logo
ಕನ್ನಡ ಸುದ್ದಿ  /  ಮನರಂಜನೆ  /  Paramvah Movie Teaser: ವೀರಗಾಸೆ ಕುಟುಂಬದ ಕಥೆಯುಳ್ಳ ‘ಪರಂವಃ’ ಚಿತ್ರಕ್ಕೆ 200 ಮಂದಿ ನಿರ್ಮಾಪಕರು!

Paramvah Movie Teaser: ವೀರಗಾಸೆ ಕುಟುಂಬದ ಕಥೆಯುಳ್ಳ ‘ಪರಂವಃ’ ಚಿತ್ರಕ್ಕೆ 200 ಮಂದಿ ನಿರ್ಮಾಪಕರು!

HT Kannada Desk HT Kannada

Jan 14, 2023 05:46 PM IST

google News

ವೀರಗಾಸೆ ಕುಟುಂಬದ ಕಥೆಯುಳ್ಳ ‘ಪರಂವಃ’ ಚಿತ್ರಕ್ಕೆ 200 ಮಂದಿ ನಿರ್ಮಾಪಕರು!

    • ಸರಿ ಸುಮಾರು 200ಮಂದಿ ಸೇರಿಕೊಂಡು ಕ್ರೌಡ್‌ ಫಂಡಿಂಗ್‌ ಮೂಲಕ ‘ಪರಂವಃ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ವೀರಗಾಸೆ ಕುಟುಂಬದ ಕಥೆಯುಳ್ಳ ‘ಪರಂವಃ’ ಚಿತ್ರಕ್ಕೆ 200 ಮಂದಿ ನಿರ್ಮಾಪಕರು!
ವೀರಗಾಸೆ ಕುಟುಂಬದ ಕಥೆಯುಳ್ಳ ‘ಪರಂವಃ’ ಚಿತ್ರಕ್ಕೆ 200 ಮಂದಿ ನಿರ್ಮಾಪಕರು!

Paramvah Movie Teaser: ಶಿವನ ಡಮರುಗದಿಂದ ಬರುವ ಮೊದಲ ಶಬ್ದಕ್ಕೆ ‘ಪರಂವಃ’ ಎಂದು ಕರೆಯಲಾಗುತ್ತದೆ. ಈ ಶೀರ್ಷಿಕೆಯಡಿ ಸದ್ಯ ಯುವಕರ ತಂಡವೊಂದು ಸದಭಿರುಚಿ ಸಿನಿಮಾ ಮಾಡಿದ್ದು, ಆ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಟೀಸರ್ ಬಿಡುಗಡೆ ಮಾಡಿದ ನಟ ಡಾರ್ಲಿಂಗ್ ಕೃಷ್ಣ, ‘ವಿಭಿನ್ನ ಹಾಗೂ ರಾ ಆಗಿ ಟೀಸರ್ ಬಂದಿದ್ದು ಹೊಸಬರ ಹೊಸ ಪ್ರಯತ್ನ ಕಾಣುತ್ತಿದೆ. ಒಳ್ಳೆ ಕಥೆ ಇದ್ರೆ ಯಾರಾದರೂ ಸಿನಿಮಾ ಮಾಡಬಹುದು ಎಂಬುದನ್ನು ಈ ತಂಡ ತೋರಿಸಿ ಕೊಟ್ಟಿದೆ.. ಒಳ್ಳೆಯದಾಗಲಿ’ ಎಂದರು.

ಇದೇ ಸಂದರ್ಭದಲ್ಲಿ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿರುವ ಸಂತೋಷ ಕೈದಾಳ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ, ‘ಸಹ, ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಈಗ ಮೊದಲ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಮೂಲತಃ ನಾನು ತುಮಕೂರಿನವ. ನಮ್ಮ ಊರು ಕೈದಾಳ ಹಾಗಾಗಿ ನನ್ನ ಹೆಸರಿನ ಮುಂದೆ ಕೈದಾಳ ಸೇರಿಸಿದ್ದೇನೆ. ನಾಟಕ, ಸಿನಿಮಾ ನೋಡುತ್ತಾ ಬೆಳೆದ ನಾನು ‘ಆರ್ಯನ್’ ಸಿನಿಮಾ ಮೂಲಕ ತಂತ್ರಜ್ಞನಾಗಿ ಚಿತ್ರರಂಗ ಪ್ರವೇಶ ಮಾಡಿದೆ"

"ನಾನು ಹಾಗೂ ಗೆಳೆಯ ಪ್ರೇಮ್ ಸಿನಿಮಾ ಮಾಡುವ ಎಂದು ಪ್ಲ್ಯಾನ್ ಮಾಡಿಕೊಂಡಾಗ ಒಳ್ಳೆಯ ಕಥೆ ಮಾಡಿಕೊಂಡು ಗೆಳೆಯರ ಸಹಕಾರದಿಂದ ಈ ಸಿನಿಮಾ ಮಾಡಿದ್ವಿ. ಈ ಚಿತ್ರಕ್ಕೆ ಸುಮಾರು 200 ಜನ ಹಣ ಹಾಕಿದ್ದಾರೆ. ತುಮಕೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದ್ದು ಇದು ಚಿಕ್ಕ ಪ್ರಯತ್ನ ಅಷ್ಟೇ. ಇದರಲ್ಲಿ ವೀರಗಾಸೆಯನ್ನೇ ವೃತ್ತಿಯಾಗಿ ಬಳಸಿಕೊಂಡ ಕುಟುಂಬದ ಕಥೆಯ ಜತೆಗೆ ಇಂದಿನ ಯುವ ಜನಾಂಗದ ಜಿವನ ಶೈಲಿಯ ಬಗ್ಗೆ ತೋರಿಸಲಾಗಿದೆ. ಇದು ಕ್ರೌಡ್ ಫಂಡಿಂಗ್ ಮೂಲಕ ಮಾಡಿದ ಚಿತ್ರವಾಗಿದ್ದು, ಸದ್ಯ ನಮ್ಮ ಪ್ರಯತ್ನಕ್ಕೆ ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಹೇಳಿದರು.

ನಂತರ ಮಾತನಾಡಿದ ಚಿತ್ರದ ನಾಯಕ ಪ್ರೇಮ್, ‘ನಾನು ಕೂಡ ಸಹ, ಸಹಾಯಕ ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ಈಗ ನಟನಾಗಿದ್ದೇನೆ. ಸದ್ಯ ನಮ್ಮ ಈ ‘ಪರಂವಃ’ ಸಿನಿಮಾ ಸೆನ್ಸಾರ್ ಹಂತದಲ್ಲಿ ಇದೆ. ಇದರಲ್ಲಿ ನಾನು ಹೀರೋ ಅಲ್ಲ ಕಂಟೆಂಟ್ ಹೀರೋ. ಚಿತ್ರದಲ್ಲಿ ನಂಗೆ 4-5 ಗೆಟಪ್ ಇದ್ದಿದ್ದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೆನೆ. ಚಿತ್ರದಲ್ಲಿ ಮೈಸೂರು ದಸರಾದಿಂದ ಕಥೆ ಶುರುವಾಗುತ್ತದೆ. ವೀರಗಾಸೆ ಕುಟುಂಬದಿಂದ ಬಂದಂತ ಹುಡುಗ ಏನೆಲ್ಲಾ ಆಗುತ್ತಾನೆ ಎಂಬುದು ಸಿನಿಮಾದ ಒಂದು ಲೈನ್ ಕಥೆ’ ಎನ್ನುವರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ಕಮ್ ನಿರ್ಮಾಪಕ ಗುರುದೇಶಪಾಂಡೆ ಮಾತನಾಡಿ ‘ಇವರಿಬ್ಬರ (ನಿರ್ದೇಶಕ- ನಾಯಕ) ಮನಸ್ಸು ತುಂಬಾ ಚನ್ನಾಗಿ ಇದೆ. ಅದಕ್ಕೆ 200 ಜನ ನಿರ್ಮಾಪಕರು ಈ ಚಿತ್ರಕ್ಕೆ ಸೇರಿದ್ದಾರೆ. ಇಬ್ಬರು ನಮ್ಮ ಹುಡುಗರು. ಹೊಸತನದ ಸಿನಿಮಾ ಮಾಡಿದ್ದಾರೆ. ಸಿನಿಮಾ ನಾನು ನೋಡಿದ್ದೇನೆ, ತುಂಬಾ ಖುಷಿಯಾಗಿ ನಮ್ಮ ಬ್ಯಾನರ್ ತಂಡ ಸೇರಿದೆ. ಈ ಯುವಕರಿಗೆ ರಿಲೀಸ್ ಹಂತದವರೆಗೆ ಎಲ್ಲಾ ನಿರ್ಮಾಪಕರು ಇದೇ ರೀತಿ ಸಾಥ್ ನೀಡಬೇಕು’ ಎಂದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಜಡೇಶ ಕುಮಾರ್ ಹಾಗೂ ಸಂಭಾಷಣೆಕರ ಮಾಸ್ತಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಪರಂವಃ’ ಚಿತ್ರತಂಡ

ಇನ್ನು ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ಪೂರ್ಣಚಂದ್ರ ತೇಜಸ್ವಿ ಮಾತನಾಡಿ ‘ಹೆಸರಲ್ಲೇ ಪವರ್ ಇದೆ. ಕಂಟೆಂಟ್ ಹೊಸತನದಿಂದ ಕೂಡಿದೆ. ಈ ಚಿತ್ರವನ್ನು ವೀರಗಾಸೆ ಹಿನ್ನೆಲೆ ಇವರು ಹುಡುಗರು ಸೇರಿ ಮಾಡಿರುವುದು ವಿಶೇಷ. ಇದರಲ್ಲಿ ಕಲ್ಚರ್ ಜೊತೆಗೆ ಇಂದಿನ ಯುವಕರ ಜರ್ನಿಯನ್ನು ರಾ ಆಗಿ ಹೇಳಲಾಗಿದೆ. ಕಥೆ ಇಟ್ಟುಕೊಂಡು ಮಾಡಿದ ಸಿನಿಮಾ ಇದು’ ಎಂದು ಹೇಳಿದರು.

ಚಿತ್ರಕ್ಕೆ ಎ.ಎಸ್.ಶೆಟ್ಟಿ ಛಾಯಾಗ್ರಹಣ, ಅಪರಿಜಿತ್ ಹಾಗೂ ಜೋಸ್ ಜೊಸ್ಸಿ ಸಂಗೀತವಿದೆ. ಚಿತ್ರದಲ್ಲಿ ಮೈಸೂರು ಮೂಲದ ಮೈತ್ರಿ ನಾಯಕಿ ಪಾತ್ರ ಮಾಡಿದ್ದು, ತಂದೆ ಪಾತ್ರವನ್ನು ರಂಗಭೂಮಿ ಕಲಾವಿದ ಗಣೇಶ್ ಮಾಸ್ಟರ್ ನಿರ್ವಹಿಸಿದ್ದಾರೆ. ಉಳಿದ ತಾರಾಗಣದಲ್ಲಿ ಶೃತಿ, ಮುಕುಂದ ಮೈಗೂರ್, ಅವಿನಾಶ್, ಮಾಸ್ಟರ್ ಮಿತುನ್, ಮಾಸ್ಟರ್ ಭುವನ್, ಮುಂತಾದವರಿದ್ದಾರೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ