ಮತ್ತೆ ಕನ್ನಡ ಕಿರುತೆರೆಗೆ ಮರಳಿದ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್; ಯಾವ ಧಾರಾವಾಹಿ, ಯಾವ ವಾಹಿನಿಯಲ್ಲಿ?
Jul 17, 2024 11:14 AM IST
ಮತ್ತೆ ಕನ್ನಡ ಕಿರುತೆರೆಗೆ ಮರಳಿದ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್; ಯಾವ ಧಾರಾವಾಹಿ, ಯಾವ ವಾಹಿನಿಯಲ್ಲಿ?
- ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ನಿತ್ಯಾ ರಾಮ್, ಆರೇಳು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಶಾಂತಿ ನಿವಾಸ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ.
Shanthi Nivasa Serial: ಕನ್ನಡ ಕಿರುತೆರೆಯ ಮೂಲಕವೇ ಬಣ್ಣದ ಲೋಕಕ್ಕೆ ಬಂದು ಸದ್ಯ ಪರಭಾಷೆಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ನಟಿ ನಿತ್ಯಾ ರಾಮ್. 2010ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್, ಅದಾದ ಮೇಲೆ ತಮಿಳು, ತೆಲುಗು ಜತೆಗೆ ಕನ್ನಡದ ಹಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 2018ರಲ್ಲಿ ಸವಾಲಿಗೆ ಸೈ ಮೂಲಕ ಕಂಡಿದ್ದ ನಿತ್ಯಾ ಅದಾದ ಮೇಲೆ ಮತ್ತೆ ಕರುನಾಡ ವೀಕ್ಷಕರಿಗೆ ದರ್ಶನ ಕೊಟ್ಟಿರಲಿಲ್ಲ. ಇದೀಗ ಶಾಂತಿ ನಿವಾಸ ಸೀರಿಯಲ್ ಮೂಲಕ ಆಗಮಿಸುತ್ತಿದ್ದಾರೆ. ಏನಿದು ಧಾರಾವಾಹಿ ಕಥೆ, ಯಾವ ವಾಹಿನಿಯಲ್ಲಿ, ಎಷ್ಟೊತ್ತಿಗೆ ಪ್ರಸಾರವಾಗಲಿದೆ? ಇಲ್ಲಿದೆ ಮಾಹಿತಿ.
ಶಾಂತಿ ಮಂಥರೆಯ ಸೇಡಿನ ಕಥೆ
ಶಾಂತಿ.. ಇದು ಬರೀ ಒಂದು ಹೆಸರಲ್ಲ... ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು, ಗೋವರ್ಧನರಾಯರ ಮುದ್ದಿನ ಸೊಸೆ, ಅವರೇ ಹೇಳುವಂತೆ ಕುಲದೇವತೆ, ಭಾಮಿನಿಯ ಸೊಸೆ, ಸುಶಾಂತನ ಮುದ್ದಿನ ಮಡದಿ, ಸಿದ್ದಾರ್ಥನ ನಾದಿನಿ, ಸಾಧನಾಳ ತಂಗಿ, ಸುಕೃತಾಳ ಅತ್ತಿಗೆ, ವರ್ಷಾಳ ಮುದ್ದು ಚಿಕ್ಕಮ್ಮ, ರಾಘವನ ಹೆತ್ತಮ್ಮ. ಮನೆ ಕೆಲಸದಾಕೆ ರತ್ನಮ್ಮಳ ಅಘೋಷಿತ ಮಗಳು, ಒಟ್ಟಿನಲ್ಲಿ ಆ ಮನೆಯ ನಂದಾದೀಪ, ನೀಲಾಂಜನ. ಪ್ರತಿಯೊಬ್ಬರ ಮನಸ್ಸನ್ನುಅರಿತು, ಅವರವರ ಭಾವನೆಗಳಿಗೆ ಬೆರೆತು, ಅವರ ಬೇಕು ಬೇಡಗಳನ್ನು ಅವರು ಕೇಳುವುದಕ್ಕೆ ಮುಂಚೆಯೇ... ಅವರ ಮುಂದೆ ಇಡುವ ಇಷ್ಟ ದೇವತೆ.
ಅಷ್ಟೇನೂ ಓದು ಬರಹ ಕಲಿಯದ ಶಾಂತಿ, ಸಂಸ್ಕಾರದಲ್ಲಿ, ಅತಿಥಿ ಸತ್ಕಾರದಲ್ಲಿ, ಹುಟ್ಟಿನಿಂದಲೇ ಪದವೀಧರೆ. ಶಾಂತಿ ನಿವಾಸದ ಸೊಸೆಯಾಗಿ ಬಂದರೂ ಸಹ ತನ್ನ ಮಲತಾಯಿ ಯಶೋಧಾಳನ್ನು ಮರೆಯದ ಮಮತಾಮಯಿ. ಇಂದು ಮಹಿಳೆ ಮನೆಯ ಹೊರಗೂ ಒಳಗೂ ದುಡಿಯುತ್ತಿದ್ದಾಳೆ. ಹಾಗೆ ಮನೆಯೊಳಗೆ ದಣಿವರಿಯದೆ ದುಡಿಯುವ ಗೃಹಿಣಿಯರ ಮೊದಲ ಸಾಲಿನಲ್ಲಿ ನಿಲ್ಲುವ ಅಜಾತಶತ್ರು ನಮ್ಮ ಶಾಂತಿ.
ಜಗತ್ತಿನಲ್ಲಿ ಎಲ್ಲರಿಗೂ ಶತ್ರುಗಳು ಇರಲೇಬೇಕಲ್ಲವೇ. ಹಾಗೇ ಶಾಂತಿಗೂ ಒಬ್ಬಳು ಶತ್ರು ಇದ್ದಾಳೆ. ಅವಳೇ ಮಂಥರ. ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ. ಜೈಲಿನಲ್ಲಿ ಇದ್ದಷ್ಟು ದಿನವೂ ಶಾಂತಿಯ ಮೇಲಿನ ಸೇಡು ತೀರಿಸಿಕೊಳ್ಳುವುದೇ ಅವಳು ಪಠಿಸಿದ ಮೂಲ ಮಂತ್ರ. ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದ ಮಂಥರ, ತನ್ನ ಗೆಳತಿ ಗಗನಾಳೊಂದಿಗೆ. ಶಾಂತಿಯನ್ನು ಹುಡುಕಲು ಆರಂಭಿಸುತ್ತಾಳೆ. ಹತ್ತು ಹಲವು ಪ್ರಯತ್ನಗಳ ನಂತರ, ತಾನು ಹುಡುಕುತ್ತಿರುವ ಶಾಂತಿಯ ಭೇಟಿಯಾಗುತ್ತದೆ. ಆದರೆ ಶಾಂತಿ ತಾನೇ ಕಟ್ಟಿಕೊಂಡಿರುವ ಪ್ರೀತಿ, ವಾತ್ಸಲ್ಯ, ಮಮಕಾರ, ಮತ್ತು ನಂಬಿಕೆ ಎಂಬ ನಾಲ್ಕು ಸುತ್ತಿನ ಕೋಟೆಯಲ್ಲಿ ನೆಮ್ಮದಿಯಾಗಿರುವುದನ್ನ ಕಂಡು ರೋಷಾವೇಷದಿಂದ ಕುದಿಯುತ್ತಾಳೆ ಮಂಥರ.
ಹೇಗಾದರೂ ಮಾಡಿ ತಾನು ಆ ಕೋಟೆಯೊಳಗೆ ಪ್ರವೇಶಿಸಬೇಕೆಂಬ ಸಂಚು ಹೂಡುತ್ತಾಳೆ. ಆ ಸಂಚಿನ ಪ್ರಕಾರವೇ ನಿಧಾನವಾಗಿ ಶಾಂತಿ ನಿವಾಸದ ಒಳಗೆ ಕಾಲಡಿ ಇಡುತ್ತಾಳೆ. ಆದರೆ ತನ್ನ ವಿರುದ್ಧ ಸೇಡಿಗಾಗಿ ಹಾತೊರೆಯುತ್ತಿರುವ. ಮಂಥರಾಳ ಬಗ್ಗೆಯಾಗಲಿ ಅವಳ ಉದ್ದೇಶದ ಬಗ್ಗೆಯಾಗಲಿ ಏನೊಂದೂ ಅರಿಯದ ಶಾಂತಿ, ಅವಳನ್ನು ತನ್ನ ಕುಟುಂಬದಲ್ಲೊಬ್ಬಳಾಗಿ ಅದೇ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾಳೆ. ಮಂಥರಾಳ ಬಗ್ಗೆ ಕಿಂಚಿತ್ ಅನುಮಾನ ಬಂದು ಒಂದಿಬ್ಬರು ಶಾಂತಿಯನ್ನು ಪರೋಕ್ಷವಾಗಿ ಎಚ್ಚರಿಸಿದರೂ. ನಸುನಗುತ್ತಾ ಅದನ್ನು ಅಲ್ಲಗಳೆಯುತ್ತಾಳೆ ಶಾಂತಿ.
ಸೇಡಿನ ಯುದ್ಧದಲ್ಲಿ ಗೆಲುವು ಯಾರಿಗೆ?
ಅದನ್ನರಿತ ಮಂಥರ ಮನೆಯವರ ಮುಖಾಂತರವೇ ತನ್ನ ಕುತಂತ್ರ ಯೋಜನೆಯನ್ನ ರೂಪಿಸುತ್ತಾಳೆ. ಹಾಗಾದರೆ ಆ ಯೋಜನೆ ಏನು? ಸೇಡಿನ ಹಕ್ಕಿಯಾಗಿ ಜೈಲಿನಿಂದ ಹೊರಬಂದ ಮಂಥರಾಳಿಂದ ಶಾಂತಿಗಾದ ತೊಂದರೆ ಯಾವುದು? ಸ್ಪಟಿಕದಷ್ಟೇ ನಿಷ್ಕಲ್ಮಶವಾದ ಮನಸ್ಸುಳ್ಳ ಶಾಂತಿಯ ಬದುಕಿನಲ್ಲಿ ಮುಂದೇನಾಯ್ತು? ಶಾಂತಿ ನಿವಾಸಕ್ಕೆ ಎದುರಾದ ತೊಂದರೆಯನ್ನು ಶಾಂತಿ ಹೇಗೆ ನಿಭಾಯಿಸಿ ಗೆಲ್ಲುತ್ತಾಳೆ? ತನ್ನ ಮೂಲ ಅಸ್ತ್ರವಾದ ಸಹನೆಯನ್ನೇ ಬಳಸಿ ಶಾಂತಿ ಮಂಥರಾಳ ಸೇಡಿನ ಯುದ್ಧದಲ್ಲಿ ಜಯಶೀಲೆಯಾಗ್ತಾಳಾ?
ಯಾವಾಗ ಪ್ರಸಾರ?
ಹೀಗೆ ಕುತೂಹಲಕಾರಿ ಕಥಾಹಂದರವುಳ್ಳ ರೋಚಕ ತಿರುವುಗಳ ಪ್ರತಿ ಕಂತಿನಲ್ಲೂ ಕುತೂಹಲ ಮೂಡಿಸುವ ʻಶಾಂತಿನಿವಾಸʼ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.