ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಸಂಬಂಧ ಕೆಟ್ಟಿದೆ ಎನ್ನುವುದಕ್ಕೆ ನಿದರ್ಶನ ಬೇಕೆ? 8 ಘಟನೆಗಳ ಸಾಕ್ಷಿ ನೀಡಿದ ಫ್ಯಾನ್ಸ್
Dec 12, 2023 12:57 PM IST
ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಸಂಬಂಧ
- Abhishek Bachchan And Aishwarya Rai Relationship: ಬಾಲಿವುಡ್ ನಟಿ, ಕರಾವಳಿ ಮೂಲದ ಐಶ್ವರ್ಯಾ ರೈ ಮತ್ತು ಅಮಿತಾಬ್ ಬಚ್ಚನ್ ನಡುವೆ ಏನೋ ಸರಿಯಿಲ್ಲ, ಇವರಿಬ್ಬರ ನಡುವೆ ವಿವಾಹ ವಿಚ್ಛೇದನ ಆಗಿರಬಹುದು ಎಂದು ಹೇಳಲು ಫ್ಯಾನ್ಸ್ಗಳು ನೀಡಿರುವ 8 ಕಾರಣಗಳು ಇಲ್ಲಿವೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿರುವುದೇ? ಆಕೆಗೂ ಅಭಿಷೇಕ್ ಬಚ್ಚನ್ ನಡುವೆ ವೈಮನಸ್ಸು ಮೂಡಿದೆಯೇ? ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ನ ಸೊಸೆಯ ಬದುಕಿನಲ್ಲಿ ಏನೋ ಸರಿಯಿಲ್ಲ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ವಿವಾಹ ವಿಚ್ಛೇದನವಾಗಿದೆ? ಇತ್ಯಾದಿ ಹಲವು ಪ್ರಶ್ನೆಗಳು, ಸಂಶಯಗಳು ಕಳೆದ ಹಲವು ದಿನಗಳಿಂದ ಹರಿದಾಡುತ್ತಿವೆ. ಕಳೆದ ಹಲವು ದಿನಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಇವರೆಲ್ಲರೂ ಜತೆಯಾಗಿ ಕಾಣಿಸಿಕೊಂಡರೂ "ಡಿವೋರ್ಸ್ ಸಂದೇಹ"ವೊಂದು ಎಲ್ಲರನ್ನೂ ಕಾಡುತ್ತಿದೆ. ಇಲ್ಲ ಹಾಗೇನಿಲ್ಲ, ಇವರ ಬದುಕು ಚೆನ್ನಾಗಿದೆ ಎಂದು ಹೇಳುವವರಿಗಿಂತ "ಏನೋ ನಡೆದಿದೆ" ಎಂದು ಹೇಳುವವರೇ ಹೆಚ್ಚಾಗಿದ್ದಾರೆ. ಇದೇ ಸಮಯದಲ್ಲಿ ಈ ರೀತಿ ಏನೂ ಆಗಿಲ್ಲ ಎಂದು ಬಚ್ಚನ್ ಕುಟುಂಬದ ಯಾವೊಬ್ಬರ ಸದಸ್ಯರೂ ಪ್ರತಿಕ್ರಿಯೆ ನೀಡಿಲ್ಲ. ಇದರ ಬದಲು ಕೆಲವರ ಟ್ವೀಟ್ಗಳು ಒಗಟಾಗಿಯೇ ಉಳಿದಿದೆ. ವಿಶೇಷವಾಗಿ ಅಮಿತಾಬ್ ಬಚ್ಚನ್ ಮೊನ್ನೆ ಮಾಡಿದ ಟ್ವೀಟ್ "ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿವಾಹ ವಿಚ್ಛೇದನ"ಕ್ಕೆ ಪುಷ್ಠಿ ನೀಡುವಂತೆ ಇದೆ ಎಂಬ ಅಭಿಪ್ರಾಯವೂ ಇದೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ, ಏನೋ ಸಮ್ಥಿಂಗ್ ಆಗಿದೆ ಎನ್ನುವುದಕ್ಕೆ ಅವರ ಅಭಿಮಾನಿಗಳು ಹಲವು ನಿದರ್ಶನಗಳನ್ನು ಅಭಿಮಾನಿಗಳು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖ ಎಂಟು ನಿದರ್ಶನಗಳ ವಿವರ ಇಲ್ಲಿದೆ. ಇದನ್ನೂ ಓದಿ: ನನ್ನ ಪ್ರೀತಿಯ ಅ... ನೀನು ರೀಚ್ಔಟ್ ಆಗು, ಕೈ ಹಿಡಿಯಲು ನಾನಿದ್ದೇನೆ; ಅಭಿಷೇಕ್ ಬಚ್ಚನ್ ಹೃದಯಸ್ಪರ್ಶಿ ಬರಹ
ಕಾರಣ 1: ಐಶ್ವರ್ಯಾ ರೈ ಅವರನ್ನು ಅನ್ಫಾಲೋ ಮಾಡಿದ ಅಮಿತಾಬ್ ಬಚ್ಚನ್
ಇನ್ಸ್ಟಾಗ್ರಾಂನಲ್ಲಿ ಅಮಿತಾಬ್ ಬಚ್ಚನ್ ಅವರು ಐಶ್ವರ್ಯಾ ರೈ ಅವರನ್ನು ಅನ್ಫಾಲೋ ಮಾಡಿರುವ ಕುರಿತು ಸೋಷಿಯಲ್ ಮೀಡಿಯಾ ಮಾತನಾಡುತ್ತಿದೆ. ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಕಾರಣ 2: ದಿ ಆರ್ಚೀಸ್ ಕಾರ್ಯಕ್ರಮದಲ್ಲಿ ಆತ್ಮೀಯತೆ ಇರಲಿಲ್ಲ
ಆರ್ಚೀಸ್ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಆಗಮಿಸಿದಾಗ ಐಶ್ವರ್ಯಾ ರೈ ಕಡೆಗೆ ಅವರು ಆತ್ಮೀಯ ದೃಷ್ಟಿ ಬೀರಿಲ್ಲ. ಒಂದು ರೀತಿಯ ಅನ್ಕಂಫರ್ಟೆಬಲ್ ಫೀಲ್ ಇತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಕಾರಣ 3: ವೆಡ್ಡಿಂಗ್ ರಿಂಗ್ ಕಾಣಿಸಲಿಲ್ಲ
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಭಿಷೇಕ್ ಬಚ್ಚನ್ ವೆಡ್ಡಿಂಗ್ ರಿಂಗ್ ಧರಿಸಿಲ್ಲ ಎಂದು ರೆಡ್ಡಿಟ್ನಲ್ಲಿ ಬಳಕೆದಾರರೊಬ್ಬರು ಹೇಳಿದ್ದರು. ಇದಾದ ಬಳಿಕ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಪಡೆದಿದ್ದಾರೆಯೇ ಎಂಬ ಚರ್ಚೆ ಕಾವೇರಿತ್ತು.
ಕಾರಣ 4: ಐಶ್ವರ್ಯಾ ರೈ ಬರ್ತ್ಡೇ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಭಾಗವಹಿಸಿರಲಿಲ್ಲ
ಐಶ್ವರ್ಯಾ ರೈ ಅವರು ತನ್ನ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಜತೆಗೆ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ ಭಾಗವಹಿಸಿರಲಿಲ್ಲ.
ಕಾರಣ 5: ಜಯಾ ಬಚ್ಚನ್ ಫೋಟೋ ಕ್ರಾಪ್ ಮಾಡಿದ ಐಶ್ವರ್ಯಾ
ಅಮಿತಾಬ್ ಬಚ್ಚನ್ ಅವರ 81ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಐಶ್ವರ್ಯಾ ರೈ ಅವರು ಅಮಿತಾಬ್ ಅವರ ಫೋಟೋ ಅಪ್ಲೋಡ್ ಮಾಡಿದ್ದರು. ಆ ಫೋಟೋದಲ್ಲಿ ಶ್ವೇತ ಬಚ್ಚನ್ ಕೂಡ ಇದ್ದರು. ಆದರೆ, ಈ ಫೋಟೋದಲ್ಲಿ ಜಯ ಬಚ್ಚನ್, ನವ್ಯಾ ನಂದ ನವೇಲಿ, ಶ್ವೇತ ಬಚ್ಚನ್ ಅವರ ಫೋಟೋಗಳನ್ನು ಐಶ್ವರ್ಯಾ ರೈ ಕ್ರಾಪ್ ಮಾಡಿ ಅಪ್ಲೋಡ್ ಮಾಡಿದ್ದರು. ಇದು ದೊಡ್ಡ ಫೋಟೋ ಅಪ್ಲೋಡ್ ಮಾಡಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಮಾಡುವ ಕೆಲಸವಾದರೂ ಫ್ಯಾನ್ಸ್ ಇಲ್ಲೂ "ಸಮ್ಥಿಂಗ್ ರಾಂಗ್" ಹುಡುಕಿದ್ದಾರೆ.
ಕಾರಣ 6: ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ಅಭಿಷೇಕ್ ಬಚ್ಚನ್ ನೀರಸ ಶುಭಾಶಯ
ಐಶ್ವರ್ಯಾ ರೈ ಹುಟ್ಟುಹಬ್ಬದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಕೇವಲ "ಹ್ಯಾಪಿ ಬರ್ತ್ಡೇ! ಎಂದು ವಿಶ್ ಮಾಡಿದ್ದರು. ತನ್ನ ಪ್ರೀತಿಯ ಪತ್ನಿಗೆ ಅಭಿಷೇಕ್ ಇಷ್ಟೊಂದು ನೀರಸ ವಿಶ್ ಮಾಡಿದ್ಯಾಕೆ ಎಂದು ಕೂಡ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.
ಕಾರಣ 7: ವಿಡಿಯೋವೊಂದರಲ್ಲಿ ಕಣ್ತಪ್ಪಿಸಿಕೊಳ್ಳುವ ದೃಶ್ಯ
ಒಂದು ವಿಡಿಯೋ ಕ್ಲಿಪ್ನಲ್ಲಿ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನು ನೋಡುತ್ತ ಕಣ್ ತಪ್ಪಿಸಿಕೊಳ್ಳುವಂತಹ ದೃಶ್ಯವಿತ್ತು.
ಕಾರಣ 8: ಪ್ಯಾಷನ್ ವೀಕ್ನಲ್ಲಿ ಐಶ್ವರ್ಯಾ ನೆನಪಿಸದ ಶ್ವೇತ
ಪ್ಯಾರೀಸ್ ಪ್ಯಾಷನ್ ವೀಕ್ನಲ್ಲಿ ಶ್ವೇತಾ ಬಚ್ಚನ್ ಅವರ ಮಗಳು ನವ್ಯ ನವೇಲಿ ನಂದ ಅವರು ವಾಕ್ ಮಾಡಿದ್ರು. ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಬಚ್ಚನ್ ಅವರು ದೀರ್ಘ ಬರಹ ಬರೆದಿದ್ದರು. ಆ ಫೋಸ್ಟ್ನಲ್ಲಿ ಐಶ್ವರ್ಯಾ ರೈ ಅವರನ್ನು ಶ್ವೇತಾ ನೆನಪಿಸಿಕೊಂಡಿರಲಿಲ್ಲ.
ಹೀಗೆ, ಇಂತಹ ಹಲವು ಕಾರಣಗಳನ್ನು ನೆಟ್ಟಿಗರು ಹುಡುಕಿದ್ದು, ಅಭಿಷೇಕ್ ಮತ್ತು ಐಶ್ವರ್ಯಾ ರೈ ನಡುವೆ ಸಮ್ಥಿಂಗ್ ರಾಂಗ್ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.