Actor Ajith Fan Suicide: ಸಿನಿಮಾ ನೋಡಲು ಟಿಕೆಟ್ ದೊರೆಯದ ಬೇಸರ...ನಟ ಅಜಿತ್ ಅಭಿಮಾನಿ ಆತ್ಮಹತ್ಯೆ
Jan 22, 2023 10:21 AM IST
ನಟ ಅಜಿತ್ ಕುಮಾರ್
- ಟಿಕೆಟ್ ದೊರೆಯದ ಬೇಸರ ಒಂದು ಕಡೆ ಆದರೆ, ಮನೆಯವರ ಎದುರೇ ತನಗೆ ಅವಮಾನ ಆದ ನೋವು ಮತ್ತೊಂದೆಡೆ. ಇದೇ ಕಾರಣದಿಂದ ವೀರಬಾಗು, ಮನೆಗೆ ಬರುತ್ತಿದ್ದಂತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಸಿನಿಮಾ ನೋಡಿಕೊಂಡು ಮನೆಗೆ ವಾಪಸ್ ಬಂದ ವೀರಬಾಗು ಕುಟುಂಬದವರಿಗೆ ಶಾಕ್ ಆಗಿದೆ.
ಆ ಸ್ಟಾರ್ ಅಂದ್ರೆ ನನಗೆ ಪ್ರಾಣಕ್ಕಿಂತಲೂ ಹೆಚ್ಚು ಎಂದು ಹೇಳುವ ಬಹಳ ಅಭಿಮಾನಿಗಳು ತಮ್ಮ ಮೆಚ್ಚಿನ ನಟ/ನಟಿಯರಿಗಾಗಿ ನಿಜಕ್ಕೂ ಪ್ರಾಣ ತ್ಯಾಗ ಮಾಡಿರುವ ಎಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ. ತಮಿಳುನಾಡಿನಲ್ಲಿ ಸದ್ಯಕ್ಕೆ ನಟ ಅಜಿತ್ ಕುಮಾರ್ ಹಾಗೂ ವಿಜಯ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ತಮ್ಮ ಮೆಚ್ಚಿನ ನಟನ ಸಿನಿಮಾ ನೋಡಲು ಟಿಕೆಟ್ ಸಿಗದೆ, ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಜನವರಿ 11 ರಂದು ಅಜಿತ್ ಕುಮಾರ್ ಅಭಿನಯದ 'ತುನಿವು' ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಖುಷಿಯಿಂದ ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ನೋಡುತ್ತಿದ್ದಾರೆ. ಟಿಕೆಟ್ ಪಡೆಯಲು ಥಿಯೇಟರ್ ಮುಂದೆ ಸರತಿ ಸಾಲಿನಲ್ಲಿ ನಿಂತು ಹರಸಾಹಸ ಪಡುತ್ತಿದ್ದಾರೆ. ಕೆಲವರು ಟಿಕೆಟ್ ದೊರೆಯದೆ ನಿರಾಶನಾಗಿದ್ದಾರೆ. ಅಜಿತ್ ಅಭಿಮಾನಿ ವೀರಬಾಗು ಎಂಬಾತ ಸಿನಿಮಾ ಟಿಕೆಟ್ ದೊರೆಯದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ತೂತುಕುಡಿಯ ವೀರಬಾಗು ವೃತ್ತಿಯಲ್ಲಿ ಆಟೋ ಚಾಲಕ. ಇತ್ತೀಚೆಗೆ ತನ್ನ ಫ್ಯಾಮಿಲಿ ಜೊತೆ ಸಿನಿಮಾ ನೋಡಲು ತೆರಳಿದ್ದಾರೆ. ಆದರೆ ಆತ ಕಂಠಪೂರ್ತಿ ಕುಡಿದಿದ್ದರಿಂದ ಥಿಯೇಟರ್‌ನಲ್ಲಿ ಆತನಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಲದೆ ಆತನನ್ನು ಚಿತ್ರಮಂದಿರದಿಂದ ಹೊರಗೆ ಕಳಿಸಿದ್ದಾರೆ. ಇದರಿಂದ ನೊಂದ ವೀರಬಾಗು ತನ್ನ ಕುಟುಂಬದ ಸದಸ್ಯರನ್ನು ಮಾತ್ರ ಚಿತ್ರಮಂದಿರದ ಒಳಗೆ ಕಳಿಸಿ, ಮನೆಗೆ ವಾಪಸಾಗಿದ್ದಾರೆ.
ಟಿಕೆಟ್ ದೊರೆಯದ ಬೇಸರ ಒಂದು ಕಡೆ ಆದರೆ, ಮನೆಯವರ ಎದುರೇ ತನಗೆ ಅವಮಾನ ಆದ ನೋವು ಮತ್ತೊಂದೆಡೆ. ಇದೇ ಕಾರಣದಿಂದ ವೀರಬಾಗು, ಮನೆಗೆ ಬರುತ್ತಿದ್ದಂತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಸಿನಿಮಾ ನೋಡಿಕೊಂಡು ಮನೆಗೆ ವಾಪಸ್ ಬಂದ ವೀರಬಾಗು ಕುಟುಂಬದವರಿಗೆ ಶಾಕ್ ಆಗಿದೆ. ಕೂಡಲೇ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿದ ನಟ ಅಜಿತ್, ಅಭಿಮಾನಿಯ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಯೊಂದೇ ಪರಿಹಾರವಲ್ಲ, ದಯವಿಟ್ಟು ಅಭಿಮಾನಿಗಳು ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾ ಬಿಡುಗಡೆ ಸಂಭ್ರಮಾಚರಣೆ ವೇಳೆ ಟ್ರಕ್‌ನಿಂದ ಕೆಳಗೆ ಬಿದ್ದು ಮತ್ತೊಬ್ಬ ಅಭಿಮಾನಿ ಸಾವನ್ನಪ್ಪಿದ್ದರು.
'ತುನಿವು' ಚಿತ್ರವನ್ನು ಜೀ ಸ್ಟುಡಿಯೋಸ್, ಬೇವ್ಯೂ ಪ್ರಾಜೆಕ್ಟ್ ಎಲ್‌ಎಲ್‌ಪಿ ಬ್ಯಾನರ್ ಅಡಿಯಲ್ಲಿ ಬೋನಿ ಕಪೂರ್ ನಿರ್ಮಿಸಿದ್ದಾರೆ. ಹೆಚ್. ವಿನೋತ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳಿಗೆ ಘಿಬ್ರನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಅಜಿತ್ ಜೊತೆಗೆ ಮಂಜು ವಾರಿಯರ್, ಸಮುದ್ರಖನಿ, ಪ್ರೇಮ್ ಕುಮಾರ್, ಪಾವನಿ ರೆಡ್ಡಿ, ಚಿರಾಗ್ ಜಾನಿ, ಬಾಲ ಶರವಣನ್ ಹಾಗೂ ಇನ್ನಿತರರು ನಟಿಸಿದ್ದಾರೆ. 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾ ಇದುವರೆಗೂ 195 ಕೋಟಿ ರೂಪಾಯಿ ಲಾಭ ಮಾಡಿದೆ.
ಅಪ್ಪು ನಿಧನರಾದಾಗ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿಗಳು
ಸಿನಿಮಾ ನಟರನ್ನು ಅಭಿಮಾನಿಗಳು ಎಷ್ಟು ಆರಾಧಿಸುತ್ತಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ, ಪುನೀತ್ ರಾಜ್‌ಕುಮಾರ್ ನಿಧನರಾದಾಗ ಕೆಲವು ಅಭಿಮಾನಿಗಳು ನೋವಿನಿಂದ ಆತ್ಮಹತ್ಯೆ ಮಾಡಿಕೊಂಡರೆ, ಕೆಲವರು ವಿಷಯ ಕೇಳಿ ಹೃದಯಾಘಾತದಿಂದ ನಿಧನರಾಗಿದ್ದರು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಡಾ. ರಾಜ್‌ಕುಮಾರ್ ಕುಟುಂಬದವರು ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ದಯವಿಟ್ಟು ಇಂತಹ ಕೆಟ್ಟ ನಿರ್ಧಾರ ಮಾಡಬೇಡಿ, ನಿಮ್ಮ ಮನೆಯವರಿಗೆ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದರು. ಇಷ್ಟಾದರೂ ಪದೇ ಪದೆ ಇಂತಹ ಪ್ರಕರಣಗಳು ಜರುಗುತ್ತಿರುವುದು ಬೇಸರದ ವಿಚಾರ.