Masala Chai Media: ಕರ್ನಾಟಕ ಸುತ್ತಿಸೋ ಈ 'ಮಸಾಲಾ ಚಾಯ್' ಹುಡುಗ್ರ ಬಗ್ಗೆ ನಿಮಗೆಷ್ಟು ಗೊತ್ತು? ಇವ್ರ ಊರು, ಕೆಲಸವೇನು? ಇಲ್ಲಿದೆ ಸಂದರ್ಶನ
Sep 28, 2022 05:10 PM IST
ಕರ್ನಾಟಕ ಸುತ್ತಿಸೋ ಈ 'ಮಸಾಲಾ ಚಾಯ್' ಹುಡುಗ್ರ ಬಗ್ಗೆ ನಿಮಗೆಷ್ಟು ಗೊತ್ತು? ಇವ್ರ ಊರು, ಕೆಲಸವೇನು? ಇಲ್ಲಿದೆ ಸಂದರ್ಶನ...
- ದೇಶ ಸುತ್ತಿ ನೋಡು, ಕೋಶ ಓದಿ ನೋಡು.. ಹಿರಿಯರು ಈ ಮಾತನ್ನು ಸುಮ್ಮನೆ ಹೇಳಿಲ್ಲ. ಇದರಲ್ಲಿ ಮೊದಲ ಕೆಲಸವನ್ನು ಚಾಚೂ ತಪ್ಪದೆ ಪಾಲಿಸ್ತಾದ್ದಾರೆ ಈ ಹುಡುಗ್ರು. ಈ ಹುಡುಗ್ರ ಕಣ್ಣು ಹದ್ದಿಗಿಂತ ಶಾರ್ಪ್, ರುಚಿ ರುಚಿಯಾದ ಅಡುಗೆ ಗ್ರಹಿಸೋದ್ರಲ್ಲಿ ಇವ್ರ ಮೂಗು, ಬಾಯಿ ಚುರುಕು.. ಕಿವಿನೂ ಕಮ್ಮಿ ಇಲ್ಲ... ಅವ್ರೇ ಮಸಾಲಾ ಚಾಯ್ ಮೀಡಿಯಾ ಟೀಮ್.
ದೇಶ ಸುತ್ತಿ ನೋಡು, ಕೋಶ ಓದಿ ನೋಡು.. ಹಿರಿಯರು ಈ ಮಾತನ್ನು ಸುಮ್ಮನೆ ಹೇಳಿಲ್ಲ. ಇದರಲ್ಲಿ ಮೊದಲ ಕೆಲಸವನ್ನು ಚಾಚೂ ತಪ್ಪದೆ ಪಾಲಿಸ್ತಾದ್ದಾರೆ ಈ ಹುಡುಗ್ರು. ಈ ಹುಡುಗ್ರ ಕಣ್ಣು ಹದ್ದಿಗಿಂತ ಶಾರ್ಪ್, ರುಚಿ ರುಚಿಯಾದ ಅಡುಗೆ ಗ್ರಹಿಸೋದ್ರಲ್ಲಿ ಇವ್ರ ಮೂಗು, ಬಾಯಿ ಚುರುಕು.. ಕಿವಿನೂ ಕಮ್ಮಿ ಇಲ್ಲ... ಮೊದಲೆಲ್ಲ ಸುತ್ತಾಡಬೇಕು ಅಂತ ಎಲ್ಲೆಂದರಲ್ಲಿ ಹೋಗ್ತಿದ್ರು. ಇದೀಗ ಅವ್ರಷ್ಟೇ ಅಲ್ಲ ನಾಡಿನ ಜನತೆಗೂ ತಾವು ನೋಡಿದ್ದು, ಕಂಡಿದ್ದು, ಇಷ್ಟವಾಗಿದ್ದು ಎಲ್ಲವನ್ನೂ ತೋರಿಸೋ ಪ್ರಯತ್ನ ಮಾಡ್ತಿದ್ದಾರೆ. ಅದೂ ಮಸಾಲಾ ಚಾಯ್ ಮೀಡಿಯಾ (Masala Chai Media) ಮೂಲಕ.
ಅರ್ಥ ಆಗಿರಬೇಕು ಅನಿಸುತ್ತೆ.. ನಾವಿಲ್ಲಿ ಯಾರ ಬಗ್ಗೆ ಮಾತನಾಡ್ತಿದ್ದೀವಿ ಅಂತ. ಹೌದು, ಹವ್ಯಾಸಿ ಯುವಕರ ತಂಡವೊಂದು ಏನೋ ಮಾಡಲು ಹೋಗಿ ಏನೇನೋ ಆಗಿ ಇದೀಗ ಈ ಹಂತಕ್ಕೆ ಬಂದು ನಿಂತಿದೆ. ಕರ್ನಾಟಕದ ಇಂಚಿಂಚೂ ಇವರಿಗೆ ಪಕ್ಕದ ಮನೆಯಿದ್ದಂತೆ. ಎಲ್ಲರೂ ಪ್ರವಾಸಕ್ಕೆ ಅಂತ ತೆರಳಿದರೆ, ಇವ್ರ ತಂಡ ಮಾತ್ರ ಕುತೂಹಲದ ಕಣ್ಣುಗಳನ್ನು ಪಿಳಿ ಪಿಳಿ ಬಿಟ್ಟುಕೊಂಡೇ, ರಾಜ್ಯದ ಮೂಲೆ ಮೂಲೆಯಲ್ಲಿನ ಅತ್ಯುತ್ತಮ ಕಂಟೆಂಟ್ ಹುಡುಕೋದ್ರಲ್ಲಿಯೇ ಮುಂದು. ಅವರ ಈ ಉತ್ಸಾಹವನ್ನು ನಾಡಿನ ಜನ ಮೆಚ್ಚಿದ್ದಾರೆ. ಇಷ್ಟಪಟ್ಟಿದ್ದಾರೆ.
ಹಾಗಾದರೆ, ಈ "ಮಸಾಲಾ ಚಾಯ್ ಮೀಡಿಯಾ" ಹುಡುಗ್ರ ಬಗ್ಗೆ ನಿಮಗೆಷ್ಟು ಗೊತ್ತು? ಇವರ ಹಿನ್ನೆಲೆ ಏನು? ಇವರ ತಂಡದಲ್ಲಿರುವವರು ಎಷ್ಟು ಮಂದಿ? ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳಿಗೆ ಇರುವ ಕ್ರೇಜ್ ಎಂಥದ್ದು? ಎಲ್ಲಕ್ಕಿಂತ ಹೆಚ್ಚಾಗಿ ಇವರ ತಿಂಗಳ ಆದಾಯ ಎಷ್ಟು? ಇದೆಲ್ಲದರ ಬಗ್ಗೆ "ಮಸಾಲಾ ಚಾಯ್ ಮೀಡಿಯಾ" ಅನ್ನೋ ಕನಸಿಗೆ ಜನ್ಮ ನೀಡಿದ ಫೌಂಡರ್ಸ್ ಗಳಲ್ಲಿ ಒಬ್ಬರಾದ ರಂಗನಾಥ್ Hindustan Times Kannadaದ ಜತೆಗೆ ಡಿಟೇಲ್ ಆಗಿಯೇ ಮಾತನಾಡಿದ್ದಾರೆ. ಓವರ್ ಟು ಯೂ ರಂಗನಾಥ್...
ಓದಿದ್ದು ಎಂಬಿಎ, ಮಾಡ್ತಿದ್ದದ್ದು ಫೋಟೋಗ್ರಫಿ ಬಿಜಿನೆಸ್..
"ನಾನು ರಂಗನಾಥ್, ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಎಂಬಿಎ ಮುಗಿಸಿದ್ದೇನೆ. ನಮ್ಮದು ಮೇನ್ ಬಿಜಿನೆಸ್ ಬಂದು ಫೋಟೋಗ್ರಾಫಿ.. ಫೋಮಿಟೋ (Phometo) ಹೆಸರಿನಲ್ಲಿ ವೆಡ್ಡಿಂಗ್ ಶೂಟ್, ಫ್ರೋಟೋಗ್ರಾಫಿ ಮಾಡ್ತಾ ಇದ್ವಿ. ಇದೆಲ್ಲದರ ಜತೆಗೆ ನನಗೆ ವಿಡಿಯೋ ಕಂಟೆಂಟ್ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಫೋಟೋಗ್ರಫಿ ಬಿಜಿನೆಸ್ ಶುರುವಾಗ್ತಿದ್ದಂತೆ ಕರೊನಾ ಒಕ್ಕರಿಸಿತು. ಮದುವೆ, ಕಾರ್ಯಕ್ರಮ ಎಲ್ಲವೂ ಸ್ಟಾಪ್ ಆದ್ವು. ಇದೊಂದರ ಮೇಲೆಯೇ ಡಿಪೆಂಡ್ ಆದ್ರೆ ಸಾಕಾಗಲ್ಲ ಅಂತ ಯೋಚಿಸಿ ಬೇರೆ ಏನಾದ್ರೂ ಮಾಡಬೇಕು ಅಂದುಕೊಂಡಾಗ ಈ ಕೂಸು ಹುಟ್ಟಿಕೊಂಡಿತು!
ಮಸಾಲಾ ಚಾಯ್ ಮೀಡಿಯಾ ಹೆಸರೇ ಏಕೆ?
ಬೇರೆ ಆದಾಯದ ಮೂಲ ಹುಡುಕ ಹೊರಟ ನಮಗೆ ಕಾಣಿಸಿದ್ದು ಫೇಸ್‌ಬುಕ್ ಮತ್ತು ಯೂಟ್ಯೂಬ್. ಕಂಟೆಂಟ್ ಕ್ರಿಯೇಟ್ ಐಡಿಯಾ ಹೊಳೀತು. ಕೋವಿಡ್ ಸಮಯದಲ್ಲಿಯೇ ನಾನು ನನ್ನಿಬ್ಬರು ಸ್ನೇಹಿತರು ಶಿವು, ವಿನಯ್ ಸೇರಿ ಈ ಕೆಲಸ ಆರಂಭಿಸಿದ್ವಿ. ಆರಂಭದಲ್ಲಿ ಏನು ಹೆಸರಿಡೋದು ಎಂದು ವಿಚಾರಿಸಿದ್ವಿ. ಏನೇ ಒಂದು ಚರ್ಚೆ ಮಾಡಬೇಕು ಅಂದ್ರೂ ಅಲ್ಲಿ ಒಂದು ಕಪ್ ಚಾಯ್ ಇದ್ದೇ ಇರುತ್ತೆ. ಅದನ್ನೇ ಗಮನದಲ್ಲಿಟ್ಟುಕೊಂಡು ಚಾಯ್ ಮಸಾಲಾ ಸೇರಿಸಿ, ಮೀಡಿಯಾ ಅನ್ನೋ ಒಗ್ಗರಣೆ ಹಾಕಿ. "ಮಸಾಲಾ ಚಾಯ್ ಮೀಡಿಯಾ" ನಾಮಕರಣ ಮಾಡಿದ್ವಿ. ಚಾನೆಲ್, ಪೇಜ್ ಏನೋ ಶುರುವಾಯ್ತು, ಮುಂದೇನು? ಆ ಚಿಂತೆಯೂ ಶುರುವಾಯ್ತು.
ಆರಂಭದಲ್ಲಿ ಲರ್ನಿಂಗ್ ವಿಡಿಯೋ ಹಾಕ್ತಿದ್ವಿ..
ಪೇಜ್ ಏನೋ ಶುರುವಾಯ್ತು.. ಏನು ಕಂಟೆಂಟ್ ಹಾಕಬೇಕು ಎಂಬುದು ಗೊತ್ತಿರಲಿಲ್ಲ. ಮೊದ ಮೊದಲು ಲರ್ನಿಂಗ್ ವಿಡಿಯೋಸ್ ಹಾಕಲು ಶುರು ಮಾಡಿದ್ವಿ. ಯೂಟ್ಯೂಬ್‌ನಲ್ಲಿ ಅಕೌಂಟ್ ಓಪನ್ ಹೇಗೆ? ಅದೂ ಇದೂ ಅಂತ ಒಂದಷ್ಟು ವಿಡಿಯೋ ಹಾಕೋಕೆ ಶುರುಮಾಡಿದ್ವಿ. ಆದರೆ, ನಮ್ಮ ಬ್ಯಾಡ್‌ಲಕ್ ಅದು ಕೈ ಹಿಡಿಯಲಿಲ್ಲ. ಒಂದರ್ಥದಲ್ಲಿ ನಮ್ಮ ಮೇಲೆ ನಮಗೇ ಜಿಗುಪ್ಸೆ ಆಯ್ತು. ವರ್ಕೌಟ್ ಆಗ್ತಿಲ್ಲ ಅಂತ. ಹೀಗಿರುವಾಗಲೇ ರೋಡ್ ಸೈಡ್ ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ಶಿವು ವಿಡಿಯೋ ಪೋಸ್ಟ್ ಮಾಡಿದ್ದ. ಅದು ಸಖತ್ ವೈರಲ್ ಆಯ್ತು. ಒಳ್ಳೆ ವೀಕ್ಷಣೆ ಸಿಕ್ತು. ಸೋ ಆವಾಗ.. ಓಹ್.. ಜನಕ್ಕೆ ಬೇಕಿರುವುದು ಇಂಥ ವಿಡಿಯೋಸ್ ಎಂದು ಅರ್ಥ ಆಯ್ತು. ಅಲ್ಲಿಂದ ನಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡೋ ಕೆಲಸ ಶುರುವಾಯ್ತು..
ಎಲ್ಲೆಂದರಲ್ಲಿ ಸುಮ್ನೇ ಹೋಗ್ತಾಯಿರೋದಷ್ಟೇ ನಮ್ ಕೆಲಸ..
ಮೊದಲಿಗೆ ನಾವು ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ವಿ. ಕಳಸ ಸೇರಿ ಅಲ್ಲಿನ ಪ್ಲೇಸ್‌ಗಳನ್ನು ನೋಡಿ ವಿಡಿಯೋ ಮಾಡಿದ್ವಿ. ಅಲ್ಲಿಂದ ಶುರುವಾದ ನಮ್ಮ ಜರ್ನಿ ಇದೀಗ ಕರ್ನಾಟಕದ ಬಹುತೇಕ ಭಾಗವನ್ನು ನಾವು ನಾಲ್ಕೂ ಜನ (ರಂಗನಾಥ್, ಶಿವು, ವಿನಯ್, ಸತೀಶ್ ಭಟ್) ಸುತ್ತಾಡಿದ್ದೇವೆ. ಹೊರಬಿದ್ದರೆ ನಮ್ಮ ಕ್ಯಾಮರಾ ಯಾವತ್ತೂ ಆಫ್ ಆಗುವುದಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಏನೇ ಕಂಡರೂ ಅದನ್ನು ಸೆರೆಹಿಡಿಯೋದು ನಮ್ಮ ಕೆಲಸ ಆಗಿಬಿಟ್ಟಿದೆ. ಹೊಸ ಜಾಗ, ಹೊಸ ವ್ಯಕ್ತಿಗಳನ್ನು ಪರಿಚಯಿಸೋ ಸಣ್ಣ ಕೆಲಸ ನಮ್ಮ ತಂಡದಿಂದಾಗುತ್ತಿದೆ.
ಈ ಓಡಾಟವೇ ನಮಗೆ ಅನ್ನಕ್ಕೆ ದಾರಿಯಾಗಿದೆ..
ನಮ್ಮ ನಾಲ್ಕೂ ಜನಕ್ಕೆ ಟ್ರಾವೆಲಿಂಗ್ ಅಂದ್ರೆ ಇಷ್ಟ. ಎಲ್ಲರಿಗೂ ಹುಚ್ಚು.. ಮುಂಚೆ ಟ್ರಾವೆಲಿಂಗ್ ಮಾಡ್ತಿದ್ವಿ. ಆದ್ರೆ ಈ ಥರ ವಿಡಿಯೋ ಮಾಡುತ್ತಿರಲಿಲ್ಲ. ಇದೀಗ ವಿಡಿಯೋ ಸಲುವಾಗಿಯೇ ಅನ್‌ಎಕ್ಸ್‌ಪ್ಲೋರ್ಡ್ ಸ್ಥಳಗಳಿಗೆ, ಜನರನ್ನು ಭೇಟಿ ಮಾಡುತ್ತಿದ್ದೇವೆ. ನಾರ್ಮಲ್ ವಿಚಾರ ಇದ್ದರೂ ಅದನ್ನು ತುಂಬ ಡೆಪ್ತ್ ಆಗಿಯೇ ತೋರಿಸೋ ಪ್ರಯತ್ನ ಮಾಡುತ್ತಿದ್ದೇವೆ. ಏಕೆಂದರೆ ನಮಗೀಗ ಅದು ಅನ್ನ ಕೊಡುತ್ತಿದೆ. ಪೃವೃತ್ತಿಯನ್ನೇ ಫುಲ್‌ಟೈಮ್ ವೃತ್ತಿಯನ್ನಾಗಿಸಿಕೊಂಡಿದ್ದೇವೆ. ಆದಾಯದ ಮೂಲವೂ ಇದೇ ಆಗಿರುವುದರಿಂದ ಏನೇ ಕೊಟ್ಟರೂ ಅದನ್ನು ಚೆನ್ನಾಗಿ, ವಿವರಣೆ ಸಹಿತ ನೀಡುವ ಕೆಲಸ ನಮ್ಮ ತಂಡದ ಕಡೆಯಿಂದ ಆಗುತ್ತಿದೆ.
ಆಡಿಯನ್ಸ್‌ಗೆ ನಮ್ಮ ನೆಲದ ಕಥೆಗಳು ಬೇಕು...
ಆರಂಭದಲ್ಲಿ ಪೇಜ್ ಶುರುಮಾಡಿದಾಗ, ಒಂದು ವರ್ಷದಲ್ಲಿ ಇಡೀ ಕರ್ನಾಟಕವನ್ನು ರೌಂಡ್ ಹೊಡೀಬೇಕು ಎಂದುಕೊಂಡಿದ್ವಿ.. ಆದರೆ, ಅಂದುಕೊಂಡಷ್ಟು ಅದು ಸುಲಭವಾಗಿರಲಿಲ್ಲ. ಏಕೆಂದರೆ, ಎರಡು ವರ್ಷ ಆದರೂ ನಮ್ಮ ಕರ್ನಾಟಕವನ್ನು ಮುಗಿಸಲು ಆಗುತ್ತಿಲ್ಲ. ನಮ್ಮ ಆಡಿಯನ್ಸ್‌ಗೂ ನಮ್ಮ ನೆಲದ ಕಥೆಗಳೇ ಬೇಕು. ಅದೇ ರೀತಿಯ ಕಟೆಂಟ್‌ಗಳಿಗೆ ಡಿಮಾಂಡ್ ಇರುವುದರಿಂದ ಮೊದಲು ಕರ್ನಾಟಕ ಮುಗಿಸಿ ಆಮೇಲೆ ಬೇರೆ ರಾಜ್ಯ, ದೇಶ, ವಿದೇಶದ ಪ್ಲಾನ್ ಇದೆ.
ಫುಡ್ ವ್ಲಾಗ್ ಎಲ್ಲರ ಅಚ್ಚುಮೆಚ್ಚು..
ಯಾವುದಾದರೂ ವಿಶೇಷ ಸ್ಥಳಕ್ಕೆ ಹೋದರೆ, ಅಲ್ಲಿನ ವಿಶೇಷ ತಿಂಡಿಗಳನ್ನು ಸವಿಯುವುದು ನಮ್ಮ ಇಷ್ಟದ ಕೆಲಸ. ಹಾಗಾಗಿ ನಾವು ಹೋದಲೆಲ್ಲ ಕೆಲವರು ಕಮೆಂಟ್ ಮೂಲಕ ಮಾಹಿತಿ ನೀಡಿರ್ತಾರೆ. ಅದನ್ನು ಅರಿಸಿ ಹೋಗಿ ಸಾಕಷ್ಟು ತಿಂಡಿ ಸವಿದ ಉದಾಹರಣೆಗಳಿವೆ. ಯಾವದೋ ಒಂದು ಉಪಯುಕ್ತ ಉತ್ಪನ್ನ ಮಾರುಕಟ್ಟೆಗೆ ಬಂದರೂ ಅದನ್ನು ಜನರಿಗೆ ತಿಳಿಸುತ್ತಿದ್ದೇವೆ. ಹಾಗಂತ ಎಲ್ಲರನ್ನೂ ನಾವು ಮಾತನಾಡಿಸಲು ಹೋಗಲ್ಲ. ನಮಗೆ ಯೂನಿಕ್ ಅನಿಸಬೇಕು. ಅನ್‌ಎಕ್ಸ್‌ಪ್ಲೋರ್ಡ್ ಕಂಟೆಂಟ್ ನಮಗೆ ಬೇಕು.. ಈಗಾಗಲೇ ಎಲ್ಲರ ಬಾಯಲ್ಲಿ ನಲಿಯುವ, ವೆಲ್ ಎಸ್ಟಾಬ್ಲಿಷ್‌ಡ್ ಕಂಟೆಂಟ್ ಕಡೆ ನಾವು ಹೋಗಲ್ಲ.. ಮೊನ್ನೆ ರಸ್ತೆ ಬದಿ ಬಾಳೆಹಣ್ಣು ಮಾರ್ತಿದ್ದ ಅಜ್ಜಿಯೊಬ್ಬರನ್ನು ಮಾತನಾಡಿಸಿದ್ವಿ. ಇದೀಗ ಅವ್ರು ಫುಲ್ ಫೇಮಸ್ ಆಗಿದ್ದಾರೆ. ನಮ್ಮಿಂದ ಅವರಿಗೂ ಒಳ್ಳೆಯದಾಗಬೇಕೆಂಬುದು ನಮ್ಮ ಮುಖ್ಯ ಉದ್ದೇಶ. ಒಟ್ಟಿನಲ್ಲಿ ಸಾಮಾನ್ಯರೇ ನಮಗೆ ಬೇಕಿರುವುದು..
ಕರ್ಮಷಿಯಲ್ ವಿಚಾರದಲ್ಲಿ ನಮ್ಮ ನಡುವೆ ಅಗ್ರಿಮೆಂಟ್ ಇದೆ..
ಒಂದೇ ರೀತಿಯ ಕಂಟೆಂಟ್‌ಗಳಿಗೆ ನಾವು ಸ್ಟಿಕ್ ಆಗಿಲ್ಲ. ಒಬ್ಬೊಬ್ಬರು ಒಂದೊಂದು ವೆರೈಟಿ ಕಂಟೆಂಟ್ ಕೊಡುತ್ತಿದ್ದೇವೆ. ಇತಿಹಾಸ, ಫುಡ್ ರಿವ್ಯೂ, ಪ್ರಾಡಕ್ಟ್ ರಿವ್ಯೂ etc.. ಉತ್ತರ ಕನ್ನಡ ಶೈಲಿಯಲ್ಲಿಯ ವಿಶೇಷತೆಗಳನ್ನು ಸತೀಶ್ ಭಟ್ ನೀಡ್ತಾರೆ. ಕಮರ್ಷಿಯಲ್ ವಿಚಾರಕ್ಕೆ ಬಂದರೆ, ಬಂದ ಆದಾಯದಲ್ಲಿ ಸಾಕಷ್ಟು ಬಡ ಜನರಿಗೆ ಸಹಾಯ ಮಾಡುತ್ತಿದ್ದೇವೆ. ಉಳಿದದ್ದು ನಮ್ಮ ಖರ್ಚು ಹಾಗೂ ಮುಂದಿನ ಪ್ರವಾಸಗಳಿಗೆ ಬಳಕೆ ಮಾಡಿಕೊಳ್ಳುತ್ತೇವೆ.
ದಿನಕ್ಕೆ 3-4 ವಿಡಿಯೋ ಹಾಕ್ತೀವಿ..
ಮೊದಲೆಲ್ಲ ಒಂದು ದಿನಕ್ಕೆ 5-6 ವಿಡಿಯೋ ಪೋಸ್ಟ್ ಮಾಡುತ್ತಿದ್ವಿ. ಇದೀಗ ಅದರ ಸಂಖ್ಯೆಯನ್ನು ಕಡಿಮೆ ಮಾಡಿದ್ದೇವೆ. ನಿತ್ಯ 2 ರಿಂದ 3 ಅಷ್ಟೇ ಪೋಸ್ಟ್ ಮಾಡುತ್ತಿದ್ದೇವೆ. ಹೋದ ಕಡೆಯಲ್ಲೆಲ್ಲ 10 ರಿಂದ 15 ವಿಡಿಯೋ ಮಾಡಿಕೊಂಡು ಬರ್ತೀವಿ. ಪ್ರಯಾಣದ ಖರ್ಚು ಇರೋದ್ರಿಂದ ಹೆಚ್ಚು ವಿಡಿಯೋ ಮಾಡಲೇಬೇಕು. ಅದೇ ರೀತಿ ಎಲ್ಲ ರೀತಿಯ ವಿಡಿಯೋಗಳನ್ನು ಒಂದರಲ್ಲೇ ಪೋಸ್ಟ್ ಮಾಡುತ್ತಿದ್ವಿ. ಇದೀಗ ಕೃಷಿ, ಸಿನಿಮಾ ಹೀಗೆ ಬೇರೆ ಬೇರೆ ಪೇಜ್ ಕ್ರಿಯೇಟ್ ಮಾಡಿದ್ದೇವೆ. ಆಯಾ ವಿಡಿಯೋಗಳನ್ನು ಅಲ್ಲಿಯೇ ಪೋಸ್ಟ್ ಮಾಡುತ್ತಿದ್ದೇವೆ.
ಕನ್ನಡಿಗರಿಗೆ ಧನ್ಯವಾದ ಹೇಳಲೇಬೇಕು..
ನಾವೆಲ್ಲ ಕನ್ನಡಿಗರಿಗೆ ಥ್ಯಾಂಕ್ಸ್ ಹೇಳಲೇ ಬೇಕು. ಮೊದಲೆಲ್ಲ ನಾವು ಯಾರಿಗೂ ಗೊತ್ತಿರಲಿಲ್ಲ. ಇದೀಗ ಎಲ್ಲೇ ಹೋದರೂ ಗುರುತಿಸ್ತಾರೆ.. ಮಾತನಾಡಿಸ್ತಾರೆ. ಸಿಕ್ಕಾಪಟ್ಟೆ ಪ್ರೀತಿ ಕೊಟ್ಟಿದ್ದಾರೆ. ಫೇಸ್‌ಬುಕ್‌ನಲ್ಲಿ 5 ಲಕ್ಷ ಪ್ಲಸ್ ಫಾಲೋವರ್ಸ್ ಅಂದ್ರೆ ಸಾಮಾನ್ಯ ಅಲ್ಲ. ಹಾಗಾಗಿ ನಾವು ಇದೀಗ ಏನೇ ಮಾಡುತ್ತಿದ್ದರೂ, ನೋಡುಗರನ್ನು ಗಮನದಲ್ಲಿಟ್ಟುಕೊಂಡೇ ವಿಡಿಯೋ ಮಾಡುತ್ತೇವೆ. ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಸಾಕಷ್ಟು ಸ್ಥಳಗಳನ್ನು ನೋಡುವ ಅವಕಾಶವಿದೆ. ಇದೆಲ್ಲದರಿಂದ ನಮಗೂ ಕಲಿಯಲು ಸಾಕಷ್ಟು ಸಿಕ್ಕಿದೆ.