ಕೂತಲ್ಲಿ ನಿಂತಲ್ಲಿ ಅದೇ ಚಿಂತೆ, ಹೆಂಡತಿ ಜಾಹ್ನವಿಯನ್ನು ಎಬ್ಬಿಸಿ ಮಧ್ಯರಾತ್ರಿ ಆ ಪ್ರಶ್ನೆ ಕೇಳಿದ ಸೈಕೋ ಜಯಂತ್; ಲಕ್ಷ್ಮೀ ನಿವಾಸ ಧಾರಾವಾಹಿ
Oct 25, 2024 10:30 AM IST
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್ 24ರ ಸಂಚಿಕೆಯಲ್ಲಿ ಜಯಂತ್, ಜಾಹ್ನವಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಅಕ್ಟೋಬರ್ 24ರ ಸಂಚಿಕೆಯಲ್ಲಿ ಜಾಹ್ನವಿ, ಗಂಡ ಜಯಂತ್ ಜೊತೆ ತವರು ಮನೆಗೆ ಬರುತ್ತಾಳೆ. ಹೆಂಡತಿಯನ್ನು ಮಧ್ಯರಾತ್ರಿ ಎಬ್ಬಿಸಿ ನೀವು ಇಲ್ಲಿ ಖುಷಿಯಾಗಿ ಇರುವಷ್ಟು ನನ್ನ ಜೊತೆ ಏಕೆ ಖುಷಿಯಾಗಿರುವುದಿಲ್ಲ ಎಂದು ಜಯಂತ್ ಪ್ರಶ್ನಿಸುತ್ತಾನೆ.
Lakshmi Nivasa Serial: ಹೊಸದಾಗಿ ಮದುವೆ ಆದ ಭಾವನಾ ಹಾಗೂ ಸಿದ್ದೇಗೌಡ ಇಬ್ಬರಿಗೂ ಜಾಹ್ನವಿ ಕೋರಿಕೆಯಂತೆ ಲಕ್ಷ್ಮೀ-ಶ್ರೀನಿವಾಸ್ ಊಟಕ್ಕೆ ಆಹ್ವಾನಿಸುತ್ತಾರೆ. ಜಾನು ಕೂಡಾ ಗಂಡ ಜಯಂತ್ ಜೊತೆ ಹೊಸ ಜೋಡಿಗೆ ಗಿಫ್ಟ್ ಕೊಡಲು ತವರು ಮನೆಗೆ ಬಂದು ಉಳಿದುಕೊಳ್ಳುತ್ತಾಳೆ. ಗೌಡ್ರ ಸಲಹೆಯಂತೆ ಭಾವನಾ, ಸಿದ್ದೇಗೌಡನ ಜೊತೆ ತವರು ಮನೆಗೆ ಹೊರಡಲು ಒಪ್ಪುತ್ತಾಳೆ.
ಜಯಂತನಿಗೆ ಜಾನು ನನ್ನ ಜೊತೆ ಖುಷಿಯಾಗಿಲ್ಲ ಎಂಬ ಅನುಮಾನ
ಜಯಂತನಿಗೆ ಯಾವಾಗಲೂ ಜಾನು ಮೇಲೆ ಅನುಮಾನ, ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇದ್ದರೂ ಸೈಕೋ ರೀತಿ ವರ್ತಿಸುತ್ತಾನೆ. ಮನಸ್ಸಲ್ಲಿ ಸದಾ ಇಲ್ಲದ ಯೋಚನೆ ಮಾಡುವ ಜಯಂತ್, ಮಲಗಿದ್ದ ಜಾಹ್ನವಿಯನ್ನು ಮಧ್ಯರಾತ್ರಿ ಎಬ್ಬಿಸಿ ಒಂದು ಪ್ರಶ್ನೆ ಕೇಳುತ್ತಾನೆ. ನನ್ನ ಜೊತೆ ಆ ಮನೆಯಲ್ಲಿ ಇರುವ ಚಿನ್ನುಮರಿಯೇ ಬೇರೆ, ಇಲ್ಲಿ ಬಂದಾಗ ಕಾಣುವ ಚಿನ್ನುಮರಿಯೇ ಬೇರೆ. ನೀವು ನಿಮ್ಮ ತವರು ಮನೆಯಲ್ಲಿ ಖುಷಿಯಾಗಿರುವಂತೆ ನನ್ನ ಜೊತೆ ಏಕೆ ಖುಷಿಯಾಗಿರುವುದಿಲ್ಲ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಉತ್ತರಿಸುವ ಜಾಹ್ನವಿ ನೀವು ತಪ್ಪು ತಿಳಿದಿದ್ದೀರಿ, ನಾನು ನಿಮ್ಮ ಜೊತೆಯೂ ಬಹಳ ಖುಷಿಯಾಗಿದ್ದೇನೆ. ನೀವು ಮನಸ್ಸಿನಲ್ಲಿ ಇಲ್ಲದ್ದನ್ನೆಲ್ಲಾ ಯೋಚನೆ ಮಾಡಬೇಡಿ, ಅಪರೂಪಕ್ಕೆ ಅಪ್ಪ-ಅಮ್ಮನನ್ನು ನೋಡುವ ಕಾರಣ ಸ್ವಲ್ಪ ಹೆಚ್ಚು ಖುಷಿಯಾಗುತ್ತೇನೆ ಅಷ್ಟೇ ಎಂದು ಉತ್ತರಿಸುತ್ತಾಳೆ.
ಗಂಡನ ಪ್ರಶ್ನೆಗೆ ಸಮಾಧಾನದ ಉತ್ತರ ನೀಡುವ ಜಾಹ್ನವಿ
ಅಷ್ಟಕ್ಕೆ ಸಮಾಧಾನಗೊಳ್ಳದ ಜಯಂತ್, ನಿಮ್ಮ ಕೈಗೆ ಪೆಟ್ಟಾಗಿದ್ದು ನಾನು ಬೇಕೆಂದು ಮಾಡಿದ್ದಲ್ಲ, ಅದು ನಿಮಗೂ ಗೊತ್ತು, ಈ ವಿಚಾರದ ಬಗ್ಗೆ ನಿಮ್ಮ ಮನೆಯವರ ಬಳಿ ಹೇಳಿದ್ದಿರಾ ಎಂದು ಕೇಳುತ್ತಾನೆ. ಗಂಡನ ಮೇಲೆ ಪ್ರೀತಿ ಇರುವ ಯಾವ ಹೆಂಡತಿಯಾದರೂ ಗಂಡನ ಬಗ್ಗೆ ಮನೆಯವರ ಬಳಿ ಹೇಳುತ್ತಾಳಾ? ನಾನು ಏನೂ ಹೇಳಿಲ್ಲ, ನನಗೆ ನೀವು ನಿಮ್ಮ ಪ್ರೀತಿ ಮಾತ್ರ ಮುಖ್ಯ ಎನ್ನುತ್ತಾಳೆ. ಇದರಿಂದ ಜಯಂತ್ ಖುಷಿಯಾಗುತ್ತಾನೆ. ಸದ್ಯ, ಇವರು ಕೈಗೆ ಆದ ಗಾಯದ ಬಗ್ಗೆ ಮನೆಯವರ ಬಳಿ ಹೇಳುತ್ತಾರೆ ಎಂದುಕೊಂಡೆ, ಈಗ ಸಮಾಧಾನವಾಯ್ತು ಎಂದು ಮನಸ್ಸಿನಲ್ಲೇ ನಿಟ್ಟುಸಿರು ಬಿಡುತ್ತಾನೆ.
ಗಂಡನ ಮನೆಯಿಂದ ತವರು ಮನೆಗೆ ಹೊರಟ ಸಿಂಚನಾ
ಸಿದ್ದೇಗೌಡ ಹಾಗೂ ಭಾವನಾ, ಮನೆಗೆ ಬರುತ್ತಿದ್ದಾರೆ ಎಂದು ತಿಳಿದ ಸಿಂಚನಾ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ತವರು ಮನೆಗೆ ಹೋಗಲು ಸಿದ್ಧಳಾಗುತ್ತಾಳೆ. ಇದನ್ನು ನೋಡಿ ಹರೀಶ್ ಬೇಸರಗೊಳ್ಳುತ್ತಾನೆ. ನನಗೆ ಅವರಿಬ್ಬರ ಮುಖವನ್ನು ನೋಡಲು ಇಷ್ಟವಿಲ್ಲ ಎಂದು ಸಿಂಚನ ಹೇಳುತ್ತಾಳೆ. ನೀನೂ ಒಂದು ಹೆಣ್ಣಾಗಿ , ಮತ್ತೊಂದು ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಕ್ಕನಿಗೆ ಮದುವೆ ಆಗುತ್ತಿಲ್ಲ ಅನ್ನೋದು ನಮಗೆ ಚಿಂತೆಯಾಗಿತ್ತು. ಆದರೆ ಈಗ ಅವಳಿಗೆ ಮದುವೆ ಆಗಿದೆ. ಗಂಡನ ಮನೆಗೆ ಹೋಗಿದ್ದಾಳೆ, ಅದು ನಿನಗೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸುತ್ತಾನೆ. ನೀವು ಎಷ್ಟೇ ಹೇಳಿದರೂ ಅವರು ಇಲ್ಲಿ ಬಂದಾಗ ನನಗೆ ಇರಲು ಇಷ್ಟವಿಲ್ಲ. ನಾನು ಅಮ್ಮನ ಮನೆಗೆ ಹೋಗುತ್ತೇನೆ. ಇವರು ಅಲ್ಲಿಗೆ ಬಂದಾಗ ಮತ್ತೆ ವಾಪಸ್ ಬರುತ್ತೇನೆ ಎನ್ನುತ್ತಾಳೆ. ಹರೀಶ್ ಬೇರೆ ದಾರಿ ಇಲ್ಲದೆ ಸಿಂಚನಾಳನ್ನು ತವರು ಮನೆಗೆ ಕಳಿಸಿಕೊಡುತ್ತಾನೆ.
ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಪೂರ್ವಿ- ನಟಿ ಪ್ರಕೃತಿ ಪ್ರಸಾದ್
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ