ಗಂಡನ ಜೊತೆ ಭಾಗ್ಯಾ ಡ್ಯೂಯೆಟ್, ತಾಂಡವ್ ಡ್ಯಾನ್ಸ್ ನೋಡಿ ಬಿದ್ದು ಬಿದ್ದು ನಕ್ಕ ಸುಂದ್ರಿ, ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
Oct 24, 2024 08:50 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 23ರ ಸಂಚಿಕೆಯಲ್ಲಿ ಭಾಗ್ಯಾ ಜೊತೆ ಡ್ಯೂಯೆಟ್ ಡ್ಯಾನ್ಸ್ ಮಾಡುತ್ತಿರುವ ತಾಂಡವ್. ಡ್ಯಾನ್ಸ್ ನೋಡಿ ನಗುತ್ತಿರುವ ಪೂಜಾ, ಸುಂದ್ರಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 23ರ ಎಪಿಸೋಡ್‌ನಲ್ಲಿ ತಾಂಡವ್, ಭಾಗ್ಯಾ ಜೊತೆ ಡ್ಯಾನ್ಸ್ ಕ್ಲಾಸ್‌ಗೆ ಹೋಗುತ್ತಾನೆ. ಭಾಗ್ಯಾಳನ್ನು ದಡ್ಡಿ ಎಂದು ಹೇಳಿ ಪೇಚಿಗೆ ಸಿಲುಕುತ್ತಾನೆ. ನಂತರ ಡ್ಯಾನ್ಸ್ ಟೀಚರ್ ಸೂಚನೆಯಂತೆ ಭಾಗ್ಯಾ ಜೊತೆ ಡ್ಯಾನ್ಸ್ ಮಾಡುತ್ತಾನೆ.
Bhagyalakshmi Kannada Serial: ಡ್ಯಾನ್ಸ್ ಮಾಡುವುದು ದೊಡ್ಡ ಕೆಲಸವಲ್ಲ, ಕೈ ಕಾಲು ಆಡಿಸುತ್ತಾ ಯಾರು ಬೇಕಾದರೂ ಡ್ಯಾನ್ಸ್ ಮಾಡಬಹುದು, ಅದೂ ಒಂದು ದೊಡ್ಡ ಸಾಧನೆನಾ? ಎಂದು ತಾಂಡವ್, ಭಾಗ್ಯಾ ಡ್ಯಾನ್ಸ್ ಬಗ್ಗೆ ಮಾತನಾಡುತ್ತಾನೆ. ಇದನ್ನು ಕೇಳಿ ಕುಸುಮಾ, ಹಾಗಾದರೆ ನೀನೂ ಡ್ಯಾನ್ಸ್ ಮಾಡು, ಇವತ್ತಿನಿಂದ ಭಾಗ್ಯಾ ಹಾಗೂ ನೀನು ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಕ್ಲಾಸ್‌ಗೆ ಹೋಗಿ. ಯಾರು ಚೆನ್ನಾಗಿ ಡ್ಯಾನ್ಸ್ ಕಲಿಯುತ್ತೀರ ಅಂತ ನೋಡುತ್ತೇನೆ ಎಂದು ಚಾಲೆಂಜ್ ಮಾಡುತ್ತಾಳೆ.
ಡ್ಯಾನ್ಸ್ ಕ್ಲಾಸ್‌ನಲ್ಲಿ ತಾಂಡವ್ ಅಧಿಕ ಪ್ರಸಂಗ
ಅಮ್ಮನ ಚಾಲೆಂಜ್ ಸ್ವೀಕರಿಸುವ ತಾಂಡವ್, ಭಾಗ್ಯಾ ಜೊತೆ ಡ್ಯಾನ್ಸ್ ಕ್ಲಾಸ್‌ಗೆ ಹೋಗುತ್ತಾನೆ. ಯಾವುದೇ ಕಾರಣಕ್ಕೂ ನಾವಿಬ್ಬರೂ ಗಂಡ ಹೆಂಡತಿ ಎಂದು ಗೊತ್ತಾಗಬಾರದು ಎಂದು ತಾಂಡವ್ ಭಾಗ್ಯಾಗೆ ಕಂಡಿಷನ್ ಮಾಡುತ್ತಾನೆ. ಗಂಡನ ಬುದ್ಧಿ ಗೊತ್ತಿರುವ ಭಾಗ್ಯಾ , ಬೇಸರವಾದರೂ ಸರಿ ಎಂದು ತಲೆ ಆಡಿಸುತ್ತಾಳೆ.
ಕ್ಲಾಸ್‌ನಲ್ಲಿ ಟೀಚರ್, ಇತರ ಸ್ಟೂಡೆಂಟ್‌ಗಳಿಗೆ ಭಾಗ್ಯಾ, ತಾಂಡವ್ ಪರಿಚಯ ಮಾಡಿಕೊಡುತ್ತಾರೆ. ಎಲ್ಲರೂ ಭಾಗ್ಯಾಳನ್ನು ಹೊಗಳುತ್ತಾರೆ. ಆದರೆ ತಾಂಡವ್ ಅದನ್ನು ಸಹಿಸಿಕೊಳ್ಳುವುದಿಲ್ಲ. ಕ್ಲಾಸ್ ಶುರು ಮಾಡುವ ಮುನ್ನ ಭಾಗ್ಯಾಳನ್ನು ಮುಂದೆ ನಿಲ್ಲುವಂತೆ ಟೀಚರ್ ಹೇಳುತ್ತಾರೆ. ಆದರೆ ತಾಂಡವ್ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾನು ಹಿಂದೆ ನಿಲ್ಲುವುದಿಲ್ಲ ಎಂದು ಭಾಗ್ಯಾಳನ್ನು ಹಿಂದೆ ನಿಲ್ಲಿಸಿ, ತಾನು ಮುಂದೆ ನಿಲ್ಲುತ್ತಾನೆ.
ಎಲ್ಲೆರೆದುರು ಭಾಗ್ಯಾಳನ್ನು ದಡ್ಡಿ ಎಂದು ಹೇಳಿ ಪೇಚಿಗೆ ಸಿಲುಕಿದ ತಾಂಡವ್
ಭಾಗ್ಯಾ ಸೇರಿ ಉಳಿದ ಎಲ್ಲರೂ ಮ್ಯೂಸಿಕ್‌ಗೆ ತಕ್ಕಂತೆ ಡ್ಯಾನ್ಸ್ ಮಾಡುತ್ತಿದ್ದರೆ ತಾಂಡವ್ ಮಾತ್ರ ಏನು ಮಾಡಬೇಕೆಂದು ತಿಳಿಯದೆ ತಪ್ಪು ಸ್ಟೆಪ್ಸ್ ಮಾಡುತ್ತಾನೆ. ಇದನ್ನು ಗಮನಿಸುವ ಡ್ಯಾನ್ಸ್ ಟೀಚರ್, ಭಾಗ್ಯಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರು ಮುಂದೆ ನಿಲ್ಲಲಿ, ನೀವು ಅವರನ್ನು ಫಾಲೋ ಮಾಡಿ ಎನ್ನುತ್ತಾರೆ. ಇದರಿಂದ ತಾಂಡವ್ ಕೋಪಗೊಳ್ಳುತ್ತಾನೆ. ನೀವು ಡ್ಯಾನ್ಸ್ ಹೇಳಿಕೊಡಬೇಕೆಂದು ನಾನು ಫೀಸ್ ಕಟ್ಟಿರೋದು, ಈ ದಡ್ಡಿಯನ್ನು ನೋಡಿ ಕಲಿಯಲು ಅಲ್ಲ ಎನ್ನುತ್ತಾನೆ. ತಾಂಡವ್, ಭಾಗ್ಯಾಳನ್ನು ದಡ್ಡಿ ಎನ್ನುತ್ತಿದ್ದಂತೆ ಅಲ್ಲಿದ್ದವರು ಕೋಪಗೊಳ್ಳುತ್ತಾರೆ. ಇವರು ನಿಮಗೆ ಗೊತ್ತಾ? ದಡ್ಡಿ ಎಂದು ಏಕೆ ಹೇಳುತ್ತಿದ್ದೀರ? ಭಾಗ್ಯಾ ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆಂದು ನಿಮಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸುತ್ತಾರೆ.
ಎಲ್ಲರೂ ತನ್ನ ಮೇಲೆ ಎರಗಿದ್ದನ್ನು ಕಂಡು ತಾಂಡವ್ ಗಾಬರಿ ಆಗುತ್ತಾನೆ. ನನಗೆ ಎಲ್ಲರೂ ಇಷ್ಟು ಬೈಯ್ಯುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀಯ ಎಂದು ಭಾಗ್ಯಾಗೆ ರೇಗುತ್ತಾನೆ. ನೀವೇ ತಾನೇ ನಾವಿಬ್ಬರೂ ಪರಿಚಯ ಇಲ್ಲದವರಂತೆ ಇರೋಣ ಎಂದು ಹೇಳಿದ್ದು ಅದಕ್ಕೆ ಸುಮ್ಮನಿದ್ದೇನೆ ಎನ್ನುತ್ತಾಳೆ. ನನ್ನ ಎದುರು ನಿಂತು ಮಾತನಾಡುವಷ್ಟು ಧೈರ್ಯ ತೋರಿಸಬೇಡ, ನಮ್ಮಿಬ್ಬರಿಗೂ ಪರಿಚಯ ಇದೆ ಅಂತ ಹೇಳು ಎನ್ನುತ್ತಾನೆ. ತಾಂಡವ್‌ನನ್ನು ಹಿಡಿದು ಎಲ್ಲರೂ ಹೊರಗೆ ಕಳಿಸಬೇಕು ಎನ್ನುವಷ್ಟರಲ್ಲಿ ಭಾಗ್ಯಾ ಅಡ್ಡ ಬಂದು, ಇವರು ನನಗೆ ಪರಿಚಯ, ನನ್ನ ಪತಿ ಎನ್ನುತ್ತಾಳೆ. ಅದನ್ನು ಕೇಳಿ ಎಲ್ಲರೂ ಆಶ್ಚರ್ಯವಾಗುತ್ತಾರೆ. ಇವರು ಹೀಗೇ ತಮಾಷೆ ಮಾಡುತ್ತಾರೆ. ನಮ್ಮ ಮದುವೆ ಆಗಿ 15 ವರ್ಷಗಳಾಯ್ತು. ಹೀಗೆ ತಮಾಷೆ ಮಾಡ್ತಾರೆ. ನಾವಿಬ್ಬರೂ ಪರಿಚಯ ಇಲ್ಲದವರಂತೆ ನಟಿಸೋಣ ಎಂದಿದ್ದರು. ಅದಕ್ಕೆ ನಾನು ಸುಮ್ಮನಿದ್ದೆ, ಇದೆಲ್ಲಾ ತಮಾಷೆ ಅಷ್ಟೇ ಎಂದು ಭಾಗ್ಯಾ ಹೇಳುತ್ತಾಳೆ.
ತಾಂಡವ್ ಡ್ಯಾನ್ಸ್ ನೋಡಿ ನಕ್ಕ ಪೂಜಾ, ಸುಂದ್ರಿ
ತಾಂಡವ್ ಭಾಗ್ಯಾ ಗಂಡ ಹೆಂಡತಿ ಎಂದು ತಿಳಿದು ಎಲ್ಲರೂ ತಾಂಡವ್‌ಗೆ ಸಾರಿ ಕೇಳುತ್ತಾರೆ. ನೋಡಿ ನೀವು ಯಾವ ಗಂಡ ಹೆಂಡತಿ ಸಂಬಂಧ ಬೇಡ ಎಂದು ಹೇಳಿದ್ದರೋ ಅದೇ ಸಂಬಂಧ ಈಗ ನಿಮ್ಮನ್ನು ಹೊರ ಹಾಕುವುದನ್ನು ತಪ್ಪಿಸಿದೆ ಎನ್ನುತ್ತಾಳೆ. ಸಿನಿಮಾ ಹಾಡೊಂದಕ್ಕೆ ಜೊತೆಯಾಗಿ ಡ್ಯಾನ್ಸ್ ಮಾಡುವಂತೆ ಭಾಗ್ಯಾ-ತಾಂಡವ್‌ಗೆ ಡ್ಯಾನ್ಸ್ ಟೀಚರ್ ಹೇಳುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ತಾಂಡವ್‌ಗೆ ಡ್ಯಾನ್ಸ್ ಮಾಡಲು ಬರುವುದಿಲ್ಲ. ತಾಂಡವ್ ಡ್ಯಾನ್ಸ್ ನೋಡಲು ಬಂದ ಪೂಜಾ ಹಾಗೂ ಸುಂದರಿ ಅವನ ಪೇಚಾಟ ನೋಡಿ ಬಿದ್ದು ಬಿದ್ದು ನಗುತ್ತಾರೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್