logo
ಕನ್ನಡ ಸುದ್ದಿ  /  ಮನರಂಜನೆ  /  Interview: ಲೈಂಗಿಕ ಬೇಡಿಕೆಗೆ ಧೈರ್ಯವಾಗಿ ನೋ ಎನ್ನಿ, ಹೊರಾಂಗಣ ಚಿತ್ರೀಕರಣದಲ್ಲಿ ಶೌಚಾಲಯ ಬೇಕು - ತಮಿಳು ನಟಿ ಐಶ್ವರ್ಯಾ ರಾಜೇಶ್‌

Interview: ಲೈಂಗಿಕ ಬೇಡಿಕೆಗೆ ಧೈರ್ಯವಾಗಿ ನೋ ಎನ್ನಿ, ಹೊರಾಂಗಣ ಚಿತ್ರೀಕರಣದಲ್ಲಿ ಶೌಚಾಲಯ ಬೇಕು - ತಮಿಳು ನಟಿ ಐಶ್ವರ್ಯಾ ರಾಜೇಶ್‌

Praveen Chandra B HT Kannada

Sep 21, 2024 12:01 PM IST

google News

ತಮಿಳು ನಟಿ ಐಶ್ವರ್ಯಾ ರಾಜೇಶ್‌

    • ಮಲಯಾಳಂ ಸಿನಿರಂಗದ ಕುರಿತು ಹೇಮಾ ಸಮಿತಿ ವರದಿ ಬಹಿರಂಗವಾದ ಬಳಿಕ ಇದೀಗ ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ಸಮಿತಿ ರಚಿಸುವ ತಮಿಳು ಚಿತ್ರರಂಗದ ನಿರ್ಧಾರವನ್ನು ನಟಿ ಐಶ್ವರ್ಯಾ ರಾಜೇಶ್‌ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದೆಯರ ದಿನನಿತ್ಯದ ಕಷ್ಟಗಳ ಕುರಿತೂ ಅವರು ಮಾತನಾಡಿದ್ದಾರೆ.
ತಮಿಳು ನಟಿ ಐಶ್ವರ್ಯಾ ರಾಜೇಶ್‌
ತಮಿಳು ನಟಿ ಐಶ್ವರ್ಯಾ ರಾಜೇಶ್‌

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಬಳಿಕ ಸಾಕಷ್ಟು ಘಟನೆಗಳು ನಡೆದಿವೆ. ಅಲ್ಲಿನ ಚಿತ್ರರಂಗದಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ, ಕಿರುಕುಳ ಸಾಕಷ್ಟು ಸದ್ದು ಮಾಡಿದೆ. ಇದೀಗ ಇತರೆ ಚಿತ್ರರಂಗವೂ ಇಂತಹ ಘಟನೆಗಳ ತನಿಖೆಗೆ ಸಮಿತಿಗಳನ್ನು ರಚಿಸಲು ಮುಂದಾಗಿವೆ. ಈ ವಿಷಯದ ಕುರಿತು ತಮಿಳು ನಟಿ ರಾಧಿಕಾ ಶರತ್‌ ಕುಮಾರ್‌ ಮಾತನಾಡಿದ್ದರು. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಕಲಾವಿದೆಯರು ಧೈರ್ಯವಾಗಿ ಮಾತನಾಡಬೇಕು ಎಂದು ಹೇಳಿದ್ದಾರೆ. ಇಂತಹ ವಿಷಯಗಳ ಕುರಿತು ಸಿನಿಮಾ ನಟಿಯರು ಮಾತ್ರವಲ್ಲದೆ ನಟರೂ ಮುಕ್ತವಾಗಿ ಮಾತನಾಡಬೇಕು ಮತ್ತು ಎಲ್ಲರ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಹೇಳಿದ್ದರು. ಇದೀಗ ತಮಿಳು ನಟಿ ಐಶ್ವರ್ಯಾ ರಾಜೇಶ್‌ ಕೂಡ ಈ ವಿಚಾರದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಜತೆ ಮಾತನಾಡಿದ್ದಾರೆ.

ತಮಿಳು ಚಿತ್ರರಂಗದಲ್ಲಿನ ಲೈಂಗಿಕ ಕಿರುಕುಳ ವಿಷಯಗಳನ್ನು ವಿಚಾರಣೆ ನಡೆಸಲು ನಾಡಿಗರ್‌ ಸಂಗಮ್‌ (ತಮಿಳು ಕಲಾವಿದರ ಸಂಘ) ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿಯ ಅಧ್ಯಕ್ಷೆಯಾಗಿ ರೋಹಿಣಿ ಕಾರ್ಯನಿರ್ವಹಿಸಲಿದ್ದಾರೆ. "ತಮಿಳು ಚಿತ್ರರಂಗದಲ್ಲಿನ ಲೈಂಗಿಕ ಕಿರಕುಳ ದೂರುಗಳನ್ನು ಸೈಬರ್‌ ಪೊಲೀಸರೊಂದಿಗೆ ಹಂಚಿಕೊಳ್ಳಲಾಗುವುದು ಮತ್ತು ಇಂತಹ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಅವರನ್ನು ತಮಿಳು ಚಿತ್ರರಂಗದಿಂದ 5 ವರ್ಷಗಳ ಕಾಲ ನಿಷೇಧಿಸಲಾಗುವುದು" ಎಂದು ರೋಹಿಣಿ ಹೇಳಿದ್ದಾರೆ.

ಶೂಟಿಂಗ್‌ ಸ್ಪಾಟ್‌ಗಳಲ್ಲಿ ಶೌಚಾಲಯ ಬೇಕು

ನಟಿ ಐಶ್ವರ್ಯಾ ರಾಜೇಶ್‌ ಇದೇ ವಿಚಾರದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಜತೆ ಮಾತನಾಡಿದ್ದಾರೆ. ಜತೆಗೆ, ಕಲಾವಿದೆಯರಿಗೆ ಚಿತ್ರೀಕರಣ ಸ್ಥಳಗಳಲ್ಲಿ ಅಗತ್ಯವಿರುವ ಲಾಜಿಸ್ಟಿಕ್ಸ್‌ ಅಂಶಗಳ ಕುರಿತೂ ಹೇಳಿದ್ದಾರೆ. "ನಾನು ಚಿತ್ರರಂಗಕ್ಕೆ ಆಗಮಿಸಿ 12 ವರ್ಷಗಳಾಗಿವೆ. ಕಳೆದ ಹಲವು ವರ್ಷಗಳಲ್ಲಿ ನಮ್ಮ ಸುತ್ತಮುತ್ತ ಸಾಕಷ್ಟು ಬದಲಾವಣೆಗಳಾಗಿವೆ. ಜತೆಗೆ ಸಾಕಷ್ಟು ಸಮಸ್ಯೆಗಳೂ ಇವೆ.  ಕಲಾವಿದೆಯರು ಶೂಟಿಂಗ್‌ ಸ್ಥಳದಲ್ಲಿ ಶೌಚಾಲಯದ ತೊಂದರೆಗಳನ್ನು ಅನುಭವಿಸುತ್ತಾರೆ. ಹೊರಾಂಗಣ ಶೂಟಿಂಗ್‌ ಸ್ಥಳಗಳಲ್ಲಿ ಸರಿಯಾದ ಶೌಚಾಲಯ ಇರುವುದು ಅತ್ಯಂತ ಅವಶ್ಯವಾಗಿದೆ. ನನಗೆ ವ್ಯಾನಿಟಿ ವ್ಯಾನ್‌ ಇದ್ದು, ಅದರಲ್ಲಿ ಎಲ್ಲಾ ಸೌಲಭ್ಯಗಳು ಇವೆ. ಆದರೆ, ಸಿನಿಮಾದಲ್ಲಿ ನಟಿಸುವ ಇತರೆ ಕಲಾವಿದೆಯರು ಏನು ಮಾಡಬೇಕು? ಕೆಲವು ಕಡೆ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಹೊರಾಂಗಣ ಶೂಟಿಂಗ್‌ನಲ್ಲಿ ಇಂತಹ ಸಮಸ್ಯೆಗಳಿವೆ. ಇಂತಹ ವಿಷಯಗಳ ಕುರಿತು ಸಿನಿಮಾ ಉದ್ಯಮವು ಗಂಭೀರವಾಗಿ ಯೋಚಿಸಬೇಕು" ಎಂದು ಐಶ್ವರ್ಯಾ ರಾಜೇಶ್‌ ಹೇಳಿದ್ದಾರೆ.

ಇದೇ ಸಮಯದಲ್ಲಿ ತಮಿಳುನಾಡಿನ ಲೈಂಗಿಕ ಕಿರುಕುಳ ನಿಯಂತ್ರಿಸಲು ಸಮಿತಿ ಸ್ಥಾಪಿಸಿರುವುದನ್ನು ಅವರು ಸ್ವಾಗತಿಸಿದ್ದಾರೆ. "ನನಗೆ ತಮಿಳು ಚಿತ್ರೋದ್ಯಮದಲ್ಲಿ ಇಂತಹ ಕೆಟ್ಟ ಅನುಭವ ಆಗಿಲ್ಲ. ಆದರೆ, ನನಗೆ ಇಂತಹ ತೊಂದರೆ ಆಗಿಲ್ಲ ಎಂದರೆ ಇತರರಿಗೂ ಆಗೋದಿಲ್ಲ ಎಂದು ಅರ್ಥವಲ್ಲ. ಮಹಿಳೆಯರ ಸಮಸ್ಯೆ ಬಗೆಹರಿಯದೆ ಈ ರೀತಿ ಸಮಿತಿ ನಿರ್ಮಿಸಿ ಪ್ರಯೋಜನವಿಲ್ಲ. ಈ ರೀತಿ ದೂರು ನೀಡಿದ ಮಹಿಳೆಯರಿಗೆ ಕರಿಯರ್‌ ಅವಕಾಶಗಳು ಕೊನೆಗೊಳ್ಳಬಾರದು. ಯಾರಾದರೂ ತಪ್ಪಿತಸ್ಥರು ಎಂದು ಗೊತ್ತಾದರೆ ಅವರಿಗೆ ಶಿಕ್ಷೆಯಾಗಬೇಕು. ದೂರು ನೀಡಿದವರನ್ನು ರಕ್ಷಿಸಬೇಕು, ಅವರಿಗೆ ದೊರಕುವ ಅವಕಾಶಗಳು ಕಡಿಮೆಯಾಗಬಾರದು" ಎಂದು ಐಶ್ವರ್ಯಾ ರಾಜೇಶ್‌ ಹೇಳಿದ್ದಾರೆ.

ನಟಿಯರಿಗೆ ಸಲಹೆ

ಐಶ್ವರ್ಯಾ ರಾಜೇಶ್‌ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಮಯದಲ್ಲಿ ಅವರು ಕಲಾವಿದೆಯರಿಗೆ ಒಂದಿಷ್ಟು ಸಲಹೆ ನೀಡಿದ್ದಾರೆ. "ನಟಿಯರು ತುಂಬಾ ಸ್ಟ್ರಾಂಗ್‌ ಮತ್ತು ಕಾನ್ಫಿಡೆಂಟ್‌ ಆಗಿರಬೇಕು. ನಿಮ್ಮ ಹತ್ತಿರಕ್ಕೆ ಕೆಟ್ಟ ಉದ್ದೇಶಕ್ಕೆ ಬರಲು ಯಾರಿಗೂ ಅವಕಾಶ ನೀಡಬೇಡಿ. ಯಾರಾದರೂ ನಿಮ್ಮಿಂದ ಲಾಭ ಪಡೆಯಲು ಬಂದರೆ ಅದಕ್ಕೆ ಅವಕಾಶ ನೀಡಬೇಡಿ. ಯಾರಾದರೂ ಅಂತಹ ಪ್ರಯತ್ನ ಮಾಡಿದರೆ ವಿರೋಧಿಸಿ. ನೋ ಅಂದ್ರೆ ನೋ, ಇಲ್ಲ ಎನ್ನಿ. ನಾನು ನನ್ನ ಗೆಳತಿಯರಿಗೆ ಇಷ್ಟು ಸಲಹೆ ನೀಡಬಲ್ಲೆ" ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ