Sunil Shetty about Kantara: ಫ್ಯಾಮಿಲಿ ಜೊತೆ 'ಕಾಂತಾರ' ನೋಡಿ ಬಂದೆ..ಚಿತ್ರದ ಬಗ್ಗೆ ತುಳುನಾಡಿನ ಸುನಿಲ್ ಶೆಟ್ಟಿ ಹೇಳಿದ್ದೇನು..?
Nov 20, 2022 11:50 AM IST
'ಕಾಂತಾರ' ಚಿತ್ರದ ಬಗ್ಗೆ ಸುನಿಲ್ ಶೆಟ್ಟಿ ಮೆಚ್ಚುಗೆಯ ಮಾತು
- ಸುನಿಲ್ ಶೆಟ್ಟಿ, ನಟಿಸಿರುವ 'ಧಾರಾವಿ' ಎಂಬ ವೆಬ್ ಸೀರೀಸ್ ನವೆಂಬರ್ 12ರಿಂದ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸೀರೀಸ್‌ನಲ್ಲಿ ವಿವೇಕ್ ಓಬೆರಾಯ್ ಕೂಡಾ ನಟಿಸಿದ್ದಾರೆ. ಇತ್ತೀಚೆಗೆ ಈ ವೆಬ್ ಸರಣಿಯ ಪ್ರಮೋಷನ್‌ಗಾಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುನಿಲ್ ಶೆಟ್ಟಿ, ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಸೆಪ್ಟೆಂಬರ್ 30 ರಂದು ತೆರೆ ಕಂಡ 'ಕಾಂತಾರ' ಸಿನಿಮಾ 50 ದಿನಗಳನ್ನು ಪೂರೈಸಿದೆ. ಇನ್ನೂ ಸಿನಿಮಾ ನೋಡದವರು ಕುಟುಂಬ ಸಹಿತ ಹೋಗಿ ಚಿತ್ರ ನೋಡಿ ಬರುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರದಿಂದ ಸಿನಿಮಾ ತೆಗೆದು ಬೇರೆ ಚಿತ್ರ ಹಾಕಿದರೂ 'ಕಾಂತಾರ' ದ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇತರ ಚಿತ್ರಮಂದಿರಗಳಲ್ಲಿ ಸಿನಿಮಾ 50ದಿನಗಳನ್ನು ಪೂರೈಸಿದೆ.
ಹಾಗೇ ಚಿತ್ರರಂಗದ ಸ್ಟಾರ್ ನಟ-ನಟಿಯರು ಸಿನಿಮಾ ನೋಡಿ ರಿಷಬ್ ಶೆಟ್ಟಿ ಡೈರೆಕ್ಷನ್ ಹಾಗೂ ಅಭಿನಯಕ್ಕೆ ಶಹಬ್ಬಾಷ್ ಹೇಳುತ್ತಿದ್ದಾರೆ. ಸಿನಿಮಾ 400 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿದೆ. ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಸಿನಿಮಾ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿ, ಚಿನ್ನದ ಸರವನ್ನು ಗಿಫ್ಟ್ ನೀಡಿದ್ದರು. ನಟಿ ಶಿಲ್ಪಾ ಶೆಟ್ಟಿ, ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ, ವಿವೇಕ್ ಅಗ್ನಿಹೋತ್ರಿ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಟಾಲಿವುಡ್‌ನ ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಾಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಿನಿಮಾ ನೋಡಿದ್ದರು. ಇದೀಗ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡಾ ಸಿನಿಮಾ ನೋಡಿ, ಹೊಗಳಿಗೆ ಮಾತುಗಳನ್ನಾಡಿದ್ದಾರೆ.
ಸುನಿಲ್ ಶೆಟ್ಟಿ, ನಟಿಸಿರುವ 'ಧಾರಾವಿ' ಎಂಬ ವೆಬ್ ಸೀರೀಸ್ ನವೆಂಬರ್ 12ರಿಂದ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸೀರೀಸ್‌ನಲ್ಲಿ ವಿವೇಕ್ ಓಬೆರಾಯ್ ಕೂಡಾ ನಟಿಸಿದ್ದಾರೆ. ಇತ್ತೀಚೆಗೆ ಈ ವೆಬ್ ಸರಣಿಯ ಪ್ರಮೋಷನ್‌ಗಾಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುನಿಲ್ ಶೆಟ್ಟಿ, ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ''ಕಳೆದ ರಾತ್ರಿಯಷ್ಟೇ ಕುಟುಂಬದೊಂದಿಗೆ 'ಕಾಂತಾರ' ಸಿನಿಮಾ ನೋಡಿ ಬಂದೆವು. ಪಿವಿಆರ್‌ನಲ್ಲಿ ಶೇ.60ಕ್ಕೂ ಹೆಚ್ಚು ಜನರಿದ್ದರು. ಸಿನಿಮಾದ ಕೊನೆಯ 20-25 ನಿಮಿಷಗಳು ಬಹಳ ಚೆನ್ನಾಗಿದೆ. ಅದನ್ನು ನೋಡಿ ನನಗೆ ಕಣ್ಣೀರು ಬಂತು. ಏಕೆಂದರೆ ನಾನೂ ಕೂಡಾ ತುಳುನಾಡಿಗೆ ಸೇರಿದವನು. ಅಲ್ಲಿನ ಆಚರಣೆ, ಸಂಪ್ರದಾಯದ ಬಗ್ಗೆ ನನಗೂ ಗೊತ್ತು. ಪ್ರತಿ ವರ್ಷ ನಾನೂ ಕೂಡಾ ಭೂತದ ಕೋಲ ಹಾಗೂ ಪೂಜೆಯಲ್ಲಿ ಭಾಗವಹಿಸುತ್ತೇನೆ.
''ಸಿನಿಮಾದಲ್ಲಿ ಕಂಟೆಂಟ್ ಬಹಳ ಚೆನ್ನಾಗಿದೆ. ಸಿನಿಮಾ ನೋಡಿದವರು ಅದನ್ನು ಮೆಚ್ಚಿ ಇತರರಿಗೆ ಹೇಳಿದ್ದರಿಂದ ಅವರೂ ಕೂಡಾ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಕಂಟೆಂಟ್ ಇಸ್ ಕಿಂಗ್. ಆದರೆ ಯಾವುದೇ ಸಿನಿಮಾ ಆಗಲೀ, ಮುಗಿಯುವವರೆಗೆ ಡಬ್ಬಿಂಗ್ ಅಥವಾ ರೀಮೇಕ್ ಹಕ್ಕುಗಳನ್ನು ಮಾರಾಟ ಮಾಡಬಾರದು. 'ಕಾಂತಾರ' ಚಿತ್ರದ ಪ್ರತಿಯೊಂದು ದೃಶ್ಯವನ್ನೂ ಜನರು ಇಷ್ಟಪಟ್ಟಿದ್ದಾರೆ.'' ಎಂದು ಸುನಿಲ್ ಶೆಟ್ಟಿ, ಚಿತ್ರದ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ವಿವೇಕ್ ಓಬೆರಾಯ್ ಕೂಡಾ ಸುನಿಲ್ ಶೆಟ್ಟಿ ಮಾತುಗಳಿಗೆ ತಲೆ ಆಡಿಸಿದರು.
300 ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದ 'ಕಾಂತಾರ'
'ಕಾಂತಾರ' ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ 'ಕಾಂತಾರ' 'ಅಲ್ಲಿಯೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಎಲ್ಲಾ ಕಡೆಗಳಲ್ಲಿ 50 ದಿನಗಳನ್ನು ಪೂರೈಸಲಿದೆ.
ಹೊಂಬಾಳೆ ಫಿಲ್ಮ್ಸ್, 'ಕೆಜಿಎಫ್ 1' ಮತ್ತು 'ಕೆಜಿಎಫ್ 2' ಚಿತ್ರಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈಗ ಅದೇ ಸಂಸ್ಥೆಯಿಂದ ನಿರ್ಮಾಣವಾಗಿರುವ 'ಕಾಂತಾರ' ಚಿತ್ರವನ್ನು ಮನೆ ಮಂದಿಯೆಲ್ಲಾ ನೋಡಿ ಇಷ್ಟಪಟ್ಟಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲರೂ ಮೆಚ್ಚಿಕೊಂಡಿರುವ ಈ ಚಿತ್ರ ಜನರಿಗೆ ಇಷ್ಟವಾಗುವುದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್. ಒಟ್ಟಿನಲ್ಲಿ 'ಕಾಂತಾರ' ಸಿನಿಮಾ ಸಾಕಷ್ಟು ದಾಖಲೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.