Ajith Kumar: ಎಕೆ ಸಿನಿಜರ್ನಿಗೆ 30 ವರ್ಷಗಳು...ಫ್ಯಾನ್ಸ್ ಖುಷಿಯಿಂದ ಏನೆಲ್ಲಾ ಮಾಡ್ತಾರೆ ನೋಡಿ..ವಿಡಿಯೋ ವೈರಲ್
Aug 06, 2022 08:08 AM IST
100 ಅಡಿ ಸಾಗರದ ಆಳದಲ್ಲಿ ಅಜಿತ್ ಕುಮಾರ್ ಬ್ಯಾನರ್ನೊಂದಿಗೆ ಅಭಿಮಾನಿಗಳು
- ಪುದುಚೇರಿಯ ಫ್ರೆಂಚ್ ಸಿಟಿ ಅಜಿತ್ ಫ್ಯಾನ್ಸ್ ಪೇಜ್ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ಈ ಸ್ಕೂಬಾ ಡೈವ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಅಭಿಮಾನಿಗಳ ಪ್ರೀತಿಗೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಅಜಿತ್ ಕುಮಾರ್ ಕೂಡಾ ಒಬ್ಬರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದ ಅಜಿತ್ಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಯಾವುದೇ ವಿವಾದಕ್ಕೆ ಸಿಲುಕದೆ, ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿರುವ ಅಜಿತ್ ಎಂದರೆ ಅಭಿಮಾನಿಗಳಿಗೆ ಇನ್ನಿಲ್ಲದ ಪ್ರೀತಿ. ಅಜಿತ್, ಚಿತ್ರರಂಗದಲ್ಲಿ ಗುರುತಿಸಿಕೊಂಡಾಗಿನಿಂದ ಅಭಿಮಾನಿಗಳು ಅವರನ್ನು ತಮ್ಮದೇ ರೀತಿಯಲ್ಲಿ ಆರಾಧಿಸುತ್ತಾ ಬಂದಿದ್ದಾರೆ.
ಅಜಿತ್, ಚಿತ್ರರಂಗದಲ್ಲಿ ಮಾತ್ರವಲ್ಲದೆ ಕ್ರೀಡಾರಂಗದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಬೈಕ್ ರೇಸ್, ಶೂಟಿಂಗ್ ವಿಭಾಗದಲ್ಲಿ ಅಜಿತ್ ಪರಿಣಿತರು. ಆಗ್ಗಾಗ್ಗೆ ದೇಶಾದ್ಯಂತ ಬೈಕ್ನಲ್ಲಿ ಪ್ರಯಾಣಿಸುವ ಇವರು ಇತ್ತೀಚೆಗೆ ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದರು. ಈ ನಡುವೆ ಅಜಿತ್ ಕುಮಾರ್ ಚಿತ್ರರಂಗಕ್ಕೆ ಬಂದು 30 ವರ್ಷಗಳು ತುಂಬಿದ್ದು ಗಣ್ಯರು, ಅಭಿಮಾನಿಗಳಿಂದ ಅಜಿತ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ಅಜಿತ್ಗೆ ಈಗ 51 ವರ್ಷ ವಯಸ್ಸು. ಬಾಲನಟನಾಗಿ 2-3 ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, 1993 ರಲ್ಲಿ ತೆಲುಗಿನ 'ಪ್ರೇಮ ಪುಸ್ತಕಂ' ಚಿತ್ರದ ಮೂಲಕ ಅಜಿತ್ ನಾಯಕ ನಟನಾಗಿ ಚಿತ್ರರಂಗಕ್ಕೆ ಬಂದರು.
ಅಜಿತ್, ಚಿತ್ರರಂಗದ 30 ವರ್ಷಗಳ ವಾರ್ಷಿಕೋತ್ಸವವನ್ನು ಅಭಿಮಾನಿಗಳು ಕಳೆದ ಕೆಲವು ದಿನಗಳಿಂದ '30 Years of Ajithism'ಹೆಸರಿನಲ್ಲಿ ವಿಭಿನ್ನವಾಗಿ ಆಚರಿಸುತ್ತಲೇ ಬಂದಿದ್ದಾರೆ. ಇದೀಗ ಪುದುಚೇರಿ ಅಭಿಮಾನಿಗಳು ಸಮುದ್ರದ ಆಳಕ್ಕೆ ಇಳಿದು ಈ ಖುಷಿಯನ್ನು ಆಚರಿಸಿದ್ದಾರೆ. ಅಭಿಮಾನಿಗಳು ಸಮುದ್ರದಲ್ಲಿ100 ಅಡಿ ಆಳಕ್ಕೆ ಇಳಿದು ಅಜಿತ್ ಕುಮಾರ್ ಬ್ಯಾನರ್ ಹಿಡಿದು ಪ್ರದರ್ಶಿಸಿದ್ದಾರೆ. ಪುದುಚೇರಿಯ ಫ್ರೆಂಚ್ ಸಿಟಿ ಅಜಿತ್ ಫ್ಯಾನ್ಸ್ ಪೇಜ್ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ಈ ಸ್ಕೂಬಾ ಡೈವ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಅಭಿಮಾನಿಗಳ ಪ್ರೀತಿಗೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮನ್ನು ತಲಾ ಎಂದು ಕರೆಯದಿರಲು ಅಭಿಮಾನಿಗಳಿಗೆ ಮನವಿ ಮಾಡಿದ್ದ ನಟ
ನಟರ ಸಿನಿಮಾ, ಅವರ ಲೈಫ್ ಸ್ಟೈಲ್ಗೆ ಮಾರುಹೋದ ಅಭಿಮಾನಿಗಳ ಸಂಘ ಅವರಿಗೆ ತಮಗಿಷ್ಟವಾದ ಬಿರುದು ನೀಡಿ ಗೌರವಿಸುತ್ತಾರೆ. ಅದೇ ರೀತಿ ತಮಿಳುನಾಡಿನ ಅಜಿತ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಅಜಿತ್ ಅವರಿಗೆ ತಲಾ ಎಂಬ ಹೆಸರು ನೀಡಿ ಅದೇ ಹೆಸರಿನಿಂದ ಕರೆಯುತ್ತಿದ್ದರು. ಆದರೆ ಕಳೆದ ವರ್ಷ ಅಜಿತ್, ಅಭಿಮಾನಿಗಳನ್ನು ಕುರಿತು, ದಯವಿಟ್ಟು ಇನ್ಮುಂದೆ ನನಗೆ ತಲಾ ಎಂದು ಕರೆಯದಿರುವಂತೆ ಮನವಿ ಮಾಡಿದ್ದರು. 'ಮಾಧ್ಯಮ ಮಿತ್ರರೇ, ಅಭಿಮಾನಿಗಳೇ, ಸಾರ್ವಜನಿಕರೇ ನನ್ನ ಹೆಸರನ್ನು ದಯವಿಟ್ಟು ಅಜಿತ್, ಅಜಿತ್ ಕುಮಾರ್ ಅಥವಾ AK ಎಂದು ಕರೆದರೆ ಸಾಕು. ನನ್ನ ಹೆಸರಿನೊಂದಿಗೆ 'ತಲಾ' ಎಂದಾಗಲೀ ಅಥವಾ ಬೇರೆ ಯಾವ ಬಿರುದಾಗಲೀ ಬೇಡ. ನಿಮ್ಮೆಲ್ಲರ ಜೀವನ ಎಂದಿಗೂ ಒಳ್ಳೆ ಆರೋಗ್ಯ, ಸಂತೋಷ, ಶಾಂತಿ, ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸುತ್ತೇನೆ, ನಿಮ್ಮ ಪ್ರೀತಿಯ ಅಜಿತ್'' ಎಂದು ಅಜಿತ್ ತಮ್ಮ ಸಂದೇಶದಲ್ಲಿ ಬರೆದುಕೊಂಡಿದ್ದರು.
ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದ ಅಜಿತ್ ಕುಮಾರ್
ಆಗ್ಗಾಗ್ಗೆ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಲೇ ಬಂದಿರುವ ನಟ ಅಜಿತ್ ಇತ್ತೀಚೆಗೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಕೂಡಾ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅವರು ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಬಹುಮುಖ ಪ್ರತಿಭೆ ಅಜಿತ್ ಕುಮಾರ್ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದರು.