Hombale New Movie Dhomam: ಪವನ್- ಫಹಾದ್ ಸಿನಿಮಾ ಶೀರ್ಷಿಕೆ ಲಾಂಚ್; ‘ಧೂಮಮ್’ಗೂ ‘ದ್ವಿತ್ವ’ಕ್ಕೂ ಇದೆಯಾ ನಂಟು?
Sep 30, 2022 12:01 PM IST
ಪವನ್- ಫಹಾದ್ ಸಿನಿಮಾ ಶೀರ್ಷಿಕೆ ಲಾಂಚ್; ‘ಧೂಮಮ್’ಗೂ ‘ದ್ವಿತ್ವ’ಕ್ಕೂ ಇದೆಯಾ ನಂಟು?
- ಪವನ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದ ಶೀರ್ಷಿಕೆ ಶುಭ ಶುಕ್ರವಾರದಂದು ಬಿಡುಗಡೆ ಆಗಿದೆ. ಚಿತ್ರಕ್ಕೆ "ಧೂಮಮ್" ಎಂದು ನಾಮಕರಣ ಮಾಡಲಾಗಿದೆ. ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಈ ಚಿತ್ರದಲ್ಲಿ ನಾಯಕನಾಗಿ ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದಾರೆ.
ಚಂದನವನದಲ್ಲಿ ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕವೇ ಎಲ್ಲರ ಗಮನ ಸೆಳೆದಿರುವ ನಿರ್ದೇಶಕ ಪವನ್ ಕುಮಾರ್, ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ಎಲ್ಲವೂ ಒಂದಕ್ಕೊಂದು ಭಿನ್ನ. ಈ ನಿರ್ದೇಶಕನ ಜತೆಗೆ ಪುನೀತ್ ರಾಜ್‌ಕುಮಾರ್ ಸಹ ಸಿನಿಮಾ ಮಾಡುವುದು ಅಧಿಕೃತವಾಗಿತ್ತು. ಚಿತ್ರಕ್ಕೆ "ದ್ವಿತ್ವ" ಎಂಬ ಶೀರ್ಷಿಕೆಯೂ ಅಂತಿಮವಾಗಿತ್ತು. ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಬಗ್ಗೆಯೂ ಸ್ವತಃ ಪುನೀತ್ ಹೇಳಿಕೊಂಡಿದ್ದರು. ಆದರೆ ಅದು ಕೈಗೂಡಲಿಲ್ಲ.
ಹೀಗಿರುವಾಗಲೇ ಕೆಲ ತಿಂಗಳ ಹಿಂದಷ್ಟೇ "ದ್ವಿತ್ವ" ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಆ ಬಗ್ಗೆ ಯಾವುದೇ ಅಪ್‌ಡೇಟ್ ಮಾಹಿತಿ ಲಭ್ಯವಾಗಿರಲಿಲ್ಲ. ಅದಾದ ಮೇಲೆ ಹೊಂಬಾಳೆ ಸಂಸ್ಥೆ, ಮಾಲಿವುಡ್ ನಟ ಫಹಾದ್ ಫಾಸಿಲ್‌ಗೆ ಹುಟ್ಟು ಹಬ್ಬದ ಶುಭಾಶಯ ಕೋರುವ ಫೋಟೋ ಶೇರ್ ಮಾಡಿತ್ತು. ಅಲ್ಲಿಗೆ ಈ ಕಾಂಬಿನೇಷನ್ ಒಂದಾಗುವ ಸೂಚನೆ ಸಿಕ್ಕಿತ್ತು. ಇದೀಗ ಸದ್ದಿಲ್ಲದೆ, ಸಿನಿಮಾ ಶೀರ್ಷಿಕೆಯೂ ಘೋಷಣೆ ಆಗಿದೆ.
ಧೂಮಮ್ ಸಿನಿಮಾದಲ್ಲಿ ಫಹಾದ್..
ಪವನ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದ ಶೀರ್ಷಿಕೆ ಶುಭ ಶುಕ್ರವಾರದಂದು ಬಿಡುಗಡೆ ಆಗಿದೆ. ಚಿತ್ರಕ್ಕೆ "ಧೂಮಮ್" ಎಂದು ನಾಮಕರಣ ಮಾಡಲಾಗಿದೆ. ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಈ ಚಿತ್ರದಲ್ಲಿ ನಾಯಕನಾಗಿ ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದಾರೆ. "ಸೂರರೈ ಪೋಟ್ರು" ಸಿನಿಮಾದಲ್ಲಿ ನಟಿಸಿದ್ದ ಅಪರ್ಣ ಬಾಲಮುರುಳಿ ಈ ಚಿತ್ರದಲ್ಲಿ ನಾಯಕಿಯಾಗಿರಲಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಈ ಸಿನಿಮಾ ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರ ಸಿದ್ಧವಾಗಲಿದೆ. ಸದ್ಯ ಮಲಯಾಳಂ ಶೀರ್ಷಿಕೆ ಪೋಸ್ಟರ್ ಮಾತ್ರ ಬಿಡುಗಡೆ ಆಗಿದೆ.
ದ್ವಿತ್ವ- ಧೂಮಮ್ ಬೇರೆ ಬೇರೆನಾ?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಪ್ಪು ಇದ್ದಿದ್ದರೆ ಇಷ್ಟೊತ್ತಿಗೆ “ದ್ವಿತ್ವ” ಸಿನಿಮಾ ನಿರ್ಮಾಣವಾಗಿರುತ್ತಿತ್ತು. ಆದರೆ, ಕಾಲನ ನಿರ್ಣಯವೇ ಬೇರೆ. ಪುನೀತ್ ಅಕಾಲಿಕ ನಿಧನದಿಂದ "ದ್ವಿತ್ವ" ಸಿನಿಮಾ ಸೆಟ್ಟೇರಲಿಲ್ಲ. ಹೀಗಿರುವಾಗಲೇ ಆ ಕಥೆ ಯಾರ ಪಾಲಾಗಲಿದೆ? ಎಂಬಿತ್ಯಾದಿ ಪ್ರಶ್ನೆಗಳೂ ಓಡಾಡತೊಡಗಿದವು. ಆಗ ತೇಲಿ ಬಂದ ಹೆಸರು ಮಾಲಿವುಡ್ ನಟ ಫಹಾದ್ ಫಾಸಿಲ್. "ದ್ವಿತ್ವ" ಚಿತ್ರದ ಕಥೆಯಲ್ಲಿ ಫಹಾದ್ ನಟಿಸಲಿದ್ದಾರೆ ಎಂದೇ ಪುಕಾರು ಹಬ್ಬಿತು. ಆದರೆ, ಚಿತ್ರತಂಡ ಮಾತ್ರ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ಇದೀಗ "ಧೂಮಮ್" ಹೆಸರಿನ ಶೀರ್ಷಿಕೆ ಘೋಷಣೆ ಮಾಡಿಕೊಂಡಿದೆಯಾದರೂ, ಅದೇ ಇದೆನೇ, ಅಥವಾ ಬೇರೆನಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿದೆ.