logo
ಕನ್ನಡ ಸುದ್ದಿ  /  ಮನರಂಜನೆ  /  Poonam Pandey: ಕೇಂದ್ರ ಸರಕಾರದ ಗರ್ಭಕಂಠ ಕ್ಯಾನ್ಸರ್‌ ಜಾಗೃತಿ ಅಭಿಯಾನಕ್ಕೆ ಪೂನಂ ಪಾಂಡೆ ರಾಯಭಾರಿಯೇ? ಇಲ್ಲಿದೆ ಸತ್ಯ ಸಂಗತಿ

Poonam Pandey: ಕೇಂದ್ರ ಸರಕಾರದ ಗರ್ಭಕಂಠ ಕ್ಯಾನ್ಸರ್‌ ಜಾಗೃತಿ ಅಭಿಯಾನಕ್ಕೆ ಪೂನಂ ಪಾಂಡೆ ರಾಯಭಾರಿಯೇ? ಇಲ್ಲಿದೆ ಸತ್ಯ ಸಂಗತಿ

Praveen Chandra B HT Kannada

Feb 08, 2024 06:25 AM IST

google News

ಪೂನಂ ಪಾಂಡೆ - ಗರ್ಭಕಂಠ ಕ್ಯಾನ್ಸರ್‌ ಜಾಗೃತಿ ಅಭಿಯಾನ

    • Poonam Pandey: ಇತ್ತೀಚೆಗೆ ಪೂನಂ ಪಾಂಡೇ ಅವರ "ಸುಳ್ಳು ಸಾವಿನ ಸುದ್ದಿ" ವೈರಲ್‌ ಆಗಿತ್ತು. ಗರ್ಭಕಂಠ ಕ್ಯಾನ್ಸರ್‌ನಿಂದ (cervical cancer) ಪೂನಂ ಪಾಂಡೇ ಮೃತಪಟ್ಟಿರುವುದಾಗಿ ಸುದ್ದಿ ಹಬ್ಬಿಸಲಾಗಿತ್ತು. ಇದು ಗರ್ಭಕಂಠ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಡಿದ ನಾಟಕ ಎಂದು ಮರುದಿನ ಸ್ವತಃ ಪೂನಂ ಪಾಂಡೆ ಅವರು ಸ್ಪಷ್ಟಪಡಿಸಿದ್ದರು.
ಪೂನಂ ಪಾಂಡೆ - ಗರ್ಭಕಂಠ ಕ್ಯಾನ್ಸರ್‌ ಜಾಗೃತಿ ಅಭಿಯಾನ
ಪೂನಂ ಪಾಂಡೆ - ಗರ್ಭಕಂಠ ಕ್ಯಾನ್ಸರ್‌ ಜಾಗೃತಿ ಅಭಿಯಾನ

ಬೆಂಗಳೂರು: ಕೆಲವು ದಿನಗಳ ಹಿಂದೆ ಪೂನಂ ಪಾಂಡೆ "ಮೃತಪಟ್ಟ ಘಟನೆ" ದೊಡ್ಡ ಸುದ್ದಿಯಾಗಿತ್ತು. ಗರ್ಭಕಂಠ ಕ್ಯಾನ್ಸರ್‌ನಿಂದ ಇವರು ಮೃತಪಟ್ಟಿರುವುದಾಗಿ ಸ್ವತಃ ಪೂನಂ ಪಾಂಡೆ ಮ್ಯಾನೇಜರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಈ ಸುದ್ದಿ ದೇಶಾದ್ಯಂತ ಸಂಚಲನ ಉಂಟು ಮಾಡಿತ್ತು, ಸಾಕಷ್ಟು ಜನರಿಗೆ ಆಘಾತ ಉಂಟಾಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ನಟಿಗೆ ಸಾವು ಉಂಟಾಯಿತೇ ಎಂದು ಸಾಕಷ್ಟು ಜನರು ಮಮ್ಮಲ ಮರುಗಿದರು. ಆದರೆ, ಮರುದಿನ ನಡೆದದ್ದೇ ಬೇರೆ. ಪೂನಂ ಪಾಂಡೆ ಅವರು ಸಾವಿನ ನಾಟಕ ಆಡಿದ್ದು, ಬಹಿರಂಗವಾಗಿತ್ತು. ಗರ್ಭಕಂಠ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ಹೀಗೆ ಮಾಡಿದೆ ಎಂದು ಅವರೇ ಸ್ಪಷ್ಟನೆ ನೀಡಿದ್ದರು.

ಸರ್ವಿಕಲ್‌ ಕ್ಯಾನ್ಸರ್‌ ಕುರಿತು ಮಾಡೆಲ್‌ ಮತ್ತು ನಟಿ ಪೂನಂ ಪಾಂಡೆ ಸುಳ್ಳು ಸಾವಿನ ಸುದ್ದಿ ಹಬ್ಬಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವರು ಆಕೆಯ ಉದ್ದೇಶವನ್ನು ಸ್ವಾಗತಿಸಿದ್ದರು. ಆದರೆ, ಸಾಕಷ್ಟು ಜನರು ಇದನ್ನು ಕಟುವಾಗಿ ಟೀಕಿಸಿದ್ದರು. ಇದೀಗ ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ ಕುರಿತಾದ ಸರಕಾರದ ಜಾಗೃತಿ ಕಾರ್ಯಕ್ರಮಕ್ಕೆ ರಾಯಭಾರಿ ಆಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಆದರೆ, ಇದು ನಿಜವಲ್ಲ ಎಂಬ ವಿವರ ಇದೀಗ ಹೊರಬಿದ್ದಿದೆ.

ಕೇಂದ್ರ ಸರಕಾರವು ದೇಶಾದ್ಯಂತ ಗರ್ಭಕಂಠ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಪೂನಂ ಪಾಂಡೆ ಅವರನ್ನು ಬ್ರಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆ ಮಾಡಲಾಗಿಲ್ಲ ಎನ್ನುವುದು ಇದೀಗ ತಿಳಿದುಬಂದಿದೆ. ಸುದ್ದಿಸಂಸ್ಥೆ ಪಿಟಿಐಯು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಈ ಕುರಿತು ವಿಚಾರಿಸಿದ್ದು "ಪೂನಂ ಪಾಂಡೆ ಅವರನ್ನು ರಾಯಭಾರಿಯಾಗಿ ಪರಿಗಣಿಸಿಲ್ಲ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 3 ರಂದು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತನ್ನ ಸಾವಿನ ಸುದ್ದಿಯ ಕುರಿತು ಸತ್ಯ ಹೇಳಿದ್ದರು. ""ನಿಮ್ಮ ಬಳಿ ಪ್ರಮುಖ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಜೀವಂತವಾಗಿದ್ದೇನೆ. ಆದರೆ, ದುಃಖದ ಸಂಗತಿಯೆಂದರೆ ಗರ್ಭಕಂಠದ ಕ್ಯಾನ್ಸರ್ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆ ಎಲ್ಲರಲ್ಲೂ ಇದೆ. ಇದರಿಂದಾಗಿ ಸಾವಿರಾರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಕ್ಯಾನ್ಸರ್‌ಗಿಂತಲೂ ಇದು ವಿಭಿನ್ನ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. ಅದರ ಜಾಗೃತಿ ಮೂಡಿಸುವ ಸಲುವಾಗಿಯೇ ನಾನು ಈ ರೀತಿ ಮಾಡಿದೆ" ಎಂದು ಹೇಳಿದ್ದರು.

"ಇತರೆ ಕ್ಯಾನ್ಸರ್‌ಗಳಿಗಿಂತ ಗರ್ಭಕಂಠದ ಕ್ಯಾನ್ಸರ್‌ ಭಿನ್ನವಾಗಿದೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ. ಇದಕ್ಕಾಗಿ ಆರಂಭಿಕ ಪತ್ತೆ ಮತ್ತು ಎಚ್‌ಪಿವಿ ಲಸಿಕೆ ನಿರ್ಣಾಯಕವಾಗಿದೆ. ಈ ಕಾಯಿಲೆಯಿಂದ ಯಾರೂ ಕೂಡ ಜೀವವನ್ನು ಕಳೆದುಕೊಳ್ಳದಂತೆ ಖಚಿತಪಡಿಸಿಲು ಜಾಗೃತಿ ಮೂಡಿಸಬೇಕಿದೆ" ಎಂದು ಹೇಳಿದ್ದರು.

ಪೂನಂ ಅವರ ನಕಲಿ ಡೆತ್‌ ಸ್ಟೆಂಟ್‌ನಲ್ಲಿ ಭಾಗಿಯಾಗಿರುವ ಮಾಧ್ಯಮ ಕಂಪನಿ ಸ್ಟಬಾಂಗ್‌ ನಂತರ ಕ್ಷಮೆ ಯಾಚಿಸಿತ್ತು. "ಪೂನಂ ಪಾಂಡೆ ಅವರ ಸಾವಿನ ಸುದ್ದಿ ವಿಚಾರಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ. ಆದರೆ, ಈ ಅಭಿಯಾನವು ಸಾಕಷ್ಟು ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲು ನೆರವಾಗಿದೆ" ಎಂದು ಸ್ಟಬಾಂಗ್‌ ತಿಳಿಸಿತ್ತು. "ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದು. ಪೂನಂ ಅವರ ತಾಯಿ ಅವರು ಧೈರ್ಯದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದಾರೆ. ತಾಯಿಯ ಆರೋಗ್ಯವನ್ನು ಹತ್ತಿರದಿಂದ ನೋಡಿರುವ ಪೂನಂ ಪಾಂಡೆ ಅವರು ಈ ಕಾಯಿಲೆ ಕುರಿತು ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾರೆ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸ್ಟಬಾಂಗ್‌ ವಿವರ ನೀಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ