Tripura Sundari Serial: ಆಮ್ರಪಾಲಿ ಪ್ರದ್ಯುಮ್ನ ಗಂಧರ್ವ ವಿವಾಹ; ಟ್ವಿಸ್ಟ್ ಮೂಲಕ ತ್ರಿಪುರ ಸುಂದರಿ ಧಾರಾವಾಹಿಗೆ ಇತಿಶ್ರೀ
Oct 07, 2023 08:44 AM IST
Tripura Sundari Serial: ಆಮ್ರಪಾಲಿ ಪ್ರದ್ಯುಮ್ನ ಗಂಧರ್ವ ವಿವಾಹ; ಟ್ವಿಸ್ಟ್ ಮೂಲಕ ತ್ರಿಪುರ ಸುಂದರಿ ಧಾರಾವಾಹಿಗೆ ಇತಿಶ್ರೀ
- Tripura Sundari Serial Last Episode: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತ್ರಿಪುರ ಸುಂದರಿ ಸೀರಿಯಲ್ ಶುಕ್ರವಾರ ಕೊನೆಗೊಂಡಿದೆ. ಗಂಧರ್ವ ಲೋಕದ ರಾಜಕುಮಾರಿ ಕೊನೆಗೂ ತನ್ನ ಗಂಧರ್ವ ಲೋಕದ ರಾಜಕುಮಾರನನ್ನು ವರಿಸಿದ್ದಾಳೆ. ಇದರ ಜತೆಗೆ ಈ ಧಾರಾವಾಹಿಯ ಎರಡನೇ ಭಾಗ ಬರುವ ಸುಳಿವೂ ಸಿಕ್ಕಿದೆ.
ತ್ರಿಪುರ ಸುಂದರಿ ಧಾರಾವಾಹಿ ಕೊನೇ ಸಂಚಿಕೆ: ಬಿಗ್ಬಾಸ್ ಕನ್ನಡ ಸೀಸನ್ 10ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅ. 8ರ ಸಂಜೆ ಆರು ಗಂಟೆಗೆ ಅದ್ದೂರಿ ಚಾಲನೆ ಸಿಗಲಿದೆ. ಹೊಸ ಬಿಗ್ ಬಾಸ್ ಮನೆಗೆ ಈ ಸಲವೂ 16 ಮಂದಿ ಸ್ಪರ್ಧಿಗಳು ಪ್ರವೇಶ ಪಡೆಯಲಿದ್ದಾರೆ. ಈ ಬಿಗ್ ರಿಯಾಲಿಟಿ ಶೋ ಸಲುವಾಗಿಯೇ ಒಂದಷ್ಟು ಪ್ರೈಂ ಟೈಮ್ ಸೀರಿಯಲ್ಗಳನ್ನೇ ಕೊನೆಗಾಣಿಸಬೇಕಿತ್ತು ಕಲರ್ಸ್ ಕನ್ನಡ ವಾಹಿನಿ. ಅದರಂತೆ ನೋಡುಗರಿಂದ ಮೆಚ್ಚುಗೆ ಪಡೆದಿದ್ದ ತ್ರಿಪುರ ಸುಂದರಿ ಸೀರಿಯಲ್ ಶುಕ್ರವಾರ ತನ್ನ ಕೊನೇ ಏಪಿಸೋಡ್ ಮೂಲಕ ಇತಿಶ್ರೀ ಹಾಡಿದೆ.
ಹೀಗೆ ಕೊನೆಯಾದ ಸೀರಿಯಲ್, ನೋಡುಗರಿಗೂ ಒಂದು ಕೌತುಕ ಮೂಡಿಸಿಯೇ ತೆರಳಿದೆ. ಅಂದರೆ, ಗಂಧರ್ವ ಲೋಕದ ರಾಜಕುಮಾರನಾಗಿರುವ ಪ್ರದ್ಯುಮ್ನ ಇದೀಗ ಆಮ್ರಪಾಲಿಯನ್ನು ಭೂಲೋಕದಲ್ಲಿಯೇ ಬಿಟ್ಟು ಗಂಧರ್ವ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಅಲ್ಲಿ ಧನಂಜಯನ ಜತೆ ನಡೆಯಬೇಕಿದ್ದ ಯುದ್ಧದಲ್ಲಿ ಪಾಲ್ಗೊಳ್ಳಲು ತೆರಳಿದ್ದಾನೆ. ಇತ್ತ ಭೂಲೋಕದಲ್ಲಿಯೇ ಆಮ್ರಪಾಲಿಯ ಜೀವನ ಸಾಗಲಿದೆ. ಈ ಮೂಲಕ ಇದೇ ಸೀರಿಯಲ್ನ ಎರಡನೇ ಭಾಗ ಬರಬಹುದೇ ಎಂಬ ಅನುಮಾನವನ್ನು ಬಿಟ್ಟು ಹೋಗಿದೆ.
ಆಮ್ರಪಾಲಿಗೆ ನೀನಿಲ್ಲರಬೇಡ ಹೊರಡು ಎಂದು ಪ್ರದ್ಯುಮ್ನ ಆಮ್ರಪಾಲಿಗೆ ಹೇಳುತ್ತಿದ್ದಂತೆ, ಅಲ್ಲಿಂದ ಹೊರಡುವ ಆಮ್ರಪಾಲಿ ನೇರವಾಗಿ ಒಂಟಿಯಾಗಿ ಗಂಧರ್ವ ಲೋಕಕ್ಕೆ ಹೊರಡು ಸಿದ್ಧಳಾಗುತ್ತಾಳೆ. ಧನಂಜಯನ ಜತೆಗೆ ಕದನಕ್ಕೆ ಅಣಿಯಾಗುತ್ತಿರುತ್ತಾಳೆ. ಈ ವೇಳೆಯೇ ಆಮ್ರಪಾಲಿಯ ತಂದೆಯ ಆಗಮನವಾಗುತ್ತದೆ. ಆಮ್ರಪಾಲಿಯನ್ನು ಹುಡುಕಿಕೊಂಡು ಪ್ರದ್ಯುಮ್ನನ ಜತೆಗೆ ಅರಸು ಮನೆಯವರ ಆಗಮನವೂ ಆಗುತ್ತದೆ. ತಾನೂ ಗಂಧರ್ವ ಲೋಕಕ್ಕೆ ಬರುವುದಾಗಿ ಕೋರಿಕೊಳ್ಳುತ್ತಾನೆ ಪ್ರದ್ಯುಮ್ನ.
ಹೀಗೆ ಹೊರಡಲು ಸಜ್ಜಾಗುವ ಈ ಜೋಡಿಯ ವಿವಾಹ ಮಾಡಬೇಕೆಂಬ ಆಸೆಯೂ ಮಾಯಿಯಲ್ಲಿ ಮೂಡುತ್ತದೆ. ಮಾಯಿಯ ಕೋರಿಕೆಯಂತೆ ಪ್ರದ್ಯುಮ್ನ ಮತ್ತು ಆಮ್ರಪಾಲಿಯ ಗಂಧರ್ವ ವಿವಾಹವೂ ನೆರವೇರುತ್ತದೆ. ಚಿಂತೆ ಬಿಡು, ಮನೆಯವರ ಜವಾಬ್ದಾರಿ ತನ್ನದೆಂದು ಹೇಳಿ ಪ್ರದ್ಯುಮ್ನನನ್ನು ತಂದೆ ಜತೆಗೆ ಗಂಧರ್ವ ಲೋಕಕ್ಕೆ ಯುದ್ಧಕ್ಕೆ ಕಳಿಸುತ್ತಾಳೆ. ಇತ್ತ ತನ್ನ ಶಕ್ತಿಯನ್ನು ಕಳೆದುಕೊಳ್ಳುವ ಆಮ್ರಪಾಲಿ, ಪ್ರದ್ಯುಮ್ನನ್ನನ್ನು ಬೀಳ್ಕೊಡುತ್ತಾಳೆ.
ಎರಡನೇ ಭಾಗದ ಸುಳಿವು ನೀಡಿದ ಅಘೋರಿ
"ಪ್ರದ್ಯುಮ್ನ - ಆಮ್ರಪಾಲಿ ಜೀವನದಲ್ಲಿ ಒಂದು ಅಧ್ಯಾಯ ಮುಗೀತು. ಹೊಸ ಅಧ್ಯಾಯ ಶುರು ಆಗುತ್ತೆ. ಪ್ರದ್ಯುಮ್ನ ಗಂಧರ್ವ ಲೋಕದಲ್ಲಿ ಒಂದು ಯುದ್ಧವನ್ನೇ ಎದುರಿಸಬೇಕಾಗುತ್ತದೆ. ಆಮ್ರಪಾಲಿ ಯುದ್ಧ ಮಾಡದೇ ಹೋದರೂ, ಈ ಮನೆಯಲ್ಲಿ ಧನಂಜಯನಷ್ಟೇ ವಿಷ ಕಾರೋರು ಇದ್ದಾರೆ. ಯುದ್ಧ ಮುಗಿದ್ಮೇಲೆ ಮತ್ತೆ ಒಬ್ಬರನ್ನೊಬ್ಬರು ಹುಡುಕಬೇಕು. ಅವರ ಪ್ರೀತಿಗೆ ಈಗ ಅಗ್ನಿಪರೀಕ್ಷೆ. ಅವರಿಗೆ ಎದುರಾಗುವ ಕಷ್ಟಗಳನ್ನ ಭೇದಿಸಿ ಮತ್ತೆ ಅವರಿಬ್ಬರು ಒಂದಾಗುವಷ್ಟು ಶಕ್ತಿ ಅವರ ಪ್ರೀತಿಗೆ ಇದ್ಯಾ? ಅದನ್ನ ಕಾಲ ನಿರ್ಧರಿಸುತ್ತೆ. ಜೈ ಅಘೋರ ಭೈರವ" ಎಂದು ಅಘೋರಿಯ ಮಾತು ಎರಡನೇ ಭಾಗಕ್ಕೆ ಕರೆದೊಯ್ಯಲಿದೆ.