ಬಿಜೆಪಿಯ ಪ್ರಾಪಗಂಡ ಚಿತ್ರ ಎಂದೇ ಟೀಕಿಸಲ್ಪಟ್ಟ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
Mar 23, 2024 09:14 AM IST
ಬಿಜೆಪಿಯ ಪ್ರಚಾರದ ಚಿತ್ರ ಎಂದು ಬಿಂಬಿತವಾಗಿದ್ದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
- ಅಷ್ಟೇನೂ ಹೈಪ್ ಸೃಷ್ಟಿಸದ ರಣದೀಪ್ ಹೂಡಾ ನಟಿಸಿ, ನಿರ್ದೇಶಿಸಿದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರ, ಸುದೀರ್ಘ ಹೋರಾಟದ ಬಳಿಕ ಚಿತ್ರಮಂದಿರಕ್ಕೆ ಬಂದಿದೆ. ಹಾಗೆ ಬಿಡುಗಡೆಯಾದ ಈ ಸಿನಿಮಾ ಗಳಿಕೆ ವಿಚಾರದಲ್ಲಿ ಎರಡಂಕಿಯನ್ನೂ ದಾಟಿಲ್ಲ.
Swatantrya Veer Savarkar day 1 collection: ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಚಿತ್ರಮಂದಿರಕ್ಕೆ ಬಂದಿದೆ ಬಾಲಿವುಡ್‌ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ. ಅಂದರೆ ಮಾರ್ಚ್ 22ರಂದು ಈ ಚಿತ್ರ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಣದೀಪ್ ಹೂಡಾ ರಾಜಕಾರಣಿ ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ನೋಡುಗರನ್ನು ಸೆಳೆದಿದ್ದಾರೆ. ಬರೀ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಅವರಿಗಿದು ಮೊದಲ ಸಿನಿಮಾ. ಹೀಗೆ ಸಿನಿಮಾ ರಿಲೀಸ್ ಆಗುತ್ತಿದ್ದಂತೆ, ಇದೂ ಸಹ ಪ್ರಾಪಗಂಡ (ಪ್ರಚಾರಾಂದೋಲನ) ಚಿತ್ರ ಎಂದೇ ಬಿಂಬಿತವಾಗುತ್ತಿದೆ.
‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಟ್ರೇಲರ್ ರಿಲೀಸ್ ಬಳಿಕ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗನಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಈ ನಡುವೆ ಇದೇ ಚಿತ್ರವನ್ನು ಪ್ರಾಪಗಂಡ ಸಿನಿಮಾ ಎಂದೂ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಇನ್ನು ಇದೇ ಸಾವರ್ಕರ್ ಕುರಿತ ಹಲವು ಸಿನಿಮಾಗಳು ನಿರ್ಮಾಣವಾದರೂ, ವಿವಾದಗಳ ಹಿನ್ನೆಲೆಯಲ್ಲಿ ಆ ಚಿತ್ರಗಳಿನ್ನೂ ಬಿಡುಗಡೆಯೇ ಆಗಿಲ್ಲ. ಇನ್ನು ಕೆಲವು ಸುದೀರ್ಘ ಜಟಾಪಟಿಯ ಬಳಿಕ ಚಿತ್ರಮಂದಿರಕ್ಕೆ ಬಂದವು. ಆ ಪೈಕಿ ಹಲವು ಏರಿಳಿತಗಳನ್ನು ಎದುರಿಸಿ ಮಾ. 22ರಂದು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರ ಬಿಡುಗಡೆಯಾಗಿದೆ.
ಗಳಿಕೆಯಲ್ಲಿ ಹಿಂದೆ ಉಳಿದ ಸಿನಿಮಾ
ಅಷ್ಟೇನೂ ಹೈಪ್ ಸೃಷ್ಟಿಸದ ಈ ಚಿತ್ರ, ಸುದೀರ್ಘ ಹೋರಾಟದ ಬಳಿಕ ಚಿತ್ರಮಂದಿರಕ್ಕೆ ಬಂದಿದೆ. ಹಾಗೆ ಬಿಡುಗಡೆಯಾದ ಈ ಸಿನಿಮಾ ಗಳಿಕೆ ವಿಚಾರದಲ್ಲಿ ಎರಡಂಕಿಯನ್ನೂ ದಾಟಿಲ್ಲ. Sacnilk.com ವರದಿಯ ಪ್ರಕಾರ ಮೊದಲ ದಿನ ಕೇವಲ 1 ಕೋಟಿ 15 ಲಕ್ಷ ಗಳಿಕೆ ಕಂಡಿದೆ. ಚಿತ್ರಕ್ಕೆ ನೋಡುಗರಿಂದ ಮೆಚ್ಚುಗೆ ಮತ್ತು ಪಾಸಿಟಿವ್ ವಿಮರ್ಶೆ ಸಿಕ್ಕರೂ, ಕಲೆಕ್ಷನ್ ವಿಚಾರದಲ್ಲಿ ಹಿಂದುಳಿದಿದೆ. ಈ ಹಿಂದೆ ಪ್ರೊಪಗೆಂಡಾ ಸಿನಿಮಾ ಎಂದೇ ಬಿಂಬಿತವಾಗಿ ಸದ್ದು ಮಾಡಿದ್ದ ದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಆದರೆ, ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಮಾತ್ರ ಆ ಸಾಲಿಗೆ ಸೇರಲಿಲ್ಲ.
ಈ ಚಿತ್ರದ ವಿರುದ್ಧ ಕೇಳಿ ಬಂದ ವಿವಾದಗಳು
‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಟ್ರೇಲರ್ ವೀಕ್ಷಿಸಿದ ಬಳಿಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರಕುಮಾರ್ ಬೋಸ್, ಸಿನಿಮಾದಲ್ಲಿನ ದೃಶ್ಯವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಿರ್ಮಾಪಕರು ಸುಭಾಷ್ ಚಂದ್ರ ಬೋಸ್ ಅವರ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದಿದ್ದರು. ಚಂದ್ರಕುಮಾರ್ ಬೋಸ್ ಸೋಷಿಯಲ್ ಮೀಡಿಯಾದಲ್ಲಿ, 'ರಣದೀಪ್ ಹೂಡಾ, 'ಸಾವರ್ಕರ್' ಕುರಿತು ಸಿನಿಮಾ ಮಾಡಿದ್ದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಆದರೆ ದಯವಿಟ್ಟು ಸಾವರ್ಕರ್ ಜೊತೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರನ್ನು ಬೆರೆಸಬೇಡಿ. ನೇತಾಜಿ ಜಾತ್ಯತೀತ ನಾಯಕ ಮತ್ತು ದೇಶಭಕ್ತರಾಗಿದ್ದರು" ಎಂದಿದ್ದರು.
ಅಂಬೇಡ್ಕರ್‌ಗೂ ಅಪಮಾನದ ಬಣ್ಣ..
ಇದೇ ಚಿತ್ರದಲ್ಲಿ ಭೀಮರಾವ್ ಅಂಬೇಡ್ಕರ್ ಪಾತ್ರ ಮಾಡಿದ ನಟನ ಮೈಬಣ್ಣದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಭುಗಿಲೆದ್ದಿತ್ತು. ಚಿತ್ರದಲ್ಲಿ ಭೀಮರಾವ್ ಅಂಬೇಡ್ಕರ್ ಪಾತ್ರದ ಆಯ್ಕೆ ಚೆನ್ನಾಗಿಲ್ಲ ಎಂದು ಜನ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಅಂಬೇಡ್ಕರ್‌ಗೆ ಜಾತಿಯ ಬಣ್ಣವನ್ನು ನೀಡುತ್ತಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದ್ದವು.
ಇದು ಬಿಜೆಪಿಯ ಪ್ರಚಾರದ ಚಿತ್ರ
ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಚಿತ್ರದ ಬಗ್ಗೆ ಕಾಂಗ್ರೆಸ್ ಕೂಡ ಪ್ರಶ್ನೆಗಳನ್ನು ಎತ್ತುತ್ತಿದೆ. ಹೀಗಿರುವಾಗ ಚಿತ್ರದಲ್ಲಿ ‘ಕಾಂಗ್ರೆಸ್‌ನ ಯಾವೊಬ್ಬ ಸದಸ್ಯನಿಗೂ ಕಪ್ಪು ನೀರು ಹಾಕಿ ಶಿಕ್ಷೆ ಕೊಡಿಸಲಿಲ್ಲವೇಕೆ?’ ಎಂಬಂತಹ ಡೈಲಾಗ್‌ಗಳಿಂದ ಸಿನಿಮಾ ಕಾಂಗ್ರೆಸ್ ವಿರೋಧಿ ಎನ್ನಲಾಗುತ್ತಿದೆ. ‘ಮಹಾತ್ಮ ಗಾಂಧಿ ಕೆಟ್ಟವರಲ್ಲ, ಆದರೆ ಅವರು ತಮ್ಮ ಅಹಿಂಸಾತ್ಮಕ ಚಿಂತನೆಗೆ ಅಂಟಿಕೊಂಡಿರದಿದ್ದರೆ 35 ವರ್ಷಗಳ ಹಿಂದೆಯೇ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು’ ಎಂಬ ಡೈಲಾಗ್‌ಗಳೂ ಈ ಸಿನಿಮಾದಲ್ಲಿವೆ.
ಇದೆಲ್ಲವನ್ನು ನೋಡಿ ಈ ಚಿತ್ರದಲ್ಲಿ ಮಹಾತ್ಮ ಗಾಂಧಿ ವಿರೋಧಿ ಭಾವನೆಗಳನ್ನು ಸೇರಿಸಲಾಗಿದೆ ಎಂದೂ ಕಾಂಗ್ರೆಸ್ ಆರೋಪಿಸಿದೆ. ಇದು ಪ್ರಚಾರದ ಸಿನಿಮಾ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ರಣದೀಪ್, ನನ್ನ ಮನೆಯನ್ನು ಮಾರಿ ಈ ಸಿನಿಮಾ ಮಾಡಿದ್ದೇನೆ. ಯಾರಿಂದಲೂ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.