Bigg Boss Kannada: ಬಿಗ್ ಬಾಸ್ ಟ್ರೋಫಿ ಗೆದ್ದರೂ ಸಿನಿಮಾದಲ್ಲಿ ಆರಕ್ಕೇರದ, ಮೂರಕ್ಕಿಳಿಯದ ನಟ, ನಟಿಯರಿವರು
Jan 21, 2025 09:12 AM IST
ಬಿಗ್ ಬಾಸ್ ಟ್ರೋಫಿ ಗೆದ್ದರೂ ಸಿನಿಮಾದಲ್ಲಿ ಯಶಸ್ಸು ಕಾಣದ ನಟ, ನಟಿಯರಿವರು
- Bigg Boss Kannada winners List: ಕನ್ನಡದಲ್ಲಿ ಬಿಗ್ ಬಾಸ್ ಈ ವರೆಗೂ 10 ಸೀಸನ್‌ಗಳನ್ನು ಮುಗಿಸಿದೆ. ಈ ಶೋ ಮೂಲಕ ನೂರಾರು ಸ್ಪರ್ಧಿಗಳು ಕರುನಾಡಿಗೆ ಪರಿಚಿತರಾಗಿದ್ದಾರೆ. ಟ್ರೋಫಿ ಗೆದ್ದು ಅದನ್ನೇ ಏಣಿಯಾಗಿ ಮಾಡಿಕೊಂಡು, ಸಿನಿಮಾರಂಗಕ್ಕೂ ಬಂದವರೂ ಇದ್ದಾರೆ. ಹಾಗೆ ಬಂದ ಎಲ್ಲರಿಗೂ ಚಿತ್ರೋದ್ಯಮದಲ್ಲಿ ಗೆಲುವು ದಕ್ಕಿತೇ?

Bigg Boss Kannada: ‘ಬಿಗ್ ಬಾಸ್’ ಸೀಸನ್ 8ರಲ್ಲಿ ಭಾಗವಹಿಸಿ ದೊಡ್ಡ ಜನಪ್ರಿಯತೆ ಪಡೆದಿದ್ದ ಬ್ರೊ ಗೌಡ ಅಲಿಯಾಸ್ ಶಮಂತ್ ಗೌಡ, ಇದೀಗ ಹೀರೋ ಆಗುವುದಕ್ಕೆ ಹೊರಟಿದ್ದಾರೆ. ಆನಂದ್ ರಾಜ್ ನಿರ್ದೇಶನದ ಜಾಂಬಿ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಏಪ್ರಿಲ್ 2025ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ.
‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಇಲ್ಲಿಯವರೆಗಿನ 11 ಸೀಸನ್‍ಗಳಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ಪೈಕಿ ಕೆಲವರು ಕನ್ನಡ ಚಿತ್ರರಂಗದಲ್ಲಿ ಹೀರೋಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವುದಕ್ಕೆ ‘ಬಿಗ್ ಬಾಸ್’ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಮಾತೂ ಇದೆ. ಅದಕ್ಕೆ ಸರಿಯಾಗಿ, ಕೆಲವರು ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಿನಿಮಾಗಳಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ. ಇನ್ನು, ಕೆಲವರು ಹೆಚ್ಚು ಸುದ್ದಿಯಲ್ಲಿಲ್ಲ. ಒಂದಿಬ್ಬರನ್ನು ಹೊರತುಪಡಿಸಿ, ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಗೆದ್ದವರು ಸಹ ಹಿರಿತೆರೆಯಲ್ಲಿ ಗಮನಸೆಳೆಯುವುದಕ್ಕೆ ಸೈಕಲ್ ಹೊಡೆಯುತ್ತಲೇ ಇದ್ದಾರೆ. ಕಿರುತೆರೆಯಲ್ಲಿ ಗೆದ್ದರೂ ಸಿನಿಮಾದಲ್ಲಿ ಹೆಸರು ಮಾಡುವುದಕ್ಕೆ ಕಷ್ಟಪಡುತ್ತಿದ್ದಾರೆ ಎನ್ನುವುದು ಗಮನಾರ್ಹ.
ಕಿರುತೆರೆಗಷ್ಟೇ ಸೀಮಿತವಾದ್ರಾ ಪ್ರಥಮ್?
ಮೊದಲ ಮೂರು ಸೀಸನ್‍ಗಳನ್ನು ಗೆದ್ದವರು ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ ಮತ್ತು ಶ್ರುತಿ. ಮೂವರೂ ಚಿತ್ರರಂಗದಲ್ಲಿ ಅದಾಗಲೇ ನಾಯಕ-ನಾಯಕಿಯರಾಗಿ ಗುರುತಿಸಿಕೊಂಡಿದ್ದವರು. ನಾಲ್ಕನೇ ಸೀಸನ್‍ನಲ್ಲಿ ಗೆದ್ದ ಪ್ರಥಮ್, ಕನ್ನಡ ಚಿತ್ರರಂಗಕ್ಕೆ ಬಂದಿದ್ದು ನಿರ್ದೇಶಕರಾಗಬೇಕೆಂದು. ಅಕುಲ್ ಬಾಲಾಜಿ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂದು ಪ್ರಯತ್ನಿಸಿದ್ದ ಪ್ರಥಮ್, ‘ಬಿಗ್ ಬಾಸ್’ಗೆ ಬಂದರು. ಇಲ್ಲಿ ಗೆದ್ದ ನಂತರ ಅವರು ಹೀರೋ ಆಗಿ ಗುರುತಿಸಿಕೊಂಡರೇ ಹೊರತು, ನಿರ್ದೇಶನ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. 2018ರಲ್ಲಿ ಬಿಡುಗಡೆಯಾದ ‘MLA’ ಚಿತ್ರದ ಮೂಲಕ ಹೀರೊ ಆದ ಪ್ರಥಮ್, ‘ದೇವ್ರಂಥ ಮನುಷ್ಯ’, ‘ನಟ ಭಯಂಕರ’, ‘ಕರ್ನಾಟಕದ ಅಳಿಯ’ ಮತ್ತು ‘ಫಸ್ಟ್ ನೈಟ್ ವಿಥ್ ದೆವ್ವ’ ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಕೊನೆಯ ಎರಡು ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ.
ಗೆಲುವಿನ ನಿರೀಕ್ಷೆಯಲ್ಲಿ ಚಂದನ್ ಶೆಟ್ಟಿ
ಸೀಸನ್ 5ರಲ್ಲಿ ಗೆದ್ದ ಗಾಯಕ ಚಂದನ್ ಶೆಟ್ಟಿ, ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ‘ಸೀಜರ್’, ‘ಪೊಗರು’, ‘ರಾಣ’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರ ಸಂಗೀತ ಸಂಯೋಜನೆಯ ಹಾಡುಗಳು ಹಿಟ್ ಸಹ ಆಗಿವೆ. ಆದರೆ, ನಟನಾಗಿ ಅವರು ಸೈಕಲ್ ಹೊಡೆಯುತ್ತಲೇ ಇದ್ದಾರೆ. 2022ರಲ್ಲೇ ಚಂದನ್ ಅಭಿನಯದ ‘ಎಲ್ರ ಕಾಲಳೆಯುತ್ತೆ ಕಾಲ’ ಚಿತ್ರದ ಮೂಲಕ ಹೀರೋ ಆದರು. ಮೂರು ವರ್ಷಗಳಾದರೂ ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಶುರುವಾದ ‘ಸೂತ್ರಧಾರಿ’ ಸಹ ಬಿಡುಗಡೆಯಾಗಿಲ್ಲ. ಮೂರನೆಯದಾಗಿ ಶುರುವಾದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಕಳೆದ ವರ್ಷ ಬಿಡುಗಡೆಯಾದರೂ ಹೆಚ್ಚು ಸದ್ದಾಗಲಿಲ್ಲ.
ಸ್ಯಾಂಡಲ್‌ವುಡ್‌ನಲ್ಲಿ ಶೈನ್ ಆಗದ ಶೈನ್ ಶೆಟ್ಟಿ
ಸೀಸನ್ 6 ಮತ್ತು 7ರಲ್ಲಿ ಗೆದ್ದ ಪ್ರಗತಿಪರ ರೈತ ಶಶಿಕುಮಾರ್ ಮತ್ತು ಶೈನ್ ಶೆಟ್ಟಿ ಸಹ ಹೀರೋ ಆದವರೇ. ಈ ಪೈಕಿ ‘ಮೆಹಬೂಬ’ ಎಂಬ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು ಶಶಿಕುಮಾರ್. ಚಿತ್ರಕ್ಕೆ ಸಾಕಷ್ಟು ಪ್ರಚಾರವನ್ನು ಸಹ ಮಾಡಿದ್ದರು. ಆದರೆ, ಅದ್ಯಾಕೋ ಚಿತ್ರ ಗಮನಸೆಳೆಯುವಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ. 2019ರಲ್ಲಿ ‘ಬಿಗ್ ಬಾಸ್’ ಸೀಸನ್ 7ರಲ್ಲಿ ಗೆಲ್ಲುವುದಕ್ಕಿಂತ ಮೊದಲೇ ಶೈನ್ ಶೆಟ್ಟಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದರು. ತುಳುವಿನ ‘ಕುಡ್ಲ ಕೆಫೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅವರು, ‘ಅಸ್ತಿತ್ವ’, ‘ಒಂದು ಮೊಟ್ಟೆಯ ಕಥೆ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ‘ಬಿಗ್ ಬಾಸ್’ನಿಂದ ಬಂದ ನಂತರ ‘ವಿಜಯಾನಂದ’, ‘ಜೇಮ್ಸ್’, ‘ಕಾಂತಾರ’, ‘ಮಾಫಿಯಾ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಕಿರುತೆರೆಯಲ್ಲಿ ಕಂಡ ಜನಪ್ರಿಯತೆಯನ್ನು ಹಿರಿತೆರೆಯಲ್ಲಿ ಪಡೆಯುವುದಕ್ಕೆ ಸಾಧ್ಯವಾಗಿಲ್ಲ.
ಸೀಸನ್ 9ರಲ್ಲಿ ಗೆದ್ದ ರೂಪೇಶ್ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಾಣುವುದಕ್ಕೆ ಸಾಧ್ಯವಾಗಿದ್ದರೂ, ತುಳು ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ತುಳು ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೂಪೇಶ್ ‘ಡೇಂಜರ್ ಜೋನ್’ ಚಿತ್ರದಲ್ಲಿ ಹೀರೋ ಆಗಿದ್ದರು. ಆ ನಂತರ ‘ನಿಶ್ಯಬ್ಧ 2’, ‘ಅನುಷ್ಕ’, ‘ಗೋವಿಂದ ಗೋವಿಂದ’, ‘ಮಂಕು ಭಾಯ್ ಫಾಕ್ಸಿ ರಾಣಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಈ ಯಾವ ಚಿತ್ರಗಳು ಸಹ ದೊಡ್ಡ ಹೆಸರು ಮಾಡಲಿಲ್ಲ. ಕನ್ನಡದಲ್ಲಿ ಹೆಚ್ಚು ಗೆಲುವು ಕಾಣದಿದ್ದರೂ ರೂಪೇಶ್, ತುಳು ಚಿತ್ರರಂಗದಲ್ಲಿ ಯಶಸ್ವಿ ನಟ-ನಿರ್ದೇಶಕರಾಗಿದ್ದು, 2023ರಲ್ಲಿ ಬಿಡಗಡೆಯಾದ ‘ಸರ್ಕಸ್’ ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ. ಸುನೀಲ್ ಶೆಟ್ಟಿ ಅಭಿನಯದಲ್ಲಿ ‘ಜೈ’ ಎಂಬ ಚಿತ್ರವನ್ನು ಅವರು ನಿರ್ದೇಶಿಸುವುದರ ಜೊತೆಗೆ, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್, ‘ಬಿಗ್ ಬಾಸ್’ಗೂ ಮೊದಲೇ ‘ಡೊಳ್ಳು’ ಚಿತ್ರದಲ್ಲಿ ಹೀರೋ ಆಗಿದ್ದರು. ‘ಒಂದು ಸರಳ ಪ್ರೇಮಕಥೆ’ ಮತ್ತು ‘ಮೂಕಹಕ್ಕಿ’ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿರುವ ಅವರು ಇದೀಗ ‘ರಾಮರಸ’ ಎಂಬ ಚಿತ್ರಕ್ಕೆ ನಾಯಕನಾಗಿದ್ದಾರೆ. ಸೀಸನ್ 8ರಲ್ಲಿ ಭಾಗವಹಿಸಿದ ರೇಸರ್ ಕೆ.ಪಿ. ಅರವಿಂದ್, ‘ಅರ್ಧಂಬರ್ಧ ಪ್ರೇಮಕಥೆ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿದ್ದು ದಿವ್ಯ ಉರುಡುಗ. 2023ರಲ್ಲಿ ಬಿಡುಗಡೆಯಾದ ಈ ಚಿತ್ರ ಅಷ್ಟೇನೂ ಸುದ್ದಿಯಾಗಲಿಲ್ಲ.
ಮಹಿಳೆಯರ ಪೈಕಿ ‘ಬಿಗ್ ಬಾಸ್’ನಲ್ಲಿ ಗುರುತಿಸಿಕೊಂಡು, ಸಿನಿಮಾದಲ್ಲಿ ನಾಯಕಿಯಾದವರು ಸಾನ್ಯಾ ಅಯ್ಯರ್. ಸೀಸನ್ 9ರಲ್ಲಿ ಭಾಗಿಯಾಗಿದ್ದ ಸಾನ್ಯಾ, ಕಳೆದ ವರ್ಷ ಬಿಡುಗಡೆಯಾದ ‘ಗೌರಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದಲ್ಲದೆ, ವಿನಯ್ ಗೌಡ, ಮಂಜು ಪಾವಗಡ, ಚಂದನ್ ಆಚಾರ್ಯ ಸೇರಿದಂತೆ ಹಲವರು ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.
ಲೇಖನ: ಚೇತನ್ ನಾಡಿಗೇರ್