Duniya Vijay: ಇಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುವಾಗ ಇನ್ಮುಂದೆ ನೂರು ಬಾರಿ ಯೋಚಿಸಿ...ದುನಿಯಾ ವಿಜಯ್‌ಗೆ ಅಭಿಮಾನಿಗಳಿಂದ ಮನವಿ
Jan 17, 2023 07:26 AM IST
'ವೀರಸಿಂಹರೆಡ್ಡಿ' ಚಿತ್ರದಲ್ಲಿ ವಿಜಯ್
- ಇಲ್ಲಿನ ಸ್ಟಾರ್ ಹೀರೋ ಮತ್ತೊಂದು ಭಾಷೆಯ ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದರೆ ಅದು ಖುಷಿಯ ವಿಚಾರ. ಆದರೆ ನಮ್ಮ ನಟರಿಗೆ ದೊರೆಯಬೇಕಾದ ಗೌರವ ದೊರೆಯದಿರುವುದು ಬೇಸರದ ಸಂಗತಿ. 'ವೀರಸಿಂಹರೆಡ್ಡಿ' ಚಿತ್ರದ ವಿಜಯ್ ಪೋಸ್ಟರ್‌ವೊಂದು ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತೆಲುಗಿನ ನಂದಮುರಿ ಬಾಲಕೃಷ್ಣ ಅವರ 'ವೀರಸಿಂಹರೆಡ್ಡಿ' ಸಿನಿಮಾ ಕಳೆದ ವಾರ ತೆರೆ ಕಂಡಿದೆ. ಈ ಚಿತ್ರಕ್ಕೆ ದೊರೆತ ಅದ್ಭುತ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿಯಾಗಿದೆ. ಚಿತ್ರದ ಓಪನಿಂಗ್ ದಿನ ಪ್ರಪಂಚಾದ್ಯಂತ ಅಭಿಮಾನಿಗಳು ಬಹಳ ಸಂಭ್ರಮದಿಂದ ಚಿತ್ರವನ್ನು ಬರಮಾಡಿಕೊಂಡಿದ್ದರು. ಅಮೆರಿಕದ ಡಲ್ಲಾಸ್‌ನಲ್ಲಂತೂ ಬಾಲಯ್ಯ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.
ಚಿತ್ರದಲ್ಲಿ ಬಾಲಕೃಷ್ಣ ಡೈಲಾಗ್, ಆಕ್ಷನ್ ದೃಶ್ಯಗಳು, ಜೈ ಬಾಲಯ್ಯ ಹಾಡುಗಳಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಎಲ್ಲರೂ ಬಾಲಕೃಷ್ಣ ಅವರ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಕೆಲವೇ ಕೆಲವರು ಚಿತ್ರದಲ್ಲಿ ಕೆಲವು ಲಾಜಿಕ್ ಇಲ್ಲದ ದೃಶ್ಯಗಳು ಇವೆ ಎಂದು ಕಾಲೆಳೆದಿದ್ದರು. ಎಸ್. ತಮನ್ ಮ್ಯೂಸಿಕ್ ಈ ಚಿತ್ರದಲ್ಲಿ ಮತ್ತೆ ಮೋಡಿ ಮಾಡಿದೆ. ಅತ್ತ ತಮಿಳುನಾಡಿನಲ್ಲಿ ವಿಜಯ್ ಹಾಗೂ ರಶ್ಮಿಕಾ ಅಭಿನಯದ 'ವಾರಿಸು' ಸಿನಿಮಾ, ಇತ್ತ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಾಲಕೃಷ್ಣ ಅಭಿನಯದ 'ವೀರಸಿಂಹರೆಡ್ಡಿ' ಚಿತ್ರದಲ್ಲಿ ತಮನ್ ಸಂಗೀತಕ್ಕೆ ಜನರು ಥ್ರಿಲ್ ಆಗಿದ್ದಾರೆ. ಕರ್ನಾಟಕದಲ್ಲಿ ಕೂಡಾ ಈ ಚಿತ್ರ ತೆರೆ ಕಂಡಿದೆ. ಈ ನಡುವೆ ಕನ್ನಡಿಗರು ದುನಿಯಾ ವಿಜಯ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಯ್, ತೆಲುಗು ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದಾಗ ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದರು. 'ಸಲಗ' ನಂತರ ದುನಿಯಾ ವಿಜಯ್ ಇಮೇಜ್ ಬದಲಾಗುತ್ತಿದೆ. ನಂದಮುರಿ ಬಾಲಕೃಷ್ಣ ಅವರಂತಹ ನಟನ ಎದುರು ವಿಲನ್ ಆಗಿ ನಟಿಸುವುದು ಸಾಮಾನ್ಯದ ವಿಚಾರವೇನಲ್ಲ, ಕನ್ನಡದಲ್ಲಿ ಹೆಸರು ಮಾಡಿದಂತೆ ತೆಲುಗು ಚಿತ್ರರಂಗದಲ್ಲಿ ಕೂಡಾ ದೊಡ್ಡ ಹೆಸರು ಮಾಡಿ ಎಂದು ವಿಜಯ್ ಅಭಿಮಾನಿಗಳು ಶುಭ ಕೋರಿದ್ದರು. ಆದರೆ ಜನವರಿ 12 ರಂದು ತೆರೆ ಕಂಡ ಸಿನಿಮಾ ನೋಡಿ ದುನಿಯಾ ವಿಜಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಇಂತಹ ಪಾತ್ರಗಳಿಗೆ ಒಪ್ಪಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಇಲ್ಲಿನ ಸ್ಟಾರ್ ಹೀರೋ ಮತ್ತೊಂದು ಭಾಷೆಯ ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದರೆ ಅದು ಖುಷಿಯ ವಿಚಾರ. ಆದರೆ ನಮ್ಮ ನಟರಿಗೆ ದೊರೆಯಬೇಕಾದ ಗೌರವ ದೊರೆಯದಿರುವುದು ಬೇಸರದ ಸಂಗತಿ. 'ವೀರಸಿಂಹರೆಡ್ಡಿ' ಚಿತ್ರದ ವಿಜಯ್ ಪೋಸ್ಟರ್‌ವೊಂದು ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಯಕ, ವಿಲನ್ ತಲೆಯನ್ನು ಕತ್ತಿಯಿಂದ ಕತ್ತರಿಸುವ ದೃಶ್ಯವಿದು. ಈ ಫೋಟೋ ನೋಡಿದವರು ವಿಜಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ''ನಮ್ಮ ಕನ್ನಡ ಹೀರೋಗಳು ಕರ್ನಾಟಕದಲ್ಲಿ ರಾಜರ ರೀತಿ ಇರ್ತಾರೆ, ಆದರೆ ಪರಭಾಷೆಯ ಸಿನಿಮಾ ಮಾಡಲು ಹೋಗಿ ಅವರ ಬಳಿ ಒದೆ ತಿಂತಾರೆ'' ಎಂದು ಹೇಳಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರ ವಿರೋಧ ಕಮೆಂಟ್ಸ್ ಹರಿದುಬರುತ್ತಿವೆ.
'ಕಲಾವಿದರಿಗೆ ಭಾಷೆಯ ಹಂಗಿಲ್ಲ, ಸಿನಿಮಾವನ್ನು ಸಿನಿಮಾ ಆಗಿ ನೋಡಿ' ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು 'ನಮ್ಮ ಹೀರೋಗಳನ್ನು ಅಲ್ಲಿ ಈ ಮಟ್ಟಕ್ಕೆ ತೋರಿಸಿರುವುದು ನಮಗೆ ಸರಿ ಕಾಣಲಿಲ್ಲ' ಎಂದಿದ್ದಾರೆ. ಟ್ರೇಲರ್‌ನಲ್ಲಿ ಕೂಡಾ ವಿಜಯ್, ಒಂದೆರಡು ಶಾಟ್‌ಗಳಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಜೊತೆಗೆ ಚಿತ್ರದ ಯಾವ ಪೋಸ್ಟರ್‌ಗಳಲ್ಲಿ ಕೂಡಾ ಅವರ ಹೆಸರು ಇಲ್ಲ, 'ಇದು ನಮಗೆಲ್ಲಾ ಅವಮಾನ ಮಾಡಿದಂತೆ. ದಯವಿಟ್ಟು ಇನ್ಮುಂದೆ ಪರಭಾಷೆ ಸಿನಿಮಾಗಳನ್ನು ಒಪ್ಪಿಕೊಳ್ಳುವಾಗ ನೂರು ಬಾರಿ ಯೋಚಿಸಿ, ಯಾವುದೇ ಕಾರಣಕ್ಕೂ ಅಭಿಮಾನಿಗಳಿಗೆ ನಿರಾಸೆ ಮಾಡಬೇಡಿ' ಎಂದು ಕರಿಚಿರತೆ ಫ್ಯಾನ್ಸ್, ಮನವಿ ಮಾಡುತ್ತಿದ್ದಾರೆ.
ವಿಜಯ್ ಸದ್ಯಕ್ಕೆ 'ಭೀಮ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದನ್ನು ವಿಜಯ್ ಅವರೇ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಜಗದೀಶ್ ಮತ್ತು ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ವರ್ಷ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದು 'ಸಲಗ' ಚಿತ್ರಕ್ಕಿಂತ ದೊಡ್ಡ ಯಶಸ್ಸು ಕಾಣಲಿ ಎಂದು ವಿಜಯ್ ಫ್ಯಾನ್ಸ್ ಹಾರೈಸುತ್ತಿದ್ದಾರೆ.