logo
ಕನ್ನಡ ಸುದ್ದಿ  /  ಮನರಂಜನೆ  /  Dollu Song: ಸಾಗರ್‌ ಪುರಾಣಿಕ್‌ ನಿರ್ದೇಶಕ ಮಾತ್ರ ಅಲ್ಲ, ಗಾಯಕ ಕೂಡಾ...'ಡೊಳ್ಳು' ಮೊದಲ ಹಾಡು ಬಿಡುಗಡೆ

Dollu Song: ಸಾಗರ್‌ ಪುರಾಣಿಕ್‌ ನಿರ್ದೇಶಕ ಮಾತ್ರ ಅಲ್ಲ, ಗಾಯಕ ಕೂಡಾ...'ಡೊಳ್ಳು' ಮೊದಲ ಹಾಡು ಬಿಡುಗಡೆ

HT Kannada Desk HT Kannada

Aug 16, 2022 07:37 PM IST

google News

'ಡೊಳ್ಳು' ಮೊದಲ ಹಾಡು ಬಿಡುಗಡೆ

  • ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಾಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಸಾಹಿತ್ಯ ಬರೆದಿದ್ದಾರೆ. ಅನಂತ್ ಕಾಮತ್‌ ಈ ಹಾಡಿಗೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಈ ಹಾಡನ್ನು ಹಾಡುವ ಮೂಲಕ ಗಾಯಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

'ಡೊಳ್ಳು' ಮೊದಲ ಹಾಡು ಬಿಡುಗಡೆ
'ಡೊಳ್ಳು' ಮೊದಲ ಹಾಡು ಬಿಡುಗಡೆ

ಇತ್ತೀಚೆಗೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ 'ಡೊಳ್ಳು' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರವನ್ನು ಸ್ಯಾಂಡಲ್‌ವುಡ್‌ ಖ್ಯಾತ ನಟ ಡಾಲಿ ಧನಂಜಯ್‌ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು ಮೆಚ್ಚುಗೆ ಪಡೆದಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಚಿತ್ರಪ್ರೇಮಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

'ಮಾಯಾನಗರಿ ಛಾಯಾ' ಎಂಬ ಹಾಡನ್ನು ಬಿಡುಗಡೆ ಮಾಡಿರುವ ನಟ ಧನಂಜಯ್‌ ತಾವು ಬೆಂಗಳೂರಿಗೆ ಬಂದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಾಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಸಾಹಿತ್ಯ ಬರೆದಿದ್ದಾರೆ. ಅನಂತ್ ಕಾಮತ್‌ ಈ ಹಾಡಿಗೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಈ ಹಾಡನ್ನು ಹಾಡುವ ಮೂಲಕ ಗಾಯಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ಜನಪದ ಕಲೆಯಾದ ಡೊಳ್ಳಿನ ಸುತ್ತ ಸಾಗುವ ಕಥಾಹಂದರ ಹೊಂದಿರುವ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಪವನ್‌ ಒಡೆಯರ್‌ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದು, ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಬು ಹಿರಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾವಿದರು ಕೂಡಾ ಚಿತ್ರದಲ್ಲಿದ್ದಾರೆ. ಶ್ರೀನಿಧಿ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಕಾಮಂತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮರಾ ಕೆಲಸ ಚಿತ್ರಕ್ಕಿದೆ. ಜನಪದ ಕಲೆಯ ಮಹತ್ವ ಎತ್ತಿ ತೋರಿಸುವ ಈ ಚಿತ್ರ ಇದೇ ಆಗಸ್ಟ್‌ 26 ರಂದು ತೆರೆ ಕಾಣುತ್ತಿದೆ.

ಸುನಿಲ್‌ ಪುರಾಣಿಕ್‌ ಪುತ್ರ ಸಾಗರ್‌ ಪುರಾಣಿಕ್‌ ನಿರ್ದೇಶನದ 'ಡೊಳ್ಳು' ಸಿನಿಮಾ

ಡೊಳ್ಳು ಸಿನಿಮಾ ನಿರ್ದೇಶಕ ಸಾಗರ್ ಪುರಾಣಿಕ್ ಮತ್ತಾರೂ ಅಲ್ಲ, ಕನ್ನಡ ಚಿತ್ರರಂಗದ ಹಿರಿಯ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ಪುತ್ರ. ವಿಭಿನ್ನ ಕಥೆ ಹೊಂದಿರುವ ಸಿನಿಮಾಗಳನ್ನು ಜನರಿಗೆ ಮುಟ್ಟಿಸುವುದು ನಿಜಕ್ಕೂ ಕಷ್ಟದ ವಿಚಾರ. ಆದರೆ ಆ ಕೆಲಸವನ್ನು ಸಾಗರ್ ಪುರಾಣಿಕ್ ಮಾಡಿದ್ದಾರೆ. ಕರ್ನಾಟಕದ ಖ್ಯಾತ ಜಾನಪದ ಕಲೆ, ಡೊಳ್ಳು ಕುಣಿತದ ಬಗ್ಗೆ ಸಾಗರ್ ಪುರಾಣಿಕ್ ಸಿನಿಮಾ ಮಾಡಿರುವುದು ನಿಜಕ್ಕೂ ಖುಷಿ ಪಡುವಂತ ವಿಚಾರ. ನಶಿಸುತ್ತಿರುವ ಈ ಜಾನಪದ ಕಲೆ ಬಗ್ಗೆ ಸಿನಿಮಾ ಮಾಡಿ, ರಾಷ್ಟ್ರಪ್ರಶಸ್ತಿಯನ್ನು ಗಳಿಸುವ ಮೂಲಕ ಸಾಗರ್ ಪುರಾಣಿಕ್ ಸಕ್ಸಸ್ ಕಂಡಿದ್ದಾರೆ ಎಂದು ಸಿನಿಪ್ರಿಯರು ಸಾಗರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುನಿಲ್ ಪುರಾಣಿಕ್ ಅವರ ಹಿರಿಯ ಪುತ್ರ ಸಾಗರ್ ಪುರಾಣಿಕ್, ಕಿರುತೆರೆ ಮೂಲಕ ಬಾಲನಟನಾಗಿ ನಟನೆ ಆರಂಭಿಸಿದರು. 5ನೇ ವಯಸ್ಸಿಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯೊಂದಕ್ಕೆ ಬಣ್ಣ ಹಚ್ಚಿದ ಸಾಗರ್​, ನಾಟ್ಯರಾಣಿ ಶಾಂತಲಾ, ರಾಜಕುಮಾರಿ, ಅಂಜು ಮಲ್ಲಿಗೆ, ತಂಗಾಳಿ, ಮದರಂಗಿ, ಮಹಾಸತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2015 ರಲ್ಲಿ ಬಿಡುಗಡೆಯಾದ 'ರಿಂಗ್​​​​​ರೋಡ್ ಸುಮ' ಸಿನಿಮಾ ಮೂಲಕ ಸಾಗರ್ ಪುರಾಣಿಕ್​​​ ಬೆಳ್ಳಿ ತೆರೆಗೂ ಕಾಲಿಟ್ಟರು. ತಂದೆ ಜೊತೆ 'ಕಪ್ಪು ಗುಲಾಬಿ' ಎಂಬ ಚಿತ್ರದಲ್ಲಿ ಕೂಡಾ ಸಾಗರ್ ಪುರಾಣಿಕ್ ನಟಿಸಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ಪಳಗಿದ್ದ ಸಾಗರ್ ಪುರಾಣಿಕ್​​​​ 2018 ರಲ್ಲಿ'ಮಹಾನ್​ ಹುತಾತ್ಮ' ಎಂಬ ಚಂದ್ರಶೇಖರ್ ಆಜಾದ್ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಈ ಕಿರುಚಿತ್ರಕ್ಕೆ ಕೂಡಾ 66ನೇ ಸಾಲಿನ ರಾಷ್ಟ್ರಪ್ರಶಸ್ತಿ ದೊರೆತಿದೆ.

'ರೇಮೊ' ಚಿತ್ರದಲ್ಲಿ ಬ್ಯುಸಿಯಾಗಿರುವ ಪವನ್‌ ಒಡೆಯರ್‌

ಪವನ್‌ ಒಡೆಯರ್‌ ನಿರ್ದೇಶನದ 'ರೇಮೊ' ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾ ತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದು ಶೀಘ್ರದಲ್ಲೇ ತೆರೆ ಕಾಣಲಿದೆ. ಆದರೆ ಇನ್ನೂ ಸಿನಿಮಾ ತಂಡ ಬಿಡುಗಡೆ ದಿನಾಂಕವನ್ನು ಅನೌನ್ಸ್‌ ಮಾಡಿಲ್ಲ. ಇಶಾನ್‌ ನಾಯಕನಾಗಿ ನಟಿಸಿರುವ 'ರೇಮೊ' ಚಿತ್ರದಲ್ಲಿ ಆಶಿಕಾ ರಂಗನಾಥ್‌ ನಾಯಕಿಯಾಗಿ ನಟಿಸಿದ್ದಾರೆ. ಇಶಾನ್‌ ಸೋದರ ಸಂಬಂಧಿ ಸಿ.ಆರ್.‌ ಮನೋಹರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ