logo
ಕನ್ನಡ ಸುದ್ದಿ  /  ಮನರಂಜನೆ  /  ಅಮಿತಾಬ್‌ ಮಗನಾಗಿದ್ರು ಯಾವ ನಿರ್ದೇಶಕನೂ ನನ್ನ ಕೈಹಿಡಿಯಲಿಲ್ಲ; ಆ ದಿನಗಳನ್ನು ನೆನಪಿಸಿಕೊಂಡ ಅಭಿಷೇಕ್‌ ಬಚ್ಚನ್‌

ಅಮಿತಾಬ್‌ ಮಗನಾಗಿದ್ರು ಯಾವ ನಿರ್ದೇಶಕನೂ ನನ್ನ ಕೈಹಿಡಿಯಲಿಲ್ಲ; ಆ ದಿನಗಳನ್ನು ನೆನಪಿಸಿಕೊಂಡ ಅಭಿಷೇಕ್‌ ಬಚ್ಚನ್‌

Praveen Chandra B HT Kannada

Dec 26, 2023 04:08 PM IST

google News

ಅಭಿಷೇಕ್‌ ಬಚ್ಚನ್‌

    • ಅಮಿತಾಬ್‌ ಬಚ್ಚನ್‌ ಕುಟುಂಬದ ಕುಡಿ ಅಭಿಷೇಕ್‌ ಬಚ್ಚನ್‌ ಅವರಿಗೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸುವುದು ಸುಲಭವಾಗಿರಲಿಲ್ಲ. “ಮೊದಲ ಬಾರಿಗೆ ಇವರನ್ನು ಹೀರೋ ಆಗಿ ಲಾಂಚ್‌ ಮಾಡುವ ಜವಾಬ್ದಾರಿ ತೆಗೆದುಕೊಳ್ಳಲು ಯಾವುದೇ ನಿರ್ದೇಶಕ ಬಯಸಲಿಲ್ಲ” ಎಂದು ಸಂದರ್ಶನವೊಂದರಲ್ಲಿ ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ.
ಅಭಿಷೇಕ್‌ ಬಚ್ಚನ್‌
ಅಭಿಷೇಕ್‌ ಬಚ್ಚನ್‌ (PTI)

ಜನಪ್ರಿಯ ಸಿನಿಮಾ ನಟಿಯರು, ನಟರ ಮಕ್ಕಳಿಗೆ ಸಿನಿಮಾರಂಗ ಪ್ರವೇಶಿಸುವುದು ಸುಲಭ ಎಂಬ ನಂಬಿಕೆಯಿದೆ. ಇತರರಿಗೆ ಹೋಲಿಸಿದರೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸುವುದು ಇವರಿಗೆ ಸುಲಭವಾಗಿರಬಹುದು. ಆದರೆ, ಅವಕಾಶ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಭಿಷೇಕ್‌ ಬಚ್ಚನ್‌ ಇಂತಹದ್ದೇ ಅನುಭವವನ್ನು ಹಂಚಿಕೊಂಡಿದ್ದಾರೆ. ಬಚ್ಚನ್‌ ಮಗನಾಗಿದ್ದರೂ ಅವಕಾಶ ಪಡೆಯುವುದು ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

ಸಿನಿಮಾ ಮ್ಯಾಗಜಿನ್‌ಗಳಲ್ಲಿ ಆ ಸಂದರ್ಭದಲ್ಲಿ "ಅಮಿತಾಬ್‌ ಬಚ್ಚನ್‌ ಪುತ್ರ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ" ಎಂದೆಲ್ಲ ಹೆಡ್‌ಲೈನ್‌ ನೀಡುತ್ತಿದ್ದವು. ಆದರೆ, ಯಾವುದೇ ಸಿನಿಮಾ ನಿರ್ದೇಶಕರು ಕೂಡ ನನ್ನನ್ನು ಲಾಂಚ್‌ ಮಾಡಲು ಮುಂದೆ ಬರಲಿಲ್ಲ. ಭೇಟಿಯಾದ ಎಲ್ಲಾ ನಿರ್ದೇಶಕರು ಇಂತಹದ್ದೇ ಅಭಿಪ್ರಾಯ ಹೊಂದಿದ್ದರು ಎಂದು ಅಭಿಷೇಕ್‌ ಬಚ್ಚನ್‌ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದನ್ನು ಓದಿ: Abhishek Bachchan: ನನ್ನ ಪ್ರೀತಿಯ ಅ... ನೀನು ರೀಚ್‌ಔಟ್‌ ಆಗು, ಕೈ ಹಿಡಿಯಲು ನಾನಿದ್ದೇನೆ; ಅಭಿಷೇಕ್‌ ಬಚ್ಚನ್‌ ಹೃದಯಸ್ಪರ್ಶಿ ಬರಹ

ಅಭಿಷೇಕ್‌ ಬಚ್ಚನ್‌ ಹೇಳಿದ್ದೇನು?

"ನಾನು ಸಿನಿಮಾರಂಗಕ್ಕೆ ಪ್ರವೇಶಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು, ಈ ಕುರಿತು ಎಲ್ಲೆಡೆ ಉತ್ಸಾಹ ಇತ್ತು. ನಾನು ಬಾಲಕನಾಗಿದ್ದ ಕಾರಣ ಚರ್ಚೆಗಳು ಬೇಕಾದ್ದಷ್ಟು ನಡೆಯುತ್ತಿದ್ದವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ನಿರ್ದೇಶಕರು ನನ್ನನ್ನು ಸಿನಿಮಾಕ್ಷೇತ್ರಕ್ಕೆ ಲಾಂಚ್‌ ಮಾಡಲು ಮುಂದೆ ಬರಲಿಲ್ಲ. ನಾನು ಆ ಸಂದರ್ಭದಲ್ಲಿ ಬಹುತೇಕ ಎಲ್ಲಾ ನಿರ್ದೇಶಕರನ್ನು ಭೇಟಿಯಾಗಿದ್ದೇನೆ ಎಂದುಕೊಂಡಿದ್ದೇನೆ. ಅವರೆಲ್ಲರೂ ತುಂಬಾ ಗೌರವದಿಂದಲೇ ನನಗೆ ಅವಕಾಶ ನೀಡಲು ನಿರಾಕರಿಸಿದರು. ನಿಮ್ಮನ್ನು ಲಾಂಚ್‌ ಮಾಡುವ ಜವಾಬ್ದಾರಿ ನಮಗೆ ಬೇಡ ಎಂದು ಅವರೆಲ್ಲರೂ ನೇರವಾಗಿಯೇ ಹೇಳುತ್ತಿದ್ದರು" ಎಂದು ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ.

ಸಿನಿರಂಗ ಪ್ರವೇಶಿಸಿದ್ದು ಹೇಗೆ?

ಯಾವುದೇ ನಿರ್ದೇಶಕ ಇವರನ್ನು ಲಾಂಚ್‌ ಮಾಡಲು ಮುಂದೆ ಬಾರದೆ ಇದ್ದಾಗ ಅಭಿಷೇಕ್‌ ಬಚ್ಚನ್‌ ತನ್ನ ಸ್ನೇಹಿತ ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ಜತೆಸೇರಿ ಸ್ವತಃ ಸಿನಿಮಾ ಮಾಡಲು ಪ್ರಯತ್ನಿಸಿದರು. ರಾಕೇಶ್‌ ಕೂಡ ನಿರ್ದೇಶಕನಾಗಲು ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದನು. ಜಾಹೀರಾತುಗಳನ್ನು ಮಾಡಿ ಆತನಿಗೆ ಅಭ್ಯಾಸವಿತ್ತು. ಈ ಸಿನಿಮಾಕ್ಕಾಗಿ ಅಭಿಷೇಕ್‌ ಬಚ್ಚನ್‌ ಗಡ್ಡ ಮತ್ತು ಮೀಸೆ ಬೆಳೆಸಿದ್ದರು. ಇವರಿಬ್ಬರು ತಮ್ಮ ಸಂಜೋತಾ ಎಕ್ಸ್‌ಪ್ರೆಸ್‌ ಸಿನಿಮಾದ ಸ್ಕ್ರಿಪ್ಟ್‌ ಅನ್ನು ಅಮಿತಾಬ್‌ ಬಚ್ಚನ್‌ ಮುಂದೆ ಇಟ್ಟರು. ಅದನ್ನು ಓದಿದ ಅಮಿತಾಬ್‌ "ಬಕ್ವಾಸ್‌" ಎಂದರು.

ಸಂಜೋತಾ ಎಕ್ಸ್‌ಪ್ರೆಸ್‌ನ ಸ್ಕ್ರಿಪ್ಟ್ "ಬಕ್ವಾಸ್" ಎಂದು ಅಮಿತಾಬ್‌ ಬಚ್ಚನ್‌ ಹೇಳಿದ್ದು ರಾಕೇಶ್‌ಗೆ ಬೇಸರ ತರಿಸಿತು. ರಾಕೇಶ್‌ ಮನೆಗೆ ಹಿಂತುರುಗಿ ಒಂದು ಬಾಟಲ್‌ ಮದ್ಯ ಕುಡಿದು ಆ ಚಿತ್ರದ ಸ್ಕ್ರಿಪ್ಟ್‌ ಅನ್ನು ಮತ್ತೆ ಹೊಸದಾಗಿ ಬರೆದರು ಎಂದು ಅಭಿಷೇಕ್‌ ಬಚ್ಚನ್‌ ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಳಿಕ ಸ್ವತಃ ಅಮಿತಾಬ್‌ ಬಚ್ಚನ್‌ ನಟಿಸಿದ್ದರು. ಈ ಮೂಲಕ ರಾಕೇಶ್‌ ಅವರು ನಿರ್ದೇಶಕರಾದರು.

ತನ್ನ ಮಗನ ನೈತಿಕ ಸ್ಥೈರ್ಯ ಹೆಚ್ಚಿಸುವ ಸಲುವಾಗಿ ಅಮಿತಾಬ್‌ ಬಚ್ಚನ್‌ ಅವರು ಅಭಿಷೇಕ್‌ರನ್ನು ಫಿಲ್ಮ್‌ಫೇರ್‌ ಪ್ರಶಸ್ತಿ ಸಮಾರಂಭಗಳಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಿರ್ಮಾಪಕ ಜೆಪಿ ದತ್ತಾರ ಕಣ್ಣಿಗೆ ಅಭಿಷೇಕ್‌ ಬಿದ್ದರು. ಅದೇ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬ್ಲಾಕ್‌ಬಸ್ಟರ್‌ ಬಾರ್ಡರ್‌ ಸಿನಿಮಾಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ದತ್ತಾ ಪಡೆದಿದ್ದರು.

ಜೆಪಿ ದತ್ತಾ ಅವರು 2000ನೇ ವರ್ಷದ ಗಡಿಯಾಚೆಗಿನ ಪ್ರೇಮಕಥೆಯ ಸಿನಿಮಾ "ರೆಫ್ಯೂಜಿ"ನಲ್ಲಿ ನಟಿಸಲು ಅಭಿಷೇಕ್‌ ಬಚ್ಚನ್‌ಗೆ ಅವಕಾಶ ನೀಡಿದರು. ಈ ಸಿನಿಮಾದಲ್ಲಿ ಅಭಿಷೇಕ್‌ ಬಚ್ಚನ್‌ಗೆ ಕರೀನಾ ಕಪೂರ್‌ ಜೋಡಿಯಾಗಿದ್ದರು. ಕರೀನಾ ಕಪೂರ್‌ಗೂ ಇದು ಚೊಚ್ಚಲ ಸಿನಿಮಾ. ಈಗ ದಿ ಆರ್ಚೀಸ್‌ ಸಿನಿಮಾದಲ್ಲಿ ಇದೇ ರೀತಿ ಅಮಿತಾಬ್‌ ಬಚ್ಚನ್‌ ಕುಟುಂಬದ ಕುಡಿಗಳು ನಟಿಸುತ್ತಿರುವ ಸಂದರ್ಭ ನೆನಪಿಗೆ ಬರಬಹುದು. ಆ ಸಮಯದಲ್ಲಿ ಕರೀನಾ ಕಪೂರ್‌ ಮತ್ತು ಅಭಿಷೇಕ್‌ ಬಚ್ಚನ್‌ ಜತೆಯಾಗಿ ರೆಫ್ಯೂಜಿಯಲ್ಲಿ ನಟಿಸಿದರು. ನಂತರದ್ದು ಇತಿಹಾಸ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ