Gaalipata 2: ಮತ್ತೊಂದು ಹಾಡು ಲಿಲೀಸ್....ದೇವ್ಲೆ ದೇವ್ಲೆ ಎಲ್ಲಾ ನಿನ್ನ ಆಶೀಲ್ವಾದ ಅಂತಿದ್ದಾಲೆ ಗೋಲ್ಡನ್ ಸ್ಟಾಲ್
Jul 14, 2022 08:47 PM IST
ಗೋಲ್ಡನ್ ಸ್ಟಾರ್ ಗಣೇಶ್
- ದೇವ್ಲೆ ದೇವ್ಲೆ ಹಾಡು ಬಿಡುಗಡೆಯಾಗಿ 3 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಸ್ವತ: ಯೋಗರಾಜ್ ಭಟ್ ಈ ಹಾಡಿನ ಸಾಹಿತ್ಯ ಬರೆದಿದ್ದು ವಿಜಯ್ ಪ್ರಕಾಶ್ ಹಾಡನ್ನು ಹಾಡಿದ್ದಾರೆ. ಹಾಡು ಕೇಳಿದ ಹಲವರು ಯೋಗರಾಜ್ ಭಟ್ಟರ ಸಾಹಿತ್ಯ ಇಷ್ಟಪಟ್ಟರೆ, ಇನ್ನೂ ಕೆಲವರು ವಿಜಯ್ ಪ್ರಕಾಶ್ ಧ್ವನಿ ಹಾಗೂ ಹಾಡಿನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ.
ಅಂತೂ ಸಿನಿಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಹತ್ತಿರ ಬಂದಿದೆ. ಆಗಸ್ಟ್ 12 ರಂದು ಗಾಳಿಪಟ -2 ಸಿನಿಮಾ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದೆ. ಈ ನಡುವೆ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ.
2 ದಿನಗಳ ಹಿಂದಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರತಂಡ ವಿಭಿನ್ನ ವಿಡಿಯೋ ತುಣುಕೊಂದನ್ನು ಹಂಚಿಕೊಂಡು ಜುಲೈ 14 ರಂದು ಚಿತ್ರದ ಮೂರನೇ ಹಾಡು ರಿಲೀಸ್ ಆಗುವುದರ ಬಗ್ಗೆ ಮಾಹಿತಿ ನೀಡಿದ್ದರು. ಈ ವಿಡಿಯೋ ನೋಡಿದವರು ಯೋಗರಾಜ್ ಭಟ್ಟರ ಕ್ರಿಯೇಟಿವಿಟಿ ನೋಡಿ ನಕ್ಕಿದ್ದರು. ಇದೀಗ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ನಾಯಕ ಗಣೇಶ್ ಡ್ರಿಂಕ್ಸ್ ಮಾಡಿದಾಗ ರ ಅಕ್ಷರಕ್ಕೆ ಲ ಎಂಬ ಪ್ರಯೋಗ ಮಾಡುತ್ತಾರಂತೆ. ಅದರಂತೆ ನಾಯಕ ದೇವ್ಲೆ ದೇವ್ಲೆ ....ಎಂದು ಹಾಡುವ ಸಾಂಗ್ ಇಂದು ಬಿಡುಗಡೆಯಾಗಿದೆ.
ದೇವ್ಲೆ ದೇವ್ಲೆ ಹಾಡು ಬಿಡುಗಡೆಯಾಗಿ 3 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಸ್ವತ: ಯೋಗರಾಜ್ ಭಟ್ ಈ ಹಾಡಿನ ಸಾಹಿತ್ಯ ಬರೆದಿದ್ದು ವಿಜಯ್ ಪ್ರಕಾಶ್ ಹಾಡನ್ನು ಹಾಡಿದ್ದಾರೆ. ಹಾಡು ಕೇಳಿದ ಹಲವರು ಯೋಗರಾಜ್ ಭಟ್ಟರ ಸಾಹಿತ್ಯ ಇಷ್ಟಪಟ್ಟರೆ, ಇನ್ನೂ ಕೆಲವರು ವಿಜಯ್ ಪ್ರಕಾಶ್ ಧ್ವನಿ ಹಾಗೂ ಹಾಡಿನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಲು ಕಾಯುತ್ತಿದ್ದೇವೆ, ಗಾಳಿಪಟ -2 ಖಂಡಿತ ಹಿಟ್ ಆಗುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
3 ವರ್ಷಗಳ ಹಿಂದೆ ಆರಂಭವಾಗಿದ್ದ ಗಾಳಿಪಟ ಸೀಕ್ವೆಲ್
ಗಾಳಿಪಟ-2 ಸಿನಿಮಾ ಚಿತ್ರೀಕರಣ ಆರಂಭವಾಗಿ 3 ವರ್ಷಗಳೇ ಕಳೆದಿವೆ. 2008 ರಲ್ಲಿ ಬಿಡುಗಡೆಯಾದ ಗಾಳಿಪಟ ಚಿತ್ರದ ಸೀಕ್ವೆಲ್ ಮಾಡುವುದಾಗಿ ಯೋಗರಾಜ್ ಭಟ್ 3 ವರ್ಷಗಳ ಹಿಂದೆ ಅನೌನ್ಸ್ ಮಾಡಿದ್ದರು. ಅದರಂತೆ 2 ಡಿಸೆಂಬರ್ 2019 ರಂದು ಸಿನಿಮಾ ಚಿತ್ರೀಕರಣ ಆರಂಭವಾಯ್ತು. ಗಾಳಿಪಟ ಚಿತ್ರದಲ್ಲಿ ರಾಜೇಶ್ ಕೃಷ್ಣನ್, ಗಣೇಶ್, ದಿಗಂತ್ ಮೂವರ ಕಾಂಬಿನೇಷನ್ ಅಭಿಮಾನಿಗಳನ್ನು ಸಖತ್ ಮೋಡಿ ಮಾಡಿತ್ತು. ಗಾಳಿಪಟ 2 ಚಿತ್ರ ಅನೌನ್ಸ್ ಆದಾಗ ಮೊದಲು, ರಿಷಿ ಹಾಗೂ ಶರಣ್ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಗಾಳಿಪಟ ಚಿತ್ರದಲ್ಲಿ ನಟಿಸಿದ್ದ ಮೂವರೇ ಈ ಸಿನಿಮಾದಲ್ಲಿ ಕೂಡಾ ನಟಿಸಿದರೆ ಚೆನ್ನಾಗಿತ್ತು ಎಂಬ ಮಾತು ಎಲ್ಲಾ ಕಡೆಯಿಂದ ಕೇಳಿಬಂತು. ಆದ್ದರಿಂದ ರಿಷಿ ಹಾಗೂ ಶರಣ್ ಒಪ್ಪಿಗೆ ಪಡೆದ ಭಟ್ಟರು ಆ ಜಾಗಕ್ಕೆ ದಿಗಂತ್ ಹಾಗೂ ಗಣೇಶ್ ಅವರನ್ನು ಕರೆತಂದಿದ್ದರು.
ಮೊದಲ ಚಿತ್ರದಲ್ಲಿ ನಟಿಸಿದ್ದ ಗಾಯಕ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ, ಯುಟರ್ನ್ ನಿರ್ದೇಶಕ ಪವನ್ ಕುಮಾರ್ ಅವರನ್ನು ಕರೆತರಲಾಗಿದೆ. ಈ ನಡುವೆ ಎರಡು ಬಾರಿ ಕೋವಿಡ್ ಲಾಕ್ಡೌನ್ನಿಂದ ಸಿನಿಮಾ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಕಳೆದ ವರ್ಷದ ಅಂತ್ಯದಲ್ಲಿ ಸಿನಿಮಾ ಚಿತ್ರೀಕರಣ ಮುಗಿದಿತ್ತು. ಆದರೆ ಸಿನಿಮಾ ಬಿಡುಗಡೆಯಾಗುವುದು ತಡವಾಗುತ್ತಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೂ ಸಿನಿಮಾ ಮುಂದಿನ ತಿಂಗಳು ತೆರೆ ಕಾಣುತ್ತಿದೆ.
ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಯೋಗರಾಜ್ ಭಟ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತವಿದೆ. ಗಣೇಶ್, ದಿಗಂತ್, ಪವನ್ ಕುಮಾರ್, ಅನಂತ್ ನಾಗ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.