Barroz OTT: 150 ಕೋಟಿ ಬಜೆಟ್, ಕೇವಲ 20 ಕೋಟಿ ಗಳಿಕೆ! ಒಟಿಟಿಗೆ ಬರಲಿದೆ ಹೀನಾಯ ಸೋಲುಂಡ ಮೋಹನ್‌ಲಾಲ್ ಸಿನಿಮಾ
Jan 21, 2025 07:13 AM IST
ಒಟಿಟಿಗೆ ಬರಲಿದೆ ಹೀನಾಯ ಸೋಲುಂಡ ಮೋಹನ್‌ಲಾಲ್ ಸಿನಿಮಾ
- Barroz Ott Release Date: ಕಳೆದ ವರ್ಷದ ಕ್ರಿಸ್‌ಮಸ್ ಪ್ರಯುಕ್ತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು ಮೋಹನ್ ಲಾಲ್ ನಟನೆಯ ಬರೋಜ್ ಸಿನಿಮಾ. ಈಗ ಇದೇ ಸಿನಿಮಾ ಒಟಿಟಿಯತ್ತ ಮುಖಮಾಡಿದೆ.

Barroz OTT: ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ನಿರ್ದೇಶನದ ಚೊಚ್ಚಲ ಚಿತ್ರ ಬರೋಜ್: ದಿ ಗಾರ್ಡಿಯನ್ ಆಫ್ ಟ್ರೆಷರ್ಸ್ ಚಿತ್ರಮಂದಿರಗಳ ಬಳಿಕ ಇದೀಗ ಒಟಿಟಿಗೆ ಆಗಮಿಸಿದೆ. ಡಿಸೆಂಬರ್ 25 ರಂದು ಕ್ರಿಸ್‌ಮಸ್ ನಿಮಿತ್ತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಚಿತ್ರಮಂದಿರಗಳಿಗೆ ಬಂದ 23ನೇ ದಿನದಂದು ಚಿತ್ರದ ಅಧಿಕೃತ ಒಟಿಟಿಯ ಘೋಷಣೆ ಆಗಿದೆ. ಈ ಚಿತ್ರ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಯಾವಾಗಿನಿಂದ ಎಂಬ ಕುತೂಹಲಕ್ಕೆ ದಿನಾಂಕವೂ ರಿವೀಲ್ ಆಗಿದೆ.
ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ಸುಮಾರು 150 ಕೋಟಿ ರೂ.ಗಳ ಬೃಹತ್ ಬಜೆಟ್‌ನೊಂದಿಗೆ, ಅಷ್ಟೇ ನಿರೀಕ್ಷೆಗಳ ನಡುವೆ ಈ ಚಿತ್ರ ಡಿ. 25ರಂದು ಬಿಡುಗಡೆಯಾಯಿತು. ಆದರೆ ಸಿನಿಮಾ ಮಾತ್ರ ಗೆಲುವು ಕಾಣಲಿಲ್ಲ. ಹಾಕಿದ ಬಜೆಟ್ ವತ್ತಟ್ಟಿಗಿರಲಿ, ಅದರ ಅರ್ಧದಷ್ಟೂ ಹಣ ವಾಪಾಸ್ ಬರಲಿಲಿಲ್ಲ. ಸೋತು ಸುಣ್ಣವಾಯ್ತು. ಗಳಿಸಿದ್ದು ಕೇವಲ 20 ಕೋಟಿ ಮಾತ್ರ!
ಇದೀಗ ಬರೋಜ್: ದಿ ಗಾರ್ಡಿಯನ್ ಆಫ್ ಟ್ರೆಷರ್ಸ್ ಸಿನಿಮಾ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜನವರಿ 22 ರಿಂದ ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಮೂಲ ಮಲಯಾಳಂ ಜತೆಗೆ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ. ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಥೋನಿ ಪೆರುಂಬವೂರ್ ನಿರ್ಮಿಸಿದ್ದಾರೆ. ಭಾರತದ ಮೊದಲ 3D ಚಿತ್ರ 'ಮೈ ಡಿಯರ್ ಕುಟ್ಟಿಚಾತನ್' ನಿರ್ದೇಶಿಸಿದ ಜಿಜೋ ಅವರ ಕಥೆಯನ್ನು ಆಧರಿಸಿ ಮೋಹನ್ ಲಾಲ್ ಈ ಚಿತ್ರ ಮಾಡಿದ್ದರು.
ನಿರ್ದೇಶನದ ಜೊತೆಗೆ ಬರೋಜ್ ಅನ್ನೋ ಪಾತ್ರವನ್ನೂ ಮೋಹನ್ ಲಾಲ್ ಈ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ತಾಂತ್ರಿಕ ಬಳಗದ ಬಗ್ಗೆ ಹೇಳುವುದಾದರೆ, ಅಮೇರಿಕನ್ ಟೆಲಿವಿಷನ್ ಚಾನೆಲ್ ಸಿಬಿಎಸ್‌ನಿಂದ ಪ್ರಶಸ್ತಿ ಗೆದ್ದ ಲಿಡಿಯನ್ ಈ ಸಿನಿಮಾದ ಸಂಗೀತ ನಿರ್ದೇಶಕ. ಇದು ಅವರ ಮೊದಲ ಚಿತ್ರ. ಸಂತೋಷ್ ಶಿವನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.