ಅಕ್ಷಯ್ ಕುಮಾರ್‌ಗೆ ಶನಿಕಾಟ ಇನ್ನೂ ತಪ್ಪಿಲ್ವಾ? ಸೋಲಿನ ಬತ್ತಳಿಕೆ ಸೇರಿತು ಸರ್ಫಿರಾ ಚಿತ್ರ! ವೃತ್ತಿ ಜೀವನದ ಹೀನಾಯ ಸ್ಥಿತಿಗೆ ಕಿಲಾಡಿ
Jul 14, 2024 10:33 AM IST
ಅಕ್ಷಯ್ ಕುಮಾರ್‌ಗೆ ಶನಿಕಾಟ ಇನ್ನೂ ತಪ್ಪಿಲ್ವಾ? ಸೋಲಿನ ಬತ್ತಳಿಕೆ ಸೇರಿತು ಸರ್ಫಿರಾ ಚಿತ್ರ! ವೃತ್ತಿ ಜೀವನದ ಹೀನಾಯ ಸ್ಥಿತಿಗೆ ಕಿಲಾಡಿ
- ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಸರ್ಫಿರಾ ಸಿನಿಮಾ ಮೊದಲ ದಿನ ಕೇವಲ 2.5 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಕಳೆದ 15 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ ಇದು ಅತ್ಯಂತ ಕಡಿಮೆ ಓಪನಿಂಗ್ ಪಡೆದ ಸಿನಿಮಾ ಎಂಬ ಹಣೆಪಟ್ಟಿ ಪಡೆದಿದೆ.
Sarfira Box Office Collection Day 2: ಅಕ್ಷಯ್ ಕುಮಾರ್ ಸಿನಿಮಾ ಅಂದರೆ ಅಲ್ಲಿ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ ಅನ್ನೋ ಮಾತೊಂದಿತ್ತು. ಕೆಲ ವರ್ಷಗಳ ಹಿಂದೆ ಅವರು ನಟಿಸಿದ ಪ್ರತಿ ಸಿನಿಮಾ ಏನಿಲ್ಲ ಅಂದರೂ ನೂರು ಕೋಟಿಯ ಗಡಿ ಮುಟ್ಟಿರುತ್ತಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಅಕ್ಷಯ್ ಟೈಮ್ ಚೆನ್ನಾಗಿಲ್ಲ. ಬಹುನಿರೀಕ್ಷೆ ಮೂಡಿಸಿದ ಸಿನಿಮಾಗಳಿಗೆ ಮೆಚ್ಚುಗೆ ಸಿಕ್ಕರೂ, ಗಳಿಕೆ ವಿಚಾರದಲ್ಲಿ ಮಕಾಡೆ ಮಲಗುತ್ತಿವೆ. ಇತ್ತೀಚಿನ ಕೆಲ ವರ್ಷಗಳ ಅವರ ಸಿನಿಮಾ ಪಟ್ಟಿ ತೆರೆದು ನೋಡಿದರೆ ಅಲ್ಲಿ ಸೋತ ಸಿನಿಮಾ ಸಂಖ್ಯೆಗಳೇ ಅಧಿಕ. ಇದೀಗ ಸರ್ಫಿರಾ ಚಿತ್ರಕ್ಕೂ ಅದೇ ಗತಿ ಬಂದೊದಗಿದೆ.
ವೃತ್ತಿ ಜೀವನದ ಹೀನಾಯ ಸ್ಥಿತಿಗೆ ಕಿಲಾಡಿ
ಅಕ್ಷಯ್ ಕುಮಾರ್ ಅಭಿನಯದ ಸರ್ಫಿರಾ ಚಿತ್ರ ಜುಲೈ 12ರಂದು ಬಿಡುಗಡೆಯಾಗಿದೆ. ಹೆಚ್ಚು ಹೈಪ್ ಇರದ ಈ ಸಿನಿಮಾ ಮೊದಲ ದಿನ 20 ಕೋಟಿ ಗಳಿಕೆ ಕಾಣಬಹುದು ಎಂದೇ ಟ್ರೇಡ್ ಪಂಡಿತರು ಅಂದಾಜಿಸಿದ್ದರು. ಆದರೆ, ಅವರೆಲ್ಲರ ಲೆಕ್ಕ ತಲೆಕೆಳಗಾಗಿದೆ. ಅಂದರೆ, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಸರ್ಫಿರಾ ಸಿನಿಮಾ ಮೊದಲ ದಿನ ಕೇವಲ 2.5 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಕಳೆದ 15 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ ಇದು ಅತ್ಯಂತ ಕಡಿಮೆ ಓಪನಿಂಗ್ ಪಡೆದ ಸಿನಿಮಾ ಎಂಬ ಹಣೆಪಟ್ಟಿ ಪಡೆದಿದೆ.
ಸರ್ಫಿರಾ ಎರಡನೇ ದಿನ ಕಲೆಕ್ಷನ್ ಎಷ್ಟು?
ಸ್ಯಾಕ್ನಿಲ್ಕ್ ಪ್ರಕಾರ, ಸರ್ಫಿರಾ ಚಿತ್ರದ ಎರಡನೇ ದಿನದ ಗಳಿಕೆ ಏರಿಕೆ ಕಂಡರೂ, ಎರಡಂಕಿ ಮಾತ್ರ ದಾಟಿಲ್ಲ. ಮೊದಲ ದಿನ ಎರಡೂವರೆ ಕೋಟಿ ಗಳಿಸಿದ ಈ ಸಿನಿಮಾ ಎರಡನೇ ದಿನ 4.25 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ, ಚಿತ್ರದ ಗಳಿಕೆ ಶೇ.70ರಷ್ಟು ಹೆಚ್ಚಿದೆ. ಅಧಿಕೃತವಾಗಿ ಸರ್ಫಿರಾ ಚಿತ್ರದ ಎರಡನೇ ದಿನದ ಗಳಿಕೆಯ ಅಂಕಿಅಂಶಗಳು ಇನ್ನೂ ಹೊರಬಿದ್ದಿಲ್ಲ. ಆದರೆ ಎರಡನೇ ದಿನ ಚಿತ್ರ 4.25 ಕೋಟಿ ಗಳಿಸಿದರೆ ಚಿತ್ರದ ಒಟ್ಟು ಕಲೆಕ್ಷನ್ 6.75 ಕೋಟಿ ಆಗಲಿದೆ. ಅಚ್ಚರಿಯ ವಿಚಾರ ಏನೆಂದರೆ, ಈ ಸಿನಿಮಾದ ಬಜೆಟ್ 100 ಕೋಟಿ!
ಇಂಡಿಯನ್ 2 ಪೈಪೋಟಿ
ಅಕ್ಷಯ್ ಅವರ ಸರ್ಫಿರಾ ಜೊತೆಗೆ ಕಮಲ್ ಹಾಸನ್ ಅವರ ಇಂಡಿಯನ್ 2 ಸಹ ಬಿಡುಗಡೆಯಾಗಿದೆ. 150 ಕೋಟಿ ಬಜೆಟ್‌ನಲ್ಲಿ ಇಂಡಿಯನ್ 2 ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರ ಮೊದಲ ದಿನ 25.6 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನ ಚಿತ್ರ 16.7 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಅಕ್ಷಯ್ ಕುಮಾರ್ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗೆ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದ ಕೆಲವರು ಅಕ್ಷಯ್ ಕುಮಾರ್ ನಸೀಬೇ ಸರಿಯಿಲ್ಲ, ಶನಿದೆಸೆ ನಡೆಯುತ್ತಿದೆ ಎಂದೂ ಕೆಲವರು ಆಡಿಕೊಳ್ಳುತ್ತಿದ್ದಾರೆ.
ಅಕ್ಷಯ್ ಅವರ ಈ ಹಿಂದಿನ ಕೆಲವು ಸಿನಿಮಾಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಟೈಗರ್ ಶ್ರಾಫ್ ಜತೆ ಸೇರಿ ಬಡೇ ಮಿಯಾನ್ ಛೋಟೆ ಮಿಯಾನ್ ಸಿನಿಮಾ ಮಾಡಿದ್ದರು. ಅದೂ ಸಹ ಸೋತು ಸುಣ್ಣವಾಯ್ತು. ಈ ಮೊದಲಿನ ಅಕ್ಷಯ್ ಕುಮಾರ್ ಅವರ ಮಿಷನ್ ರಾಣಿಗಂಜ್, ರಕ್ಷಾಬಂಧನ್, ಸಾಮ್ರಾಟ್ ಪೃಥ್ವಿರಾಜ್, ಬಚ್ಚನ್ ಪಾಂಡೆ ಮತ್ತು ಸೆಲ್ಫಿ ಕೂಡ ಫ್ಲಾಪ್ ಪಟ್ಟಿ ಸೇರಿತ್ತು. ರಾಮ್‌ಸೇತು ಎವರೇಜ್ ಹಿಟ್ ಆಗಿತ್ತು. ಓಎಂಜಿ 2 ಸಿನಿಮಾ ಸರಾಸರಿ ಹಿಟ್ ಆದರೂ, ಇದು ಅಕ್ಷಯ್ ಅವರೊಬ್ಬರ ಸಿನಿಮಾ ಎಂದು ಹೇಳುವುದು ಕಷ್ಟ. ಪಂಕಜ್ ತ್ರಿಪಾಠಿ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.