Swami Nithyananda: ಕೈಲಾಸ ದೇಶಕ್ಕೆ ಪ್ರೀತಿಯ ಶಿಷ್ಯೆ ರಂಜಿತಾ ಅಲಿಯಾಸ್ ನಿತ್ಯಾನಂದಮಯಿಯನ್ನು ಪ್ರಧಾನಿಯನ್ನಾಗಿ ಘೋಷಿಸಿದ ನಿತ್ಯಾನಂದ
Jul 07, 2023 11:46 AM IST
ಶಿಷ್ಯೆ ರಂಜಿತಾಳನ್ನು ಕೈಲಾಶ ದೇಶದ ಪ್ರಧಾನಿಯನ್ನಾಗಿ ಘೋಷಿಸಿದ ನಿತ್ಯಾನಂದ
ನಿತ್ಯಾನಂದ ಆರಂಭಿಸಿರುವ ವೆಬ್‌ಸೈಟ್‌ನಲ್ಲಿ ರಂಜಿತಾ ಹೆಸರನ್ನು ನಿತ್ಯಾನಂದಮಯಿ ಎಂದು ಬದಲಿಸಿರುವುದನ್ನು ಗಮನಿಸಬಹುದು. ಈ ವೆಬ್‌ಸೈಟ್‌ನಲ್ಲಿ ಕೈಲಾಸ ದೇಶ ಸ್ಥಾಪನೆ ಆದ ಉದ್ದೇಶ , ಗುರಿಯ ಬಗ್ಗೆ ತಿಳಿಸಲಾಗಿದೆ. ಜೊತೆಗೆ ಕೈಲಾಶ ದೇಶದ ಲಾಂಛನ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಅರ್ಥವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ.
ಅತ್ಯಾಚಾರ ಆರೋಪ ಹೊತ್ತು ರಾತ್ರೋ ರಾತ್ರಿ ಭಾರತ ಬಿಟ್ಟು ಓಡಿ ಹೋದ ವಿವಾದಾತ್ಮಕ, ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ವಿದೇಶದಲ್ಲಿ ತನ್ನದೇ ಪ್ರತ್ಯೇಕ ಕೈಲಾಸ ದೇಶವೊಂದನ್ನು ಸ್ಥಾಪಿಸಿರುವ ವಿಚಾರ ತಿಳಿದೇ ಇದೆ. ಇದೀಗ ಆ ಕೈಲಾಸ ದೇಶಕ್ಕೆ ತನ್ನ ಪ್ರಿಯ ಶಿಷ್ಯೆ ಮಾಜಿ ನಟಿ ರಂಜಿತಳನ್ನು ಪ್ರಧಾನಿಯನ್ನಾಗಿ ಮಾಡಿರುವ ಸುದ್ದಿ ವರದಿಯಾಗಿದೆ.
2010 ರಲ್ಲಿ ಸುದ್ದಿಯಾಗಿದ್ದ ರಂಜಿತಾ ನಿತ್ಯಾನಂದ ಖಾಸಗಿ ವಿಡಿಯೋ
ಈಕ್ವೆಡಾರ್ ದ್ವೀಪದಲ್ಲಿ ನಿತ್ಯಾನಂದ ಸೃಷ್ಟಿಸಿಕೊಂಡಿರುವ ಸಾಮ್ರಾಜ್ಯಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಅದಕ್ಕಾಗಿ ಪ್ರತ್ಯೇಕ, ಕರೆನ್ಸಿ, ಆಡಳಿತ ಮಂಡಳಿಯನ್ನು ಸ್ಥಾಪಿಸಿದ್ದು ತನ್ನ ಶಿಷ್ಯರೊಂದಿಗೆ ವಾಸಿಸುತ್ತಿದ್ದಾರೆ. ಅಲ್ಲಿಂದ ತಮ್ಮ ಪ್ರವಚನದ ಫೋಟೋ, ವಿಡಿಯೋಗಳನ್ನು ಕೂಡಾ ಪ್ರತ್ಯೇಕ ವೆಬ್‌ಸೈಟ್ ಮೂಲಕ ಪ್ರಸಾರ ಮಾಡಲಾಗುತ್ತಿದೆ. 2010 ರಲ್ಲಿ ನಿತ್ಯಾನಂದ ಸ್ವಾಮಿ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದ ರಂಜಿತಾ ಕೂಡಾ ಈ ನಿತ್ಯಾನಂದನ ಜೊತೆ ಇದ್ದಾರೆ ಎನ್ನಲಾಗಿದೆ. ನಿತ್ಯಾನಂದ ಹಾಗೂ ರಂಜಿತಾ ಮದುವೆ ಆಗಿದ್ಧಾರೆ ಎಂಬ ಸುದ್ದಿ ಕೂಡಾ ಕೇಳಿಬಂದಿತ್ತು. ಆದರೆ ಇದೀಗ ನಿತ್ಯಾನಂದ, ತನ್ನ ಪ್ರಿಯ ಶಿಷ್ಯೆ ರಂಜಿತಾಳನ್ನು ತನ್ನ ಕೈಲಾಶ ದೇಶಕ್ಕೆ ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದಾರೆ ಎಂದು ತಮಿಳು ಪತ್ರಿಕೆಗಳು ವರದಿ ಮಾಡಿವೆ.
ನನಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳನ್ನು ಮದುವೆ ಮಾಡಿದ್ದೆ, ಆದರೆ ನಿತ್ಯಾನಂದ ಇಬ್ಬರ ತಲೆ ಕೆಡಿಸಿ ಮೊದಲ ಮಗಳನ್ನು ಪತಿಯಿಂದ ದೂರ ಮಾಡಿದ್ದಲ್ಲದೆ, ಕಿರಿಯ ಮಗಳ ರಂಜಿತಾಳನ್ನು ಕೂಡಾ ಜೊತೆಗೆ ಕರೆದೊಯ್ದಿದ್ಧಾರೆ ಎಂದು ಇತ್ತೀಚೆಗೆ ರಂಜಿತಾ ತಂದೆ ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದರು.
ರಂಜಿತಾ ಹೆಸರನ್ನು ನಿತ್ಯಾನಂದಮಯಿ ಎಂದು ಬದಲಿಸಿರುವ ನಿತ್ಯಾನಂದ
ನಿತ್ಯಾನಂದ ಆರಂಭಿಸಿರುವ ವೆಬ್‌ಸೈಟ್‌ನಲ್ಲಿ ರಂಜಿತಾ ಹೆಸರನ್ನು ನಿತ್ಯಾನಂದಮಯಿ ಎಂದು ಬದಲಿಸಿರುವುದನ್ನು ಗಮನಿಸಬಹುದು. ಈ ವೆಬ್‌ಸೈಟ್‌ನಲ್ಲಿ ಕೈಲಾಸ ದೇಶ ಸ್ಥಾಪನೆ ಆದ ಉದ್ದೇಶ , ಗುರಿಯ ಬಗ್ಗೆ ತಿಳಿಸಲಾಗಿದೆ. ಜೊತೆಗೆ ಕೈಲಾಶ ದೇಶದ ಲಾಂಛನ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಅರ್ಥವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ. ಕೈಲಾಸದಲ್ಲಿ ವಿದ್ಯಾಭ್ಯಾಸ, ಆರೋಗ್ಯ, ವಸತಿ, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳನ್ನು ಕೂಡಾ ಸ್ಥಾಪಿಸಲಾಗಿದೆ. ಒಟ್ಟಿನಲ್ಲಿ ನಿತ್ಯಾನಂದ ತನ್ನ ಚಟುವಟಿಕೆಗಳ ಮೂಲಕ ಪ್ರತಿನಿತ್ಯ ಸುದ್ದಿಯಾಗುತ್ತಿರುವುದಂತೂ ನಿಜ.
ಇನ್ನಷ್ಟು ಮನರಂಜನೆ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ