Chiru sarja: ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ; ಬಿಡುಗಡೆಯ ಹಂತದಲ್ಲಿ ʼರಾಜಮಾರ್ತಾಂಡʼ
Mar 24, 2023 08:33 PM IST
ಚಿರಂಜೀವಿ ಸರ್ಜಾ
Chiranjeevi Sarja: ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ʼರಾಜಮಾರ್ತಾಂಡʼವನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ ಚಿತ್ರತಂಡ ತಿಳಿಸಿದೆ. ಸದ್ಯ ಚಿತ್ರದ ಡಿಟಿಎಸ್ ಫಿಕ್ಸಿಂಗ್ ಮುಗಿದಿದೆ.
ತಮ್ಮ ನಟನಾ ಕೌಶಲದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ, ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಬಾಳುವ ಮೊದಲೇ ಬಾಡಿ ಹೋದವರು. 2009ರಲ್ಲಿ ʼವಾಯುಪುತ್ರʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಈ ನಟ 2020ರವರೆಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುವ ಕನಸು ಕಂಡಿದ್ದ ಇವರ ಬಾಳು ಅರ್ಧಕ್ಕೆ ಅಂತ್ಯವಾಗಿತ್ತು, ಇವರು ನಟಿಸಬೇಕಿದ್ದ ಸಿನಿಮಾಗಳೂ ಕೂಡ.
2020ರಲ್ಲಿ ಹೃದಯಾಘಾತದಿಂದ ಚಿರು ಮರಣ ಹೊಂದಿದ್ದರು. ಇವರು ಸಾಯುವ ಮೊದಲು ʼರಾಜಮಾರ್ತಾಂಡʼ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರೀಕರಣ ಕೂಡ ಮುಕ್ತಾಯವಾಗಿತ್ತು. ಇನ್ನೇನು ಡಬ್ಬಿಂಗ್ ಕೆಲಸ ಆರಂಭವಾಗಬೇಕಿತ್ತು, ಅಷ್ಟರಲ್ಲಿ ಯಾರೂ ಊಹಿಸದ ಘಟನೆ ನಡೆದಿತ್ತು. ಅಲ್ಲದೆ ಯಾರಿಗೂ ಸುಳಿವು ನೀಡದೆ ಚಿರು ಸಾವಿನ ಹಾದಿ ತುಳಿದಿದ್ದರು.
ಆದರೆ ಚಿರು ಕುಟುಂಬ ಚಿತ್ರವನ್ನು ಅರ್ಧಕ್ಕೆ ನಿಲ್ಲಲ್ಲು ಬಿಡಲಿಲ್ಲ. ಈ ಚಿತ್ರವನ್ನು ಪೂರ್ಣಗೊಳಿಸಲು ಚಿರು ಮಡದಿ ಮೇಘನಾರಾಜ್, ತಮ್ಮ ಧ್ರುವ ಸರ್ಜಾ ಸೇರಿದಂತೆ ಕುಟುಂಬದವರು ಚಿತ್ರತಂಡದೊಂದಿಗೆ ಬೆನ್ನೆಲುಬಾಗಿ ನಿಂತಿದ್ದರು.
ಚಿರು ಪಾತ್ರಕ್ಕೆ ಅವರ ಮುದ್ದಿನ ತಮ್ಮ ಧ್ರುವ ಸರ್ಜಾ ಅವರೇ ಡಬ್ಬಿಂಗ್ ಮಾಡಿದ್ದರು. ಡಬ್ಬಿಂಗ್ ವೇಳೆ ಅಣ್ಣನ ಬಗ್ಗೆ ನೆನೆದು ಭಾವುಕರಾಗುತ್ತಿದ್ದರು ಧ್ರುವ ಎಂಬ ವಿಷಯವನ್ನೂ ಚಿತ್ರತಂಡ ಹಂಚಿಕೊಂಡಿದೆ. ದುಃಖದ ನಡುವೆಯೂ ಚಿತ್ರದ ಡಬ್ಬಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಧ್ರುವ. ಸದ್ಯ ರಾಜಮಾರ್ತಾಂಡ ಚಿತ್ರಕ್ಕೆ ಡಿಟಿಎಸ್ ಅಳವಡಿಸಲಾಗಿದೆ.
ಈ ಚಿತ್ರವನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ ಚಿತ್ರತಂಡ, ಆದರೆ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಮೇಘನಾ, ಧ್ರುವ, ಸುಂದರ್‌ರಾಜ್ ಸೇರಿದಂತೆ ಕನ್ನಡದ ಹೆಸರಾಂತ ನಟರು ಚಿತ್ರತಂಡದೊಂದಿಗೆ ಇರುವುದಾಗಿ ಹೇಳಿಕೊಂಡಿದೆ ಚಿತ್ರತಂಡ.
ಅಣ್ಣನ ಪಾತ್ರ ತಮ್ಮ, ತಮ್ಮನ ಪಾತ್ರಕ್ಕೆ ಅಣ್ಣ ಧ್ವನಿ ನೀಡಿರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗಗಳು ನಡೆದಿವೆ. ಶಂಕರ್‌ನಾಗ್ ಪಾತ್ರಕ್ಕೆ ಅವರ ಅಣ್ಣ ಅನಂತನಾಗ್, ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದರು. ಈಗ ಚಿರಂಜೀವಿ ಅವರ ರಾಜಮಾರ್ತಾಂಡ ಚಿತ್ರದ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.
ʼಈ ಸಹೋದರರ ಪ್ರೀತಿಯ ಬಗ್ಗೆ ಎಷ್ಟು ಹೇಳಿದರು ಕಡಿಮೆʼ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಶಿವಕುಮಾರ್ ಹಾಗೂ ನಿರ್ದೇಶಕ ಕೆ. ರಾಮನಾರಾಯಣ್.
ʼರಾಜಮಾರ್ತಾಂಡʼ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಧರ್ಮವಿಶ್ ಹಿನ್ನೆಲೆ ಸಂಗೀತವಿದೆ, ಕೆ. ಗಣೇಶ್ ಛಾಯಾಗ್ರಹಣ ಮಾಡಿದ್ದಾರೆ. ವೆಂಕಟೇಶ್ ಯು.ಡಿ.ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಚಿರು ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಈ ಸಿನಿಮಾ ಸುದ್ದಿಯನ್ನೂ ಓದಿ
Naresh -Pavitra Lokesh: ತಮ್ಮದೇ ಕಥೆಯನ್ನು ತೆರೆಮೇಲೆ ತರ್ತಿದ್ದಾರಾ ನರೇಶ್, ಪವಿತ್ರಾ ಲೋಕೇಶ್!? ‘ಮತ್ತೆ ಮದುವೆ’ ಫಸ್ಟ್ ಲುಕ್ ರಿಲೀಸ್
ವಿವಾದ, ಆರೋಪ -ಪ್ರತ್ಯಾರೋಪ, ಕಿತ್ತಾಟ.. ಹೀಗೆ ಹಲವು ವಿಚಾರವಾಗಿ ಸುದ್ದಿಯಾದವರು ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್. ಹಲವು ಏರಿಳಿತಗಳ ಬಳಿಕ ಈ ಜೋಡಿ ಅದ್ದೂರಿಯಾಗಿ ಮದುವೆಯಾಗಿ, ಹನಿಮೂನ್‌ಗೂ ಹೋಗಿ ಬಂದಿತ್ತು. ಅಷ್ಟೇ ಅಲ್ಲ ಸಿನಿಮಾ ಇಂಡಸ್ಟ್ರಿ ಸಹ ಈ ಜೋಡಿಗೆ ಶುಭ ಹಾರೈಸಿತ್ತು. ಆದರೆ, ಇದೆಲ್ಲ ಕೇವಲ ಸಿನಿಮಾ ಸಲುವಾಗಿ ಎಂಬುದು ಕೆಲ ದಿನಗಳ ಹಿಂದಷ್ಟೇ ಬಟಾಬಯಲಾಗಿತ್ತು. ಇದೀಗ ಆ ವಿಚಾರವೇ ಸಿನಿಮಾ ರೂಪದಲ್ಲಿ ಅಧಿಕೃತವಾಗಿ ಘೋಷಣೆ ಆಗಿದೆ. ತೆಲುಗಿನ ಜತೆಗೆ ಕನ್ನಡದಲ್ಲಿ ‘ಮತ್ತೆ ಮದುವೆ’ ಎಂಬ ಶೀರ್ಷಿಕೆಯಲ್ಲಿ ರಿಲೀಸ್ ಆಗಲಿದೆ.