logo
ಕನ್ನಡ ಸುದ್ದಿ  /  ಮನರಂಜನೆ  /  ಸೋನಾಕ್ಷಿ ಸಿನ್ಹಾರ ಹೊಸ ಮನೆಯೊಳಗೆ ಚಲಿಸುವ ಗೋಡೆಗಳು; ನಗರ-ಸಾಗರ ಕಾಣಿಸೋ 4 ಸಾವಿರ ಚದರಡಿಯ ಮನೆಯ ಸೌಂದರ್ಯ ದರ್ಶನ

ಸೋನಾಕ್ಷಿ ಸಿನ್ಹಾರ ಹೊಸ ಮನೆಯೊಳಗೆ ಚಲಿಸುವ ಗೋಡೆಗಳು; ನಗರ-ಸಾಗರ ಕಾಣಿಸೋ 4 ಸಾವಿರ ಚದರಡಿಯ ಮನೆಯ ಸೌಂದರ್ಯ ದರ್ಶನ

Praveen Chandra B HT Kannada

Sep 22, 2023 04:10 PM IST

google News

ಸೋನಾಕ್ಷಿ ಸಿನ್ಹಾರ ಹೊಸ ಮನೆ (ಚಿತ್ರ: ಆರ್ಕಿಟೆಕ್ಚರಲ್‌ ಡೈಜೆಸ್ಟ್‌)

  • ಬಾಲಿವುಡ್‌ ಬಹುತೇಕ ನಟನಟಿಯರ ಮುಂಬೈ ಮನೆ, ಅಪಾರ್ಟ್‌ಮೆಂಟ್‌ಗಳು ಒಂದಕ್ಕಿಂತ ಒಂದು ಭಿನ್ನ. ಇದೀಗ ಸೋನಾಕ್ಷಿ ಸಿನ್ಹಾ ಅವರು ತನ್ನ ನಾಲ್ಕು ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಅನ್ನು ಒಂದೂವರೆ ಬಿಎಚ್‌ಕೆಯಾಗಿ ಪರಿವರ್ತಿಸಿದ್ದು, ಆ ಮನೆಯ ವಿಡಿಯೋ ಟೂರ್‌ ಇಲ್ಲಿದೆ.

ಸೋನಾಕ್ಷಿ ಸಿನ್ಹಾರ ಹೊಸ ಮನೆ (ಚಿತ್ರ: ಆರ್ಕಿಟೆಕ್ಚರಲ್‌ ಡೈಜೆಸ್ಟ್‌)
ಸೋನಾಕ್ಷಿ ಸಿನ್ಹಾರ ಹೊಸ ಮನೆ (ಚಿತ್ರ: ಆರ್ಕಿಟೆಕ್ಚರಲ್‌ ಡೈಜೆಸ್ಟ್‌)

ಬಾಲಿವುಡ್‌ ಸೆಲೆಬ್ರಿಟಿಗಳ ಬಹುತೇಕರ ಮನೆ ಮುಂಬೈನಲ್ಲಿದೆ. ಅಲ್ಲಿ ಸಮುದ್ರವೂ ಕಾಣಬೇಕು, ನಗರವೂ ಕಾಣಬೇಕು ಎಂಬ ಬಯಕೆಗೆ ತಕ್ಕಂತೆ ಬಹುಮಹಡಿ ಕಟ್ಟಡಗಳಲ್ಲಿ ಸುಂದರ ಅಪಾರ್ಟ್‌ಮೆಂಟ್‌ ಖರೀದಿಸುವುದು ಸಾಮಾನ್ಯ. ಇದೀಗ ಸೋನಾಕ್ಷಿ ಸಿನ್ಹಾರು ತಮ್ಮ ಹೊಸ ಮನೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮುಂಬೈನ 4 ಸಾವಿರ ಚದರಡಿಯ ಈ ಮನೆಯೊಳಗೆ ಸಾಕಷ್ಟು ಮಾರ್ಪಾಡು ಮಾಡಲಾಗಿದೆ. ಇದು 4 ಬಿಎಚ್‌ಕೆ ಮನೆಯೂ ಹೌದು, ಒಂದೂವರೆ ಬಿಎಚ್‌ಕೆ ಮನೆಯೂ ಹೌದು. ಈ ಮನೆಯಲ್ಲಿ ಗೋಡೆಗಳು ಚಲಿಸುತ್ತವೆ. ಅಂದರೆ, ಸ್ಲೈಡ್‌ ಮಾಡುವ ಗೋಡೆಗಳಿವೆ. ಸಾಕಷ್ಟು ನೈಸರ್ಗಿಕ ಬೆಳಕು ಮನೆಯೊಳಗೆ ಬರುತ್ತವೆ. ಮನೆಯೊಳಗೆ ವಿಶಾಲ ಸ್ಥಳಾವಕಾಶ ಇದೆ. ನಗರ ಮತ್ತು ಸಮುದ್ರ ಎರಡರ ಸುಂದರ ನೋಟವು ಮನೆಯೊಳಗಿನಿಂದ ದೊರಕುತ್ತದೆ.

ಈ ನಾಲ್ಕು ಬಿಎಚ್‌ಕೆ ಮನೆಯನ್ನು ರೆಡ್‌ ಆರ್ಕಿಟೆಕ್ಟ್‌ನ ರಾಜೀವ್‌ ಮತ್ತು ಏಕ್ತಾ ಪಾರೇಕ್‌ ಅವರು ಹೊಸದಾಗಿ ಪರಿವರ್ತಿಸಿದ್ದಾರೆ. "ಸರಳ ಮತ್ತು ನೈಸರ್ಗಿಕ ಸೌಂದರ್ಯದ ವಿನ್ಯಾಸ ಬೇಕು" ಎಂಬ ಸೋನಾಕ್ಷಿ ಸಿನ್ಹಾ ಅವರ ಬೇಡಿಕೆಗೆ ತಕ್ಕಂತೆ ಇವರು ಈ ನೂತನ ಮನೆಯ ವಿನ್ಯಾಸ ಮಾಡಿದ್ದಾರೆ. "ನನಗೆ ಈ ಮನೆಯಲ್ಲಿಯೇ ಸಾಕಷ್ಟು ಹೊತ್ತು ಇರಬೇಕು ಎಂದೆನಿಸುತ್ತದೆ. ಈ ಮನೆಯೊಳಗೆ ಇದ್ದರೆ ಎಲ್ಲಿಗೂ ಹೋಗಬೇಕು ಎಂದು ಅನಿಸೋದಿಲ್ಲ. ನನಗೆ ಇದೇ ಸಮಸ್ಯೆ" ಎಂದು ಸೋನಾಕ್ಷಿ ಸಿನ್ಹಾ ಅವರು ಹೇಳಿದ್ದಾರೆ. ತನ್ನ ಮನೆಯ ವಿಡಿಯೋವನ್ನೂ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮನೆಯ ಸೌಂದರ್ಯ, ಫೀಚರ್‌ಗಳನ್ನೊಮ್ಮೆ ನೋಡಲು ಈ ಕೆಳಗಿನ ವಿಡಿಯೋ ಪ್ಲೇ ಮಾಡಿ.

ಹೇಗಿದೆ ಸೋನಾಕ್ಷಿ ಸಿನ್ಹಾ ಹೊಸ ಮನೆ?

ಸೋನಾಕ್ಷಿ ಸಿನ್ಹಾ ಅವರ ನೂತನ ಮನೆಯೊಳಗೆ ಸಾಕಷ್ಟು ಸ್ಥಳಾವಕಾಶವಿದೆ. ದುಬಾರಿ ದರ್ಜೆಯ ವಸ್ತುಗಳನ್ನು ಇಂಟೀರಿಯರ್‌ ಡಿಸೈನ್‌ಗೆ ಬಳಸಲಾಗಿದೆ. ನೈಸರ್ಗಿಕ ಮರ, ಅತ್ಯುತ್ತಮ ಲೈಟಿಂಗ್‌, ಆಟ್‌ ಮಿರರ್‌ ಫಿಕ್ಸರ್‌ಗಳಿಂದ ಮನೆಯೊಳಗಿನ ಅಂದ ಹೆಚ್ಚಾಗಿದೆ. ಇದು ಸರಳ ಮನೆಯೂ ಹೌದು, ವಿಲಾಸಿ ಮನೆಯೂ ಹೌದು. ಮನೆಯೊಳಗೆ ಸಾಕಷ್ಟು ಸ್ಟೋರೇಜ್‌ ಫೀಚರ್‌ಗಳು ಇವೆ. ಸ್ಲೈಡ್‌ ಮಾಡಬಹುದಾದ ಗೋಡೆಗಳು, ಮಡುಚಬಹುದಾದ ಬೆಡ್‌ಗಳು, ಸ್ವಯಂಚಾಲಿತ ಸ್ಕ್ರೀನ್‌ಗಳು ಇತ್ಯಾದಿ ಹಲವು ಅತ್ಯಾಧುನಿಕ ಫೀಚರ್‌ಗಳು ಈ ಮನೆಯೊಳಗೆ ಇವೆ.

ಮೊದಲು ಈ ಮನೆ ನಾಲ್ಕು ಬೆಡ್‌ರೂಂನ ಅಪಾರ್ಟ್‌ಮೆಂಟ್‌ ಆಗಿತ್ತು. ಅದನ್ನು ಕಲಾತ್ಮಕವಾಗಿ ಒಂದೂವರೆ ಬೆಡ್‌ರೂಂನ ಮನೆಯಾಗಿ ಮರು ರೂಪಿಸಲಾಗಿದೆ. ಇದರಲ್ಲಿ ಯೋಗ ಮಾಡಲು ಸ್ಥಳಾವಕಾಶ, ಡ್ರೆಸ್ಸಿಂಗ್‌ ಸ್ಥಳಾವಕಾಶ, ವಾಕ್‌ ಇನ್‌ ವಾರ್ಡ್‌ರೋಬ್‌, ಸಮುದ್ರ ಕಾಣಿಸುವ ಸ್ಥಳ ಇತ್ಯಾದಿಗಳಿಂದ ಇದು ಆರ್ಟ್‌ ಸ್ಟುಡಿಯೋದಂತೆ ಕಾಣಿಸುತ್ತದೆ. ಮುಖ್ಯ ಲಿವಿಂಗ್‌ ಕೊಠಡಿಯಿಂದ ಸ್ಲೈಡಿಂಗ್‌ ಮರದ ಪ್ಯಾನೆಲ್‌ ಮೂಲಕ ಆರ್ಟ್‌ ಸ್ಟುಡಿಯೋವನ್ನು ಪ್ರತ್ಯೇಕವಾಗಿಸಲಾಗಿದೆ.

ಆಕರ್ಷಕ ಇಂಟೀರಿಯರ್‌ ವಿನ್ಯಾಸ

ನಟಿಯ ಈ ಮನೆಯ ಲಿವಿಂಗ್‌ ಕೊಠಡಿಯು ವಿಶಾಲವಾಗಿದೆ. ಗೇ, ಟ್ಯಾನ್‌, ಬಿಯೆಜ್‌ ಬಣ್ಣದ ಫರ್ನಿಚರ್‌ಗಳು, ಮರದ ಡೈನಿಂಗ್‌ ಟೋಬಲ್‌, ಮರದ ಕಾಫಿ ಟೇಬಲ್‌ ಇತ್ಯಾದಿಗಳಿಂದ ಲಿವಿಂಗ್‌ ಕೊಠಡಿಯು ಕಚ್ಚಾ ಮನೆಯಂತೆ ಕಾಣಿಸುತ್ತದೆ. ಮನೆಯ ಎರಡು ಕಡೆಗಳಲ್ಲಿ ಟೇರಸ್‌ ನೋಟಕ್ಕೆ ಅವಕಾಶ ನೀಡಲಾಗಿದೆ. ಲಿವಿಂಗ್‌ ಕೊಠಡಿಯ ಟೇರಸ್‌ನಲ್ಲಿ ಮಾತುಕತೆ ನಡೆಸಲು ಸ್ಥಳಾವಕಾಶ ಮಾಡಲಾಗಿದೆ. ಈ ಹಿಂದೆ ಈ 4 ಬಿಎಚ್‌ಕೆ ಮನೆಯಲ್ಲಿ ನಾಲ್ಕು ಬೆಡ್‌ರೂಂ ಮತ್ತು ಟೇರಸ್‌ನಲ್ಲಿ ಖಾಸಗಿ ಈಜುಕೊಳ ಇತ್ತು. ಆದರೆ, ಇದನ್ನು ಬದಲಾಯಿಸಿ ಸಂವಹನ ನಡೆಸುವ ಪಿಟ್‌ ಆಗಿ ಬದಲಾಯಿಸಲಾಗಿದೆ.

ಈ ಮನೆಯಲ್ಲಿ 15 ಅಡಿಯ ಬೃಹತ್‌ ಚಲಿಸುವ ಗೋಡೆ ಇದೆ. ಬೆಡ್‌ರೂಂ ಮತ್ತು ಡ್ರೆಸ್ಸಿಂಗ್‌ ರೂಂ ವಿಭಾಗಿಸುವ ಈ ಗೋಡೆಯನ್ನು ಸ್ಲೈಡ್‌ ಮಾಡಬಹುದು. ಬೆಡ್‌ರೂಂನೊಳಗೆ ವಾಕ್‌ ಇನ್‌ವಾರ್ಡ್‌ ರೋಬ್‌ ಇದೆ. ಒಟ್ಟಾರೆ, ವಾಹ್‌ ಎನಿಸುವ ಕಲಾತ್ಮಕತೆಯನ್ನು ಸೋನಾಕ್ಷಿ ಸಿನ್ಹಾರ ಮನೆ ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ