Amala Paul Temple visit: ಧರ್ಮದ ಕಾರಣ ನೀಡಿ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದರು...ಬೇಸರ ಹಂಚಿಕೊಂಡ 'ಹೆಬ್ಬುಲಿ' ನಟಿ
Jan 18, 2023 03:48 PM IST
ಹೆಬ್ಬುಲಿ ನಟಿ ಅಮಲಾ ಪೌಲ್
- ಅಮಲಾ ಪೌಲ್ ಇತ್ತೀಚೆಗೆ, ಕೇರಳದ ಎರ್ನಾಕುಲಂನ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ತೆರಳಿದ್ದಾರೆ. ಆದರೆ ದೇವಸ್ಥಾನದಲ್ಲಿ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ವಿಚಾರ ಬಹಳ ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕೇರಳದ ದೇವಸ್ಥಾನದಲ್ಲಿ ನಟಿ ಅಮಲಾ ಪೌಲ್‌ಗೆ ದೇವಸ್ಥಾನಕ್ಕೆ ಪ್ರವೇಶ ನೀಡದೆ ಇರುವುದು ಸುದ್ದಿಯಾಗಿದೆ. ವಿಚಾರ ತಿಳಿದ ನಟಿಯ ಅಭಿಮಾನಿಗಳು ದೇವಸ್ಥಾನದ ಆಡಳಿತ ಮಂಡಳಿ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಕೆಲವೊಂದು ಹಿಂದೂ ದೇವಾಲಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗಿನ ದಿನಗಳಲ್ಲೂ ಅನ್ಯ ಧರ್ಮದವರಿಗೆ ಪ್ರವೇಶ ನೀಡದ ಅನೇಕ ದೇವಾಲಯಗಳಿವೆ. ಅರ್ಚಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತವೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅಮಲಾ ಪೌಲ್‌ಗೆ ದೇವಸ್ಥಾನಕ್ಕೆ ಪ್ರವೇಶ ತಿರಸ್ಕರಿಸಲಾಗಿದೆ. ಅಮಲಾ ಪೌಲ್ ಕ್ರೈಸ್ತ ಧರ್ಮೀಯರು ಎಂಬುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಅಮಲಾ ಪೌಲ್ ಇತ್ತೀಚೆಗೆ, ಕೇರಳದ ಎರ್ನಾಕುಲಂನ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ತೆರಳಿದ್ದಾರೆ. ಆದರೆ ದೇವಸ್ಥಾನದಲ್ಲಿ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ. ಮಹಾದೇವ ದೇಗುಲಕ್ಕೆ ಹಿಂದೂ ಭಕ್ತರಿಗೆ ಮಾತ್ರ ಪ್ರವೇಶವಿದ್ದು, ನಿಮಗೆ ಪ್ರವೇಶವಿಲ್ಲ. ಬೇಕಿದ್ದರೆ ದೇವಸ್ಥಾನದ ಮುಂದಿರುವ ದೇವಿಯ ದರ್ಶನ ಮಾಡಿ ಹೋಗಿ ಎಂದು ಹೇಳಿರುವುದಾಗಿ ಅಮಲಾ ಪೌಲ್ ಹೇಳಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮಲಾ ಪೌಲ್, ''ದೇವಸ್ಥಾನದೊಳಗೆ ಪ್ರವೇಶಿಸಲು ನನಗೆ ಅವಕಾಶವಿಲ್ಲದಿದ್ದರೂ, ನಾನು ದೇವಿಯ ಚೈತನ್ಯವನ್ನು ಅನುಭವಿಸಿದೆ. ಮನದಲ್ಲೇ ಅವಳನ್ನು ಪ್ರಾರ್ಥಿಸಿದೆ. 2023 ರಲ್ಲೂ ಧಾರ್ಮಿಕ ತಾರತಮ್ಯ ನಡೆಯುತ್ತಿದೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಈ ತಾರತಮ್ಯ ಶಾಶ್ವತವಾಗಿ ತೊಲಗಲಿ'' ಎಂದು ಹಾರೈಸುತ್ತೇನೆ ಎಂದು ಅಮಲಾ ಪೌಲ್ ಹೇಳಿದ್ದಾರೆ. ಅಮಲಾ ಪೌಲ್‌ಗೆ ದೇವಸ್ಥಾನ ಪ್ರವೇಶ ನಿಷೇಧ ವಿಧಿಸಿರುವುದು ಚರ್ಚೆಗೆ ಕಾರಣವಾಗಿದೆ.
ಅಮಲಾ ಪೌಲ್, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸುದೀಪ್ ಜೊತೆ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ವಿವಾದಗಳಲ್ಲಿ ಸಿಲುಕಿದ್ದಾರೆ. ಅಮಲಾ ಪೌಲ್, ಮೊದಲು ನಿರ್ದೇಶಕ ಎ.ಎಲ್ ವಿಜಯ್ ಅವರನ್ನು ಮದುವೆಯಾಗಿ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ಭವಿಂದರ್ ಸಿಂಗ್ ಎಂಬಾತನ ಪರಿಚಯವಾಗಿತ್ತು. ಅಮಲಾ ಪೌಲ್, ಭವಿಂದರ್ ಸಿಂಗ್‌ನನ್ನು ಕೂಡಾ ಮದುವೆಯಾಗಿದ್ದಾರೆ ಎನ್ನಲಾದರೂ ಆಕೆ ಮಾತ್ರ ಅದನ್ನು ನಿರಾಕರಿಸಿದ್ದರು. ಕೆಲವು ದಿನಗಳ ನಂತರ ಆಕೆ, ಭವಿಂದರ್‌ನಿಂದ ಕೂಡಾ ದೂರಾಗಿದ್ದರು. ಕೆಲವು ದಿನಗಳ ಹಿಂದೆ ಅಮಲಾ ಪೌಲ್, ಮಾಜಿ ಗೆಳೆಯನ ವಿರುದ್ಧ ತಮಿಳುನಾಡಿನ ವಿಲ್ಲುಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 'ಆಮೆ' ಚಿತ್ರದಲ್ಲಿ ನಗ್ನವಾಗಿ ನಟಿಸುವ ಮೂಲಕ ಕೂಡಾ ಅಮಲಾ ಪೌಲ್ ವಿವಾದಕ್ಕೆ ಒಳಗಾಗಿದ್ದರು.