logo
ಕನ್ನಡ ಸುದ್ದಿ  /  ಮನರಂಜನೆ  /  ಕಿರುತೆರೆಯಲ್ಲಿ ಮಹಾಸಂಗಮ; ಮನರಂಜನೆಯ ರಸದೌತಣ ಉಣಬಡಿಸಲು ಕನ್ನಡ ಕಿರುತೆರೆ ಲೋಕ ಸಜ್ಜು

ಕಿರುತೆರೆಯಲ್ಲಿ ಮಹಾಸಂಗಮ; ಮನರಂಜನೆಯ ರಸದೌತಣ ಉಣಬಡಿಸಲು ಕನ್ನಡ ಕಿರುತೆರೆ ಲೋಕ ಸಜ್ಜು

Sep 13, 2023 06:00 PM IST

google News

ಕಿರುತೆರೆಯಲ್ಲಿ ಮಹಾಸಂಗಮ; ಮನರಂಜನೆಯ ರಸದೌತಣ ಉಣಬಡಿಸಲು ಕನ್ನಡ ಕಿರುತೆರೆ ಲೋಕ ಸಜ್ಜು

    • ಕನ್ನಡ ಕಿರುತೆರೆಯಲ್ಲೀಗ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಕಾರ್ಯಕ್ರಮಗಳು ವೀಕ್ಷಕರ ಮನ ಸೆಳೆಯುತ್ತಿವೆ. ಗಣೇಶ ಹಬ್ಬಕ್ಕೂ ದಿನಗಣನೆ ಆರಂಭವಾಗಿದೆ. ಇದೆಲ್ಲದರ ಜತೆಗೆ ಕನ್ನಡದ ಮನರಂಜನಾ ವಾಹಿನಿಗಳೀಗ ನೋಡುಗರಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿವೆ.  
ಕಿರುತೆರೆಯಲ್ಲಿ ಮಹಾಸಂಗಮ; ಮನರಂಜನೆಯ ರಸದೌತಣ ಉಣಬಡಿಸಲು ಕನ್ನಡ ಕಿರುತೆರೆ ಲೋಕ ಸಜ್ಜು
ಕಿರುತೆರೆಯಲ್ಲಿ ಮಹಾಸಂಗಮ; ಮನರಂಜನೆಯ ರಸದೌತಣ ಉಣಬಡಿಸಲು ಕನ್ನಡ ಕಿರುತೆರೆ ಲೋಕ ಸಜ್ಜು

Kannada Television News: ಕನ್ನಡದ ಕಿರುತೆರೆ ವಲಯದಲ್ಲೀಗ ಮನರಂಜನೆಯ ಮಹಾ ಹಬ್ಬ ಶುರುವಾಗಿದೆ. ಶ್ರಾವಣದ ಜತೆಗೆ ಬಣ್ಣದ ಲೋಕದಲ್ಲಿಯೂ ಕಲರ್‌ಫುಲ್‌ ಸಂಭ್ರಮ ಮೇಳೈಸುತ್ತಿದೆ. ಧಾರಾವಾಹಿಗಳಲ್ಲಿಯೂ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ಕನ್ನಡ ಕಿರುತೆರೆಯಲ್ಲಿ ಇತ್ತೀಚಿನ ಕೆಲದಿನಗಳಿಂದ ಹೊಸ ಹೊಸ ಸೀರಿಯಲ್‌ಗಳು ನೋಡುಗರ ಮನೆಗೆ ಆಗಮಿಸಿವೆ. ಇನ್ನು ಕೆಲವು ರಿಯಾಲಿಟಿ ಶೋಗಳು, ಕೆಲವು ವಾಹಿನಿಗಳ ವಾರ್ಷಿಕ ವಿಶೇಷ ಕಾರ್ಯಕ್ರಮದ ಝಲಕ್‌ಗಳೂ ನೋಡುಗರಿಗೆ ಸಿಗುತ್ತಿವೆ. ಹಾಗಾದರೆ ಕನ್ನಡ ಕಿರುತೆರೆಯನ್ನು ಒಂದು ಸುತ್ತು ಹಾಕಿ ಬರೋಣ.

ಜೀ ಕನ್ನಡದಲ್ಲಿ ಜೋಡಿ ನಂ. 1 ಶುರು

ಸುಖ ಸಂಸಾರದ ಸೂತ್ರ ಹೇಳೋಕೆ ಬಂದ್ರು ಸುಂದರ ಜೋಡಿಗಳು ಎಂದೇ ಆರಂಭವಾದ ಶೋ ಜೋಡಿ ನಂಬರ್‌ 1. ಜೀ ಕನ್ನಡದಲ್ಲಿ ಕಳೆದ ವಾರವಷ್ಟೇ ಆರಂಭವಾಗಿರುವ ಈ ಶೋನಲ್ಲಿ ಕಿರುತೆರೆಯ ಹತ್ತಾರು ಜೋಡಿಗಳು ಭಾಗವಹಿಸಿವೆ. ಹಾಸ್ಯದ ಜತೆಗೆ ಸುಖ ಸಂಸಾರದ ಹಿಂದಿನ ಗೆಲುವಿನ ಬಗ್ಗೆ ಈ ಜೋಡಿಗಳು ಹೇಳಿಕೊಳ್ಳುತ್ತಿವೆ. ನೆನಪಿರಲಿ ಪ್ರೇಮ್‌, ಮಾಳವಿಕಾ ಅವಿನಾಶ್‌ ತೀರ್ಪುಗಾರರಾದರೆ, ಕುರಿ ಪ್ರತಾಪ್‌, ಶ್ವೇತಾ ಚೆಂಗಪ್ಪ ನಿರೂಪಕರಾಗಿ ಈ ಶೋ ಮುನ್ನಡೆಸುತ್ತಿದ್ದಾರೆ.

ಫ್ಯಾಮಿಲಿ ಗ್ಯಾಂಗ್‌ಸ್ಟರ್‌ ಫಿನಾಲೆ

ಕಲರ್ಸ್‌ ಕನ್ನಡದಲ್ಲಿ ವೀಕೆಂಡ್‌ ಮಜಾ ಹೆಚ್ಚಿಸುವ ಫ್ಯಾಮಿಲಿ ಗ್ಯಾಂಗ್‌ಸ್ಟರ್‌ ಶೋ ಇದೀಗ ಫಿನಾಲೆ ಹಂತಕ್ಕೆ ಬಂದಿದೆ. ಭಾಗ್ಯಲಕ್ಷ್ಮೀ ಸೀರಿಯಲ್‌ ತಂಡ ಮತ್ತು ಡಾನ್ಸಿಂಗ್‌ ಚಾಂಪಿಯನ್‌ ತಂಡ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಟಕ್ಕಿಳಿಯಲಿವೆ. ಇದೇ ಶನಿವಾರ ಮತ್ತು ಭಾನುವಾರ (ಸೆ.16, 17) ರಾತ್ರಿ 8ಕ್ಕೆ ಈ ಸೀಸನ್‌ನ ವಿಜೇತರು ಯಾರು ಎಂಬುದು ತಿಳಿಯಲಿದೆ. ಸೃಜನ್‌ ಲೋಕೇಶ್‌ ಈ ಶೋನ ಮೆಂಟರಿಂಗ್‌ ಮಾಡುವುದರ ಜತೆಗೆ ನಿರೂಪಣೆಯೂ ಅವರದ್ದೇ.

ಅನುಬಂಧ ಅವಾರ್ಡ್‌ ಪ್ರೋಮೋ ಬಿಡುಗಡೆ

ಕಲರ್ಸ್‌ ಕನ್ನಡ ವಾಹಿನಿಯ ವಾರ್ಷಿಕ ಮಹಾ ಸಂಗಮ ಎಂದರೆ ಅದು ಅನುಬಂಧ ಅವಾರ್ಡ್.‌ ಕಲರ್ಸ್‌ ಬಳಗದ ಎಲ್ಲ ಕಲಾವಿದರನ್ನೂ ಗುರುತಿಸಿ, ಪ್ರಶಸ್ತಿ ನೀಡುವ ಅದ್ದೂರಿ ಸಮಾರಂಭ ಇದಾಗಿದೆ. ಇದರ ಜತೆಗೆ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈಗಾಗಲೇ ಈ ಶೋನ ಚಿತ್ರೀಕರಣ ಮುಗಿದಿದ್ದು, ಇದೀಗ ಬಗೆಬಗೆ ಪ್ರೋಮೋ ಮೂಲಕ ಪ್ರಸಾರದ ದಿನಾಂಕದ ಬಗ್ಗೆ ಮಾಹಿತಿ ನೀಡಿದ ಕಲರ್ಸ್‌ ಕನ್ನಡ ವಾಹಿನಿ. ಸೆ. 22, 23 ಮತ್ತು 24ರಂದು ಮೂರು ದಿನಗಳ ಕಾಲ ಭರ್ಜರಿ ಮನರಂಜನೆಯ ಹಬ್ಬದೂಟವನ್ನೇ ಹಾಕಲು ಕಲಾವಿದರೂ ಸಿದ್ಧರಾಗಿದ್ದಾರೆ.

ಗಣೇಶೋತ್ಸವಕ್ಕೆ ನಗುವಿನ ಡಾನ್ಸ್‌

ಇನ್ನೇನು ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಸೆ. 18ರಂದು ಗಣೇಶ ಚತುರ್ಥಿ. ಈ ಹಬ್ಬದ ಸಲುವಾಗಿಯೇ ಜೀ ಕನ್ನಡದಲ್ಲಿ ಎರಡು ಪ್ರಮುಖ ನಾನ್‌ ಫಿಕ್ಷನ್‌ ಶೋಗಳನ್ನು ಒಂದೇ ಕಡೆ ಸೇರಿಸುವ ಕೆಲಸವಾಗುತ್ತಿದೆ. ಚಿತ್ರದುರ್ಗದಲ್ಲಿ ವೀಕೆಂಡ್‌ನ ಟಾಪ್‌ ಸ್ಲಾಟ್‌ನಲ್ಲಿರುವ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋ ಮತ್ತು ಭರ್ಜರಿ ಬ್ಯಾಚುಲರ್‌ ಶೋನ ಮಹಾಸಂಗಮ ನಡೆಯಲಿದೆ. ಹಾಡು, ಕುಣಿತದ ಜತೆಗೆ ಬ್ಯಾಚುಲರ್‌ಗಳ ಕಾಮಿಡಿ ಕಚಗುಳಿ, ಕೋದಂಡರಾಮ ಶಿವಣ್ಣ ಮತ್ತು ರವಿಚಂದ್ರನ್‌ ಜೋಡಿಯೂ ಈ ಮಹಾಸಂಗಮದಲ್ಲಿ ಮತ್ತೆ ಒಂದಾಗಲಿದ್ದಾರೆ.

ಡೇರ್‌ ಡೆವಿಲ್‌ ಮುಸ್ತಫಾ ಕಿರುತೆರೆ ಪ್ರೀಮಿಯರ್‌

ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ ಡೇರ್‌ ಡೇವಿಲ್‌ ಮುಸ್ತಾಫಾ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್‌ ಆಗಿ, ಒಟಿಟಿ ವೀಕ್ಷಕರನ್ನು ಸೆಳೆಯಿತು. ಇದೀಗ ಇದೇ ಧಾರಾವಾಗಿ ಕಿರುತೆರೆಗೆ ಎಂಟ್ರಿಕೊಡಲು ಸಜ್ಜಾಗಿದೆ. ಅಬಚೂರಿನ ಕಥೆ ಹೇಳಲು ಮುಸ್ತಾಫಾ ಮತ್ತು ಅಯ್ಯಂಗಾರಿ ಪಟಾಲಂ ಆಗಮಿಸುತ್ತಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ (ಸೆ. 17) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ಉದಯ ಟಿವಿಯಲ್ಲಿ ಶಾಂಭವಿ ಸೌಂಡು

ಅದೇ ರೀತಿ ಉದಯ ಟಿವಿಯಲ್ಲಿ ಸೋಮವಾರದಿಂದ ಕಾಲ್ಪನಿಕ ಕಥಾಹಂದರದ ಶಾಂಭವಿ ಧಾರಾವಾಹಿ ಪ್ರಸಾರ ಆರಂಭಿಸಿದೆ. ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ನಿರ್ದೇಶಕ ಸುನಿ, ಹತ್ತಾರು ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೀಗ ತಮ್ಮ ಚೊಚ್ಚಲ ಸೀರಿಯಲ್‌ ನಿರ್ದೇಶನ ಮತ್ತು ನಿರ್ಮಾಣಕ್ಕೆ ಇಳಿದಿದ್ದಾರೆ. ಅದರ ಮೊದಲ ಪ್ರಯತ್ನವೇ ಶಾಂಭವಿ. ಸೋಮವಾರದಿಂದ ಶನಿವಾರದ ವರೆಗೆ ರಾತ್ರಿ 7;30ಕ್ಕೆ ಈ ಸೀರಿಯಲ್‌ ಪ್ರಸಾರವಾಗುತ್ತಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ