logo
ಕನ್ನಡ ಸುದ್ದಿ  /  ಚುನಾವಣೆಗಳು  /  Election New App: ವಿಶೇಷ ಚೇತನ ಮತದಾರರಿಗೂ ಬಂತು ಆ್ಯಪ್ ಸೌಲಭ್ಯ, ಬಳಕೆ ಹೇಗೆ

Election new App: ವಿಶೇಷ ಚೇತನ ಮತದಾರರಿಗೂ ಬಂತು ಆ್ಯಪ್ ಸೌಲಭ್ಯ, ಬಳಕೆ ಹೇಗೆ

Umesha Bhatta P H HT Kannada

Mar 27, 2024 04:26 PM IST

google News

ವಿಶೇಷ ಚೇತನ ಮತದಾರರಿಗೆ ಚುನಾವಣೆ ಆಯೋಗ ರೂಪಿಸಿರುವ ಆ್ಯಪ್.

    • ಮತದಾರರಲ್ಲಿ ಜಾಗೃತಿ ಮೂಡಿಸಲು ಹಲವಾರು ಆ್ಯಪ್ ಗಳಿವೆ. ಆದರೆ ವಿಶೇಷ ಚೇತನರಿಗೆಂದೇ ಆ್ಯಪ್ ಇರಲಿಲ್ಲ. ಅದನ್ನು ಚುನಾವಣೆ ಆಯೋಗ ರೂಪಿಸಿದೆ.
ವಿಶೇಷ ಚೇತನ ಮತದಾರರಿಗೆ ಚುನಾವಣೆ ಆಯೋಗ ರೂಪಿಸಿರುವ ಆ್ಯಪ್.
ವಿಶೇಷ ಚೇತನ ಮತದಾರರಿಗೆ ಚುನಾವಣೆ ಆಯೋಗ ರೂಪಿಸಿರುವ ಆ್ಯಪ್.

ಬೆಂಗಳೂರು: ವಿಶೇಷಚೇತನ ಮತದಾರರು ಮುಕ್ತ, ಸುಗಮ ರೀತಿಯಲ್ಲಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಸಕ್ಷಮ್ ಆ್ಯಪ್(SAKSHAM APP) ಅನ್ನು ಪರಿಚಯಿಸಿದೆ. ಮತದಾರರ ಪಟ್ಟಿಯಲ್ಲಿರುವ ವಿಶೇಷಚೇತನರು ಈ ಆ್ಯಪ್ ಅನ್ನು ಬಳಕೆ ಮಾಡಿ ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ. ಈ ಆ್ಯಪ್ ನಲ್ಲಿ ಮತದಾರರಾಗಿ ಹೊಸದಾಗಿ ನೋಂದಣಿ ಮಾಡುವುದು, ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆಯುವುದು, ಮತಗಟ್ಟೆಗೆ ತೆರಳಲು ತ್ರಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸುವುದು, ದೂರನ್ನು ದಾಖಲಿಸುವುದು ಮತ್ತು ಭಾರತ ಚುನಾವಣಾ ಆಯೋಗವು ಹೊರತಂದಿರುವ ಎಲ್ಲಾ ಚುನಾವಣಾ ಲೇಖನಗಳು ಹಾಗೂ ಸಂದೇಶಗಳನ್ನು ನೋಡಬಹುದಾಗಿದೆ.

ಆ್ಯಪ್ ಬಳಕೆ ಹೇಗೆ

ಈ ಆ್ಯಪ್ ಅನ್ನು ಬಳಕೆ ಮಾಡಿ ಚುನಾವಣೆ ವೇಳೆ ವಿಶೇಷಚೇತನ ಮತದಾರರು ತ್ರಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸಿ ಮತಗಟ್ಟೆಗೆ ತೆರಳಬಹುದಾಗಿರುತ್ತದೆ.

ಮತಗಟ್ಟೆಯು ವಿಶೇಷ ಚೇತನ ಸ್ನೇಹಿ ಉಪ ಕ್ರಮಗಳಾದ ನೆಲ ಅಂತಸ್ತಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿರುವುದು, ರ್ಯಾಂಪ್ ವ್ಯವಸ್ಥೆ ಕಲ್ಪಿಸಿರುವುದು, ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿರುವುದು, ದೃಷ್ಠಿದೋಷವುಳ್ಳವರಿಗೆ ಬ್ರೈಲ್ ಲಿಪಿಯಲ್ಲಿ ಮಾದರಿ ಮತ ಪತ್ರವನ್ನು ಮುದ್ರಿಸಿ ಪ್ರದರ್ಶಿಸಿರುವುದು, ಮತಗಟ್ಟೆಯಲ್ಲಿ ಸಹಾಯ ಮಾಡಲು ಸ್ವಯಂ ಸೇವಕರ ನೇಮಕ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ತ್ರಿಚಕ್ರವಾಹನ ವ್ಯವಸ್ಥೆ, ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ, ಕಲ್ಪಿಸಿರುವುದರ ಬಗ್ಗೆ ಮೂಲಕ ಮಾಹಿತಿಯನ್ನು ಪಡೆದು ಮತಗಟ್ಟೆಯಲ್ಲಿ ಆರಾಮದಾಯಕವಾಗಿ ಬಂದು ಮತದಾನ ಮಾಡಬಹುದಾಗಿದೆ.

ದೂರು ದಾಖಲಿಸಬಹುದು

ಈ ಆ್ಯಪ್ ಮೂಲಕ ತಮ್ಮ ಭಾವಚಿತ್ರವುಳ್ಳ ಮತದಾರರ ಚೀಟಿಯ ಸಂಖ್ಯೆಯನ್ನು ಬಳಕೆ ಮಾಡಿ ತಮ್ಮ ಮತಗಟ್ಟೆ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಮುಂದುವರೆದು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಇದ್ದಲ್ಲಿ ದಾಖಲಿಸಬಹುದಾಗಿದೆ. ಭಾರತ ಚುನಾವಣಾ ಆಯೋಗ ಹೊರತಂದಿರುವ ಎಲ್ಲಾ ಮಾರ್ಗಸೂಚಿಗಳು, ಸಂದೇಶಗಳು ಇ.ವಿ.ಎಂ ಹಾಗೂ ವಿ.ವಿ.ಪ್ಯಾಟ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಈಗ ಎಲ್ಲವೂ ತಂತ್ರಜ್ಞಾನವಾಗಿದೆ. ಬಹುತೇಕರು ಮೊಬೈಲ್‌ ಬಳಸುವುದರಿಂದ ಆ ಮೂಲಕವೂ ಚುನಾವಣೆ, ಮತದಾನ ಹಾಗೂ ತಮ್ಮ ಹಕ್ಕುಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡಯಲು ಆ್ಯಪ್ ಗಳಿವೆ. ಆದರೆ ವಿಕಲಚೇತನರಿಗೆ ಪ್ರತ್ಯೇಕ ಆ್ಯಪ್ ಇರಲಿಲ್ಲ. ಈ ಕಾರಣದಿಂದಲೇ ಇದನ್ನು ಪರಿಚಯಿಸಲಾಗಿದೆ. ಇದರ ಬಳಕೆಯೂ ಸುಲಭವಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸಕ್ಷಮ್‌ ಆ್ಯಪ್ ಅನ್ನು ಡೌನ್‌ ಮಾಡಿಕೊಂಡು ಸುಲಭವಾಗಿ ಬಳಸಬಹುದು.

ಮತದಾನ ಮಾಡಿ

ಈ ಆ್ಯಪ್ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಪ್ರತಿ ಜಿಲ್ಲೆಗಳಲ್ಲಿ ಆಯಾ ಸ್ವೀಪ್‌ ಸಮಿತಿಗಳಿಂದ ಆಗುತ್ತಿದೆ. ಇದರೊಟ್ಟಿಗೆ ಇತರೆ ಆ್ಯಪ್‌ಗಳ ಕುರಿತಾಗಿಯು ಮತದಾರರಿಗೆ ವಿವರಗಳನ್ನು ಸಮಿತಿಯಿಂದ ನೀಡಲಾಗುತ್ತಿದೆ.

ಹಲವಾರು ಸೌಲಭ್ಯಗಳನ್ನು ಚುನಾವಣಾ ಆಯೋಗವು ಒದಗಿಸಿರುವುದರಿಂದ ವಿಶೇಷ ಚೇತನ ಮತದಾರರು ಸಂತೋಷದಿಂದ ನಿರ್ಭೀತರಾಗಿ, ಆರಾಮದಾಯಕವಾಗಿ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿಬೇಕು. ಮನೆಯಲ್ಲಿಯೇ ಕುಳಿತು ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಮೈಸೂರು ಜಿಲ್ಲಾ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ