Spandana Vijay: ಸ್ಪಂದನಾ ಸಾವಿನ ಬಗ್ಗೆ ಅಸಂಬದ್ಧ ಚರ್ಚೆ ಬೇಡ; ಡಾ ಶ್ರೀನಿವಾಸ ಕಕ್ಕಿಲ್ಲಾಯ ಬರಹ
Aug 09, 2023 08:35 AM IST
ಸ್ಪಂದನಾ ವಿಜಯ್
- ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಇವರ ಸಾವಿನ ಬಗ್ಗೆ ಇಲ್ಲ ಸಲ್ಲದ ಮಾತುಗಳು ಕೇಳಿ ಬರುತ್ತಿವೆ. ವೈದ್ಯರುಗಳು ಕೂಡ ತೂಕ ಇಳಿಕೆ, ಕಿಟೊ ಡಯೆಟ್ ಕಾರಣ ಎನ್ನುತ್ತಿದ್ದಾರೆ. ಈ ಚರ್ಚೆಯ ಕುರಿತು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಬರಹ ಇಲ್ಲಿದೆ.
ನಾವು ಸ್ನಾತಕೋತ್ತರ ವೈದ್ಯ ವ್ಯಾಸಂಗ ಮಾಡುತ್ತಿದ್ದಾಗ ಬಹಳ ಗೌರವದಿಂದ ಕಾಣುತ್ತಿದ್ದ ಹಿರಿಯ ವೈದ್ಯರು ಹೀಗೆಲ್ಲ ಹೇಳುವಾಗ ಬೇಸರವಾಗುತ್ತದೆ, ಸಿಟ್ಟು ಕೂಡ ಬರುತ್ತದೆ.
ಮೊದಲನೆಯದಾಗಿ, ಸ್ಪಂದನಾ ಅವರ ಅಕಾಲಿಕ ಸಾವಿನ ಬಗ್ಗೆ ಯಾವ ವಿವರಗಳೂ ಲಭ್ಯವಿದ್ದಂತಿಲ್ಲ, ಅವರ ಮರಣೋತ್ತರ ಪರೀಕ್ಷೆಯ ವರದಿಯಾಗಲೀ, ಸಾವನ್ನಪ್ಪುವ ಮೊದಲು ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆಯಾಗಲೀ, ಅವರು ಸೇವಿಸುತ್ತಿದ್ದ ಆಹಾರ, ಮಾಡುತ್ತಿದ್ದ ವ್ಯಾಯಾಮ ಇತ್ಯಾದಿಗಳ ಬಗ್ಗೆಯಾಗಲೀ ಯಾವುದೇ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ, ಇರುವ ಸಾಧ್ಯತೆಯೂ ಇಲ್ಲ, ಇರಲೂಬಾರದು. ಹೀಗೆ ಯಾವುದೇ ಮಾಹಿತಿ ಇಲ್ಲದೇ ಇದ್ದರೂ ಎಲ್ಲವೂ ತಿಳಿದಿರುವಂತೆ ಮಾತಾಡುವುದು, ಬರೆಯುವುದು, ಇಡೀ ದಿನ ಟಿವಿ ಮತ್ತಿತರ ಮಾಧ್ಯಮಗಳಲ್ಲಿ ಚರ್ಚಿಸುವುದು ಘೋರವಾದ ತಪ್ಪು ಮಾತ್ರವಲ್ಲ, ಮೃತರಿಗೂ, ಅವರ ಮನೆಯವರಿಗೂ ಮಾಡುವ ಅನ್ಯಾಯವೂ ಆಗುತ್ತದೆ. ಮೃತರ ಕುಟುಂಬದವರು ಆಘಾತದಲ್ಲಿರುವಾಗ ಇಂಥ ಆಧಾರರಹಿತ ಚರ್ಚೆಗಳನ್ನು ಮಾಡುವುದು ಅವರೆಲ್ಲರ ನೋವನ್ನು ಅರ್ಥ ಮಾಡಿಕೊಳ್ಳದಷ್ಟು ವಿವೇಚನೆಯಿಲ್ಲದ, ಸಂವೇದನೆಯಿಲ್ಲದ, ಕ್ರೂರವಾದ ಮನಸ್ಥಿತಿ ವ್ಯಾಪಕವಾಗಿಬಿಟ್ಟಿದೆ ಎನ್ನುವುದನ್ನು ತೋರಿಸುತ್ತದೆ, ಇದು ನಿಜಕ್ಕೂ ಅತೀವ ಸಂಕಟವನ್ನುಂಟು ಮಾಡುತ್ತಿದೆ.
ಎರಡನೆಯದಾಗಿ, ಜಯದೇವ ಆಸ್ಪತ್ರೆಯ ಇಬ್ಬರು ವೈದ್ಯರು ಈ ಬಗ್ಗೆ ಆಧಾರರಹಿತವಾದ, ತಪ್ಪಾದ, ಜನರನ್ನು ಗೊಂದಲಕ್ಕೀಡುಮಾಡುವ ಹೇಳಿಕೆಗಳನ್ನು ನೀಡಿರುವುದು ಅಕ್ಷಮ್ಯವಾಗಿದೆ. ಇವರಿಬ್ಬರೂ ಮತ್ತು ಇವರ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ ಮಾಧ್ಯಮಗಳೂ ಈ ಕೂಡಲೇ ಈ ಹೇಳಿಕೆಗಳನ್ನು ಹಿಂಪಡೆದು ಸ್ಪಂದನಾ ಅವರ ಕುಟುಂಬದವರಲ್ಲಿ ಹಾಗೂ ನಾಡಿನ ಎಲ್ಲರಲ್ಲಿ ಕ್ಷಮೆ ಯಾಚಿಸಲೇಬೇಕು.
ತೂಕ ಇಳಿಸುವುದು ಒಳ್ಳೆಯದಲ್ಲ ಎಂಬರ್ಥದಲ್ಲಿ ಡಾ. ಮಂಜುನಾಥ್ ಹೇಳಿದ್ದಾರೆಂದು ಈ ಕೆಳಗಿನ ವರದಿಯಲ್ಲಿದೆ. ಅವರು ಹೀಗೆ ಹೇಳಿರುವುದೇ ಆದಲ್ಲಿ ಅದಕ್ಕೆ ಆಧಾರವೇನು ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು. ಇಲ್ಲವಾದರೆ ತೂಕ ಹೆಚ್ಚಿರುವುದು ಸಮಸ್ಯೆಯಲ್ಲ, ಅದನ್ನು ಇಳಿಸುವುದೇ ಸಮಸ್ಯೆ ಎಂಬ ಭಾವನೆ ಮೂಡಬಹುದು.
ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಹೃದಯಾಘಾತವಾಗುವುದು ತೀರಾ ಅಪರೂಪವಾಗಿತ್ತು ಎಂದು ಡಾ. ಮಂಜುನಾಥ್ ಹೇಳಿರುವುದು ಸರಿ. ನಾನು 1992ರ ಮಾರ್ಚ್ ನಲ್ಲಿ ಎಂಡಿ ಪರೀಕ್ಷೆ ಬರೆದಾಗ ಮುಟ್ಟು ನಿಲ್ಲುವ ಮೊದಲು ಮಹಿಳೆಯರಲ್ಲಿ ಹೃದಯಾಘಾತ ಅಪರೂಪವೇಕೆ ಎನ್ನುವುದು ಮುಖ್ಯ ಪ್ರಶ್ನೆಯಾಗಿತ್ತು, ಹೃದಯಾಘಾತಕ್ಕೆ ಸಾಮಾನ್ಯವಾಗಿ ಕಾರಣವಾಗುವ ರಕ್ತನಾಳಗಳ ಸಮಸ್ಯೆಯು ಆ ವಯಸ್ಸಿನ ಮಹಿಳೆಯರಲ್ಲಿ ಅತಿ ವಿರಳವಿದ್ದುದರಿಂದ ಅದು ಬಿಟ್ಟು ಇನ್ನುಳಿದ ತೀರಾ ಅಪರೂಪದ ಕಾರಣಗಳ ಬಗ್ಗೆ ಬರೆಯಬೇಕಿತ್ತು. ಆದರೆ ಕಳೆದ 10 ವರ್ಷಗಳಿಂದ ಯುವ ಮಹಿಳೆಯರಲ್ಲೂ ಹೃದಯಾಘಾತಗಳು ಸಂಭವಿಸತೊಡಗಿವೆ, ಹೆಚ್ಚುತ್ತಿವೆ. 1990ರಲ್ಲಿ ಕಾಣದಿರುವುದು 2010ರಿಂದೀಚೆಗೆ ಕಾಣುತ್ತಿರುವಾಗ ಇದಕ್ಕೆ ಕಾರಣಗಳೇನು ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ, ವಿಮರ್ಶಿಸುವ, ಆ ಬಗ್ಗೆ ಜನರಿಗೆ ವಸ್ತುನಿಷ್ಠ ಮಾಹಿತಿ ನೀಡುವ ಜವಾಬ್ದಾರಿ ದೇಶದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆಯಾದ ಜಯದೇವ ಹೃದ್ರೋಗ ಸಂಸ್ಥೆಗೆ ಇಲ್ಲವೇ? ಈ 20-30 ವರ್ಷಗಳಲ್ಲಿ ಇಂಥ ಬದಲಾವಣೆಗೆ ಕಾರಣಗಳೇನು ಎನ್ನುವುದನ್ನು ಅಲ್ಲಿ ಅಧ್ಯಯನ ಮಾಡಿಲ್ಲವೇ? ಅತಿಯಾದ ಒತ್ತಡ, ದೇಹ ದಂಡನೆ, ತೂಕ ಇಳಿಸುವುದು ಮಾತ್ರವೇ ಮಹಿಳೆಯರಲ್ಲಿ, ಪುರುಷರಲ್ಲೂ ಕೂಡ, ಹೃದಯಾಘಾತ ಹೆಚ್ಚಲು ಕಾರಣ ಎಂದು ಡಾ. ಮಂಜುನಾಥ್ ಹೇಳುತ್ತಿದ್ದಾರೆಯೇ?
ಅದೇ ಸಂಸ್ಥೆಯ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರ ಹೇಳಿಕೆಯನ್ನೂ ಕೇಳಿದೆ. ತೂಕ ಇಳಿಸಿಕೊಳ್ಳಲು ಕೀಟೋ ಪಥ್ಯ ಮಾಡುವುದು ತಪ್ಪು, ಅದು ಪಾಶ್ಚಾತ್ಯ ಆಹಾರಕ್ರಮ, ಹಿಂದಿನ ತಲೆಮಾರಿನವರು ತಿನ್ನುತ್ತಿದ್ದಂತೆಯೇ ತಿನ್ನಬೇಕು, ಉಪವಾಸ ಮಾಡಬೇಕು ಎಂದೆಲ್ಲ ಹೇಳಿದ್ದಾರೆ, ಈ ಚರ್ಚೆಯಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ವೈದ್ಯರನ್ನೂ ಎಳೆಯಲಾಗಿದೆ. ಡಾ. ವಿಜಯಲಕ್ಷ್ಮಿ ಅವರ ಈ ಹೇಳಿಕೆಗಳಿಗೆ ಆಧಾರಗಳೇನು? ಕೀಟೋ ಪಥ್ಯ ಎಂದರೇನು, ಅದನ್ನು ಯಾರು ಮಾಡುತ್ತಿದ್ದಾರೆ, ಈಗ ಹೃದಯಾಘಾತಕ್ಕೆ ಒಳಗಾಗಿರುವವರು ಇವರು ಹೇಳುತ್ತಿರುವ ಕೀಟೋ ಪಥ್ಯ ಮಾಡುತ್ತಿದ್ದರೇ, ಹೌದಾದರೆ ಆ ಪಥ್ಯದ ವಿವರಗಳೇನು, ಅದು ಇವರಿಗೆ ಎಲ್ಲಿಂದ ಸಿಕ್ಕಿತು ಎಂಬುದನ್ನು ಡಾ. ವಿಜಯಲಕ್ಷ್ಮಿ ಸ್ಪಷ್ಟ ಪಡಿಸಬೇಕು. ಇವರು ಹೇಳುವ ಕೀಟೋ ಪಥ್ಯವೇ ಪಾಶ್ಚಿಮಾತ್ಯ ಪಥ್ಯ ಎಂದಾದರೆ, ಎಲ್ಲಾ ವೈಜ್ಞಾನಿಕ ಅಧ್ಯಯನಗಳಲ್ಲಿ ಪಾಶ್ಚಿಮಾತ್ಯ ಆಹಾರಕ್ರಮವೆಂದೇ ಹೆಸರಿಸಲ್ಪಡುತ್ತಿರುವ ಸಕ್ಕರೆ ಹಾಗೂ ಸಂಸ್ಕರಿತ ತಿನಿಸುಗಳಿಂದ ತುಂಬಿರುವ ಆಹಾರಕ್ರಮ ಏನು, ಅದು ಪಾಶ್ಚಿಮಾತ್ಯ ಆಹಾರ ಅಲ್ಲವೇ, ಅಲ್ಲವೆಂದಾದರೆ ಅದಕ್ಕೇನು ಹೆಸರು? ಹಾಗೆಯೇ, ಹಿಂದಿನ ತಲೆಮಾರಿನವರ ಆಹಾರ ಎಂದರೆ ಯಾವುದು, ಹಿಂದಿನ ತಲೆಮಾರು ಎಂದರೆ ಯಾವುದು, ಎಷ್ಟು ವರ್ಷ ಹಿಂದಿನದು? ಇವಕ್ಕೆಲ್ಲ ಡಾ. ವಿಜಯಲಕ್ಷ್ಮಿ ಉತ್ತರಿಸಬೇಕು.
ಈ ಪ್ರಶ್ನೆಗಳಿಗೆ ಈ ಇಬ್ಬರೂ ಅತ್ಯಂತ ಗೌರವಾನ್ವಿತ ಹೃದ್ರೋಗ ತಜ್ಞರು ಉತ್ತರ ಹೇಳಲಿ, ಆ ಮೇಲೆ ಚರ್ಚೆ ಮುಂದುವರಿಸೋಣ.
ಇದನ್ನೂ ಓದಿ