ಶ್ರೇಷ್ಠಾಳನ್ನು ಹುಡುಕಿ ಅವಳ ಮನೆಗೇ ಹೊರಟ ಭಾಗ್ಯಾ, ಅದೇ ಸಮಯಕ್ಕೆ ಅಲ್ಲಿಗೆ ಬಂದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Oct 04, 2024 10:49 AM IST
ಶ್ರೇಷ್ಠಾಳನ್ನು ಹುಡುಕಿ ಅವಳ ಮನೆಗೇ ಹೊರಟ ಭಾಗ್ಯಾ, ಅದೇ ಸಮಯಕ್ಕೆ ಅಲ್ಲಿಗೆ ಬಂದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 3ರ ಎಪಿಸೋಡ್‌ನಲ್ಲಿ ಭಾಗ್ಯಾ ಶ್ರೇಷ್ಠಾಳನ್ನು ಹುಡುಕಿಕೊಂಡು ಅವಳ ಮನೆಗೆ ಹೋಗುತ್ತಾಳೆ. ಬಾಗಿಲು ಬಡಿದರೂ, ಕಾಲ್ ಮಾಡಿದರೂ ಶ್ರೇಷ್ಠಾ ಬಾಗಿಲು ತೆಗೆಯುವುದಿಲ್ಲ. ಅದೇ ಸಮಯಕ್ಕೆ ಅಲ್ಲಿಗೆ ತಾಂಡವ್ ಬರುತ್ತಾನೆ. ಗಂಡನನ್ನು ನೋಡಿ ಭಾಗ್ಯಾ ಬಚ್ಚಿಟ್ಟುಕೊಳ್ಳುತ್ತಾಳೆ.
Bhagyalakshmi Kannada Serial: ಭಾಗ್ಯಾಗೆ ಎಲ್ಲಾ ವಿಚಾರ ತಿಳಿಸುತ್ತೇನೆ ಎಂದು ಹೇಳಿ ಹೊರಟ ಶ್ರೇಷ್ಠಾಳನ್ನು ಸುಂದ್ರಿ, ಪೂಜಾ ಸೇರಿ ಸ್ಟೋರ್ ರೂಮ್‌ನಲ್ಲಿ ಕಟ್ಟಿ ಹಾಕುತ್ತಾರೆ. ಅವಳು ಕಿರುಚದಂತೆ ಬಾಯಿಗೆ ಬಟ್ಟೆ ಕಟ್ಟುತ್ತಾರೆ. ಇದನ್ನು ನೋಡಿ ಕುಸುಮಾ ಹೀಗೆಲ್ಲಾ ಮಾಡುವುದು ಸರಿ ಇಲ್ಲ ಎನ್ನುತ್ತಾಳೆ. ಅದರೆ ಬೇರೆ ವಿಧಿ ಇಲ್ಲದೆ ಸುಮ್ಮನಾಗುತ್ತಾಳೆ.
ಶ್ರೇಷ್ಠಾಳನ್ನು ಮನೆಯಿಂದ ಬೇರೆ ಕಡೆ ಕರೆದೊಯ್ಯುವಂತೆ ಸೂಚಿಸಿದ ಕುಸುಮಾ
ಅದೇ ಸಮಯಕ್ಕೆ ಭಾಗ್ಯಾ ಮನೆಗೆ ಬರುತ್ತಾಳೆ. ಎಲ್ಲರೂ ಸ್ಟೋರ್ ರೂಮ್‌ನಿಂದ ಹೊರ ಬರುವುದನ್ನು ನೋಡಿ, ಎಲ್ಲರೂ ಅಲ್ಲಿ ಏನು ಮಾಡುತ್ತಿದ್ದೀರಿ? ನಾನು ಕಳೆದ ವಾರವಷ್ಟೇ ಸ್ಟೋರ್ ರೂಮ್ ಕ್ಲೀನ್ ಮಾಡಿದ್ದೇನೆ ಎನ್ನುತ್ತಾಳೆ. ಭಾಗ್ಯಾಗೆ ಏನು ಉತ್ತರ ಕೊಡಬೇಕೆಂದು ತೋಚದೆ ಮೂವರೂ ತಡಬಡಾಯಿಸುತ್ತಾರೆ. ನಂತರ ಸುಂದ್ರಿ ಈ ಮನೆಗೆ ಹೊಸಬಳು, ಸ್ವಲ್ಪ ದಿನ ಇಲ್ಲೇ ಇರುತ್ತಾಳೆ. ಅದಕ್ಕೆ ಅವಳಿಗೆ ಮನೆ ತೋರಿಸುತ್ತಿದ್ದೆ ಎಂದು ಪೂಜಾ ಹೇಳುತ್ತಾಳೆ. ಕುಸುಮಾ ಕೂಡಾ ಹೌದು, ಸುಂದ್ರಿಗೆ ಮನೆ ತೋರಿಸುವಂತೆ ನಾನೇ ಪೂಜಾಗೆ ಹೇಳಿದೆ ಎನ್ನುತ್ತಾಳೆ. ಮೂವರು ಹೇಳುತ್ತಿರುವುದು ನಿಜವೆಂದುಕೊಂಡು ಭಾಗ್ಯಾ ಸುಮ್ಮನಾಗುತ್ತಾಳೆ. ಆದರೆ ಅವಳಿಗೆ ತಾಂಡವ್ ಹೇಳಿದ ಮಾತುಗಳಿಂದ ಮನಸ್ಸಿನಲ್ಲೇ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಭಾಗ್ಯಾ ನನ್ನ್ನನು ಏನೋ ಕೇಳಬೇಕೆಂದು ಪ್ರಯತ್ನಿಸುತ್ತಿದ್ದಾಳೆ ಎಂದು ತಿಳಿದ ಕುಸುಮಾ, ಅವಳನ್ನು ತಡೆಯುತ್ತಾಳೆ. ನೀನು ಇನ್ನೂ ಹೋಟೆಲ್‌ಗೆ ಏಕೆ ಹೋಗಿಲ್ಲ, ಮೊದಲು ಹೋಗು ಇಲ್ಲವಾದರೆ ನಿನ್ನ ಕೆಲಸಕ್ಕೆ ತೊಂದರೆ ಆಗುತ್ತದೆ ಎನ್ನುತ್ತಾಳೆ. ಭಾಗ್ಯಾ ಮರು ಮಾತನಾಡದೆ ಅಲ್ಲಿಂದ ಹೊರಡುತ್ತಾಳೆ. ಶ್ರೇಷ್ಠಾ ಇಲ್ಲಿ ಇರುವತನಕ ನಮಗೆ ಏನೂ ಭಯವಿಲ್ಲ ಎಂದು ಪೂಜಾ, ಸುಂದ್ರಿ ಹೇಳುತ್ತಾರೆ. ಇಲ್ಲ, ಅವಳು ಇಲ್ಲಿ ಇದ್ದರೆ ನಮಗೆ ಸಮಸ್ಯೆ, ಇಲ್ಲಿ ಇದ್ದಷ್ಟೂ ದಿನ ನೆಮ್ಮದಿ ಇರುವುದಿಲ್ಲ. ಅವಳನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಕುಸುಮಾ ಹೇಳುತ್ತಾಳೆ. ನಮಗೆ ಒಂದು ದಿನ ಸಮಯ ಕೊಡಿ ಏನಾದರೂ ಮಾಡುತ್ತೇವೆ ಎಂದು ಪೂಜಾ, ಸುಂದ್ರಿ ಕುಸುಮಾಳನ್ನು ಸಮಾಧಾನ ಮಾಡುತ್ತಾರೆ.
ಶ್ರೇಷ್ಠಾ ಬಳಿ ಉತ್ತರ ಪಡೆಯಲು ಅವಳ ಮನೆಗೆ ಹೊರಟ ಭಾಗ್ಯಾ
ಹೋಟೆಲ್ ಕೆಲಸ ಮುಗಿಸಿಕೊಂಡು ಭಾಗ್ಯಾ ಅತ್ತೆಗೆ ಕರೆ ಮಾಡುತ್ತಾಳೆ. ನಾನು ಮನೆಗೆ ಬರುವುದು ತಡವಾಗುತ್ತದೆ ಎಂದು ತಿಳಿಸುತ್ತಾಳೆ. ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳಿದಾಗ ನನ್ನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದೇನೆ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಸೊಸೆ ಏನು ಮಾಡುತ್ತಿದ್ದಾಳೆ ಎಂದು ತಿಳಿಯದೆ ಕುಸುಮಾ ಏನೂ ತೋಚದೆ ಸುಮ್ಮನಾಗುತ್ತಾಳೆ. ಇತ್ತ ಭಾಗ್ಯಾ, ಶ್ರೇಷ್ಠಾಳನ್ನು ಹುಡುಕಿಕೊಂಡು ಅವಳ ಮನೆಗೆ ಹೋಗುತ್ತಾಳೆ. ಆದರೆ ಎಷ್ಟು ಬಾಗಿಲು ಬಡಿದರೂ ಯಾರೂ ಬಾಗಿಲು ತೆಗೆಯುವುದಿಲ್ಲ. ಕಾಲ್ ಮಾಡೋಣ ಎಂದು ಶ್ರೇಷ್ಠಾ ನಂಬರ್‌ಗೆ ಕರೆ ಮಾಡುತ್ತಾಳೆ. ಸ್ಟೋರ್ ರೂಮ್‌ನಲ್ಲಿ ಶ್ರೇಷ್ಠಾ ಫೋನ್ ರಿಂಗ್ ಆಗುವುದನ್ನು ನೋಡಿ ಸುಂದ್ರಿ ಗಾಬರಿ ಆಗುತ್ತಾಳೆ. ಅದನ್ನು ಪೂಜಾಗೆ ಕೊಡುತ್ತಾಳೆ. ಭಾಗ್ಯಾ ಶ್ರೇಷ್ಠಾಗೆ ಕರೆ ಮಾಡುತ್ತಿದ್ದಾಳೆ ಎಂದು ತಿಳಿದು ಎಲ್ಲರೂ ಗಾಬರಿ ಆಗುತ್ತಾರೆ. ಕೊನೆಗೆ ಪೂಜಾ, ಶ್ರೇಷ್ಠಾ ಫೋನ್ ಸ್ವಿಚ್ ಆಫ್ ಮಾಡುತ್ತಾಳೆ.
ಇವಳು ಎಲ್ಲಿಗೆ ಹೋದಳು ಎಂದು ಭಾಗ್ಯಾ ಯೋಚಿಸುತ್ತಿದ್ದಂತೆ ಅಲ್ಲಿಗೆ ತಾಂಡವ್ ಬರುವುದನ್ನು ನೋಡುತ್ತಾಳೆ. ಅವನಿಗೆ ಕಾಣದಂತೆ ಕಂಬದ ಮರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾಳೆ. ತಾಂಡವ್, ಶ್ರೇಷ್ಠಾ ಮನೆ ಬಾಗಿಲು ಬಡಿದು ವಾಪಸ್ ಕೆಳಗೆ ಇಳಿದು ಬರುತ್ತಾನೆ. ಭಾಗ್ಯಾ, ತಾಂಡವ್ ಕಣ್ಣೆದುರು ಬರುತ್ತಾಳಾ? ಈಗಲಾದರೂ ಭಾಗ್ಯಾ ಪ್ರಶ್ನೆಗಳಿಗೆ ಉತ್ತರ ದೊರೆಯುವುದಾ ಕಾದು ನೋಡಬೇಕು.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್