Lok Sabha Elections 2024: ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವೀರಪ್ಪನ್ ಪುತ್ರಿಗಿಲ್ಲ ಟಿಕೆಟ್
Mar 21, 2024 07:26 PM IST
ತಮಿಳುನಾಡು ಲೋಕಸಭೆ ಚುನಾವಣೆಗೆ ಅಣ್ಣಾಮಲೈ, ತಮಿಳುಸಾಯಿ ಟಿಕೆಟ್ ಪಡೆದಿದ್ದಾರೆ. ವಿದ್ಯಾರಾಣಿ ವೀರಪ್ಪನ್‌ಗೆ ಅವಕಾಶ ಸಿಕ್ಕಿಲ್ಲ.
- ತಮಿಳುನಾಡಿನಲ್ಲಿ ಬಿಜೆಪಿ ಈ ಬಾರಿ ವಿಶ್ವಾಸದಿಂದ ಲೋಕಸಭೆ ಚುನಾವಣೆಗೆ ಇಳಿದಿದೆ. ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಜೆಪಿ ಈಗಾಗಲೇ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿದೆ, ಈಗ ತಮಿಳುನಾಡು ರಾಜ್ಯಕ್ಕೆ ಸಂಬಂಧಿಸಿದ 9 ಲೋಕಸಭಾ ಕ್ಷೇತ್ರಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ಎರಡು ದಿನದ ಹಿಂದೆಯಷ್ಟೇ ರಾಜ್ಯಪಾಲರ ಹುದ್ದೆ ತೊರೆದ ತಮಿಳ್‌ಸಾಯಿ ಸೌಂದರರಾಜನ್ ಅವರ ಹೆಸರುಗಳಿವೆ.
ಐದು ವರ್ಷದ ಹಿಂದೆಯೇ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅಣ್ಣಾಮಲೈ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಅರವೈಕುರುಚಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಡಿಎಂಕೆ ಅಭ್ಯರ್ಥಿ ವಿರುದ್ದ ಅಣ್ಣಾಮಲೈ ಸೋತಿದ್ದರು. ಅಣ್ಣಾಮಲೈ 68,553 ಮತಗಳನ್ನು ಪಡೆದು ಗಮನ ಸೆಳೆದಿದ್ದರು. ಈಗ ಅವರು ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿಯಲಿದ್ದಾರೆ. ಅವರಿಗೆ ಕೊಯಮತ್ತೂರು ಕ್ಷೇತ್ರದಿಂದ ಅಭ್ಯರ್ಥಿ ಮಾಡಲಾಗಿದೆ.
ಕೆ.ಅಣ್ಣಾಮಲೈ ಅವರು ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಎಂಟು ವರ್ಷ ಕೆಲಸ ಮಾಡಿದ್ದರು. ಕಾರ್ಕಳ ಎಎಸ್ಪಿ, ಚಿಕ್ಕಮಗಳೂರು, ಉಡುಪಿ ಎಸ್ಪಿಯಾಗಿದ್ದರು. ಬೆಂಗಳೂರು ಡಿಸಿಪಿಯಾಗಿ ಕೂಡ ಕೆಲಸ ಮಾಡಿದ್ದರು.
ಈ ಹಿಂದೆ ತಮಿಳುನಾಡು ರಾಜಕೀಯದಲ್ಲಿ ಗುರುತಿಸಿಕೊಂಡು ನಂತರ ರಾಜ್ಯಪಾಲರಾಗಿದ್ದ ತಮಿಳುಸಾಯಿ ಸೌಂದರ್ ರಾಜನ್ ಅವರು ಈಗ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಅವರಿಗೆ ಚೆನ್ನೈ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.
ಹಾಲಿ ಕೇಂದ್ರ ಸಚಿವರಾಗಿರು ಎಲ್.ಮುರುಗನ್ ಅವರಿಗೆ ನೀಲಗಿರಿ( ಊಟಿ) ಎಸ್ಸಿ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಹಿರಿಯ ನಾಯಕ ಪೊನ್ ರಾಧಾಕೃಷ್ಣನ್ ಅವರಿಗೆ ಕನ್ಯಾಕುಮಾರಿ ಕ್ಷೇತ್ರದ ಟಿಕೆಟ್ ದೊರತಿದೆ.
ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ವೀರಪ್ಪನ್‌ಗೆ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಚರ್ಚೆಗಳು ನಡೆದಿದ್ದವು. ಅಲ್ಲಿ ನರಸಿಂಹನ್ ಅವರಿಗೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ.
ತಮಿಳುನಾಡಿನ 39 ಸ್ಥಾನಗಳಲ್ಲಿ ಬಿಜೆಪಿ 20 ಕಡೆ ಸ್ಪರ್ಧಿಸಲಿದೆ. ಬಿಜೆಪಿಯು ರಾಮದಾಸ್ ಅವರು ಪಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆ ಪಕ್ಷಕ್ಕೆ ಹತ್ತು ಸ್ಥಾನ ಬಿಟ್ಟುಕೊಟ್ಟಿದೆ. ಟಿಎಂಸಿಗೆ ಮೂರು ಸ್ಥಾನ ಸೇರಿದಂತೆ ಇತರೆ ಪಕ್ಷಗಳಿಗೂ ತಲಾ ಒಂದು ಸ್ಥಾನವನ್ನು ಬಿಜೆಪಿ ನೀಡಿದೆ. ಈ ಹಿಂದೆ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.