Darshan Thoogudeepa: ವಶಪಡಿಸಿಕೊಂಡ ಹಣವನ್ನು ಮರಳಿ ಕೊಡಿ; ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಟ
Jan 20, 2025 03:41 PM IST
ವಶ ಪಡಿಸಿಕೊಂಡ ಹಣವನ್ನು ಮರಳಿ ಪಡೆಯಲು ಅರ್ಜಿ ಸಲ್ಲಿಸಿದ ನಟ ದರ್ಶನ್
- ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ವೇಳೆ ಪೊಲೀಸರು ವಶ ಪಡಿಸಿಕೊಂಡಿದ್ದ ಹಣವನ್ನು ಮರಳಿ ಪಡೆಯುವ ಪ್ರಯತ್ನವನ್ನು ನಟ ದರ್ಶನ್ ಮಾಡುತ್ತಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ವೇಳೆ ಪೊಲೀಸರು ದರ್ಶನ್ ಮನೆಯಲ್ಲಿರುವ ಹಣ ವಶ ಪಡಿಸಿಕೊಂಡಿದ್ದರು. ದರ್ಶನ್‌ಗೆ ಜಾಮೀನು ಸಿಕ್ಕಿದರೂ ಅಂದು ಪಡೆದ ಹಣ ಮಾತ್ರ ಮರಳಿ ಸಿಕ್ಕಿರಲಿಲ್ಲ. ತಮ್ಮ ಮನೆಯಲ್ಲಿ ವಶಪಡಿಸಿಕೊಂಡಿರುವ 40 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಕೋರಿ ನಟ ದರ್ಶನ್ ಬೆಂಗಳೂರು ನಗರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಕರಣದ ತನಿಖಾಧಿಕಾರಿ ದರ್ಶನ್ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕಾಗಿದೆ.
ರೇಣುಕಾಸ್ವಾಮಿಯನ್ನು ಕೊಂದ ಆರೋಪಿಗಳಾದ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬಂದಿದ್ದಾರೆ. ತನ್ನ ಮೂಲಭೂತ ಖರ್ಚುಗಳಿಗಾಗಿ ಹಣ ಬೇಕು ಎಂದು ದರ್ಶನ್ ಮನವಿ ಸಲ್ಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಫೆಬ್ರವರಿ 15ರಂದು ಮತ್ತೆ ನ್ಯಾಯಾಲಯಕ್ಕೆ ಎಲ್ಲ ಆರೋಪಿಗಳು ಹಾಜರಾಗಬೇಕು ಎಂದು ಆದೇಶಿಸಲಾಗಿದೆ.
ಹಣಕ್ಕಾಗಿ ಮನವಿ ಸಲ್ಲಿಸಿದ ದರ್ಶನ್
ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ನಟನ ಮೂಲಭೂತ ಅಗತ್ಯಗಳಿಗೆ ಹಣದ ಅಗತ್ಯವಿರುವುದರಿಂದ ವಶಪಡಿಸಿಕೊಂಡ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷ್ಯ ನಾಶ ಹಾಗೂ ಇನ್ನಿತರೆ ಕೆಲಸಗಳಿಗೆ ವಿನಿಯೋಗಿಸಲು ಮನೆಯಲ್ಲಿ ಹಣ ತಂದಿಟ್ಟುಕೊಂಡಿದ್ದರು ಎಂಬ ಕಾರಣಕ್ಕಾಗಿ ಆಗ ಹಣವನ್ನು ವಶ ಪಡಿಸಿಕೊಳ್ಳಲಾಗಿತ್ತು. ನಟ ದರ್ಶನ್ ನಿವಾಸದಲ್ಲಿ 37.40 ಲಕ್ಷ ರೂ.ಜಪ್ತಿ ಮಾಡಿದ್ದರು. ಜತೆಗೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ನೀಡಿದ್ದ 3 ಲಕ್ಷ ರೂ ಒಟ್ಟು 40 ಲಕ್ಷ ಹಣ ವಶಪಡಿಸಿಕೊಂಡಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ
ಎಲ್ಲ ಆರೋಪಿಗಳು ಜೈಲಿನಿಂದ ಹೊರ ಬಂದಿದ್ದು, ಮುಖ್ಯ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರೇಣುಕಾಸ್ವಾಮಿ ಮನೆಯಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ರೇಣುಕಾಸ್ವಾಮಿ ತಂದೆ ಅಸಮಾಧಾನಗೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ಜೈಲಿನಿಂದ ಹೊರ ಬಂದಿದ್ದಾರೆ. ಈ ನಡುವೆ ನಟ ದರ್ಶನ್ ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾತೂ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ನಾವು ಯಾವುದೇ ಹಣ ಸಹಾಯವನ್ನೂ, ಯಾರಿಂದಲೂ ಪಡೆದಿಲ್ಲ ಎಂದು ಹೇಳಿದ್ದಾರೆ.
ಇನ್ನು ದರ್ಶನ್ ತಮ್ಮ ಸಿನಿಮಾದತ್ತ ಹೆಚ್ಚು ಗಮನಕೊಡುತ್ತಿದ್ದರೆ, ಪವಿತ್ರಾ ಗೌಡ ಎಲ್ಲ ಹಬ್ಬ ಹರಿದಿನಗಳಲ್ಲೂ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಬರುತ್ತಿದ್ದಾರೆ. ಈ ರೀತಿಯಾಗಿ ಅವರು ಮತ್ತೆ ತಮ್ಮ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಆದರೂ ಕೆಲವು ನಿಯಮಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅವರು ಪಾಲಿಸಲೇಬೇಕಾಗುತ್ತದೆ. ದರ್ಶನ್ ಆರೋಗ್ಯದಲ್ಲೂ ಸುಧಾರಣೆ ಕಂಡಿದೆ.