logo
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಹೋಮ್‌ ಲೋನ್‌ ಕಟ್ಟೋಕೆ ಒಡವೆ ಅಡವಿಡಲು ಮುಂದಾದ ಭಾಗ್ಯಾ; ವಿಷಯ ಗೊತ್ತಿಲ್ಲದೆ ಕುಸುಮಾ ಮಾಡಿದ್ದೇ ಬೇರೆ

Bhagyalakshmi Serial: ಹೋಮ್‌ ಲೋನ್‌ ಕಟ್ಟೋಕೆ ಒಡವೆ ಅಡವಿಡಲು ಮುಂದಾದ ಭಾಗ್ಯಾ; ವಿಷಯ ಗೊತ್ತಿಲ್ಲದೆ ಕುಸುಮಾ ಮಾಡಿದ್ದೇ ಬೇರೆ

HT Kannada Desk HT Kannada

Dec 21, 2023 08:00 AM IST

google News

'ಭಾಗ್ಯಲಕ್ಷ್ಮಿ' ಧಾರಾವಾಹಿ ಡಿಸೆಂಬರ್‌ 20ರ ಸಂಚಿಕೆ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್‌ 20ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

'ಭಾಗ್ಯಲಕ್ಷ್ಮಿ' ಧಾರಾವಾಹಿ ಡಿಸೆಂಬರ್‌ 20ರ ಸಂಚಿಕೆ
'ಭಾಗ್ಯಲಕ್ಷ್ಮಿ' ಧಾರಾವಾಹಿ ಡಿಸೆಂಬರ್‌ 20ರ ಸಂಚಿಕೆ (PC: Colors Kannada)

Bhagyalakshmi Kannada Serial: ಶ್ರೇಷ್ಠಾ ತಾಯಿ ಯಶೋಧಾ ಕರೆ ಮಾಡಿ ಇಬ್ಬರ ಎಂಗೇಜ್‌ಮೆಂಟ್‌ ಫಿಕ್ಸ್‌ ಮಾಡಿರುವುದಾಗಿ ಹೇಳುತ್ತಾರೆ. ಇದು ಶ್ರೇಷ್ಠಾಗೆ ಖುಷಿ ಎನಿಸಿದರೂ ತಾಂಡವ್‌ಗೆ ಭಯವಾಗುತ್ತದೆ. ಆದರೂ ಬಲವಂತಕ್ಕೆ ಸರಿ ಎನ್ನುತ್ತಾನೆ. ಅಷ್ಟರಲ್ಲಿ ಮಹೇಶ, ತಾಂಡವ್‌ ಹಾಗೂ ಶ್ರೇಷ್ಠಾ ಬೆಟ್ಟದ ಮೇಲಿರುವ ವಿಡಿಯೋವನ್ನು ತಾಂಡವ್‌ ಮೊಬೈಲ್‌ಗೆ ಕಳಿಸುತ್ತಾನೆ. ಇದನ್ನು ನೋಡಿ ತಾಂಡವ್‌ ಕೋಪ ನೆತ್ತಿಗೇರುತ್ತದೆ.

50 ಸಾವಿರ ಡಿಮ್ಯಾಂಡ್‌ ಮಾಡಿದ ಮಹೇಶ

ಮಹೇಶನಿಗೆ ಕರೆ ಮಾಡುವ ತಾಂಡವ್‌, ಈ ರೀತಿ ಬ್ಲಾಕ್‌ ಮೇಲ್‌ ಮಾಡಬೇಡ ಎನ್ನುತ್ತಾನೆ. ಆದರೆ ಮಹೇಶ ತಾಂಡವ್‌ಗೆ ಹೆದರುವ ಮನುಷ್ಯ ಅಲ್ಲವೇ ಅಲ್ಲ. ನಾನು ಏನನ್ನೂ ಫೋನಿನಲ್ಲಿ ಮಾತನಾಡುವುದಿಲ್ಲ, ಪಾರ್ಕಿಗೆ ಬಾ ಅಲ್ಲೇ ಮಾತನಾಡುತ್ತೇನೆ ಎನ್ನುತ್ತಾನೆ. ಮಹೇಶ ಹೇಳಿದಂತೆ ತಾಂಡವ್‌ ಶ್ರೇಷ್ಠಾ ಇಬ್ಬರೂ ಪಾರ್ಕಿಗೆ ಹೋಗುತ್ತಾರೆ. ಅಲ್ಲಿಗೆ ಮಹೇಶನ ಜೊತೆ ಸುಂದರಿಯೂ ಬರುತ್ತಾಳೆ. ವಿಡಿಯೋ ಡಿಲೀಟ್‌ ಮಾಡುವಂತೆ ತಾಂಡವ್‌ , ಮಹೇಶನಿಗೆ ಹೇಳುತ್ತಾನೆ. ಆದರೆ ಮಹೇಶ ಒಪ್ಪುವುದಿಲ್ಲ. ಅಷ್ಟೇ ಅಲ್ಲ 50 ಸಾವಿರ ಕೊಡುವಂತೆ ಡಿಮ್ಯಾಂಡ್‌ ಮಾಡುತ್ತಾನೆ. ನನ್ನ ಬಳಿ ಹಣವಿಲ್ಲ, ನಾನೇ ಎಲ್ಲವನ್ನೂ ಕಳೆದುಕೊಂಡು ಕೂತಿದ್ದೇನೆ. ಅಷ್ಟೆಲ್ಲಾ ಹಣ ಕೊಡಲು ಸಾಧ್ಯವಿಲ್ಲ ಎಂದು ತಾಂಡವ್‌ ಹೇಳುತ್ತಾನೆ.

ಹಣ ಇಲ್ಲದ ಮೇಲೆ ಇಬ್ಬರು ಹುಡುಗಿಯರು ಏಕೆ ಬೇಕಿತ್ತು. ಎರಡು ಸಂಸಾರ ನಿಭಾಯಿಸುವವನು ಇಬ್ಬರು ತಂದೆತಾಯಿಯನ್ನು ನೋಡಿಕೊಳ್ಳಬೇಕು. ವಿಡಿಯೋ ಡಿಲೀಟ್‌ ಮಾಡಲಾಗುವುದಿಲ್ಲ, ಹಣ ಕೇಳದೆಯೂ ಇರುವುದಿಲ್ಲ. ಆದರೆ ಡಿಸ್ಕೌಂಟ್‌ ಮಾಡಬಹುದು. ಹಣ ಕೊಡುವವರೆಗೂ ಸುಂದರಿ ನಿಮ್ಮಿಬ್ಬರ ಜೊತೆ ಮನೆಗೆ ಬರುತ್ತಾಳೆ ಎಂದು ಮಹೇಶ ಹೇಳಿದಾಗ ಇಬ್ಬರಿಗೂ ಶಾಕ್‌ ಆಗುತ್ತದೆ. ನಮ್ಮ ಮನೆಗೆ ಇವಳು ಏಕೆ ಬರಬೇಕು, ನಮಗೆ ಒಪ್ಪಿಗೆ ಇಲ್ಲ ಎಂದು ಅಲ್ಲಿಂದ ಹೊರಡುತ್ತಾರೆ. ರಾತ್ರಿ ತಾಂಡವ್‌ ಹಾಗೂ ಶ್ರೇಷ್ಠಾ ಊಟ ಮಾಡುವಾಗ ಇದೇ ವಿಚಾರವಾಗಿ ಮಾತನಾಡುತ್ತಾರೆ. ಆ ಸುಂದರಿಯನ್ನು ಇಲ್ಲಿಗೆ ಬರಲು ನಾವು ಬೇಡ ಅಂದಿದ್ದು ಒಳ್ಳೆಯದಾಯ್ತು ಎಂದುಕೊಳ್ಳುತ್ತಿರುವಂತೆ ಯಾರೋ ಜೋರಾಗಿ ಬಾಗಿಲು ಬಡಿದಂತೆ ಆಗುತ್ತದೆ.

ಗಂಟು ಮೂಟೆ ಹೊತ್ತು ಶ್ರೇಷ್ಠಾ ಮನೆಗೆ ಬಂದ ಸುಂದರಿ

ಮನೆಗೆ ನನ್ನ ಅಮ್ಮನೇ ಬಂದಿರಬೇಕು ಎಂದು ಹೆದರುವ ತಾಂಡವ್‌, ಮೇಲೆ ಅವಿತುಕೊಳ್ಳುತ್ತಾನೆ. ಆದರೆ ಬಾಗಿಲು ತೆರೆದು ನೋಡಿದರೆ ಮನೆ ಓನರ್‌ ಜೊತೆ ಸುಂದರಿ ನಿಂತಿರುತ್ತಾಳೆ. ಅವಳನ್ನು ನೋಡಿ ಶ್ರೇಷ್ಠಾ ಗಾಬರಿಯಾಗುತ್ತಾಳೆ. ಇಲ್ಲಿಗೆ ಏಕೆ ಬಂದೆ ಏಕವಚನದಲ್ಲಿ ಮಾತನಾಡುತ್ತಾಳೆ. ಅತ್ತೆಯನ್ನು ಹೀಗೆ ಏಕವಚನದಲ್ಲಿ ಮಾತನಾಡಿಸುವುದು ತಪ್ಪು, ನಿನ್ನ ಗಂಡ ಎಲ್ಲಿ ಎನ್ನುತ್ತಾ ಸುಂದರಿಯನ್ನು ಮನೆ ಒಳಗೆ ಕರೆಯುತ್ತಾರೆ. ತಾಂಡವ್‌ನನ್ನು ನೋಡುವ ಮನೆ ಓನರ್, ಮಗ ಕೆಲಸದಲ್ಲಿ ಇದ್ದುಕೊಂಡು ತಂದೆ ತಾಯಿಯನ್ನು ಈ ರೀತಿ ದೂರ ಇಡಬಾರದು. ಬೆಂಗಳೂರಿನಲ್ಲಿ 2 ಬಾಡಿಗೆ ಮನೆ ಏಕೆ ಇನ್ಮುಂದೆ ನಿಮ್ಮ ಅಮ್ಮ ಇಲ್ಲೇ ಇರುತ್ತಾರೆ ಎನ್ನುತ್ತಾರೆ. ಇದು, ತಾಂಡವ್‌ ಹಾಗೂ ಶ್ರೇಷ್ಠಾ ಪರಿಸ್ಥಿತಿ ಗಂಟಲಿಗೆ ಬಿಸಿ ತುಪ್ಪ ಸಿಲುಕಿದಂತೆ ಆಗಿದೆ.

ಇತ್ತ ಭಾಗ್ಯಾ, ಬ್ಯಾಂಕ್‌ನವರು ಇಎಂಐ ಕಟ್ಟಲು ಹೇಳಿದ್ದು, ತಾಂಡವ್‌ ಕಾಲ್‌ ಮಾಡಿದ್ದನ್ನು ಅತ್ತೆಗೆ ಹೇಳುವುದಾ ಬೇಡವೋ ಎಂದು ಯೋಚಿಸುವಾಗ ಮತ್ತೆ ಬಾಬಾ ಅವಳ ಎದುರಾಗಿ ಧೈರ್ಯ ಹೇಳುತ್ತಾರೆ. ಮುಂದೆ ನೀನು ಸುಖವಾಗಿರಬೇಕೆಂದರೆ ಈಗ ಕಷ್ಟ ಅನುಭವಿಸಲೇಬೇಕು. ಎಲ್ಲದಕ್ಕೂ ಅಳುವೇ ಪರಿಹಾರವಲ್ಲ, ಧೈರ್ಯದಿಂದ ಇರು ಎನ್ನುತ್ತಾರೆ. ಭಾಗ್ಯ ಅದೇ ಯೋಚನೆಯಿಂದ ಮನೆಗೆ ಬರುತ್ತಾಳೆ. ಅವಳಿಗೆ ಲೋನ್‌ ವಿಚಾರದ್ದೇ ಚಿಂತೆ. ನಾಳೆ ಮನೆಯಲ್ಲಿ ಪೂಜೆ ಇದೆ. ಅಡುಗೆ ಮಾಡಬೇಕು ಹಾಗೇ ಪುರೋಹಿತರಿಗೆ ದುಡ್ಡು ಕೊಡಬೇಕು ಎಲ್ಲದಕ್ಕೂ ವ್ಯವಸ್ಥೆ ಮಾಡು ಎಂದು ಕುಸುಮಾ ಹೇಳುತ್ತಾಳೆ.

ಒಡವೆ ಅಡವಿಡಲು ನಿರ್ಧರಿಸುವ ಭಾಗ್ಯಾ

ಮನೆಯಲ್ಲಿ ಪೂಜೆ ಮಾಡಿದರೆ ಲೋನ್‌ ಕಟ್ಟುವುದು ಹೇಗೆ ಎಂದು ಭಾಗ್ಯಾ ಯೋಚಿಸುವಾಗ ಆಕೆಗೆ ಒಡವೆ ನೆನಪಾಗುತ್ತದೆ. ಈ ಒಡವೆಗಳನ್ನು ಅಡವಿಡಲು ಕೂಡಾ ನನಗೆ ಮನಸಿಲ್ಲ. ಎಲ್ಲಾ ವಿಚಾರವನ್ನು ಅತ್ತೆಗೆ ಹೇಳಿದರೆ ಅವರು ಅವರ ಬೇಸರಗೊಳ್ಳುತ್ತಾರೆ. ಆದ್ದರಿಂದ ಒಡವೆಯನ್ನು ಅಡವಿಟ್ಟು 2-3 ತಿಂಗಳ ನಂತರ ಬಿಡಿಸಿಕೊಳ್ಳುತ್ತೇನೆ ಎಂದು ಯೋಚಿಸುವಾಗಲೇ ಕುಸುಮಾ ಅಲ್ಲಿಗೆ ಬಂದು ನಾಳೆ ಹಾಕಿಕೊಳ್ಳಲು ಒಡವೆ ನೋಡುತ್ತಿದ್ದೀಯಾ? ಕೊಡು ನಾನು ತೆಗೆದಿಡುತ್ತೇನೆ, ನಾನೂ ಇಲ್ಲಿಗೆ ಒಡವೆ ಬಗ್ಗೆ ಕೇಳೋದಕ್ಕೆ ಬಂದಿದ್ದು ಎಂದು ಅದನ್ನು ಭಾಗ್ಯಾ ಕೈಯಿಂದ ಕಸಿದುಕೊಂಡು ಹೋಗುತ್ತಾಳೆ. ಒಡವೆ ಗಿರವಿ ಇಡಲು ನಿರ್ಧರಿಸಿದ್ದ ಭಾಗ್ಯಾಗೆ ಮತ್ತೇನು ಮಾಡಬೇಕೆಂದು ತೋಚುವುದಿಲ್ಲ.

ಲೋನ್‌ ವಿಚಾರವನ್ನು ಭಾಗ್ಯಾ ಅತ್ತೆಗೆ ಹೇಳದೆ ಹಾಗೇ ಬಚ್ಚಿಡುತ್ತಾಳಾ? ಇತ್ತ ಸುಂದರಿ ಜೊತೆಗೆ ಮಹೇಶ ಕೂಡಾ ತಾಂಡವ್‌ ಹಾಗೂ ಶ್ರೇಷ್ಠಾ ಜೊತೆ ಬಂದಿರುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ