logo
ಕನ್ನಡ ಸುದ್ದಿ  /  ಮನರಂಜನೆ  /  Flashback Column: ಹಾಸ್ಯ ಚಕ್ರವರ್ತಿ ನರಸಿಂಹರಾಜು ತೀರಿಕೊಂಡಾಗ ಅಣ್ಣಾವ್ರು ಬರಲಿಲ್ಲ!; ಇಬ್ಬರ ನಡುವೆ ಅಂದು ಹರಿದಾಡಿದ್ದ ಆ ಸುದ್ದಿ ನಿಜವೇ?

Flashback column: ಹಾಸ್ಯ ಚಕ್ರವರ್ತಿ ನರಸಿಂಹರಾಜು ತೀರಿಕೊಂಡಾಗ ಅಣ್ಣಾವ್ರು ಬರಲಿಲ್ಲ!; ಇಬ್ಬರ ನಡುವೆ ಅಂದು ಹರಿದಾಡಿದ್ದ ಆ ಸುದ್ದಿ ನಿಜವೇ?

Jul 30, 2023 06:26 PM IST

google News

ಹಾಸ್ಯ ಚಕ್ರವರ್ತಿ ನರಸಿಂಹರಾಜು ತೀರಿಕೊಂಡಾಗ ಅಣ್ಣಾವ್ರು ಬರಲಿಲ್ಲ!; ಇಬ್ಬರ ನಡುವೆ ಅಂದು ಹರಿದಾಡಿದ್ದ ಆ ಸುದ್ದಿ ನಿಜವೇ?

    • ಸಿನಿಮಾ ಎಂಬುದೇ ಬಣ್ಣದ ಲೋಕ. ಇಲಿ ಹೋದರೆ ಹುಲಿ ಹೋಯ್ತು ಅನ್ನೋ ಮಾತು ಇಲ್ಲಿ ಸದಾ ಪ್ರಸ್ತುತ. ಗಾಸಿಪ್‌ಗಳಿಗೂ ಇದು ದೊಡ್ಡ ವೇದಿಕೆ. ಈ ಬಣ್ಣದ ಲೋಕದ ಇಂದಿನ ಫ್ಲಾಶ್‌ಬ್ಯಾಕ್‌ನಲ್ಲಿ ಡಾ. ರಾಜ್‌ ಮತ್ತು ನರಸಿಂಹರಾಜು ಅವರ ಕುರಿತಾಗಿದೆ. ಹಾಸ್ಯ ಚಕ್ರವರ್ತಿಯ ನಿಧನವಾದ ದಿನ ಡಾ. ರಾಜ್‌ ಏಕೆ ಬರಲಿಲ್ಲ? ಇದಕ್ಕೆ ಸಂಬಂಧಿಸಿ ವದಂತಿ ಹರಿದಾಡಿದ್ದವು. ಅದಕುತ್ತರ ಹೀಗಿದೆ.  
ಹಾಸ್ಯ ಚಕ್ರವರ್ತಿ ನರಸಿಂಹರಾಜು ತೀರಿಕೊಂಡಾಗ ಅಣ್ಣಾವ್ರು ಬರಲಿಲ್ಲ!; ಇಬ್ಬರ ನಡುವೆ ಅಂದು ಹರಿದಾಡಿದ್ದ ಆ ಸುದ್ದಿ ನಿಜವೇ?
ಹಾಸ್ಯ ಚಕ್ರವರ್ತಿ ನರಸಿಂಹರಾಜು ತೀರಿಕೊಂಡಾಗ ಅಣ್ಣಾವ್ರು ಬರಲಿಲ್ಲ!; ಇಬ್ಬರ ನಡುವೆ ಅಂದು ಹರಿದಾಡಿದ್ದ ಆ ಸುದ್ದಿ ನಿಜವೇ?

Flash back column: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅನರ್ಘ್ಯ ರತ್ನ ಟಿ.ಆರ್‌. ನರಸಿಂಹರಾಜು. ಅದೇ ನಮ್ಮೆಲ್ಲರ ನೆಚ್ಚಿನ ಹಾಸ್ಯ ಚಕ್ರವರ್ತಿ ನರಸಿಂಹರಾಜು. ಆರವತ್ತು ಎಪ್ಪತ್ತರ ಕಾಲಘಟ್ಟದಲ್ಲಿ ಇಡೀ ಕರುನಾಡಿನ ಸಿನಿಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವರು ಈ ನಟ. ಸಣಕಲು ದೇಹ, ಅಸಾಧಾರಣ ಪ್ರತಿಭೆ ಈ ಕಲಾವಿದನದ್ದು. ಆಗಿನ ಕಾಲದಲ್ಲಿ ಅವರ ಯುಗವೇ ಸುವರ್ಣ ಕಾಲ ಎನ್ನಬಹುದು. ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ, ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ ಎಂಬುದು ನರಸಿಂಹರಾಜು ಅವರ ಮೇಲೆ ಚಿತ್ರಿತವಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ಈ ನಟ. ಒಂದೇ ಒಂದು ಕಾಂಟ್ರವರ್ಸಿಯನ್ನೂ ಮೈಮೇಲೆ ಎಳೆದುಕೊಳ್ಳದೆ, ಯಾರ ಬಾಯಲ್ಲೂ ತೆಗಳಿಸಿಕೊಳ್ಳದೆ ನವಿರಾಗಿ ಬದುಕಿನ ಬಂಡಿ ಸಾಗಿಸಿದವರು ಈ ನರಸಿಂಹರಾಜು.

ಅದರಲ್ಲೂ ಡಾ. ರಾಜ್‌ಕುಮಾರ್‌ ಮತ್ತು ನರಸಿಂಹರಾಜು ಅವರ ಸಂಬಂಧ ಎಂಥದ್ದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆಗಿನ ಕಾಲದ ಮಂದಿ ನೋಡಿದಂತೆ, ಹೇಳಿದಂತೆ ಅವರಿಬ್ಬರದ್ದು ಜೀವ ಒಂದೇ ದೇಹ ಎರಡು. ಇಬ್ಬರದ್ದು ನಿಶ್ಕಲ್ಮಶ ತಿಳಿಯಾದ ಸಂಬಂಧ. ತೆರೆಮೇಲೆಯೂ ಸದಾ ಜತೆಗಿದ್ದವರು. ತೆರೆ ಹಿಂದೆಯೂ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದವರು. ನರಸಿಂಹರಾಜು ಅವರು ನಟಿಸಿದ 160 ಸಿನಿಮಾಗಳ ಪೈಕಿ 100 ಸಿನಿಮಾ ರಾಜ್‌ಕುಮಾರ್‌ ಜತೆಗೇ ಅಭಿನಯಿಸಿದ್ದಾರೆ! ಈ ಸ್ನೇಹಕ್ಕೆ ಮತ್ತಿನ್ನೆಂಥ ಸಾಕ್ಷಿ ಬೇಕು.

ಸಂದರ್ಶನವೊಂದರಲ್ಲಿ ಅಪ್ಪ ಮತ್ತು ಅಣ್ಣಾವ್ರ ಸಂಬಂಧ ಹೇಗಿತ್ತು ಎಂಬುದನ್ನು ನೆನೆಪಿಸಿಕೊಳ್ಳುವ ಸುಧಾ ನರಸಿಂಹರಾಜು, ಆಗಿನ ಕಾಲದಲ್ಲಿ ಇಡೀ ಚಿತ್ರೋದ್ಯಮ ಚೆನ್ನೈನಲ್ಲಿತ್ತು. ತೆಲುಗಿನವರೂ ಅಲ್ಲೇ. ಹಿಂದಿ, ತಮಿಳಿನವರ ಸಿನಿಮಾ ಕೆಲಸಗಳು ಅಲ್ಲಿಯೇ ನಡೆಯುತ್ತಿದ್ದವು. ಯಾಕೆಂದ್ರೆ ಆಗ ಸ್ಟುಡಿಯೋಗಳು ಇರುತ್ತಿದ್ದದ್ದೇ ಚೆನ್ನೈನಲ್ಲಿ. ಕನ್ನಡಕ್ಕಿಂತ ಬೇರೆ ಭಾಷೆಯ ಸಿನಿಮಾಗಳ ಕೆಲಸಗಳೇ ಅಲ್ಲಿ ಹೆಚ್ಚು ನಡೆಯುತ್ತಿದ್ದವು. ಜೆಮಿನಿ ಸ್ಟುಡಿಯೋ, ಎವಿಎಂ ಸ್ಟುಡಿಯೋಗಳಲ್ಲಿ ನಿತ್ಯ ಚಿತ್ರೀಕರಣ ನಡೆಯುತ್ತಿದ್ದವು. ಅದೇ ಸ್ಟುಡಿಯೋದಲ್ಲಿ ನಮ್ಮ ತಂದೆ ಮತ್ತು ರಾಜ್‌ಕುಮಾರ್‌ ಅಪ್ಪಾಜಿ ಒಟ್ಟಿಗೆ ನಟಿಸುತ್ತಿದ್ದರೆ, ಉಳಿದವರೂ ಮಾತನಾಡಿಕೊಳ್ಳುತ್ತಿದ್ರು. ನೋಡ್ರಪ್ಪ ಬಂದ್ರು.. ಎನ್ನುತ್ತಿದ್ದರು.

ರಾಜ್‌ಕುಮಾರ್‌ ಅವರು ಸ್ಟುಡಿಯೋ ಒಳಗೆ ಎಂಟ್ರಿಯಾದ್ರೆ, ಅಲ್ಲಿಂದಲೇ ಓಹೋ.. ಎಂದು ಜೋರು ಧ್ವನಿಯಲ್ಲಿ ಕೂಗುತ್ತಿದ್ದರು. ನಾಲ್ಕೈದು ಫ್ಲೋರ್‌ಗಳವರೆಗೂ ಆ ಧ್ವನಿ ತಲುಪುತ್ತಿತ್ತು. ಅತ್ತ ಕಡೆಯಿಂದ ಅಪ್ಪಾಜಿ ಸಹ ಅದೇ ರೀತಿ ಕೂಗು ಹಾಕುತ್ತಿದ್ದರು. ಅದನ್ನು ನೋಡಿ ಉಳಿದ ಚಿತ್ರರಂಗದವರೆಲ್ಲ ಸ್ನೇಹಿತರ ಸಮ್ಮಿಲನ ಎಂದೇ ಮಾತನಾಡಿಕೊಳ್ಳುತ್ತಿದ್ರು. ಎದುರು ಬದುರಾದರೆ, ಒಂದು ಒಳ್ಳೆಯ ಅಪ್ಪುಗೆ, ಉಭಯಕುಶಲೋಪರಿ ಇಬ್ಬರಲ್ಲೂ ನಡೆಯುತ್ತಿತ್ತು ಎಂದು ಹೇಳಿಕೊಳ್ಳುತ್ತಾರವರು.

ವಯಸ್ಸಿನಲ್ಲಿ ಡಾ. ರಾಜ್‌ಕುಮಾರ್‌ ಅವರಿಗಿಂತ ನರಸಿಂಹರಾಜು ಹಿರಿಯರು. ಆದರೆ ಈ ಇಬ್ಬರೂ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಸಿನಿಮಾ ಪಯಣ ಆರಂಭಿಸಿದರು. ಒಟ್ಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸಂಧ್ಯಾರಾಗ, ಸಾಕ್ಷಾತ್ಕಾರ, ಸತ್ಯ ಹರಿಶ್ಚಂದ್ರ, ವೀರ ಕೇಸರಿ, ಶ್ರೀಕೃಷ್ಣದೇವರಾಯ, ಗಂಧದ ಗುಡಿ.. ಹೀಗೆ ಒಂದಾ ಎರಡಾ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಈ ಜೋಡಿ ನಟಿಸಿದೆ. ಆದರೆ ನೆನಪಿರಲಿ 1973ರಲ್ಲಿ ಬಂದ ಬಿಡುಗಡೆ ಚಿತ್ರದಲ್ಲಿ ರಾಜ್‌ಕುಮಾರ್‌ ಜತೆಗೆ ನಟಿಸಿದ್ದೇ ಕೊನೆ, ಮತ್ತೆಂದೂ ಅಣ್ಣಾವ್ರ ಸಿನಿಮಾದಲ್ಲಿ ನರಸಿಂಹರಾಜು ಕಾಣಿಸಲಿಲ್ಲ! ಈ ಬದಲಾವಣೆ ಆಗಿನ ಕಾಲದಲ್ಲಿ ಬೇರೆಯದ್ದೇ ಸ್ವರೂಪ ಪಡೆದುಕೊಂಡಿತು.

ಈ ಬಗ್ಗೆ ಹೇಳಿಕೊಳ್ಳುವ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು, ಹೀಗೆ ಕಾಣಿಸಿಕೊಳ್ಳದಿರುವುದಕ್ಕೂ ನೋಡುವವರು ಬಗೆಬಗೆ ಬಣ್ಣ ಬಳಿದರು. ಆಗಿನ ಸಿನಿಮಾ ಕಾಲಘಟ್ಟ ಒಂದು ಹಂತ ದಾಟಿತ್ತು. ಮೊದಲೆಲ್ಲ ಸೀಮಿತ ಪ್ರೊಡಕ್ಷನ್ಸ್ ಸಂಸ್ಥೆಗಳು ಮಾತ್ರ ಇದ್ದವು. ಬಳಿಕ ಹೊಸ ಹೊಸ ನಿರ್ಮಾಣ ಸಂಸ್ಥೆಗಳು ಶುರುವಾದವು. ಹಾಸ್ಯ ಪಾತ್ರಗಳಿಗೆ ಸೀಮಿತವಾಗಿದ್ದ ಬಾಲಣ್ಣ ಪ್ರಬುದ್ಧ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾದರು. ಒಂದು ಸಮಯದಲ್ಲಿ ಬಾಲಣ್ಣ ಅವರ ಜತೆಗೆ ರಾಜ್‌ ಅಪ್ಪಾಜಿ ಅವರ ಸರಣಿ ಸಿನಿಮಾಗಳು ಮೂಡಿಬಂದವು. ಅಷ್ಟೊತ್ತಿಗೆ ದ್ವಾರಕೀಶ್‌ ಅವರ ಆಗಮನವೂ ಆಯಿತು. ಇದನ್ನೇ ಅಂದಿನ ಜನ ಬೇರೆ ರೀತಿಯಲ್ಲಿ ಊಹಿಸಿಕೊಂಡರು" ಎನ್ನುತ್ತಾರೆ.

ಮಕ್ಕಳು ಮೊಮ್ಮಕ್ಕಳ ಜತೆಗೆ ಬೆಂಗಳೂರಿನ ಮನೆಯಲ್ಲಿಯೇ ನೆಲೆಸಿದ್ದ ನರಸಿಂಹರಾಜು 1979ರ ಜುಲೈ 20ರಂದು ಎಂದಿನಂತೆ ರಾತ್ರಿ ಊಟ ಮುಗಿಸಿ ನಿದ್ದೆಗೆ ಜಾರಿದ್ದರು. ಬೆಳಗಿನ ಜಾವ 4;30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರ ಸಾವು ಇಡೀ ಚಿತ್ರರಂಗವನ್ನೇ ಅಳಿಸಿತ್ತು. ಬಹುತೇಕ ಎಲ್ಲ ಸಿನಿ ಗಣ್ಯರು ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಆದರೆ ಒಬ್ಬರನ್ನು ಬಿಟ್ಟು. ಆವತ್ತು ನರಸಿಂಹರಾಜು ಸಾವಿನ ದಿನ ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.

ಇದಕ್ಕೂ ಮುನ್ನ ರಾಜ್‌ಕುಮಾರ್‌ ಮತ್ತು ನರಸಿಂಹರಾಜು ಅವರ ನಡುವೆ ಯಾವುದೂ ಸರಿಯಿಲ್ಲ ಎಂಬಂತಹ ವದಂತಿಗಳನ್ನು ಹರಿದಾಡಿದ್ದವು. ಅದ್ಯಾವ ಮಟ್ಟಿಗೆ ಎಂದರೆ ನರಸಿಂಹರಾಜು ತೀರಿಕೊಂಡಾಗಲೂ ರಾಜ್‌ಕುಮಾರ್‌ ಬರಲಿಲ್ಲವಲ್ಲ ಎಂದೇ ಮಾತನಾಡಿಕೊಂಡರು ಜನ. ಆದರೆ, ಅಸಲಿಯತ್ತೇ ಬೇರೆಯದ್ದಾಗಿತ್ತು. ಕುಟುಂಬ ಸದಸ್ಯರೊಬ್ಬರ ಚಿಕಿತ್ಸೆಗಾಗಿ ಅಣ್ಣಾವ್ರು ಮತ್ತವರ ಕುಟುಂಬ ಅಮೆರಿಕಾಕ್ಕೆ ತೆರಳಿತ್ತು. ಫೋನ್‌ ಮೂಲಕವೇ ಅವರಿಗೆ ಮಾಹಿತಿ ರವಾನೆಯಾಗಿತ್ತು. ಸುದ್ದಿ ತಿಳಿದು ಶಾಕ್‌ಗೊಳಗಾದ ರಾಜ್‌ಕುಮಾರ್‌, ಬೆಂಗಳೂರಿಗೆ ಬಂದವರೇ ನೇರವಾಗಿ ನರಸಿಂಹ ರಾಜು ಅವರ ಮನೆಗೆ ಬಂದು ಸಾಂತ್ವನ ಹೇಳಿದರು ಎಂದು ಅಂದು ಹಬ್ಬಿದ್ದ ಗಾಳಿಮಾತಿನ ಬಗ್ಗೆ ಮಗಳು ಸುಧಾ ಈ ರೀತಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

  • ಮಂಜುನಾಥ ಕೊಟಗುಣಸಿ

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಫ್ಯಾಷ್‌ಬ್ಯಾಕ್‌ ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: manjunath.kotagunasi@htdigital.in, ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ