ಅತ್ತೆ ಜಯಾ ಜತೆ ನಿಲ್ಲದ ಜಗಳ, ಬಚ್ಚನ್ ಮನೆ ತೊರೆದ ಐಶ್ವರ್ಯಾ ರೈ; ಬಾಲಿವುಡ್ ದೊಡ್ಮನೆಯಲ್ಲಿ ಬಿರುಕು?
Dec 16, 2023 06:30 AM IST
ಅತ್ತೆ ಜಯಾ ಜತೆ ನಿಲ್ಲದ ಜಗಳ, ಬಚ್ಚನ್ ಮನೆ ತೊರೆದ ಐಶ್ವರ್ಯಾ ರೈ; ಬಾಲಿವುಡ್ ದೊಡ್ಮನೆಯಲ್ಲಿ ಬಿರುಕು?
- ಬಿಗ್ ಬಿ ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅತ್ತೆ ಜಯಾ ಬಚ್ಚನ್ ನಡುವೆ ಮುನಿಸು ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಚ್ಚನ್ ಮನೆಯನ್ನೇ ತೊರೆದಿದ್ದಾರೆ ಐಶ್ವರ್ಯಾ ರೈ.
Aishwarya Rai Bachchan: ಬಾಲಿವುಡ್‌ನ ದೊಡ್ಮನೆ ಬಚ್ಚನ್ ಕುಟುಂಬದಲ್ಲಿ ಬಿರುಕು ಮೂಡಿದೆಯೇ? ಹೀಗೊಂದು ಅನುಮಾನ ಮೂಡಿ ತುಂಬ ದಿನಗಳೇ ಕಳೆದಿವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಮನಸ್ತಾಪ ಮೂಡಿದಿಯೇ? ಹೀಗೆ ಬಗೆಬಗೆಯ ವದಂತಿಗಳು ಮುನ್ನೆಲೆಗೆ ಬರುತ್ತಲೇ ಇವೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಬಚ್ಚನ್ ಮನೆಯನ್ನೇ ತೊರೆದಿದ್ದಾರಂತೆ ಐಶ್ವರ್ಯಾ ರೈ!
ಬಾಲಿವುಡ್‌ನ ಹಲವು ಡಿಜಿಟಲ್ ಸುದ್ದಿ ಜಾಲಗಳು ಈ ಬಗ್ಗೆ ವರದಿ ಮಾಡಿದ್ದು, ಮಗಳು ಆರಾಧ್ಯಾ ಜತೆಗೆ ಇತ್ತೀಚೆಗಷ್ಟೇ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಮಗಳು ಆರಾಧ್ಯಾ ಸಲುವಾಗಿ, ಪ್ರತ್ಯೇಕವಾಗಿ ಇರಲಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಸಮಸ್ಯೆಗಳನ್ನು ಐಶ್ವರ್ಯಾ ಎದುರಿಸುತ್ತಿದ್ದಾರಂತೆ. ಅತ್ತೆ ಜತೆಗೆ ಮಾತು ಬಿಟ್ಟೇ ವರ್ಷಗಳೇ ಕಳೆದಿವೆಯಂತೆ. ಆ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ" ಎನ್ನಲಾಗುತ್ತಿದೆ.
ಬಚ್ಚನ್ ಮನೆಯಿಂದ ಹೊರಬಂದ ನಂತರವೂ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಜೊತೆ ಚೆನ್ನಾಗಿಯೇ ಇದ್ದಾರೆ. ಆದರೆ, ಅತ್ತೆ ಜಯಾ ಬಚ್ಚನ್ ಜೊತೆ ಮನಸ್ತಾಪ ಮುಂದುವರಿದಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಜಗಳಗಳೂ ನಡೆಯುತ್ತಿವೆ ಎಂದು ವರದಿಯಾಗಿದೆ. ಇದೆಲ್ಲದರಿಂದ ಬೇಸತ್ತು ಮನೆ ಬದಲಾಯಿಸಿದ್ದಾರಂತೆ.
ಅತ್ತೆಯೊಂದಿಗೆ ಐಶ್ವರ್ಯಾ ಜಗಳ ಮುಂದುವರಿದರೆ, ಪತಿ ಅಭಿಷೇಕ್ ಜೊತೆ ಚೆನ್ನಾಗಿಯೇ ಇದ್ದಾರಂತೆ. ಇತ್ತ ಇದೆಲ್ಲದರ ನಡುವೆ ತಮ್ಮ ತಾಯಿ ಬೃಂದಾ ರಾಯ್ ಮತ್ತು ಪತಿ ಅಭಿಷೇಕ್ ಬಚ್ಚನ್ ಅವರಿಗೆ ಹೆಚ್ಚು ಸಮಯವನ್ನು ಮೀಸಲಿಡುತ್ತಿದ್ದಾರೆ. ಆದರೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದೂ ವರದಿಯಾಗಿದೆ.
ಇತ್ತೀಚೆಗೆ, ಶ್ವೇತಾ ಅವರ ಮಗ ಅಗಸ್ತ್ಯ ನಂದಾ ನಟಿಸಿದ ದಿ ಆರ್ಚೀಸ್‌ನ ಪ್ರೀಮಿಯರ್‌ಗೆ ಐಶ್ವರ್ಯಾ ಸಹ ಹಾಜರಿದ್ದರು. ಬಚ್ಚನ್ ಕುಟುಂಬದೊಂದಿಗೆ ಫೋಟೋಗಳಿಗೂ ಪೋಸ್ ನೀಡಿದರು. ಆದರೆ ಅತ್ತೆ ಜಯಾ ಬಚ್ಚನ್ ಅವರಿಂದ ದೂರ ಉಳಿದಿದ್ದರು. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಾಲಿವುಡ್‌ನ ದೊಡ್ಮನೆಯಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿತ್ತು. ಇದೀಗ ಗಂಡನ ಮನೆಯನ್ನೇ ತ್ಯಜಿಸಿದ್ದಾರೆ ಎಂಬ ಸುದ್ದಿಯೂ ವೇಗ ಪಡೆದುಕೊಂಡಿದೆ.