logo
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll: ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳಿವು

Exit Poll: ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳಿವು

Umesh Kumar S HT Kannada

Jun 01, 2024 07:56 PM IST

google News

ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

  • Exit Poll: ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಇಂದು ಸಂಜೆ ಪ್ರಕಟವಾಗಲಿದ್ದು, ಎಲ್ಲರ ಗಮನ ಅದರ ಮೇಲೆಯೇ ಇದೆ. ಈ ಹಂತದಲ್ಲಿ ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲುಗಳತ್ತ ಮತ್ತು ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳ ಕಡೆಗೆ ನೋಟ ಬೀರುವ ವರದಿ ಇದು.

ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ಜೂನ 1) ಸಂಜೆ ಮುಕ್ತಾಯವಾಗಲಿದ್ದು, ಅದಾಗಿ ಮತಗಟ್ಟೆ ಸಮೀಕ್ಷೆ ಫಲಿತಾಂಶ (Exit Poll Result) ಪ್ರಕಟವಾಗಲಿದೆ. ಇದು ಮುಂಬರುವ ಸರ್ಕಾರ ಯಾವ ಮೈತ್ರಿಕೂಟದ್ದು ಇರಬಹುದು ಎಂಬ ಸಂಭಾವ್ಯ ಸಂಯೋಜನೆಯನ್ನು ಊಹಿಸಲಿದೆ ಎಂಬ ಕಾರಣಕ್ಕೆ ಸಹಜವಾಗಿಯೇ ಜನರ ಕುತೂಹಲ ಕೆರಳಿಸಿದೆ.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಎರಡು ಅವಧಿ ಪೂರೈಸಿದ್ದು, ಮೂರನೆ ಅವಧಿಗೆ ಜನಾದೇಶ ಬಯಸಿದೆ. ಇನ್ನೊಂದೆಡೆ, ಯುಪಿಎ ಮೈತ್ರಿ ಬಿಟ್ಟು ಕಾಂಗ್ರೆಸ್‌ ಹೊಸದಾಗಿ ರಚಿಸಿದ ಐಎನ್‌ಡಿಐಎ (I.N.D.I.A.) ಒಕ್ಕೂಟ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದೆ. ಆದರೆ ಜನಾದೇಶ ಏನು ಎಂಬುದು ಜೂನ್ 4ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟವಾದಾಗ ಬಹಿರಂಗವಾಗಲಿದೆ.

ಆದಾಗ್ಯೂ, ಜನರ ಕುತೂಹಲ ತಣಿಸುವ ಸಲುವಾಗಿ ಆಡಳಿತ ಚುಕ್ಕಾಣಿ ಯಾರಿಗೆ ಎಂಬ ಸುಳಿವು ಮತಗಟ್ಟೆ ಸಮೀಕ್ಷೆಗಳು ನೀಡುತ್ತವೆ. ಈ ಸಮೀಕ್ಷೆಗಳನ್ನು ಮಾಧ್ಯಮ ಸಂಸ್ಥೆಗಳು ಮತ್ತು ಸಮೀಕ್ಷೆ ನಡೆಸುವ ಸಂಸ್ಥೆಗಳು ನಡೆಸುತ್ತವೆ. ಆದರೆ ಫಲಿತಾಂಶವನ್ನು ಕೊನೆಯ ಹಂತದ ಮತದಾನ ಮುಗಿದ ಒಂದು ಗಂಟೆಯ ಬಳಿಕ ಪ್ರಕಟಿಸಲಾಗುತ್ತದೆ.

ಮತಗಟ್ಟೆ ಸಮೀಕ್ಷೆಗೆ ಸಂಬಂಧಿಸಿ ಚುನಾವಣಾ ಆಯೋಗದ ನಿಯಮಗಳು

ಭಾರತದ ಚುನಾವಣಾ ಆಯೋಗ ನಿಗದಿಪಡಿಸಿದ ನಿಯಮಗಳ ಪ್ರಕಾರ, ಮತದಾನ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಕೊನೆಯ ಹಂತದ ಮತದಾನ ಪೂರ್ಣಗೊಂಡ 30 ನಿಮಿಷಗಳ ನಂತರ ಅವುಗಳನ್ನು ಪ್ರಕಟಿಸುವುದಕ್ಕೆ ಅನುಮತಿ ಇದೆ.

ಈ ನಿಯಮಗಳ ಪ್ರಕಾರ, ಈ ಸಲದ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು (ಜೂನ್ 1) ನಡೆಯುತ್ತಿದೆ. ಹೀಗಾಗಿ ಇದು 6 ಗಂಟೆಗೆ ಪೂರ್ಣಗೊಳ್ಳುತ್ತದೆ. 1951 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 126 ಎ ಪ್ರಕಾರ, ಇಂದು ಸಂಜೆ 6:30 ಕ್ಕಿಂತ ಮೊದಲು ಎಕ್ಸಿಟ್ ಪೋಲ್ ಡೇಟಾವನ್ನು ಬಿಡುಗಡೆ ಮಾಡುವಂತಿಲ್ಲ.

ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಕುತೂಹಲದಿಂದ ಕಾಯುತ್ತಿದ್ದರೂ ಮತ್ತು ಅವುಗಳನ್ನು ಪರಿಶೀಲಿಸಲಾಗಿದ್ದರೂ. ಅವು ನಿಖರವಾಗಿರುವುದಿಲ್ಲ. ಮತಗಟ್ಟೆ ಸಮೀಕ್ಷೆಗಳು ದೋಷರಹಿತವಾಗಿಲ್ಲ. ಆ ಊಹೆಗಳ ನಿಖರ ಮಾಹಿತಿ ಮತ್ತು ಹಲವಾರು ಅಂಶಗಳು ದೋಷಗಳಿಗೆ ಕಾರಣವಾಗುವುದು ಸಹಜ. ಅಂಥ 7 ಕಾರಣಗಳ ವಿವರ ಇಲ್ಲಿದೆ.

1. ಪ್ರಾಮಾಣಿಕ ಪ್ರತಿಕ್ರಿಯೆಗಳ ಊಹೆ

ಮತದಾರರು ತಮ್ಮ ಆಯ್ಕೆಗಳನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸುತ್ತಾರೆ ಎಂಬ ಊಹೆಯ ಪ್ರಕಾರ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವನ್ನು ಸಿದ್ದಪಡಿಸಲಾಗುತ್ತದೆ. ಆದಾಗ್ಯೂ, ಇದು ದೋಷಪೂರಿತವಾಗಿರಬಹುದು. ಏಕೆಂದರೆ ಕೆಲವು ವ್ಯಕ್ತಿಗಳು ಸಮೀಕ್ಷೆದಾರರನ್ನು ನಿಜ ಹೇಳದೇ ವಂಚಿಸಬಹುದು. ಇತರರು ತಮ್ಮ ನೈಜ ಅಭಿಪ್ರಾಯಗಳನ್ನು ತಿಳಿಸದೇ ಇರುವ ಒತ್ತಡಕ್ಕೆ ಸಿಲುಕಿರಬಹುದು.

2. ಮಹಿಳೆಯರ ಅಸಮರ್ಪಕ ಪ್ರಾತಿನಿಧ್ಯ

ಮತದಾನದ ಫಲಿತಾಂಶಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದರೂ, ಚುನಾವಣೋತ್ತರ ಸಮೀಕ್ಷೆಗಳು ಹೆಚ್ಚಾಗಿ ಮಹಿಳೆಯರ ಅಭಿಪ್ರಾಯಗಳನ್ನು ಸಮರ್ಪಕವಾಗಿ ದಾಖಲಿಸಿರುವುದಿಲ್ಲ. ವಿಶೇಷವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳ ಮಾದರಿ ಗಾತ್ರಗಳಲ್ಲಿನ ಈ ಅಸಮಾನತೆಯು ದೋಷಗಳಿಗೆ ಕಾರಣವಾಗಬಹುದು.

3. ಮಾದರಿ ಮಾಡುವಲ್ಲಿ ಮಾನವ ದೋಷಗಳು

ಮಾದರಿಗಳನ್ನು ಆಯ್ಕೆ ಮಾಡುವಾಗ ಮಾನವನ ಪಾಲ್ಗೊಳ್ಳುವಿಕೆಯು ದೋಷದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕ್ಷೇತ್ರ ಕಾರ್ಯ ಮಾಡುವವರು ಅಜಾಗರೂಕತೆಯಿಂದ ಅಥವಾ ಅವರ ಮನಸ್ಥಿತಿಗೆ ಅನುಗುಣವಾದ, ಅನುಕೂಲಕರ ಮತಗಟ್ಟೆಗಳನ್ನು ಆಯ್ಕೆ ಮಾಡಬಹುದು, ಫಲಿತಾಂಶಗಳನ್ನು ತಿರುಚಬಹುದು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ರೀತಿ ಆಗುವ ಸಾಧ್ಯತೆ ಇದೆ.

4. ನೈಜ ಫಲಿತಾಂಶ ಮತ್ತು ಸಮೀಕ್ಷೆ ಫಲಿತಾಂಶದ ಅಂತರ

ಮತಗಟ್ಟೆ ಸಮೀಕ್ಷೆಗಳು ಸಾಮಾನ್ಯವಾಗಿ 1% ರಿಂದ 3% ವರೆಗಿನ ದೋಷದ ಅಂತರದೊಂದಿಗೆ ಬರುತ್ತವೆ. ನಿಕಟ ಸ್ಪರ್ಧೆಯ ರಾಜ್ಯಗಳಲ್ಲಿ, ಈ ಅಂತರವು ವಿಶೇಷವಾಗಿ ಮಹತ್ವದ್ದಾಗಿದೆ, ಇದು ಭವಿಷ್ಯವಾಣಿಗಳ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ.

5. ಐತಿಹಾಸಿಕ ದತ್ತಾಂಶದ ಮೇಲೆ ಅವಲಂಬನೆ

ಮತಗಟ್ಟೆ ಸಮೀಕ್ಷೆಗಳು ವಿಶ್ಲೇಷಣೆಗಾಗಿ ಐತಿಹಾಸಿಕ ಚುನಾವಣಾ ದತ್ತಾಂಶವನ್ನು ಹೆಚ್ಚಾಗಿ ಅವಲಂಬಿಸಿರುತ್ತವೆ. ಇದು ಭಾರತದ ವೈವಿಧ್ಯಮಯ ಜನಸಂಖ್ಯಾಶಾಸ್ತ್ರ ಮತ್ತು ವಿಕಸನಗೊಳ್ಳುತ್ತಿರುವ ಮತದಾನದ ಮಾದರಿಗಳಿಂದಾಗಿ ಪ್ರಸ್ತುತ ಭಾವನೆಗಳನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ.

6. ಬಜೆಟ್ ನಿರ್ಬಂಧ ಮತ್ತು ಶಾಸ್ತ್ರೀಯವಿಧಾನ ಒತ್ತಡ

ಬಿಗಿಯಾದ ಬಜೆಟ್ ಗಳು ಮತ್ತು ಸಮಯದ ಮಿತಿಗಳು ಮತಗಟ್ಟೆ ಸಮೀಕ್ಷೆಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಹುದು. ಇದು ಸಂಶೋಧನಾ ಆಳ ಮತ್ತು ದತ್ತಾಂಶ ಸಂಗ್ರಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ತ್ವರಿತ ಫಲಿತಾಂಶಗಳನ್ನು ನೀಡುವ ಒತ್ತಡವು ವಿಧಾನದಲ್ಲಿ ಶಾರ್ಟ್‌ಕಟ್‌ಗಳಿಗೆ ಕಾರಣವಾಗಬಹುದು, ಫಲಿತಾಂಶಗಳನ್ನು ತಿರುಚಬಹುದು.

7. ಸಮಗ್ರವಾದ ಜಾತಿ ಮತ್ತು ಸಾಮಾಜಿಕ ಆರ್ಥಿಕ ದತ್ತಾಂಶದ ಕೊರತೆ

ಜಾತಿ ಮತ್ತು ಸಾಮಾಜಿಕ-ಆರ್ಥಿಕ ಜನಸಂಖ್ಯಾಶಾಸ್ತ್ರದ ಸೀಮಿತ ದತ್ತಾಂಶವು ನಿಖರವಾದ ಮತದಾನಕ್ಕೆ ಸವಾಲುಗಳನ್ನು ಒಡ್ಡುತ್ತದೆ. ಇತ್ತೀಚಿನ ಜಾತಿ ಜನಗಣತಿ ದತ್ತಾಂಶ ಮತ್ತು ಮತದಾರರ ಆರ್ಥಿಕ ಪ್ರೊಫೈಲ್‌ಗಳ ಸಮಗ್ರ ಮಾಹಿತಿಯ ಅನುಪಸ್ಥಿತಿಯು ಮುನ್ಸೂಚನೆಯ ನಿಖರತೆಗೆ ಅಡ್ಡಿಯಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಸುಮಾರು 285 ಸ್ಥಾನಗಳನ್ನು ಊಹಿಸಿದ್ದರು. ಆದಾಗ್ಯೂ, ಬಿಜೆಪಿ ನೇತೃತ್ವದ ಮೈತ್ರಿಕೂಟವು 353 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ವಿಜಯವನ್ನು ಗೆದ್ದರೆ, ಬಿಜೆಪಿ ಮಾತ್ರ 303 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದರೆ, ಅದರ ಯುಪಿಎ 91 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ