Animal Movie Review: ಕ್ರೌರ್ಯ ಉತ್ತುಂಗ, ಮನರಂಜನೆ ಮೃದಂಗ; ರಣಬೀರ್ ಕಪೂರ್ ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಚಿತ್ರವಿಮರ್ಶೆ
Dec 01, 2023 03:26 PM IST
Animal movie review: ರಣಬೀರ್ ಕಪೂರ್ ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಚಿತ್ರವಿಮರ್ಶೆ
- Animal movie review: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್ ನಟನೆಯ ಸಿನಿಮಾ ಹೇಗಿದೆ? ಹಿಂದೂಸ್ತಾನ್‌ಟೈಮ್ಸ್‌ನ ಚಿತ್ರವಿಮರ್ಶಕಿ ಮೋನಿಕಾ ರಾವತ್ ಕುಕ್ರೇಜ್ ಅವರ ವಿಮರ್ಶೆಯನ್ನು ಕನ್ನಡದಲ್ಲಿ ಓದಿ.
Animal movie review: ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಚಿತ್ರವು ವೀಕ್ಷಿಸಿದಾಗ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಕಣ್ಣಮುಂದೆ ಬರಬಹುದು. ಸುದೀರ್ಘ ಅವಧಿಯ ಸಿನಿಮಾ ತಲೆಗೆ ಭಾರವೂ ಆಗಬಹುದು. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ಅನಿಮಲ್‌ನಲ್ಲಿ ರಣಬೀರ್ ಕಪೂರ್ ಅವರದ್ದು ರಾಕ್ಷಸಿ ಅವತಾರ. ಈ ಸಿನಿಮಾದಲ್ಲಿ ನಾಯಕ ರಣಬೀರ್ ಕಪೂರ್ ನಮಗೆ ಇಷ್ಟವಾಗುತ್ತಾನೆಯೇ? ಹೌದು ಆತ ಇಷ್ಟವಾಗುತ್ತಾನೆ. ನಾಯಕ ನಮಗೆ ಅಸಮಾಧಾನ ಉಂಟುಮಾಡುವನೇ? ಹೌದು, ಒಮ್ಮೊಮ್ಮೆ ಕಿರಿಕಿರಿ ಉಂಟುಮಾಡುತ್ತಾನೆ. ಘಟನೆಗಳು, ಭಾವನೆಗಳ ಜತೆ ಸಾಗುತ್ತ ಕ್ಲೈಮ್ಯಾಕ್ಸ್‌ಗೆ ಕಾಯುವಂತೆ ಮಾಡುವ ಚಿತ್ರವಿದು. ಚಿತ್ರದ ನಡುವೆ ಇದು ಇನ್ನೂ ಮುಗಿಯುತ್ತಿಲ್ಲವೇಕೆ ಎಂಬ ಭಾವವನ್ನೂ ಉಂಟುಮಾಡಬಹುದು.
ಕ್ರೌರ್ಯಕ್ಕೆ ಕೊನೆಯಿಲ್ಲ
ಅನಿಮಲ್ ಸಿನಿಮಾ ಕ್ರೌರ್ಯ, ಹಿಂಸಾತ್ಮಕ ಪ್ರಯಾಣ. ಇದನ್ನು ನೀವು ದೂರಲಾರಿರಿ. ಗಟ್ಟಿಯಾದ ಕಥೆ ಮತ್ತು ಚಿತ್ರದ ಅಗಾಧತೆಯು ನಿಮ್ಮನ್ನು ಸಿನಿಮಾದೊಳಗೆ ಮುಳುಗಿಸುತ್ತದೆ. ನಾಯಕ ಆಕ್ಷನ್‌ನಲ್ಲಿದ್ದಾಗ ನಿಮಗೆ ದಿಗ್ಭ್ರಮೆ ಉಂಟಾಗಬಹುದು. ಕ್ರೂರಿಯಂತೆ ಬಿಂಬಿಸಲಾದ ರಣವಿಜಯ್ ಸಿಂಗ್ (ರಣಬೀರ್ ಕಪೂರ್)ಗೆ ತನ್ನ ತಂದೆ ಬಲ್ಬೀರ್ ಸಿಂಗ್ (ಅನಿಲ್ ಕಪೂರ್) ಅಂದರೆ ಆರಾಧನೆ. ಅಪ್ಪನ ಪ್ರೀತಿಗಾಗಿ ಬಾಲ್ಯದಲ್ಲಿ ಹಂಬಲಿಸುತ್ತಾನೆ. ಆದರೆ, ಅಪ್ಪನ ಪ್ರೀತಿ ಆ ಸಮಯದಲ್ಲಿ ದಕ್ಕದು. ಇದರ ಪರಿಣಾಮ ಘೋರ. ಇದನ್ನೂ ಓದಿ: Animal Twitter Review: ದುರ್ಬಲ ಹೃದಯದವರಿಗೆ ‘ಅನಿಮಲ್’ ಡೇಂಜರ್! ಭಯಾನಕ ಚಿತ್ರದಲ್ಲಿ ರಣಬೀರ್ ವಿಶ್ವರೂಪ
ಕೆಲವೊಂದು ಘಟನೆಗಳು
ಅದು ಹೈಸ್ಕೂಲ್ ಫ್ಲ್ಯಾಷ್‌ಬ್ಯಾಕ್. ತನ್ನ ತಂಗಿಗೆ ರಾಗಿಂಗ್ ಮಾಡಿವರಿಗೆ ಪಾಠ ಕಲಿಸಲು ಕಾಲೇಜಿನೊಳಗೆ ಬಂದೂಕು ಹಿಡಿದು ರಣಬೀರ್ ಕಪೂರ್ ಪ್ರವೇಶಿಸುತ್ತಾನೆ. ಇದಕ್ಕೆ ಶಿಕ್ಷೆಯಾಗಿ ತಂದೆಯಿಂದ ಹೊಡೆತ ದೊರಕುತ್ತದೆ. ಈತನನ್ನು ಅಮೆರಿಕದ ಬೋರ್ಡಿಂಗ್ ಸ್ಕೂಲ್‌ಗೆ ಕಳುಹಿಸಲಾಗುತ್ತದೆ. ತನ್ನ ತಂದೆಯ 60ನೇ ಹುಟ್ಟುಹಬ್ಬಕ್ಕೆ ವಾಪಸ್ ಬರುತ್ತಾನೆ. ಬಂದಾಗ ಸೋದರ ಮಾವ ವರುಣ್ (ಸಿದ್ಧಾರ್ಥ್ ಕಾರ್ಣಿಕ್) ಜತೆ ಜಗಳ ಮಾಡುತ್ತಾನೆ. ಬಳಿಕ ಪ್ರೀತಿ ಪ್ರವೇಶ. ಅಂತರ್‌ಜಾತಿ ವಿವಾಹಕ್ಕೆ ಕುಟುಂಬ ಒಪ್ಪಿಗೆ ನೀಡುವುದಿಲ್ಲ. ಗೀತಾಂಜಲಿ (ರಶ್ಮಿಕಾ ಮಂದಣ್ಣ) ಜತೆ ಮತ್ತೆ ಅಮೆರಿಕಕ್ಕೆ ಮರಳುತ್ತಾನೆ.
ತನ್ನ ತಂದೆಯ ಮೇಲೆ ಗುಂಡಿನ ದಾಳಿ ನಡೆದ ಬಳಿಕ, ಎಂಟು ವರ್ಷಗಳ ತರುವಾಯ ಮತ್ತೆ ರಣಬೀರ್ ಭಾರತಕ್ಕೆ ಹಿಂದಿರುಗುತ್ತಾನೆ. ಆ ಸಮಯದಲ್ಲಿ ಈತ ಉದ್ದ ಕೂದಲು ಮತ್ತು ನೀಳಗಡ್ಡದ ಹೊಸ ಅವತಾರರಲ್ಲಿ ಆಗಮಿಸುತ್ತಾನೆ.ಈ ಸಂದರ್ಭದಲ್ಲಿ ಆತ ಹೆಚ್ಚು ಉಗ್ರರೂಪಿ ಮತ್ತು ನಿರ್ದಯಿಯಾಗಿ ಕಾಣಿಸುತ್ತಾನೆ. ಅಬ್ರಾರ್ ಹಕ್ (ಬಾಬಿ ಡಿಯೋಲ್)ನನ್ನು ಕೊಲೆ ಮಾಡುವ ಸಲುವಾಗಿ ಯುದ್ಧವನ್ನು ನಡೆಸುತ್ತ ಸಾಗುತ್ತಾನೆ.
ಸ್ತ್ರೀದ್ವೇಷಿಯಾಗಿ ಕಂಡ ರಣಬೀರ್ ಕಪೂರ್
ಚಿತ್ರನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ ಅವರ ಈ ಹಿಂದಿನ ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಹೇಗೇ ಇರಲಿ. ಅನಿಮಲ್‌ನಲ್ಲಿ ರಣಬೀರ್ ಕಪೂರ್ ನಿಮಗೆ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ಈ ಕುರಿತು ಆತನಿಗೆ ಯಾವುದೇ ಸಂಕೋಚವೂ ಇಲ್ಲ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ. ತನ್ನ ಮದುವೆಯಲ್ಲಿ ಸುಮ್ಮನಿರು ಎಂದು ಹೇಳಿದ ಘಟನೆಯಾಗಲಿ, ಹಲವು ಕಡೆ ಸ್ತ್ರೀದ್ವೇಷಿಯಾಗಿಯೂ ಕಾಣಿಸುತ್ತಾನೆ. ಒಮ್ಮೊಮ್ಮೆ ಇಷ್ಟವಾಗುತ್ತಾನೆ, ಒಮ್ಮೊಮ್ಮೆ ದ್ವೇಷದ ಮೂರ್ತಿಯಾಗುತ್ತಾನೆ, ಕೆಲವೊಮ್ಮೆ ನಮಗೆ ತಪ್ಪಾಗಿ ಅರ್ಥವಾಗುತ್ತಾನೆ, ಒಟ್ಟಾರೆ ಶ್ರೀಮಂತ ಯುವಕನೊಬ್ಬನ ಹಾಳಾದ ವ್ಯಕ್ತಿತ್ವದಂತೆ ಒಮ್ಮೊಮ್ಮೆ ಕಾಣಿಸುತ್ತಾನೆ. ಆದರೆ, ಈತನ ತಂದೆಯ ಮರಣದ ನಂತರ ಎಲ್ಲವೂ ಬದಲಾಗುತ್ತದೆ. ಮನೆಯ ಜವಾಬ್ದಾರಿ ತಾನೇ ತೆಗೆದುಕೊಳ್ಳುತ್ತಾನೆ. ಮನೆಯ ಮಹಿಳೆಯರಿಗೆ ತೊಂದರೆಯಾದರೆ ಹೊಡೆದಾಟಕ್ಕೆ ಹಿಂದೆಮುಂದೆ ನೋಡುವುದಿಲ್ಲ.
ರಣಬೀರ್‌ನನ್ನು ಇಷ್ಟಪಡದೆ ಇರಲಾಗದು
ರಣಬೀರ್ ಕಪೂರ್ ಟಾಪ್ ಫಾರ್ಮ್‌ನಲ್ಲಿರುವಂತೆ ಇದೆ. ನಾಯಕ ಮತ್ತು ವಿಲನ್ ಗುಣಲಕ್ಷಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ವಂಗಾ ಅವರು ರಣಬೀರ್ ಕಪೂರ್‌ನಿಂದ ನಟನೆ ತೆಗೆದಿದ್ದಾರೆ. ರಣಬೀರ್ ಮೇಲೆ ಗುಂಡಿನ ದಾಳಿಯಾದಗ, ಹೊಡೆತ ತಿಂದಾಗಲು ಆತ ಸಾಯಬೇಕೆಂದು ನೀವು ಬಯಸಲಾರಿರಿ. ಒಂದು ದೃಶ್ಯದಲ್ಲಿ 300ಕ್ಕೂ ಹೆಚ್ಚು ಶಸ್ತ್ರಸಜ್ಜಿತ ವೈರಿಗಳನ್ನು ಕೊಲ್ಲಲು ಹೈಟೆಕ್ ಫ್ಯಾನ್ಸಿ ಶೂಟಿಂಗ್ ಮೆಷಿನ್ ಮೂಲಕ ಡುಂಡುಂ ಎಂದು ಫೈರಿಂಗ್ ಮಾಡುತ್ತಾನೆ. ಇಂತಹ ಸೀನ್‌ಗಳು ಅನಿಮಲ್ ಚಿತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಚಿತ್ರದ ಕೆಲವೆಡೆ ಮೇಡ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ವಿಷಯಗಳೂ ಬರುತ್ತವೆ.
ಸಿನಿಮಾದಲ್ಲಿ ಏನು ಇಷ್ಟವಾಗುವುದಿಲ್ಲ?
3 ಗಂಟೆ 22 ನಿಮಿಷ ದೀರ್ಘಾವಧಿಯ ಅನಿಮಲ್ ಸಿನಿಮಾ ನಿಮಗೆ ಕೊಂಚ ತಲೆನೋವು ತರಬಹುದು. ಹೈಪಿಚ್ ಡೈಲಾಗ್‌ಗಳು, ಹೊಡೆದಾಟಗಳು, ಕ್ರೌರ್ಯಗಳು ಕಿವಿಗೆ ಚುಚ್ಚಿದಂತೆ, ತಲೆಗೆ ಮೊಟಕಿದಂತೆ, ದೇಹವನ್ನು ಅಲ್ಲೊಲ್ಲಕಲ್ಲೋಲ ಮಾಡಿದಂತೆ ಆಗಬಹುದು. ಕೆಲವೊಂದು ವಿಷಯಗಳು ನಿಮಗೆ ಇಷ್ಟವಾಗದು. ಪೌರುಷದ ಸಂಕೇತವಾಗಿ ಪುರುಷನ ಆ ಕೂದಲಿನ ಉಲ್ಲೇಖ ಕೇಳಲು ಆಹ್ಲಾದಕರವಾಗಿಲ್ಲ. ರಣಬೀರ್ ಕಪೂರ್ ತನ್ನ ಲೈಂಗಿಕ ಜೀವನದ ಕುರಿತು ಮನಶಾಸ್ತ್ರಜ್ಞರೊಂದಿಗೆ ಚರ್ಚೆ ಮಾಡುವ ದೃಶ್ಯಗಳು ಸೇರಿದಂತೆ ಕಥೆಯನ್ನು ನಿರಂತರವಾಗಿ ಎಳೆದಂತೆ ಭಾಸವಾಗುತ್ತದೆ. ವಿಶೇಷವಾಗಿ ಸಿನಿಮಾದ ದ್ವಿತೀಯಾರ್ಧದಲ್ಲಿ ಸಿನಿಮಾ ಇನ್ನೂ ಮುಗಿಯುತ್ತಿಲ್ಲ ಏಕೆ ಎಂದು ಅನಿಸಬಹುದು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಖಾಸಗಿ ಫೋಟೋ ನೋಡಿ ಕಟ್ಟೆಯೊಡೆದ ಅಭಿಮಾನಿಗಳ ಆಕ್ರೋಶ
ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳಲ್ಲಿ ತಾನು ಇಷ್ಟಪಟ್ಟ ಯುವತಿಯ ಮದುವೆಯನ್ನು ನಿಲ್ಲಿಸಲು ಮನೆಗೆ ನುಗ್ಗಿ ಹೊಡೆದಾಟ ನಡೆಸುವುದು ಸಾಮಾನ್ಯ. ಆದರೆ, ಅನಿಮಲ್‌ನಲ್ಲಿ ಇದು ಕೊಂಚ ಭಿನ್ನವಾಗಿದೆ. ರಣವಿಜಯ್ ಸಿಂಗ್ ಆಲ್ಪಾ ಮೇಲ್ಸ್ ಎಂಬ ಪಾಠದ ಮೂಲಕ ನಾಯಕಿ ತನಗೆ ದೊರಕುವಂತೆ ಮಾಡುತ್ತಾನೆ. ನಿನ್ನ ಪೆಲ್ವಿಸ್ ದೊಡ್ಡದಿದೆ ಎಂದಾಗಲೂ ನಾಯಕಿ ಆತನನ್ನು ತಡೆಯಲು ಯತ್ನಿಸುವುದಿಲ್ಲ. ನಂತರ ಚಾರ್ಟೆಡ್ ಪ್ಲೇನ್‌ನಲ್ಲಿ ಇವರಿಬ್ಬರ ಲವ್ ಮೇಕಿಂಗ್ ಸೀನ್ ಕೂಡ ಇದೆ. ಇದು ಹೇಗಿತ್ತು ಎಂದು ಕೇಳಿದಾಗ ರಣಬೀರ್ ಕಪೂರ್ ಕಣ್ಣು ಮಿಟುಕಿಸುವುದಿಲ್ಲ. ಇಂತಹ ಹಲವು ಹೊಂದಾಣಿಕೆಯಾಗದ ದೃಶ್ಯಗಳು ಇವೆ.
ಯಾವುದು ಇಷ್ಟವಾಗುತ್ತದೆ?
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣರ ಕೆಮೆಸ್ಟ್ರಿ ತೆರೆ ಮೇಲೆ ಇಷ್ಟವಾಗುತ್ತದೆ. ಆದರೆ, ಈ ಜೋಡಿ ಇಷ್ಟವಾಗುವ ಮೊದಲೇ ನಿರ್ದೇಶಕರು ನಾಯಕನನ್ನು ಸ್ತ್ರೀದ್ವೇಷಿ ಮತ್ತು ಕೋಮುವಾದಿಯನ್ನಾಗಿಸಲು ಪ್ರಯತ್ನಿಸುತ್ತಾರೆ. ಕೆಲವೊಂದು ಕಡೆ ಆತ ಚಿತ್ರವಿಚಿತ್ರವಾಗಿ ವರ್ತಿಸುತ್ತಾನೆ. ಆಕೆಯ ಬ್ರಾ ಸ್ಟ್ರಿಂಗ್ ಅನ್ನು ಹಲವು ಬಾರಿ ಎಳೆಯುತ್ತಾನೆ. ಆಕೆಗೆ ಮೋಸ ಮಾಡಿ ಬೇರೆ ಯುವತಿಯರ ಜತೆ ಇರುತ್ತಾನೆ. ಆದರೆ, ಏನಾದರೂ ಆಕೆ ಚುಂಬಿಸಲು ಮತ್ತು ಮುದ್ದಿಸಲು ಆತನ ಬಳಿಗೇ ಬರುತ್ತಾಳೆ. ಈ ರೀತಿ ಹಲವು ವಿಧದ ಪಾತ್ರಗಳ ಮೂಲಕ ರಣಬೀರ್‌ನ ನಟನೆ ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಒಂದು ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ಅವರು ರಣಬೀರ್ ಕಪೂರ್ ಕೆನ್ನೆಗೆ ಹೊಡೆಯುವ ಸೀನ್ ಇದೆ. ಸಾಕಷ್ಟು ಸಿನಿಮಾ ವೀಕ್ಷಕರು ನಿಜಕ್ಕೂಈ ಹೊಡೆತ ಆತನಿಗೆ ಬೇಕಿತ್ತು ಎನ್ನುತ್ತಾರೆ.
ಅನಿಲ್ ಕಪೂರ್ ಅವರ ಶ್ರದ್ಧೆಯ ಅಭಿನಯವೂ ಇಷ್ಟವಾಗುತ್ತದೆ. ರಣಬೀರ್ ಶಕ್ತಿಗೆ ತಕ್ಕಂತೆ ತೆರೆಯ ಮೇಲೆ ಅನಿಲ್ ಕಪೂರ್ ಆವರಿಸಿದ್ದಾರೆ. ಹಿಂಸಾತ್ಮಕವಾಗಿರಲಿ ಅಥವಾ ಭಾವನಾತ್ಮಕವಾಗಿರಲಿ ಅನಿಲ್ ಕಪೂರ್ ಪಾತ್ರ ಇಷ್ಟವಾಗುತ್ತದೆ. ರಣಬೀರ್ ಅಮ್ಮನಾಗಿ ನಟಿಸಿರುವ ಚಾರು ಶಂಕರ್ ನಟನೆಯೂ ಆಪ್ತವಾಗುತ್ತದೆ. ಇದೇ ಸಮಯದಲ್ಲಿ ನಾಯಕನ ಸಹೋದರಿಯರಾಗಿ ಅನ್ಶುಲ್ ಚೌಹಾನ್ ಮತ್ತು ಸಲೋನಿ ಬಾತ್ರಾ ಕೂಡ ತಮ್ಮ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿಸಿರುವ ಪ್ರೇಮ್ ಚೋಪ್ರಾ ಮತ್ತು ಶಕ್ತಿ ಕಪೂರ್ ಅವರು ಕೂಡ ತಮಗೆ ನೀಡಿದ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಬಾಬಿ ಡಿಯೋಲ್ ಅವರು ಚಿತ್ರದ ಕೊನೆಯಲ್ಲಿ ಬರುತ್ತಾರೆ. ಎರಡು ಪೂರ್ಣ ದೃಶ್ಯಗಳಲ್ಲಿ ಬಾಬಿ ಡಿಯೋಲ್ ನಿಮ್ಮನ್ನು ಬೆಚ್ಚಿ ಬೀಳಿಸುತ್ತಾರೆ.
ಚಿತ್ರದಲ್ಲಿ ನಿಜಕ್ಕೂ ಖುಷಿಯಾಗುವುದು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮತ್ತು ಹಿನ್ನೆಲೆಯಲ್ಲಿ ಕೇಳುವ ಹಾಡುಗಳು. ಕ್ಲೈಮ್ಯಾಕ್ಸ್‌ನಲ್ಲಿ ರಣಬೀರ್ ಕಪೂರ್ ಮತ್ತು ಬಾಬಿ ನಡುವಿನ ಹತ್ತು ನಿಮಿಷಗಳ ಸುದೀರ್ಘ ಕಾದಾಟ ನಿಮ್ಮನ್ನು ರೋಮಾಂಚನಗೊಳಿಸಬಹುದು. ಅನಿಮಲ್ ಒಂದು ಮಾಸ್, ಮನರಂಜನೆ, ಹಿಂಸಾತ್ಮಕ ಥ್ರಿಲ್ಲರ್ ಸಿನಿಮಾ. ಇದು ಇತರೆ ಸಿನಿಮಾಗಳಂತೆ ಅಲ್ಲ. ಈ ರಕ್ತಪಾತದ ದೃಶ್ಯಗಳು ದುರ್ಬಲ ಹೃದಯದವರಿಗೆ ಅಲ್ಲ. ಈ ಸಿನಿಮಾ ನೋಡಲು ಬಯಸಿದರೆ ಸುದೀರ್ಘ ಅವಧಿ ಥಿಯೇಟರ್‌ನಲ್ಲಿ ಕುಳಿತುಕೊಳ್ಳಲು ಮಾನಸಿಕವಾಗಿ ರೆಡಿಯಾಗಿ.