logo
ಕನ್ನಡ ಸುದ್ದಿ  /  ಮನರಂಜನೆ  /   Bollywood Directors Clash: 'ಕಾಂತಾರ' ಚಿತ್ರದ ವಿಚಾರವಾಗಿ ಬಾಲಿವುಡ್‌ ಖ್ಯಾತ ನಿರ್ದೇಶಕರ ಟ್ವೀಟ್‌ ಜಗಳ..ಏನಿದು ಕಥೆ...?

Bollywood Directors Clash: 'ಕಾಂತಾರ' ಚಿತ್ರದ ವಿಚಾರವಾಗಿ ಬಾಲಿವುಡ್‌ ಖ್ಯಾತ ನಿರ್ದೇಶಕರ ಟ್ವೀಟ್‌ ಜಗಳ..ಏನಿದು ಕಥೆ...?

HT Kannada Desk HT Kannada

Dec 14, 2022 05:23 PM IST

google News

ಅನುರಾಗ್‌ ಕಶ್ಯಪ್‌, ವಿವೇಕ್‌ ರಂಜನ್‌ ಅಗ್ನಿಹೋತ್ರಿ,

    • ಗೆದ್ದ ಸಿನಿಮಾಗಳ ಹಿಂದೆ ಬಿದ್ದಿರುವ ಬಾಲಿವುಡ್‌ ಈ ಸಿನಿಮಾಗಳನ್ನು ಅನುಕರಿಸುವ ಮೂಲಕ ಅವನತಿಯತ್ತ ಸಾಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ನಿರ್ದೇಶಕ ಅನುರಾಗ್‌ ಕಶ್ಯಪ್‌ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು.
ಅನುರಾಗ್‌ ಕಶ್ಯಪ್‌, ವಿವೇಕ್‌ ರಂಜನ್‌ ಅಗ್ನಿಹೋತ್ರಿ,
ಅನುರಾಗ್‌ ಕಶ್ಯಪ್‌, ವಿವೇಕ್‌ ರಂಜನ್‌ ಅಗ್ನಿಹೋತ್ರಿ,

ಸೆಪ್ಟೆಂಬರ್‌ 30, 'ಕಾಂತಾರ' ಸಿನಿಮಾ ಬಿಡುಗಡೆಯಾದಾಗಿನಿಂದ ಎಲ್ಲೆಲ್ಲೂ ಈ ಚಿತ್ರದ್ದೇ ಮಾತು. ಪರಭಾಷೆಯಲ್ಲಿ ಕೂಡಾ ಈ ಸಿನಿಮಾ ಹಿಟ್‌ ಆಗಿದೆ. 450 ಕೋಟಿ ರೂಪಾಯಿ ಲಾಭ ಮಾಡಿ ನೂರನೇ ದಿನದತ್ತ ಮುನ್ನುಗ್ಗುತ್ತಿದೆ. ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ರಿಷಬ್‌ ಶೆಟ್ಟಿ, 'ಕಾಂತಾರ-2' ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಈ ನಡುವೆ ಬಾಲಿವುಡ್‌ನ ಇಬ್ಬರು ಖ್ಯಾತ ನಿರ್ದೇಶಕರು 'ಕಾಂತಾರ' ಚಿತ್ರದ ವಿಚಾರವಾಗಿ ಟ್ವೀಟ್‌ ವಾರ್‌ ಮಾಡುತ್ತಿದ್ದಾರೆ.

ಈಗಂತೂ ಕನ್ನಡ ಸೇರಿ ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತ ಹಾಗೂ ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳ ಎದುರು ಬಾಲಿವುಡ್‌ ಕ್ಷೀಣಿಸುತ್ತಿದೆ ಎಂಬ ಚರ್ಚೆ ಶುರುವಾಗಿದೆ. 'ಕಾಂತಾರ' ಸಿನಿಮಾ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಬೇರೆಯವರಿಗೆ ಮಾದರಿ ಎಂದು ಇತ್ತೀಚೆಗೆ ಬಾಲಿವುಡ್‌ ನಟ ಹೃತಿಕ್‌ ರೋಷನ್‌, ತಮಿಳು ಖ್ಯಾತ ನಟ ಕಮಲ್‌ ಹಾಸನ್‌ ಹೊಗಳಿದ್ದರು. ಇತ್ತೀಚೆಗೆ ಭಾಗ 2 ರ ಬಗ್ಗೆ ಪಂಜುರ್ಲಿ ದೈವದ ಅಪ್ಪಣೆ ಕೇಳಿದ್ದ ರಿಷಬ್‌ ಶೆಟ್ಟಿ ಸದ್ಯಕ್ಕೆ ಭಾಗ 2 ಮಾಡುವುದಿಲ್ಲ ಎಂದು ಹೇಳಿ ಮೌನಕ್ಕೆ ಜಾರಿದ್ದಾರೆ. ಈ ನಡುವೆ ಬಾಲಿವುಡ್‌ ನಿರ್ದೇಶಕರು ಟ್ವೀಟ್‌ ವಾರ್‌ ಆರಂಭಿಸಿದ್ದಾರೆ.

''ಪುಷ್ಪ, ಕೆಜಿಎಫ್‌ 2, ಕಾಂತಾರ ಸಿನಿಮಾಗಳು ದೊಡ್ಡ ಹೆಸರು ಮಾಡಿವೆ. ಇಂತಹ ಗೆದ್ದ ಸಿನಿಮಾಗಳ ಹಿಂದೆ ಬಿದ್ದಿರುವ ಬಾಲಿವುಡ್‌ ಈ ಸಿನಿಮಾಗಳನ್ನು ಅನುಕರಿಸುವ ಮೂಲಕ ಅವನತಿಯತ್ತ ಸಾಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು'' ಎಂದು ನಿರ್ದೇಶಕ ಅನುರಾಗ್‌ ಕಶ್ಯಪ್‌ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಕಾಂತಾರ ಹಾಗೂ ಪುಷ್ಪ ಸಿನಿಮಾಗಳು ಹಿಂದಿ ಚಿತ್ರರಂಗವನ್ನು ನಾಶ ಮಾಡುತ್ತಿದೆ ಎಂದು ಅನುರಾಗ್‌ ಕಶ್ಯಪ್‌ ಹೇಳಿರುವಂತೆ ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಇದನ್ನೂ ಮತ್ತೊಂದು ರೀತಿ ಅರ್ಥೈಸಿಕೊಂಡ ವಿವೇಕ್‌ ರಂಜನ್‌ ಅಗ್ನಿಹೋತ್ರಿ, ''ಬಾಲಿವುಡ್‌ ಹಿನ್ನಡೆಗೆ ಸೌತ್‌ ಸಿನಿಮಾಗಳ ಅನುಕರಣೆ ಕಾರಣ ಎಂಬ ಅನುರಾಗ್‌ ಕಶ್ಯಪ್‌ ಮಾತುಗಳನ್ನು ನಾನು ಒಪ್ಪುವುದಿಲ್ಲ'' ಎಂದಿದ್ದರು. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ್ದ ಅನುರಾಗ್‌ ಕಶ್ಯಪ್‌, ''ಇದು ನಿಮ್ಮ ತಪ್ಪಲ್ಲ, ನನ್ನ ಮಾತುಗಳನ್ನು ತಿರುಚಲಾಗಿದೆ. ಮುಂದಿನ ಬಾರಿ ಯಾರೇ ಆಗಲಿ, ಟ್ವೀಟ್‌ ಮಾಡುವಾಗ ಮೊದಲು ಸ್ವಲ್ಪ ಸಂಶೋಧನೆ ಮಾಡಬೇಕಿದೆ'' ಎಂದಿದ್ದಾರೆ. ಈ ಟ್ವೀಟ್‌ ವಾರ್‌ ಬಗ್ಗೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.

ರಿಷಬ್‌ ಶೆಟ್ಟಿ ಹೊಗಳಿದ್ದ ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ

ಇತ್ತೀಚೆಗೆ ರಿಷಬ್‌ ಶೆಟ್ಟಿ ಖ್ಯಾತ ಫ್ಯಾಷನ್‌ ಮ್ಯಾಗಜಿನ್‌ ಒಂದರ ಮುಖಪುಟದಲ್ಲಿ ಮಿಂಚಿದ್ದರು. ಬಾಲಿವುಡ್‌ನಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳಿಗೆ ರಿಷಬ್‌ ಅವರಿಗೆ ಆಹ್ವಾನ ದೊರೆಯುತ್ತಲೇ ಇದೆ. ಈ ನಡುವೆ ರಿಷಬ್‌ ಶೆಟ್ಟಿ, ಬಾಲಿವುಡ್‌ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ ಅವರನ್ನು ಭೇಟಿ ಮಾಡಿದ್ದಾರೆ. ಬಾಲಿವುಡ್‌ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಈ ವೇಳೆ ನಟ ನವಾಜುದ್ದೀನ್‌ ಸಿದ್ದಿಕಿ ನನಗೆ ರಿಷಬ್‌ ಶೆಟ್ಟಿ ನೋಡಿದರೆ ಹೊಟ್ಟೆಉರಿ ಎಂದಿದ್ದಾರೆ.

ರಿಷಬ್‌ ಶೆಟ್ಟಿ ಅವರ ಪ್ರತಿಭೆ ನೋಡಿ ಜನರೆಲ್ಲಾ ಶಾಕ್‌ ಆಗಿದ್ದಾರೆ. ಅವರು ನಮ್ಮಂತೆ ಹೆಚ್ಚಿಗೆ ಪ್ರಮೋಷನ್‌ ಮಾಡಲಿಲ್ಲ, ಪ್ರೀ ರಿಲೀಸ್‌ ಇವೆಂಟ್‌ ಮಾಡಲಿಲ್ಲ, ಸೈಲೆಂಟ್‌ ಆಗಿ ಬಂದು ಹವಾ ಎಬ್ಬಿಸಿ ಹೊರಟುಹೋದರು. ರಿಷಬ್‌ ಶೆಟ್ಟಿ ನಮ್ಮೆಲ್ಲರಿಗೂ ಸ್ಫೂರ್ತಿ. ಸಿನಿಮಾ ನೋಡಿ ಇಡೀ ಭಾರತೀಯರೇ ಮೆಚ್ಚಿಕೊಂಡಿದ್ದಾರೆ. ಅವರನ್ನು ನೋಡಿದರೆ ನನಗೆ ಹೊಟ್ಟೆಕಿಚ್ಚಾಗುತ್ತಿದೆ. ನಾನೂ ಕೂಡಾ ಅವರಂತೆ ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಿಷಬ್‌ ಶೆಟ್ಟಿ, ನಾನು ನವಾಜುದ್ದೀನ್‌ ಭಾಯ್‌ ಅವರ ದೊಡ್ಡ ಫ್ಯಾನ್‌, ಅವರ ಸಿನಿಮಾಗಳನ್ನು ನಾನು ನೋಡಿದ್ದೇನೆ. ಇವರಂತ ಖ್ಯಾತ ನಟರಿಂದ ಇಷ್ಟು ದೊಡ್ಡ ಮಾತುಗಳನ್ನು ನಾನು ಊಹಿಸಿರಲಿಲ್ಲ. ನಮ್ಮಂತವರಿಗೆ ಇವರೇ ಸ್ಫೂರ್ತಿ ಎಂದಿದ್ದರು.

ಕಾಂತಾರ ಕ್ಲೈಮಾಕ್ಸ್‌ ಮೆಚ್ಚಿದ ಹೃತಿಕ್‌ ರೋಷನ್‌

ಇತ್ತೀಚೆಗೆ ಹೃತಿಕ್‌ ರೋಷನ್‌ ಕೂಡಾ ಸಿನಿಮಾ ನೋಡಿ ಮೆಚ್ಚಿದ್ದರು. 'ಕಾಂತಾರ ' ಸಿನಿಮಾ ನೋಡಿ ಬಹಳ ಕಲಿಯುವುದಿದೆ. ರಿಷಬ್‌ ಶೆಟ್ಟಿ, ಕಥೆಯನ್ನು ಹೇಳುವ ಶೈಲಿ ಬಹಳ ಅದ್ಭುತವಾಗಿದೆ. ನಿರ್ದೇಶನ, ನಟನೆ, ಮೇಕಿಂಗ್‌ ಎಲ್ಲವೂ ಅತ್ಯದ್ಭುತವಾಗಿದೆ. ಅವರ ಕ್ಲೈಮ್ಯಾಕ್ಸ್‌ ಅವತಾರವಂತೂ ನನಗೆ ಮೈ ರೋಮಾಂಚನ ಎನಿಸುವಂತೆ ಮಾಡಿದ್ದು ನಿಜ. ಇಡೀ ತಂಡಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು" ಎಂದು ಹೃತಿಕ್‌ ರೋಷನ್‌ ಟ್ವೀಟ್‌ ಮಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ