Vishnuvardhan Birthday; ಕೋಟಿಗೊಬ್ಬ ಶೂಟಿಂಗ್ ವೇಳೆ ನಡೆದ ಘಟನೆ; ವಿಷ್ಣುವರ್ಧನ್ ಕಾಲಿಗೆ ನಮಸ್ಕರಿಸಿದ್ದ ಹಫ್ತಾ ವಸೂಲಿಗೆ ಬಂದ ರೌಡಿ
Sep 18, 2023 07:40 AM IST
ಡಾ ವಿಷ್ಣುವರ್ಧನ್ 73ನೇ ಹುಟ್ಟುಹಬ್ಬ
ವಿಷ್ಣುವರ್ಧನ್ ಶೂಟಿಂಗ್ ಮುಗಿಸಿ ಹೋಟೆಲ್ ರೂಮ್‌ಗೆ ಹೋದಾಗ ಅವರು ಆಗಲೇ ಸ್ನಾನ ಮಾಡಿ ತಿಂಡಿ ತಿನ್ನಲು ರೆಡಿ ಆಗುತ್ತಿದ್ದರು. ನನ್ನನ್ನು ನೋಡಿ ಏನು ವಿಷಯ ಎಂದು ಕೇಳಿದರು. ಶಾಟ್ ರೆಡಿ ಮಾಡಿದ್ದಾರೆ ಎಂದಾಗ, ಅವರು ತಿಂಡಿಯನ್ನೂ ತಿನ್ನದೆ ಶೂಟಿಂಗ್‌ಗೆ ಬಂದರು.
ಸೆಪ್ಟೆಂಬರ್ 18 ಬಂದರೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಹಬ್ಬ. ಇಂದು ಸಾಹಸಸಿಂಹನ 73ನೇ ಹುಟ್ಟುಹಬ್ಬ. ಕಿಚ್ಚ ಸುದೀಪ್ ಭಾನುವಾರ ವಿಷ್ಣು ಅಭಿಮಾನಿಗಳಿಗಾಗಿ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ವಿಷ್ಣು ಅಭಿಮಾನಿಗಳು ಎಂದಿನಂತೆ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಆರಂಭಿಸಿದ್ದಾರೆ.
ಮುಂಬೈನಲ್ಲಿ ನಡೆದ ಘಟನೆ
ಮೈಸೂರಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂಪತ್‌ಕುಮಾರ್, ಕನ್ನಡ ಚಿತ್ರರಂಗದಲ್ಲಿ ಡಾ. ವಿಷ್ಣುವರ್ಧನ್ ಆಗಿ ಮಿಂಚಿದ್ದರ ಹಿಂದೆ ಸಾಕಷ್ಟು ನೋವು, ಅವಮಾನಗಳಿವೆ. ಆದರೆ ವಿಷ್ಣು, ಅದೆಲ್ಲವನ್ನೂ ದಾಟಿ, ಅಭಿಮಾನಿಗಳ ಜನಮಾನಸದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಬೇರೆಯವರಿಂದ ನೋವು, ಅಪಮಾನ ಎದುರಿಸಿದರೇ ಹೋರತು, ಒಮ್ಮೆಯೂ ಬೇರೆಯವರಿಗೆ ನೋವುಂಟು ಮಾಡದ ಸದ್ಗುಣ ಇರುವಂಥ ವ್ಯಕ್ತಿ ವಿಷ್ಣುವರ್ಧನ್. ಎಷ್ಟೇ ದೊಡ್ಡ ಸ್ಟಾರ್ ನಟ ಆದರೂ ನಿರ್ಮಾಪಕ, ನಿರ್ದೇಶಕ ಅಥವಾ ಚಿತ್ರತಂಡದವರಿಗೆ ಕಿಂಚಿತ್ತೂ ಸಮಸ್ಯೆ ಮಾಡದಂತೆ ಬದುಕಿದವರು ಅವರು. ಇದಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಿರ್ಮಾಪಕ ಸೂರಪ್ಪ ಬಾಬು 'ಕೋಟಿಗೊಬ್ಬ' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಇಂಟರ್‌ವ್ಯೂ ಒಂದರಲ್ಲಿ ನೆನಪಿಸಿಕೊಂಡಿದ್ದರು.
''ಮುಂಬೈನಲ್ಲಿ ಕೋಟಿಗೊಬ್ಬ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ದೃಶ್ಯವೊಂದಕ್ಕಾಗಿ ತಾಜ್ ಹೋಟೆಲ್ ಮುಂಭಾಗ ಮಧ್ಯ ರಾತ್ರಿ 2 ಗಂಟೆಗೆ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಾರೆ. ನಮ್ಮ ಚಿತ್ರದಲ್ಲಿ ನಟಿಸಿದ್ದ ಆಶಿಶ್ ವಿದ್ಯಾರ್ಥಿ ಕೂಡಾ ನಮಗೆ ಈ ವಿಚಾರದ ಬಗ್ಗೆ ತಿಳಿಸಿದ್ದರು. ಇಲ್ಲಿ ಹಫ್ತಾ ವಸೂಲಿ ಮಾಡುತ್ತಾರೆ, ಎಚ್ಚರಿಕೆಯಿಂದ ಇರಿ ಎಂದು ಅವರು ತಿಳಿಸಿದ್ದರು. ನಾವು ಏನಾಗುವುದೋ ಎಂಬ ಗಾಬರಿಯಿಂದಲೇ ಶೂಟಿಂಗ್ ಮಾಡುತ್ತಿದ್ದೆವು. ಅಷ್ಟರಲ್ಲಿ ಆಶಿಶ್ ವಿದ್ಯಾರ್ಥಿ ಹೇಳಿದಂತೆ ಒಂದು ಗುಂಪು ಅಲ್ಲಿಗೆ ಬಂತು. ಅದರಲ್ಲಿ ಒಬ್ಬಾತ ನಮ್ಮ ಮ್ಯಾನೇಜರ್ ಬಳಿ ಮಾತನಾಡಿ ನಂತರ ನನ್ನನ್ನು ಕರೆದರು.''
ವಿಷ್ಣುವರ್ಧನ್ ಅವರ ಕಾಲಿಗೆ ನಮಸ್ಕರಿಸಿದ ರೌಡಿ
''ನಾನು ಆತನ ಬಳಿ ಹೋಗಿ ನಿಂತೆ, ಅವನದ್ದೇ ಧಾಟಿಯಲ್ಲಿ ಯಾವ ಸಿನಿಮಾ? ಹೀರೋ ಯಾರು ಎಂದು ಹಿಂದಿಯಲ್ಲೇ ಕೇಳಿದ. ನಾನು ವಿಷ್ಣುವರ್ಧನ್ ಸರ್ ಹೆಸರು ಹೇಳಿದೆ. ವಿಷ್ಣು ಅವರ ಬಳಿ ಆತ ಹೇಗೆ ವರ್ತಿಸಬಹುದೋ ಎಂಬ ಭಯ ಇತ್ತು. ಆದರೆ ಆತ ಅವರ ಬಳಿ ಹೋಗಿ ಅವರ ಕಾಲಿಗೆ ನಮಸ್ಕರಿಸಿ ವಿಷ್ಣು ಅವರೊಂದಿಗೆ ಫೋಟೋ ತೆಗೆಸಿಕೊಂಡು, ಯಾವ ಹಫ್ತಾ ಕೂಡಾ ಕೇಳದರೆ ಅಲ್ಲಿಂದ ಹೊರಟ. ನಮಗೆ ಬಹಳ ಆಶ್ಚರ್ಯವಾಗಿತ್ತು. ಹೇಳಬೇಕೆಂದರೆ ಅಷ್ಟೊತ್ತಿಗಾಗಲೇ ವಿಷ್ಣು ಅವರಿಗೆ ಮುಂಬೈನಲ್ಲೂ ಚಾರ್ಮ್ ಇತ್ತು. ಇಲ್ಲಿ ಅವರು ಕೆಲವು ಸಿನಿಮಾಗಳನ್ನು ಮಾಡಿದ್ದರು.''
''ಹಾಗೇ ಆ ದಿನ ಶೂಟಿಂಗ್ ಮುಗಿಸಿ ವಿಷ್ಣುವರ್ಧನ್ ಹೋಟೆಲ್ ರೂಮ್‌ಗೆ ಹೋಗಿ ಮಲಗಿದ್ದೇ ಬೆಳಗಿನಜಾವ 5 ಗಂಟೆ ಆಗಿತ್ತು. ಮರುದಿನ ಒಂದು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಶೂಟಿಂಗ್ ಇತ್ತು. ನಿರ್ದೇಶಕ ನಾಗಣ್ಣ ಆಗಲೇ ಹೋಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಯಾರಿಗೂ ವಿಷ್ಣುವರ್ಧನ್ ಅವರನ್ನು ಎಬ್ಬಿಸಲು ಧೈರ್ಯ ಇಲ್ಲ. ಏಕೆಂದರೆ ಅವರು ರೂಮ್‌ಗೆ ಹೋಗಿ ಮಲಗಿದ್ದೇ ಬೆಳಗಿನ ಜಾವ 5 ಗಂಟೆ ಮತ್ತೆ 7ಕ್ಕೆ ಶೂಟಿಂಗ್ ಎಂದರೆ ಹೇಗೆ ಸಾಧ್ಯ? ಆದರೆ ಎಲ್ಲಾ ರೆಡಿ ಇದೆ. ಸರಿ ನೀವು ಬೇರೆಯವರ ಶಾಟ್ ತೆಗೆಯುತ್ತಿರಿ, ನಾನು ವಿಷ್ಣುವರ್ಧನ್ ಅವರನ್ನು ಕರೆ ತರುತ್ತೇನೆ ಎಂದು ಅಲ್ಲಿಂದ ಹೊರಟೆ.''
ತಿಂಡಿಯೂ ತಿನ್ನದೆ, ನಿದ್ರೆಗೆಟ್ಟು ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅಭಿನಯದ ಭಾರ್ಗವ
''ವಿಷ್ಣುವರ್ಧನ್ ಹೋಟೆಲ್ ರೂಮ್‌ಗೆ ಹೋದಾಗ ಅವರು ಆಗಲೇ ಸ್ನಾನ ಮಾಡಿ ತಿಂಡಿ ತಿನ್ನಲು ರೆಡಿ ಆಗುತ್ತಿದ್ದರು. ನನ್ನನ್ನು ನೋಡಿ ಏನು ವಿಷಯ ಎಂದು ಕೇಳಿದರು. ಶಾಟ್ ರೆಡಿ ಮಾಡಿದ್ದಾರೆ ಎಂದಾಗ, ಅವರು ತಿಂಡಿಯನ್ನೂ ತಿನ್ನದೆ ಶೂಟಿಂಗ್‌ಗೆ ಬಂದರು. ಅಷ್ಟು ದಣಿದಿದ್ದರೂ , 1 ಗಂಟೆ ಕಾಲ ಶೂಟಿಂಗ್ ಮುಗಿಸಿ ನಂತರವಷ್ಟೇ ಅವರು ಹೋಟೆಲ್‌ಗೆ ಹೋಗಿ ತಿಂಡಿ ತಿಂದರು'' ಎಂದು ಆ ದಿನ ನಡೆದ ಘಟನೆಯನ್ನು ನಿರ್ಮಾಪಕ ಸೂರಪ್ಪ ಬಾಬು ನೆನಪಿಸಿಕೊಂಡಿದ್ದರು.
ವಿಷ್ಣುವರ್ಧನ್ ಎಂದರೆ ಹಾಗೇ, ಅವರ ನಗುಮೊಗ, ದಿವ್ಯ ತೇಜಸ್ಸು ನೋಡಿದಾಕ್ಷಣ ಯಾರಿಗೇ ಆದರೂ ಒಮ್ಮೆ ಅವರಿಗೆ ನಮಸ್ಕರಿಸಬೇಕು ಎನಿಸದೆ ಇರದು. ಅಭಿನಯ ಭಾರ್ಗವ ಇಂದು ನಮ್ಮೊಂದಿಗೆ ಇಲ್ಲ. ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಎಂದೆಂದಿಗೂ ನೆಲೆಸಿರುವ ಹೃದಯವಂತ ಡಾ ವಿಷ್ಣುವರ್ಧನ್.