ಬಾಲಾಜಿ ಟೆಲಿ ಫಿಲ್ಮ್ಸ್ ನಿರ್ಮಾಪಕಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು; ಏಕ್ತಾ ಕಪೂರ್ ಮಾಡಿದ ಅಪರಾಧವೇನು?
Oct 22, 2024 09:22 AM IST
ಬಾಲಾಜಿ ಟೆಲಿ ಫಿಲ್ಮ್ಸ್ ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ತಾಯಿ ಶೋಭಾ ಕಪೂರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಕನ್ನಡದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಿಸಿರುವ ಬಾಲಿವುಡ್ ನಿರ್ಮಾಪಕಿ, ಬಾಲಾಜಿ ಟೆಲಿ ಫಿಲ್ಮ್ಸ್ ಓನರ್ ಏಕ್ತಾ ಕಪೂರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವೆಬ್ ಸರಣಿಯೊಂದರಲ್ಲಿ ಅಪ್ತಾಪ್ತ ಬಾಲಕಿಯರ ಬಗ್ಗೆ ಅಸಭ್ಯ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಏಕ್ತಾ ಕಪೂರ್ ವಿರುದ್ಧ ಕೇಸ್ ದಾಖಲಾಗಿದೆ.
ಖ್ಯಾತ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದಿ ವೆಬ್ ಸರಣಿಯೊಂದಕ್ಕೆ ಸಂಬಂಧಿಸಿದಂತೆ ಏಕ್ತಾ ಕಪೂರ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. 2 ವರ್ಷಗಳ ಹಿಂದೆ ಕೂಡಾ ಏಕ್ತಾ ಕಪೂರ್ ಹಾಗೂ ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಕೇಸ್ ದಾಖಲಾಗಿತ್ತು. ಆಗ ಏಕ್ತಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು. ಈಗ ಮತ್ತೆ ಅದೇ ಸಮಸ್ಯೆಗೆ ಸಿಲುಕಿದ್ದಾರೆ.
ಗಂಧೀ ಬಾತ್ ಸೀಸನ್ 6ರಲ್ಲಿ ಆಕ್ಷೇಪಾರ್ಹ ದೃಶ್ಯಗಳು
ಓಟಿಟಿ ಫ್ಲಾಟ್‌ಫಾಮ್ ಆಲ್ಟ್ ಬಾಲಾಜಿಯಲ್ಲಿ ಪ್ರಸಾರವಾಗುತ್ತಿರುವ ಗಂಧೀ ಬಾತ್ ಸೀಸನ್-6ಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಅಪ್ತಾಪ್ತ ಬಾಲಕಿಯರಿಗೆ ಸಂಬಂಧಿಸಿದ ಕೆಲವೊಂದು ಅಸಭ್ಯ ದೃಶ್ಯಗಳನ್ನು ತೋರಿಸಲಾಗಿದೆ ಎಂಬ ಆರೋಪದ ಮೇಲೆ ಏಕ್ತಾ ಕಪೂರ್ ವಿರುದ್ಧ ಪೋಕ್ಸೋ ಆಕ್ಟ್ ಅಡಿಯಲ್ಲಿ ಆಕೆಯ ಜೊತೆಗೆ ತಾಯಿ ಶೋಭಾ ಕಪೂರ್ ಹೆಸರನ್ನು ಸೇರಿಸಲಾಗಿದೆ. ಒಟಿಟಿ ಫ್ಲಾಟ್‌ಫಾಮ್ ಆಲ್ಟ್ ಬಾಲಾಜಿಯಲ್ಲಿ ಗಂಧೀ ಬಾತ್ ಸೀಸನ್- 6 ಸ್ಟ್ರೀಮಿಂಗ್ ಆಗುತ್ತಿದೆ. ಈ ಸರಣಿಯನ್ನು ಫೆಬ್ರವರಿಯಿಂದ ಏಪ್ರಿಲ್ 2021 ಮಧ್ಯದಲ್ಲಿ ಪ್ರಸಾರ ಮಾಡಲಾಗಿತ್ತು. ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ , ಬಾಲಾಜಿ ಟೆಲಿ ಫೀಲ್ಮ್ಸ್‌ನ ಮಾಲೀಕರಾಗಿರುವ ಕಾರಣ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತರಿಗೆ ಸಂಬಂಧಿಸಿದಂತೆ ವೆಬ್ ಸರಣಿಯಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗುತ್ತಿದೆ ಎಂದು ಮುಂಬೈ ಪೊಲೀಸರಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಪೊಲೀಸರು ಕೇಸ್ ನಮೂದಿಸಿದ ನಂತರ ಈ ವೆಬ್ ಸರಣಿಯಿಂದ ದೃಶ್ಯಗಳನ್ನು ತೆಗೆದುಹಾಕಲಾಗಿತ್ತು.
ಇದನ್ನೂ ಓದಿ: ಪಾರು ಧಾರಾವಾಹಿ ಖ್ಯಾತಿಯ ಮಾನ್ಸಿ ನಿಶ್ಚಿತಾರ್ಥ
ಬಾಲಾಜಿ ಟೆಲಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಏಕ್ತಾ ಕಪೂರ್ ಅನೇಕ ಧಾರಾವಾಹಿ, ಸಿನಿಮಾ, ವೆಬ್ ಸೀರಿಸ್‌ಗಳನ್ನು ನಿರ್ಮಿಸಿದ್ದಾರೆ. ಕುಂಕುಮ ಭಾಗ್ಯ, ಕವಲುದಾರಿ, ಕಾದಂಬರಿ, ಕಲ್ಯಾಣಿ, ಕಾದಿರುವ ನಿನಗಾಗಿ, ಕನ್ಯಾದಾನ ಸೇರಿದಂತೆ ಕನ್ನಡದಲ್ಲಿ ಕೂಡಾ ಅನೇಕ ಧಾರಾವಾಹಿಗೆ ಏಕ್ತಾ ಕಪೂರ್ ಬಂಡವಾಳ ಹೂಡಿದ್ದಾರೆ. ಕೆಲವೊಂದು ಸಿನಿಮಾಗಳಿಗೆ ಆಕೆ ಬಣ್ಣ ಹಚ್ಚಿದ್ದಾರೆ. ಇದೇ ವರ್ಷ ಏಪ್ರಿಲ್‌ನಲ್ಲಿ ತೆರೆ ಕಂಡಿದ್ದ ಲವ್, ಸೆಕ್ಸ್ ಔರ್ ಧೋಖಾ- 2 ಚಿತ್ರವನ್ನು ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದರು. ದಿವಾಕರ್ ಬ್ಯಾನರ್ಜಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು.
2 ವರ್ಷಗಳ ಹಿಂದೆಯೂ ಸಮಸ್ಯೆಗೆ ಸಿಲುಕಿದ್ದ ನಿರ್ಮಾಪಕಿ
2022ರಲ್ಲಿ ಕೂಡಾ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ವಿರುದ್ಧ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದರು. ಬಿಹಾರ 'ಎಕ್ಸ್‌ಎಕ್ಸ್‌ಎಕ್ಸ್' ಸೀಸನ್-2 ವೆಬ್ ಸರಣಿಯಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬದ ಸದಸ್ಯರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಏಕ್ತಾ ಕಪೂರ್ ಹಾಗೂ ತಾಯಿ ಶೋಭಾ ಕಪೂರ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿತ್ತು.
ಮಾಜಿ ಸೈನಿಕ ಮತ್ತು ಬಿಹಾರದ ಬೇಗುಸರಾಯ್ ನಿವಾಸಿ ಶಂಭು ಕುಮಾರ್ ಎನ್ನುವವರ ಏಕ್ತಾ ಕಪೂರ್ ಹಾಗೂ ಆಕೆ ತಾಯಿ ವಿರುದ್ಧ ದೂರು ಸಲ್ಲಿಸಿದ್ದರು. 'ಎಕ್ಸ್‌ಎಕ್ಸ್‌ಎಕ್ಸ್' ಸೀಸನ್-2 ವೆಬ್ ಸರಣಿಯಲ್ಲಿ ಸೈನಿಕನ ಪತ್ನಿಗೆ ಸಂಬಂಧಿಸಿದ ಅನೇಕ ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ಶಂಭು ಕುಮಾರ್ ದೂರಿನಲ್ಲಿ ಆರೋಪಿಸಿದ್ದರು. ಅರ್ಜಿ ವಿಚಾರಣೆ ಮಾಡಿದ್ದ ಬೇಗುಸರಾಯ್ ನ್ಯಾಯಾಧೀಶರು ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ್ದರು. ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲ್ಮ್ಸ್ OTT ಪ್ಲಾಟ್‌ಫಾರ್ಮ್ ಎಎಲ್‌ಟಿ ಬಾಲಾಜಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡಲಾಗಿತ್ತು.