ಕಸದ ತೊಟ್ಟಿಯಲ್ಲಿ ದೊರೆತ ಮಗುವನ್ನು ಹೆತ್ತ ಮಗಳಂತೆ ಸಾಕಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ; ನಿನ್ನಂತ ಅಪ್ಪ ಇಲ್ಲ ಅಂತಿದ್ದಾರೆ ಅಭಿಮಾನಿಗಳು
Oct 01, 2024 12:08 PM IST
ಕಸದ ತೊಟ್ಟಿಯಲ್ಲಿ ದೊರೆತ ಮಗುವನ್ನು ಹೆತ್ತ ಮಗಳಂತೆ ಸಾಕಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ; ನಿನ್ನಂತ ಅಪ್ಪ ಇಲ್ಲ ಅಂತಿದ್ದಾರೆ ಅಭಿಮಾನಿಗಳು
3 ಗಂಡು ಮಕ್ಕಳ ತಂದೆ ಮಿಥುನ್ ಚಕ್ರವರ್ತಿ, ಒಂದು ಹೆಣ್ಣು ಮಗುವನ್ನು ಬಯಸಿದ್ದರು. ಅದೇ ಸಮಯಕ್ಕೆ ಕಸದ ತೊಟ್ಟಿಯಲ್ಲಿ ಯಾರೋ ಹೆಣ್ಣು ಮಗುವೊಂದನ್ನು ಬಿಸಾಡಿ ಹೋದ ಸುದ್ದಿ ಪೇಪರ್‌ನಲ್ಲಿ ಪ್ರಕಟವಾಗಿತ್ತು. ಸ್ವಲ್ಪವೂ ತಡ ಮಾಡದ ಮಿಥುನ್ ಚಕ್ರವರ್ತಿ ಕಾನೂನು ಪ್ರಕಾರ ಆ ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಮಗಳಿಗೆ ದಿಶಾನಿ ಚಕ್ರವರ್ತಿ ಎಂದು ಹೆಸರಿಟ್ಟಿದ್ದಾರೆ.
ಭಾರತೀಯ ಚಿತ್ರರಂಗದ ದಿಗ್ಗಜ ನಟ, ಬಾಲಿವುಡ್‌ನಲ್ಲಿ ದಾದಾ ಎಂದು ಗುರುತಿಸಿಕೊಂಡಿರುವ ಮಿಥುನ್ ಚಕ್ರವರ್ತಿಗೆ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿದೆ. ಕೇಂದ್ರ, ಮಾಹಿತಿ ಮತ್ತು ಪ್ರಸಾರ ಇಲಾಖೆ ಎಕ್ಸ್ ಖಾತೆ ಮೂಲಕ ಸಚಿವೆ ಅಶ್ವಿನಿ ವೈಷ್ಣವ್ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 8ರಂದು ಮಿಥುನ್ ಚಕ್ರವರ್ತಿಗೆ ಪ್ರಶಸ್ತಿ ಪ್ರದಾನ
ಮಿಥುನ್ ಚಕ್ರವರ್ತಿಗೆ ಈ ಪ್ರಶಸ್ತಿ ದೊರೆತ ವಿಚಾರ ತಿಳಿದ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಮಿಥುನ್ ಚಕ್ರವರ್ತಿ ನೀಡಿದೆ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. 70ನೇ ರಾಷ್ಟ್ರೀಯ ಫಿಲ್ಮ್ ಅವಾರ್ಡ್ ಕಾರ್ಯಕ್ರಮ ಅಕ್ಟೋಬರ್ 8 ರಂದು ನಡೆಯಲಿದ್ದು ಈ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಮಿಥುನ್‌ಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದ್ದು ಮೂರು ಬಾರಿ ರಾಷ್ಟ್ರಪ್ರಶಸ್ತಿ ದೊರೆತಿದೆ. ಅಭಿಮಾನಿಗಳು , ಸ್ನೇಹಿತರು, ಬಾಲಿವುಡ್ ಗಣ್ಯರು ಮಿಥುನ್ ದಾದಾಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮಿಥುನ್ ಚಕ್ರವರ್ತಿ ಅತ್ಯುತ್ತಮ ನಟ ಅನ್ನೋದು ಬಹಳ ಜನರಿಗೆ ಗೊತ್ತು. ಆದರೆ ಆತ ತಮ್ಮ ವ್ಯಕ್ತಿತ್ವದಿಂದಲೂ ಹೆಸರುವಾಸಿಯಾಗಿದ್ದಾರೆ. ಈ ಮಹಾನ್ ಕಲಾವಿದನಿಗೆ ದಾದಾ ಸಾಹೇಬ್ ಪ್ರಶಸ್ತಿ ಬಂದಿರುವ ಈ ಸಮಯದಲ್ಲಿ ಒಂದು ವಿಚಾರವನ್ನು ನೆನೆದುಕೊಳ್ಳಲೇಬೇಕು. ಮಿಥುನ್‌ಗೆ ಮೂವರು ಗಂಡು ಮಕ್ಕಳು ಒಬ್ಬಳು ಮಗಳಿದ್ದಾಳೆ. ಆದರೆ ಮಗಳು ಮಿಥುನ್ ಚಕ್ರವರ್ತಿ ಹಾಗೂ ಪತ್ನಿ ಯೋಗಿತಾಗೆ ಜನಿಸಿದ್ದಲ್ಲ. ಕಸದ ತೊಟ್ಟಿ ಬಳಿ ದೊರೆತ ಮಗು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಚಾರ.
ಕಸದ ತೊಟ್ಟಿಯಲ್ಲಿ ದೊರೆತ ಮಗುವನ್ನು ದತ್ತು ಪಡೆದ ಮಿಥುನ್ ಚಕ್ರವರ್ತಿ
ಕಸದ ತೊಟ್ಟಿಯಲ್ಲಿ ಹೆಣ್ಣು ಮಗುವೊಂದು ದೊರೆತಿರುವ ಸುದ್ದಿಯನ್ನು ಕೆಲವು ವರ್ಷಗಳ ಹಿಂದೆ ಬಾಂಗ್ಲಾ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ವಿಷಯ ತಿಳಿದ ಮಿಥುನ್ ಚಕ್ರವರ್ತಿ ಪತ್ನಿ ಯೋಗಿತಾ ಬಾಲಿಯೊಂದಿಗೆ ಮಾತನಾಡಿ ಕಾನೂನು ಮೂಲಕ ದತ್ತು ಪಡೆದು ಮನೆಗೆ ಕರೆದೊಯ್ದು ದಿಶಾನಿ ಚಕ್ರವರ್ತಿ ಎಂದು ನಾಮಕರಣ ಮಾಡಿದರು. ನನಗೆ ಹೆಣ್ಣು ಮಕ್ಕಳೆಂದರೆ ಬಹಳ ಇಷ್ಟ. ಸಾಲು ಸಾಲಾಗಿ ಮೂವರೂ ಗಂಡು ಮಕ್ಕಳಾದರು. ನಮಗೆ ಒಂದು ಹೆಣ್ಣು ಮಗು ಜನಿಸಿದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಅದೇ ಸಮಯಕ್ಕೆ ಈ ಮಗು ನಮಗೆ ದೊರೆಯಿತು. ಇದು ದೇವರು ಕೊಟ್ಟ ಮಗು ಎಂದು ಮಿಥುನ್ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ ಗಂಡುಮಕ್ಕಳಲ್ಲಿ ಇಬ್ಬರು ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಮಗಳು ದಿಶಾನಿ ಕೂಡಾ ಚಿತ್ರರಂಗಕ್ಕೆ ಬರಬಹುದು ಎನ್ನಲಾಗುತ್ತಿದೆ.
1976ರಲ್ಲಿ ತೆರೆ ಕಂಡ ಮೃಗಯಾ ಚಿತ್ರದ ಮೂಲಕ ಮಿಥುನ್ ಚಕ್ರವರ್ತಿ ಬಾಲಿವುಡ್‌ಗೆ ಬಂದರು. ಮೂಲತ: ಬೆಂಗಳಿಯವರಾದ ಮಿಥುನ್, ಅನೇಕ ಬಂಗಾಳಿ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಅಪರೂಪಕ್ಕೆ ಸಿನಿಮಾಗಳಲ್ಲಿ ನಟಿಸುತ್ತಿರುವ ಮಿಥುನ್ ಚಕ್ರವರ್ತಿ ಕಿರುತೆರೆ ಕಾರ್ಯಕ್ರಮಗಳಲ್ಲೂ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದಾರೆ.