Sandalwood Celebrates Birthday: ದೀಪಿಕಾ ದಾಸ್, ಅಕುಲ್ ಬಾಲಾಜಿಗೆ ಹುಟ್ಟುಹಬ್ಬದ ಸಂಭ್ರಮ... ಅಭಿಮಾನಿಗಳಿಂದ ಶುಭ ಹಾರೈಕೆ
Feb 23, 2023 12:10 PM IST
ಹುಟ್ಟುಹಬ್ಬದ ಸಂಭ್ರಮದಲ್ಲಿ ದೀಪಿಕಾ ದಾಸ್, ಅಕುಲ್ ಬಾಲಾಜಿ
- ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡಾ ಗುರುತಿಸಿಕೊಂಡಿರುವ ದೀಪಿಕಾ ದಾಸ್, ಕೆಲವೊಂದು ಫ್ಯಾಷನ್ ಶೋಗಳಲ್ಲಿ ರಾಂಪ್ ವಾಕ್ ಮಾಡಿದ್ದಾರೆ. ಸದ್ಯಕ್ಕೆ ದೀಪಿಕಾ ದಾಸ್ ದಿ ದಾಸ್ ಫ್ಯಾಷನ್ಸ್ ಹೆಸರಿನಲ್ಲಿ ತಮ್ಮದೇ ಫ್ಯಾಷನ್ ಬ್ರಾಂಡ್ ಒಂದನ್ನು ಆರಂಭಿಸಿದ್ದಾರೆ.
ಕನ್ನಡ ಕಿರುತೆರೆ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ದೀಪಿಕಾ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗೇ ಈ ದಿನ ನಟ, ನಿರೂಪಕ ಅಕುಲ್ ಬಾಲಾಜಿ ಹುಟ್ಟಿದ ದಿನ ಕೂಡಾ ಹೌದು. ಅಕುಲ್ ಇಂದು 44ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೆಚ್ಚಿನ ನಟ, ನಟಿಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡುತ್ತಿದ್ದಾರೆ.
ದೀಪಿಕಾ ದಾಸ್
ದೀಪಿಕಾ ದಾಸ್ ಹುಟ್ಟಿದ್ದು 23 ಫೆಬ್ರವರಿ 1993. ಇವರು, ರಾಕಿಂಗ್ ಸ್ಟಾರ್ ಯಶ್ ಸೋದರ ಸಂಬಂಧಿ. ತಂದೆ ಹೆಸರು ಕಿಶೋರ್ ದಾಸ್, ತಾಯಿ ಪದ್ಮಲತಾ. ದೀಪಿಕಾ 2014 ರಲ್ಲಿ ತೆರೆಕಂಡ 'ದೂಧ್ ಸಾಗರ್' ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರವನ್ನು ಸ್ಯಾಮುವೆಲ್ ಟೋನಿ ನಿರ್ದೇಶಿಸಿದ್ದರು. ಈ ಚಿತ್ರದ ನಂತರ ತೆಲುಗಿನ 'ಈ ಮನಸೇ' 'ಡ್ರೀಮ್ ಗರ್ಲ್' ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಮುಂದೆ ಕಿರುತೆರೆಗೆ ಬಂದ ಇವರು ಜೀ ಕನ್ನಡದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ'ಯಲ್ಲಿ ಇಚ್ಛಾಧಾರಿ ನಾಗಿಣಿ ಅಮೃತಾ ಆಗಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾದರು. ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತೆ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಟಾಪ್ 4ವರೆಗೂ ಬಂದು ನಂತರ ಎಲಿಮಿನೇಟ್ ಆದರು. ಇತ್ತೀಚೆಗೆ ಮುಕ್ತಾಯವಾದ ಬಿಗ್ ಬಾಸ್ ಸೀಸನ್ 9 ನವೀನರ ಜೊತೆ ಪ್ರವೀಣರು ಕಾನ್ಸೆಪ್ಟ್‌ನಲ್ಲಿ ಕೂಡಾ ದೀಪಿಕಾ ದಾಸ್ ಭಾಗವಹಿಸಿದ್ದರು.
ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡಾ ಗುರುತಿಸಿಕೊಂಡಿರುವ ದೀಪಿಕಾ ದಾಸ್, ಕೆಲವೊಂದು ಫ್ಯಾಷನ್ ಶೋಗಳಲ್ಲಿ ರಾಂಪ್ ವಾಕ್ ಮಾಡಿದ್ದಾರೆ. ಸದ್ಯಕ್ಕೆ ದೀಪಿಕಾ ದಾಸ್ ದಿ ದಾಸ್ ಫ್ಯಾಷನ್ಸ್ ಹೆಸರಿನಲ್ಲಿ ತಮ್ಮದೇ ಫ್ಯಾಷನ್ ಬ್ರಾಂಡ್ ಒಂದನ್ನು ಆರಂಭಿಸಿದ್ದಾರೆ. ಜೊತೆಗೆ ತಮ್ಮ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಕೂಡಾ ಆರಂಭಿಸಿದ್ದಾರೆ. ಅದರಲ್ಲಿ ಫ್ಯಾಷನ್, ಬ್ಯೂಟಿ, ಕುಕಿಂಗ್, ಟ್ರಾವೆಲ್ ಸೇರಿ ಅನೇಕ್ ಕಂಟೆಂಟ್ ನೀಡುತ್ತಿದ್ದಾರೆ.
ಅಕುಲ್ ಬಾಲಾಜಿ
ಮೂಲತ: ಆಂಧ್ರಪ್ರದೇಶಕ್ಕೆ ಸೇರಿದ ಅಕುಲ್ ಬಾಲಾಜಿ, 23 ಫೆಬ್ರವರಿ 1979ರಲ್ಲಿ ಜನಿಸಿದರು. ಅಕುಲ್, 16 ವರ್ಷದವರಿರುವಾಗ ಅವರ ಕುಟುಂಬ ಬೆಂಗಳೂರಿನಲ್ಲಿ ಬಂದು ನೆಲೆಸಿತು. ಕಿರುತೆರೆ ನಟನಾಗಿ ವೃತ್ತಿ ಬದುಕು ಆರಂಭಿಸಿದ ಅಕುಲ್ ಬಾಲಾಜಿ ನಂತರ ಸಿನಿಮಾಗಳಲ್ಲಿ ನಟಿಸಿದರು. ಕಲ್ಲರಳಿ ಹೂವಾಗಿ, ಮಿಲನ, ಆತ್ಮೀಯ, ಪರಮೇಶ ಪಾನ್‌ವಾಲ, ಮೈನಾ, ಪ್ಯಾರ್‌ಗೆ ಆಗ್ಬುಟೈತೆ, ಲೂಸ್‌ಗಳು, ಕ್ರೇಜಿಸ್ಟಾರ್, ತೆಲುಗಿನ ನೇರಮು ಶಿಕ್ಷ, ಬನ್ನಿ ಸಿನಿಮಾಗಳಲ್ಲಿ ಅಕುಲ್ ನಟಿಸಿದ್ದಾರೆ. ನಟನೆಗಿಂತ ಅಕುಲ್‌ಗೆ ಹೆಸರು ತಂದುಕೊಟ್ಟದ್ದು ನಿರೂಪಣೆ.
ಕುಣೀಯೋಣು ಬಾರಾ, ಕಾಮಿಡಿ ಕಿಲಾಡಿಗಳು, ಪ್ಯಾಟೆ ಹುಡ್ಗೀರ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೆಗೆ ಬಂದ, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಮನೆ ಮುಂದೆ ಮಹಾಲಕ್ಷ್ಮಿ, ಇಂಡಿಯನ್, ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್ ಸೇರಿ ಅಕುಲ್ ಬಾಲಾಜಿ ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ತೆಲುಗಿನಲ್ಲಿ ಕೂಡಾ ಅವರು ನಿರೂಪಣೆ ಮಾಡಿದ್ದಾರೆ. ಸದ್ಯಕ್ಕೆ ಅಕುಲ್ ಬಾಲಾಜಿ 'ಊಹಲು ಗುಸಗುಸಲಾಡೆ' ತೆಲುಗು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೀ ತೆಲುಗಿನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ತಮ್ಮ ಹೆಸರಿನಲ್ಲಿ ಅಕುಲ್, ಯೂಟ್ಯೂಬ್ ಚಾನೆಲ್ ಕೂಡಾ ಆರಂಭಿಸಿದ್ದಾರೆ. 2008ರಲ್ಲಿ ಅಕುಲ್ ಬಾಲಾಜಿ, ಜ್ಯೋತಿ ಎಂಬುವರನ್ನು ಮದುವೆಯಾದರು. ಈ ದಂಪತಿಗೆ ಒಬ್ಬ ಪುತ್ರ ಇದ್ದಾರೆ.