logo
ಕನ್ನಡ ಸುದ್ದಿ  /  ಮನರಂಜನೆ  /  Shankar Aswath: ಈ ವಿಚಾರದಲ್ಲಿ ಎಚ್ಚರ, ಯಾವುದೇ ಕಾರಣಕ್ಕೂ ಆಧಾರ್‌ ನಂಬರ್‌ ಕೊಡಬೇಡಿ; ತಮಗಾದ ಅನುಭವ ಹೇಳಿಕೊಂಡ ಶಂಕರ್‌ ಅಶ್ವಥ್‌ Video

Shankar Aswath: ಈ ವಿಚಾರದಲ್ಲಿ ಎಚ್ಚರ, ಯಾವುದೇ ಕಾರಣಕ್ಕೂ ಆಧಾರ್‌ ನಂಬರ್‌ ಕೊಡಬೇಡಿ; ತಮಗಾದ ಅನುಭವ ಹೇಳಿಕೊಂಡ ಶಂಕರ್‌ ಅಶ್ವಥ್‌ VIDEO

Jul 15, 2023 12:43 PM IST

google News

ಈ ವಿಚಾರದಲ್ಲಿ ಎಚ್ಚರ, ಯಾವುದೇ ಕಾರಣಕ್ಕೂ ಆಧಾರ್‌ ನಂಬರ್‌ ಕೊಡಬೇಡಿ; ತಮಗಾದ ಅನುಭವ ಹೇಳಿಕೊಂಡ ಶಂಕರ್‌ ಅಶ್ವಥ್‌

    • ಕನ್ನಡದ ಹಿರಿಯ ನಟ ಶಂಕರ್‌ ಅಶ್ವಥ್‌ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ಒಂದಿಲ್ಲೊಂದು ವಿಡಿಯೋ ಶೇರ್‌ ಮಾಡಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಧಾರ್‌ ಕಾರ್ಡ್‌ ವಿಚಾರವಾಗಿಯೂ ಹೀಗೆ ಹೇಳಿಕೊಂಡಿದ್ದಾರೆ. 
ಈ ವಿಚಾರದಲ್ಲಿ ಎಚ್ಚರ, ಯಾವುದೇ ಕಾರಣಕ್ಕೂ ಆಧಾರ್‌ ನಂಬರ್‌ ಕೊಡಬೇಡಿ; ತಮಗಾದ ಅನುಭವ ಹೇಳಿಕೊಂಡ ಶಂಕರ್‌ ಅಶ್ವಥ್‌
ಈ ವಿಚಾರದಲ್ಲಿ ಎಚ್ಚರ, ಯಾವುದೇ ಕಾರಣಕ್ಕೂ ಆಧಾರ್‌ ನಂಬರ್‌ ಕೊಡಬೇಡಿ; ತಮಗಾದ ಅನುಭವ ಹೇಳಿಕೊಂಡ ಶಂಕರ್‌ ಅಶ್ವಥ್‌

Shankar Ashwath: ಕನ್ನಡ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದವರಲ್ಲಿ ಹಿರಿಯ ನಟ ಕೆ. ಎಸ್‌ ಅಶ್ವಥ್‌ ಕೂಡ ಒಬ್ಬರು. ಅವರ ಪುತ್ರ ಶಂಕರ್‌ ಅಶ್ವಥ್‌ ಸಹ ಚಂದನವನದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ, ಸೀರಿಯಲ್‌ ಜತೆಜತೆಗೆ ಉಪಜೀವನಕ್ಕೆ ಉಬರ್‌ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣ ಆಚಾರ್‌ ಪಾತ್ರದಲ್ಲಿ ಶಂಕರ್‌ ಅಶ್ವಥ್‌ ನಟಿಸುತ್ತಿದ್ದಾರೆ.

ಇದೆಲ್ಲದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಇವರು ಸದಾ ಸಕ್ರಿಯರು. ಫೇಸ್‌ಬುಕ್‌ನಲ್ಲಿ ಆಗೊಂದು ಈಗೊಂದು ವಿಡಿಯೋ ಶೇರ್‌ ಮಾಡಿ, ತಮ್ಮ ಅನುಭವಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಚಾಲಕರಾಗಿ ಜನ ತಮ್ಮನ್ನು ಸ್ವೀಕರಿಸುವ ರೀತಿಯನ್ನೂ ಅವರು ಹೇಳಿಕೊಂಡಿದ್ದುಂಟು. ಇದೀಗ ಇನ್ನೊಂದು ಹೊಸ ವಿಚಾರವನ್ನು ಜನರ ಮುಂದಿಟ್ಟಿದ್ದಾರೆ. ಸಿಕ್ಕ ಸಿಕ್ಕವರು ನಿಮ್ಮ ಮಾಹಿತಿ ಕೇಳಿದರೆ ಯಾವತ್ತಿಗೂ ಕೊಡಬೇಡಿ. ಸೂಕ್ತ ಕಾರಣ ಮತ್ತು ಅವರಿಂದ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ಬಳಿಕವೇ ನೀಡಿ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಕಷ್ಟು ದಾಖಲೆಗಳು ಬೇಕು. ಅದರಲ್ಲೂ ಆಧಾರ್‌ ಕಾರ್ಡ್‌ ಎಲ್ಲದಕ್ಕೂ ಕಡ್ಡಾಯ. ಇಂಥ ಆಧಾರ್‌ ಕಾರ್ಡ್‌ನಿಂದ ಈಗಾಗಲೇ ಸಾಕಷ್ಟು ಹಗರಣಗಳು ಘಟಿಸಿದ ಉದಾಹರಣೆಗಳಿವೆ. ಈಗ ಈ ಆಧಾರ್‌ ಕಾರ್ಡ್‌ ನಂಬರ್‌ ಹೇಳಿ ಎಂದು ಮನೆಗೆ ಬಂದ ಯುವತಿಯರ ಬಗ್ಗೆ ಶಂಕರ್‌ ಅಶ್ವತ್ಥ್‌ ಮಾತನಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಗಳ ನೆಪದಲ್ಲಿ ಯಾರ್ಯಾರೋ ಮನೆ ಬಳಿ ಬಂದು ಆಧಾರ್‌ ಕಾರ್ಡ್‌ ಸೇರಿ ಹಲವು ದಾಖಲೆಗಳನ್ನು ಕೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಂಕರ್‌ ಅಶ್ವಥ್‌, ನಾನಿರುವುದು ಮೈಸೂರಿನಲ್ಲಿ. ಇಲ್ಲಿನ ಪ್ರತಿಷ್ಠಿತ ಸಂಸ್ಥೆಯೊಂದು ನರ್ಸಿಂಗ್‌ ವಿದ್ಯಾರ್ಥಿಗಳನ್ನು ಮನೆ ಮನೆಗೆ ಕಳುಹಿಸಿ ಅನಾರೋಗ್ಯ, ಕಾಯಿಲೆ ಬಗ್ಗೆ ವಿಚಾರಿಸುತ್ತಿದೆ. ಇದೆಲ್ಲ ಆದ ಮೇಲೆ ಆಧಾರ್‌ ಕಾರ್ಡ್‌ ನಂಬರ್‌ ಸಹ ಕೇಳುತ್ತಾರೆ. ನಾನು ಏತಕ್ಕೆ ಎಂದು ಕೇಳಿದರೆ, ನಮ್ಮ ಸಂಸ್ಥೆಗೆ ನಾವು ಮಾಡಿದ ಕೆಲಸ ಎಂದು ತೋರಿಸಲು ಎನ್ನುತ್ತಾರೆ.

ಹೀಗೆ ಮನೆ ಬಳಿ ಬಂದ ನರ್ಸಿಂಗ್‌ ವಿದ್ಯಾರ್ಥಿಗಳು, ಒಳ್ಳೆಯವರ ರೀತಿಯೇ ಕಾಣಿಸುತ್ತಾರೆ. ಆದರೆ, ಈ ವಿಚಾರವನ್ನು ನಾನು ಸಾರ್ವಜನಿಕರ ಗಮನಕ್ಕೂ ತರುವ ಉದ್ದೇಶದಿಂದ ಈ ವಿಡಿಯೋ ಮಾಡಿದ್ದೇನೆ. ಹುಡುಗಿಯರನ್ನು ಮನೆ ಬಳಿ ಕಳುಹಿಸಿದ ವಿದ್ಯಾಸಂಸ್ಥೆ ಗಮನಕ್ಕೂ ತರಬೇಕೆಂಬ ಉದ್ದೇಶಕ್ಕೆ ಈ ರೀತಿ ಮಾಡಿದ್ದೇನೆ.

ಮೊದಲಿಗೆ ಹೀಗೆ ಸರ್ವೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯವರು, ಆ ವಿದ್ಯಾರ್ಥಿಗಳ ಕೈಯಲ್ಲಿ ಮೊದಲಿಗೆ ಸಹಿ ಸಮೇತ ಫೋಟೋ ಸಹಿತ ಒಂದು ಲೆಟರ್‌ ಕೊಡಬೇಕು. ಸುಮ್ಮನೆ ಕೈಯಲ್ಲೊಂದು ಐಡಿ ಕಾರ್ಡ್‌ ಹಿಡಿದು ಬಂದು ಆಧಾರ್‌ ನಂಬರ್‌ ಹೇಳಿ ಅಂದ್ರೆ ಯಾಕೆ ಹೇಳಬೇಕು? ಇತ್ತೀಚಿನ ದಿನಗಳಲ್ಲಿ ಸೈಬರ್‌ ಸ್ಕ್ಯಾಮ್‌ಗಳೇ ಹೆಚ್ಚಾಗುತ್ತಿವೆ. ಕಾರ್ಡ್‌ ನಂಬರ್‌, ಒಟಿಪಿ ಏನನ್ನೂ ಶೇರ್‌ ಮಾಡಬೇಡಿ ಎನ್ನುತ್ತಿರುತ್ತಾರೆ. ಹೀಗಿರುವಾಗ, ಇದನ್ಯಾಕೆ ಶೇರ್‌ ಮಾಡಬೇಕು. ಹಾಗಾಗಿ ಸಿಕ್ಕ ಸಿಕ್ಕವರನ್ನು ಮನೆಗೆ ಸೇರಿಸಿಕೊಳ್ಳಬೇಡಿ. ಸೂಕ್ತ ದಾಖಲೆ ಪರಿಶೀಲನೆ ಮಾಡಿಯೇ ಮುಂದುವರಿಯಿರಿ ಎಂದಿದ್ದಾರೆ ಶಂಕರ್‌ ಅಶ್ವಥ್‌.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ