಳ್ಳಬಾರದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ