BBK 10: ‘ಸುದೀಪ್ ಅವ್ರೇನು ದೇವ್ರಾ, ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕು?’ ಆಡಿದ ಮಾತಿಗೆ ರಕ್ಷಕ್ ಬುಲೆಟ್ ಕ್ಷಮಾಪಣೆ
Jan 18, 2024 09:54 AM IST
BBK 10: ‘ಸುದೀಪ್ ಅವ್ರೇನು ದೇವ್ರಾ, ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕು?’ ಆಡಿದ ಮಾತಿಗೆ ರಕ್ಷಕ್ ಬುಲೆಟ್ ಕ್ಷಮಾಪಣೆ
- ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಬುಲೆಟ್ ರಕ್ಷಕ್ ಸಂದರ್ಶನವೊಂದರಲ್ಲಿ ಸುದೀಪ್ ಬಗ್ಗೆ ಆಡಿದ ಮಾತಿಗೆ ಟೀಕೆಗೆ ಗುರಿಯಾಗುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳು ರಕ್ಷಕ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರ ತಿಳಿದ ರಕ್ಷಕ್, ವಿಡಿಯೋ ಮೂಲಕ ಸುದೀಪ್ ಬಳಿ ಕ್ಷಮೆ ಕೇಳಿದ್ದಾರೆ.
BBK 10: ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್, ತಂದೆಯ ಪ್ರಭಾವಳಿಯಲ್ಲಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳಿದ್ದರು. ಒಂದು ತಿಂಗಳ ಕಾಲ ಬಿಗ್ಬಾಸ್ನಲ್ಲಿದ್ದು ಎಲಿಮಿನೇಟ್ ಆಗಿಯೂ ಹೊರಬಂದಿದ್ದರು. ಹೊರ ಬಂದ ಬಳಿಕವೂ ತಮ್ಮ ಬಿಗ್ ಬಾಸ್ ಅನುಭವವನ್ನು ಹೇಳಿಕೊಂಡು ಸುದ್ದಿಯಾಗಿದ್ದರು. ಇದೀಗ ಫಿನಾಲೆ ಹಂತಕ್ಕೆ ಬರುತ್ತಿದ್ದಂತೆ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ರಕ್ಷಕ್ ಆಡಿದ ಮಾತು, ವೈರಲ್ ಆಗಿದೆ. ಕಿಚ್ಚನ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗುತ್ತಿದ್ದಾರೆ.
ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಗೆ ಏಕೆ ಹೋಗುತ್ತಿದ್ದೀರಿ ಎಂದಾಗ, ನೇಮು ಫೇಮು, ಹೆಸರು ಮಾಡಬೇಕು ಎಂದೇ ಹೇಳಿಕೊಂಡು ಹೋಗಿದ್ದರು. ಅದರಂತೆ, ಬೇಕು ಅಂತಲೇ ಒಂದಷ್ಟು ಕಡೆಗೆ ಅನಾವಶ್ಯಕವಾಗಿ ಸೌಂಡ್ ಮಾಡಿದ್ದೇ ಹೆಚ್ಚು. ಪ್ರತಾಪ್ ಜತೆ ಕಿರಿಕ್ ಮಾಡಿಕೊಂಡಿದ್ದೂ ಇದೆ. ಹೀಗೆ ಇದ್ದಷ್ಟು ದಿನ ಸದ್ದು ಮಾಡಿದ್ದ ರಕ್ಷಕ್, ಇದೀಗ ಬೇರೆ ಬೇರೆ ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದಾರೆ. ನೇರವಾಗಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ. ಜತೆಗೆ ಆಡಿದ ಮಾತಿಗೆ ತಪ್ಪಾಯ್ತು ಎಂದು ಕ್ಷಮೆಯನ್ನೂ ಕೋರಿದ್ದಾರೆ.
ಅಷ್ಟಕ್ಕೂ ಏನಾಯ್ತು?
ಇತ್ತೀಚೆಗಷ್ಟೇ ಬಿಗ್ಬಾಸ್ನ ಸೀಸನ್ 10ರ ಕೆಲವು ಸ್ಪರ್ಧಿಗಳನ್ನು ನ್ಯೂಸ್ ಫಸ್ಟ್ ವಾಹಿನಿ ಚಿಟ್ ಚಾಟ್ ಮಾಡಿತ್ತು. ಸ್ನೇಹಿತ್, ರಕ್ಷಕ್ ಬುಲೆಟ್, ಮೈಕಲ್, ನೀತು ವನಜಾಕ್ಷಿ, ಪವಿ ಪೂವಪ್ಪ ಭಾಗವಹಿಸಿದ್ದರು. ಈ ವೇಳೆ ಕಳಪೆ ಮತ್ತು ಉತ್ತಮ ಪಟ್ಟದ ಬಗ್ಗೆ ಎಲ್ಲರ ನಡುವೆ ಚರ್ಚೆಯಾಗಿದೆ. ಈ ವೇಳೆ ಮಾತನಾಡಿದ, ರಕ್ಷಕ್, "ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಅನಿಸಿದ್ದನ್ನು ಕೊಟ್ಟು ಬಿಡ್ತಾರೆ. ಆಮೇಲೆ ಸುದೀಪ್ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆ" ಎಂದು ರಕ್ಷಕ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆಯೇ ಇದೀಗ ಟೀಕೆಗೆ ಗುರಿಯಾಗುತ್ತಿದೆ.
ಇದೇ ಮಾತಿಗೆ ಕ್ಷಮೆ ಕೇಳಿದ ರಕ್ಷಕ್
ಕಿಚ್ಚ ಸುದೀಪ್ ದೇವರು, ಅವರ ಮುಂದೆ ನಾವೆಲ್ಲ ಕೈ ಕಟ್ಟಿ ನಿಲ್ಲಬೇಕಾ ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಅಭಿಮಾನಿಗಳಿಂದ ರಕ್ಷಕ್ ಹಿಗ್ಗಾ ಮುಗ್ಗಾ ಟ್ರೋಲ್ ಆಗಿದ್ದರು. ಹೀಗೆ ಟ್ರೋಲ್, ಟೀಕೆಗೆ ಗುರಿಯಾಗುತ್ತಿದ್ದಂತೆ, ವಿಡಿಯೋ ಹರಿಬಿಟ್ಟ ರಕ್ಷಕ್ ಸುದೀಪ್ ಮತ್ತವರ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ್ದಾರೆ.
"ಎರಡು ದಿನಗಳಿಂದ ಒಂದು ವಿಡಿಯೋ ಹರಿದಾಡ್ತಿದೆ. ಅಂದ್ರೆ, ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದೆ ಎಂದು. ನಾನು ಹೇಳಿದ್ದು ಆ ಕಾಂಟಾಸ್ಟ್ನಲ್ಲಿ ಅಲ್ಲ. ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ಏನಕ್ಕೆ ಯಾವ ಲೈನ್ ಹೇಳಿದೆ ಎಂದು ಗೊತ್ತಾಗುತ್ತದೆ. ಬೇಜಾರಾಗಿದ್ದರೆ, ಎಲ್ಲರಿಗೂ ಸಾರಿ. ಸುದೀಪ್ ಅಣ್ಣನಿಗೂ ಮತ್ತು ಸುದೀಪ್ ಅಣ್ಣನ ಫ್ಯಾನ್ಸ್ಗೂ. ತುಂಬ ಗೌರವ ಇದೆ ಸುದೀಪಣ್ಣನ ಮೇಲೆ" ಎಂದು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ ರಕ್ಷಕ್.