Poonam Pandey Death: ಮೃತದೇಹದ ಸುಳಿವಿಲ್ಲ, ಕುಟುಂಬವೂ ಕಣ್ಮರೆ; ಪ್ರಚಾರಕ್ಕಾಗಿ ಪೂನಂ ಪಾಂಡೆ ಸಾವಿನ ನಾಟಕ!
Feb 03, 2024 10:30 AM IST
Poonam Pandey Death: ಮೃತದೇಹದ ಸುಳಿವಿಲ್ಲ, ಕುಟುಂಬವೂ ಕಣ್ಮರೆ; ಪ್ರಚಾರಕ್ಕಾಗಿ ಪೂನಂ ಪಾಂಡೆ ಸಾವಿನ ನಾಟಕ! (Poonam Pandey death news is fake)
- Poonam Pandey Death news Fake: ಮಾದಕ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ಸುದ್ದಿ ಶುಕ್ರವಾರವಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಬೆನ್ನಲ್ಲೆ ಇದೀಗ ಅವರು ಸತ್ತಿಲ್ಲ ಬದುಕಿದ್ದಾರೆ ಎಂಬ ಸುದ್ದಿಯೂ ಮುನ್ನೆಲೆಗೆ ಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಒಂದಷ್ಟು ಸಾವಿನ ಸುತ್ತಲಿನ ಒಂದಷ್ಟು ವಿಚಾರಗಳ ಚರ್ಚೆಯಾಗುತ್ತಿದೆ.
Poonam Pandey Death: ಬಾಲಿವುಡ್‌ನ ಮಾದಕ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಗುಲ್ಲೆಬ್ಬಿಸಿತ್ತು. ಅವರ ಸಾವಿನ ಸತ್ಯಾಸತ್ಯತೆ ತಿಳಿದುಕೊಳ್ಳುವ ಮುನ್ನವೇ, ಅವರದೇ ಸೋಷಿಯಲ್ ಮೀಡಿಯಾದಲ್ಲಿ ಪೂನಂ ಸಾವಿನ ಸುದ್ದಿ ಪೋಸ್ಟ್ ಆಗಿತ್ತು. ಪೂನಂ ಅವರ ಪಿಆರ್ ತಂಡದಿಂದ ಈ ಅಧಿಕೃತ ಘೋಷಣೆ ಹೊರಬಿದ್ದ ತಕ್ಷಣ, ಕಾಳ್ಗಿಚ್ಚಿನಂತೆ ದೊಡ್ಡ ಸುದ್ದಿಯಾಯ್ತು. ಆದರೆ, ಸಾವಿನ ನಿಖರತೆ ಹುಡುಕುವ ಮನಸ್ಥಿತಿ ಯಾರಲ್ಲೂ ಇರಲಿಲ್ಲ. ಇದೀಗ ಈ ಸಾವಿನ ಸುದ್ದಿಯೇ ಸುಳ್ಳು ಎಂದು ಕೆಲವರು ವಾದಿಸುತ್ತಿದ್ದಾರೆ!
ಪೂನಂ ಪಾಂಡೆ ತಮ್ಮ 32ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂಬ ವಿಚಾರವನ್ನು ಅವರ ತಂಡ ಹಂಚಿಕೊಂಡಿತ್ತು. “ಈ ಬೆಳಗು ನಮಗೆ ತುಂಬ ಕಷ್ಟಕರ ದಿನವಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನಾವು ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ. ಈ ದುಃಖದ ಸಮಯದಲ್ಲಿ, ನಾವು ಈ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಯಿತು” ಎಂದು ಪೂನಂ ಪಾಂಡೆ ಇನ್‌ಸ್ಟಾ ಖಾತೆಯಿಂದ ಪೋಸ್ಟ್ ಶೇರ್ ಆಗಿತ್ತು. ಈಗ ಅದು ಫೇಕ್ ಎನ್ನಲಾಗುತ್ತಿದೆ.
ಪ್ರಚಾರಕ್ಕೆ ಪೂನಂ ಪಾಂಡೆ ಗಿಮಿಕ್!?
ಪೂನಂ ನಾಲ್ಕು ದಿನಗಳ ಹಿಂದೆಯೇ ನಿಧನವಾಗಿದ್ದಾರೆ ಎಂದು ಪಿಆರ್ ತಂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಆದರೆ, ಹಾಗೆ ನಿಧನರಾಗಿದ್ದಾರೆ ಎಂಬುದಕ್ಕೆ ಒಂದೇ ಒಂದು ಪುರಾವೆ ಇಲ್ಲ. ಆಸ್ಪತ್ರೆಯ ದಾಖಲೆ ಇಲ್ಲ, ಮೃತ ದೇಹದ ಒಂದೇ ಒಂದು ಫೋಟೋ ಸಹ ಹೊರಬಿದ್ದಿಲ್ಲ. ಅಷ್ಟೇ ಅಲ್ಲ, ಮೂರು ದಿನಗಳ ಹಿಂದೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಫೋಟೋ ವಿಡಿಯೋಗಳನ್ನೂ ಶೇರ್ ಮಾಡಿಕೊಂಡ ಕೆಲವರು, ಸಾವಿನ ಬಗ್ಗೆ ಚಕಾರ ಎತ್ತಿ, ಇದು ಬರೀ ನಾಟಕ ಎಂದಿದ್ದಾರೆ.
ಸಾವಿನ ಸುದ್ದಿ ಬೆನ್ನಲ್ಲೇ ಕುಟುಂಬ ನಾಪತ್ತೆ
ಪೂನಂ ಪಾಂಡೆ ಮೂಲತಃ ಉತ್ತರ ಪ್ರದೇಶದವರು. ಈ ಸುದ್ದು ಹಬ್ಬಿದ ಬಳಿಕ ಪೂನಂ ಪಾಂಡೆ ಅವರ ಹುಟ್ಟೂರಿನ ಮನೆ ಲಾಕ್ ಆಗಿದೆ. ಪೂನಂ ಅವರ ಅಂಗರಕ್ಷಕನಿಗೆ ಕೇಳಿದರೆ, ಅವರಿಗೂ ಈ ವಿಚಾರ ಗೊತ್ತಿಲ್ಲ, ನನಗೂ ಶಾಕ್ ಆಗಿದೆ ಎಂಬ ಉತ್ತರ ಬಂದಿದೆ. ಅವರ ಜತೆಗಿದ್ದ ನನಗೆ ಅವರಿಗಿತ್ತು ಎನ್ನಲಾದ ಕಾಯಿಲೆ ಬಗ್ಗೆಯೂ ನನಗೂ ಈ ವರೆಗೂ ಗೊತ್ತಿಲ್ಲ ಎಂದು ಬಾಡಿಗಾರ್ಡ್ ಹೇಳಿಕೊಂಡಿದ್ದಾರೆ. ಅವರ ಕುಟುಂಬಸ್ಥರ ಫೋನ್‌ಗಳೂ ಸಹ ನಾಟ್ ರೀಚಬಲ್ ಆಗಿವೆ. ಈ ನಡುವೆ ಶಾದಿ.ಕಾಮ್ ವರದಿಯ ಪ್ರಕಾರ, ಸದ್ಯ ಪೂನಂ ಪ್ರವಾಸದಲ್ಲಿದ್ದಾರೆ. ಆದರೆ, ಅವರು ಹೋಗಿರುವ ಸ್ಥಳ ಯಾವುದು ಎಂಬುದು ಬಹಿರಂಗವಾಗಿಲ್ಲ. ಅವರಿಗೆ ಏನೂ ಆಗಿಲ್ಲ ಎಂದು ವರದಿ ಮಾಡಿದೆ.
ಪೋಸ್ಟ್ ಸೂಕ್ಷ್ಮವಾಗಿ ಗಮನಿಸಿದ್ರಾ...
ಇನ್ನು ಈ ನಡುವೆ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುವುದು ತೀರಾ ಸಹಜ. ಇದೀಗ ಅದೇ ರೀತಿ ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಂ ಖಾತೆಯೂ ಹ್ಯಾಕ್ ಆಗಿದೆ ಎಂದೂ ಹೇಳಲಾಗುತ್ತಿದೆ. ಹಾಗೆ ಹ್ಯಾಕ್ ಮಾಡಿ, ಸಾವಿನ ಸುದ್ದಿಯನ್ನು ಪೋಸ್ಟ್ ಮಾಡಲಾಗಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹಾಗೆ ಪೋಸ್ಟ್ ಆದ ಮಾಹಿತಿಯಲ್ಲಿ ಬರೀ ಪೂನಂ ಎಂದಷ್ಟೇ ಹೆಸರನ್ನು ನಮೂದಿಸಲಾಗಿದೆ. ಅಲ್ಲೆಲ್ಲೂ ಪಾಂಡೆ ಎಂಬ ಪದ ಬಳಕೆ ಇಲ್ಲ. ಜತೆಗೆ ಪೂನಂ ಫೋಟೋ ಸಹ ಹಾಕಿಲ್ಲ. ಇದೆಲ್ಲವನ್ನು ನೋಡಿದ ನೆಟ್ಟಿಗರು ಇದು ಕೇವಲ ಪ್ರಚಾರದ ಗಿಮಿಕ್ ಎಂದು ಹೇಳುತ್ತಿದ್ದಾರೆ.