BBK 10: ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹೆಗಲೇರಿತು ‘ಶನಿ’!; ವರ್ತೂರು ಬಾಯಿಂದ ಸತ್ಯ ಹೊರಗೆಡವಿದ ಕಿಚ್ಚ
Jan 14, 2024 10:24 AM IST
BBK 10: ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹೆಗಲೇರಿತು ‘ಶನಿ’!; ವರ್ತೂರು ಬಾಯಿಂದ ಸತ್ಯ ಹೊರಗೆಡವಿದ ಕಿಚ್ಚ
- ಇನ್ನೇನು ಫಿನಾಲೆಗೆ ಹತ್ತಿರ ಬಂದಿದ್ದಾರೆ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು. ಹೀಗಿರುವಾಗಲೇ, ಇದೇ ಬಿಗ್ ಮನೆಯಲ್ಲಿ ಶನಿ ಕಾಟವೂ ಹೆಚ್ಚಾಗಿದೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯ ಶನಿ ಯಾರು? ಆ ಶನಿ ಪಟ್ಟ ಕೊಟ್ಟವರಾರು? ಇಲ್ಲಿದೆ ವಿವರ.
BBK 10: ಬಿಗ್ ಬಾಸ್ ಮನೆಯಲ್ಲೀಗ ಫಿನಾಲೆ ದಿನಗಣನೆ ಆರಂಭವಾಗಿದೆ. ಉಳಿದಿದ್ದು ಇನ್ನು ಎರಡು ಮತ್ತೊಂದು ವಾರ ಮಾತ್ರ. ಇರುವ ಏಳು ಮಂದಿಯಲ್ಲಿ ಸಂಗೀತಾ ಶೃಂಗೇರಿ ಅದಾಗಲೇ ಫಿನಾಲೆ ರೌಂಡ್ ಪ್ರವೇಶ ಪಡೆದಿದ್ದಾರೆ. ವಾರಾಂತ್ಯ ಶನಿವಾರ ಕಿಚ್ಚ ಸುದೀಪ್ ಪಂಚಾಯ್ತಿ ಕಟ್ಟೆಗೆ ಆಗಮಿಸಿ, ಸಂಗೀತಾ ಫಿನಾಲೆಗೇರಿದ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಈ ನಡುವೆ ಸ್ಪರ್ಧಿಗಳ ಬಾಯಿಂದ ಬಗೆಬಗೆ ಸತ್ಯವನ್ನೂ ಹೊರಗೆಡವಿಸಿದ್ದಾರೆ. ಇದೇ ವೇಳೆ ಕಾರ್ತಿಕ್ ಹೆಗಲೇರಿದ ಶನಿಯ ಬಗ್ಗೆಯೂ ಮಾತನಾಡಿದ್ದಾರೆ ಸುದೀಪ್.
ಅಷ್ಟಕ್ಕೂ ಏನಾಗಿತ್ತು?
ಕಿಚ್ಚನ ಪಂಚಾಯ್ತಿಯಲ್ಲಿ ಶನಿ ಪದ ಬಳಕೆ ಏಕಾಯಿತು, ಆ ಪಟ್ಟ ಯಾರಿಗೆ ಸಿಕ್ಕಿತ್ತು ಎಂಬುದನ್ನು ಸುದೀಪ್, ವರ್ತೂರು ಸಂತೋಷ್ ಮತ್ತು ಕಾರ್ತಿಕ್ ಬಳಿ ಕೆದಕಿದ್ದಾರೆ. ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಲು ನೀವು ಕೊಟ್ಟ ಕಾರಣವೇನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ವರ್ತೂರು, ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಶನಿ ಯಾರು? ಎಂಬ ಮಾತು ಬರುತ್ತೆ. ಅದು ಮತ್ತೆ ಚರ್ಚೆ ಆಯ್ತು. ಆಗ ನೀವೇ ಹೇಳಿದ್ದು ಎಂದು ನನ್ಮೇಲೆ ಕಾರ್ತಿಕ್ ಹಾಕಿದರು. ನಾನಲ್ಲ, ನೀನೇ ಹೇಳಿದ್ದು ಅಂತ ಹೇಳಿದೆ. ಈ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶನಿ ಎಂದು ಕಾರ್ತಿಕ್ ಹೇಳಿದ್ದು" ಎಂದು ವರ್ತೂರು ಕಿಚ್ಚನ ಮುಂದೆ ವಿವರಿಸಿದ್ದಾರೆ.
ಸತ್ಯ ಒಪ್ಪಿಕೊಳ್ಳದ ಕಾರ್ತಿಕ್ಗೆ ಕಿಚ್ಚನ ಕ್ಲಾಸ್
ಈ ಮನೆಯ ಶನಿ ಸಂಗೀತಾ ಎಂದು ಹೇಳಿದ್ದು ಕಾರ್ತಿಕ್ ಎಂದು ವರ್ತೂರು ಸಂತೋಷ್ ಹೇಳುತ್ತಿದ್ದಂತೆ, ಕಾರ್ತಿಕ್ ತಮ್ಮ ವಾದ ಮುಂದುವರಿಸಿದರು. ನಾನು ಹೇಳಿಲ್ಲ. ಹೀಗೆ ಮಾತನಾಡುವಾಗ ನವಗ್ರಹಗಳು ಅಂತ ಚರ್ಚೆ ಬಂತು. ಶನಿ ಅಂತ ಬಂದಾಗ ವಿನಯ್ ಎಂದು ವರ್ತೂರು ಹೇಳಿದರು. ಆಮೇಲೆ ಸಂಗೀತಾ ಅಂತ ಅವರೇ ಹೇಳಿದರು. ಹೆಸರು ಬಂದಿದ್ದು ವರ್ತೂರು ಅವರ ಬಾಯಿಂದ ಈಗ ನನ್ನ ಮೇಲೆ ಹೇಳ್ತಿದ್ದಾರೆ. ಕಳೆದ ವಾರ ಅದೇ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡಿದ್ದರು ಎಂದು ಸ್ಪಷ್ಟನೆ ಕೊಟ್ಟರು ಕಾರ್ತಿಕ್.
ಸುದೀಪ್ ಮಧ್ಯ ಪ್ರವೇಶ
ಕಾರ್ತಿಕ್ ಮಾತಿಗೆ ಧ್ವನಿಯಾದ ತನಿಷಾ, ಈ ಮನೆಯ ಶನಿ ಸಂಗೀತಾ ಎಂದು ಹೇಳಿದ್ದು ಕಾರ್ತಿಕ್. ವರ್ತೂರು ಸಂತೋಷ್ ಅಲ್ಲ. ಹೇಳಿದ್ದನ್ನು ಕಾರ್ತಿಕ್ ಒಪ್ಪಿಕೊಳ್ಳುತ್ತಿಲ್ಲ ಎಂದು ವರ್ತೂರು ಪರ ಮಾತನಾಡಿದ್ದಾರೆ. ಆದರೂ ಹಟ ಬಿಡದ ಕಾರ್ತಿಕ್, ನಾನು ಹೇಳಿಲ್ಲ ಎಂದೇ ಸುದೀಪ್ ಮುಂದೆ ವಾದಿಸಿದರು. ಬಳಿಕ ಮಧ್ಯ ಪ್ರವೇಶಿಸಿದ ಕಿಚ್ಚ, ನೀವೇ ಹೇಳಿದ್ದು ಕಾರ್ತಿಕ್ ಎಂದಿದ್ದಾರೆ. ವರ್ತೂರು ಅವರಲ್ಲಿ ಒಳ್ಳೆಯ ಕಾಂಪಿಟೇಟರ್ ಇದ್ದಾನೆ. ಅವರ ಬಗ್ಗೆ ನೀವು ತಮಾಷೆ ಮಾಡಿ. ಆದರೆ, ಮಾಡಿದ್ದನ್ನು, ಅಂದಿದ್ದನ್ನು ಒಪ್ಪಿಕೊಳ್ಳುವ ಗುಣವಿದೆ. ಅವರಲ್ಲಿ ಒಂದು ಮುಗ್ಧತೆ ಇದೆ" ಎಂದಿದ್ದಾರೆ. ಬಳಿಕ ನಾನು ಹಾಗೆ ಹೇಳಿದ್ದರೆ ಕ್ಷಮಿಸಿ ಎಂದಿದ್ದಾರೆ ಕಾರ್ತಿಕ್.