Seetha Rama: ಪ್ಲಾಪ್ ಆಯ್ತು ರುದ್ರಪ್ರತಾಪನ ಪ್ಲಾನ್! ಖಾರ ತಿಂದ ರಾಮನ ಬಾಯಿ ಒರೆಸಿದಳು ಸೀತಾ, ಇದು ಪ್ರೀತಿಯ ಮುನ್ನುಡಿಯೇ?
Aug 30, 2023 09:27 AM IST
Seetha Rama: ಪ್ಲಾಪ್ ಆಯ್ತು ರುದ್ರಪ್ರತಾಪನ ಪ್ಲಾನ್! ಖಾರ ತಿಂದ ರಾಮನ ಬಾಯಿ ಒರೆಸಿದಳು ಸೀತಾ, ಇದು ಪ್ರೀತಿಯ ಮುನ್ನುಡಿಯೇ?
- ರುದ್ರಪ್ರತಾಪನ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಸೀತಾ. ಇತ್ತ ರಾಮ ಮತ್ತು ಸೀತಾ ಜತೆಗೆ ಸುತ್ತಾಟಕ್ಕಿಳಿದಿದ್ದಾಳೆ ಸಿಹಿ. ಖುಷಿಯ ಕ್ಷಣದ ಜತೆಗೆ ಪ್ರೀತಿ ಚಿಗುರಲು ಒಂದು ಸಣ್ಣ ಕ್ಷಣವೂ ಸಾಕ್ಷಿಯಾಗಿದೆ.
Seetha Rama: ಅಂದುಕೊಂಡಂತೆ ಸಿಹಿಯ ಬಯಕೆಯಂತೆ, ರಾಮನ ಜತೆಗೆ ಎಲ್ಲರೂ ಔಟಿಂಗ್ ಬಂದಿದ್ದಾರೆ. ಲಾಯರ್ ರುದ್ರಪ್ರತಾಪ್ ಹೇಳಿದಂತೆ ಸ್ಯಾಲರಿ ಸ್ಲಿಪ್ ಕೊಡಲು ಆತನ ಆಫೀಸ್ಗೆ ಹೋಗಿದ್ದಾಳೆ ಸೀತಾ. ಇತ್ತ ಆಕೆಯ ಬರುವಿಕೆಗೆ ಹೊರಗಡೆ 1ರಿಂದ 100ರ ವರೆಗೆ ನಂಬರ್ ಕೌಂಟ್ ಮಾಡುತ್ತಿದ್ದಾಳೆ ಸಿಹಿ. ಸೀತಾಳ ಬರುವಿಕೆಯನ್ನೇ ಕಾದು ಕುಳಿತಿದ್ದ ರುದ್ರಪ್ರತಾಪ್ ಹಸಿದ ಹೆಬ್ಬುಲಿಯಂತಾಗಿದ್ದಾನೆ. ಸೀತಾ ಬರುತ್ತಿದ್ದಂತೆ, ಫೋನ್ನಲ್ಲಿ ಮಾತನಾಡುತ್ತ ಆಕೆಯ ಗಮನಕ್ಕೆ ಬಾರದಂತೆ ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ.
ಜ್ಯೂಸ್ ನೀಡುವ ನೆಪದಲ್ಲಿ ಆ ಜ್ಯೂಸ್ಗೆ ಮತ್ತು ಬರುವ ಪುಡಿಯನ್ನು ಸೇರಿಸಿ, ಆಕೆಗೆ ನೀಡಲು ಮುಂದಾಗುತ್ತಾನೆ. ಇತ್ತ ಸೀತಾಳ ಬರುವಿಕೆಗೆ ಕಾದು ಕಾದು ಸುಸ್ತಾಗಿದ್ದ ಸಿಹಿ, ನೇರವಾಗಿ ಸೀತಮ್ಮನನ್ನು ಹುಡುಕಿಕೊಂಡು ಕಚೇರಿ ಕೋಣೆಗೆ ನುಗ್ಗುತ್ತಾಳೆ. ಸಿಹಿಯ ಆಗಮನದ ರಭಸಕ್ಕೆ ಸೀತಾ ಕೈಯಲ್ಲಿದ್ದ ಜ್ಯೂಸ್ ಗ್ಲಾಸ್ ಕೆಳಕ್ಕೆ ಬೀಳುತ್ತದೆ. ಸಿಹಿ ಹಿಂದೆ ರಾಮನೂ ಓಡಿ ಬರುತ್ತಾನೆ. ಪ್ಲಾನ್ ಪ್ಲಾಪ್ ಆಗಿದ್ದಕ್ಕೆ, ಸಿಹಿಯನ್ನು ಶಪಿಸುತ್ತ, ಕಣ್ಣಲ್ಲೇ ಕೆಂಡ ಉಗುಳುತ್ತಾನೆ ರುದ್ರಪ್ರತಾಪ್.
ಅಯ್ಯೋ, ನಾವು ಇವತ್ತು ಹೊರಗಡೆ ಹೋಗುವ ಪ್ಲಾನ್ ಹಾಕಿದ್ದೆವು. ಹಾಗಾಗಿ ಸಿಹಿ ಹೊರಗಡೆ ಕಾಯ್ತಾ ಇದ್ದಳು. ತಡವಾಗಿದ್ದಕ್ಕೆ ದಿಢೀರ್ ಆಗಮಿಸಿದ್ದಾಳೆ. ತಪ್ಪು ತಿಳಿಬೇಡಿ ಎಂದು ರುದ್ರಪ್ರತಾಪ್ಗೆ ಸಮಜಾಯಿಷಿ ನೀಡಿದ್ದಾಳೆ ಸೀತಾ. ಬಳಿಕ ರಾಮ್ ಜತೆಗೆ ಸಿಹಿಯನ್ನು ಕರೆದುಕೊಂಡು ಹೊರ ನಡೆದಿದ್ದಾಳೆ. ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ವೇ ಎನ್ನುತ್ತಲೇ ಹಲ್ಲು ಮಸಿಯುತ್ತ ಮೇಲಿನಿಂದಲೇ ಸೀತಾ ಮತ್ತು ರಾಮನನ್ನು ನೋಡಿ ಕೋಪಗೊಂಡಿದ್ದಾನೆ ರುದ್ರಪ್ರತಾಪ್.
ಖುಷಿಯಲ್ಲಿಯೇ ಹೊರಬಂದ ಸಿಹಿ, ಸೀತಾ ಮತ್ತು ರಾಮ ಒಟ್ಟಿಗೆ ಸುತ್ತಾಡಿದ್ದಾರೆ. ಪಾನಿ ಪುರಿಯನ್ನೂ ಸವಿದಿದ್ದಾರೆ. ಈ ವೇಳೆ ಹೆಚ್ಚು ಖಾರವನ್ನು ಯಾವತ್ತೂ ತಿನ್ನದ ರಾಮ್, ಚೂರು ಖಾರ ತಿನ್ನುತ್ತಿದ್ದಂತೆ, ಬಾಯಿ ಉರಿ ಎನ್ನುತ್ತಾನೆ. ಇತ್ತ ಸಿಹಿ ಮತ್ತು ಸೀತಾ ಒಟ್ಟಿಗೆ ಇನ್ನಷ್ಟು ಖಾರವಾಗಿಯೇ ಮಾಡಿ ಎಂದು ಪಾನಿ ಪುರಿ ಸವಿಯುತ್ತಾರೆ. ಈ ನಡುವೆಯೂ ಒಂದು ಸಣ್ಣ ಗಳಿಗೆಯಲ್ಲಿ ರಾಮನ ಬಾಯಿಯನ್ನು ಒರೆಸಲು ಮುಂದಾಗುತ್ತಾಳೆ ಸೀತಾ. ಇಬ್ಬರನ್ನು ನೋಡಿದ ಸಿಹಿ ಮೊಗದಲ್ಲಿ ಖುಷಿ ಅರಳುತ್ತದೆ. ಇದೇ ವೇಳೆ ರಾಮನಿಂದ ಬಾಕಿ ದುಡ್ಡನ್ನೂ ವಸೂಲಿ ಮಾಡುತ್ತಾಳೆ ಸೀತಾ. ಹಣ ಲಕ್ಷ್ಮೀ ಇದ್ದಂತೆ, ಆಕೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಕಿವಿಮಾತೂ ರಾಮನಿಗೆ ಸಿಗುತ್ತದೆ.
ಇತ್ತ ಮ್ಯಾನೇಜರ್ ಚರಣ್.ಡಿ ಗೆ ಫೋನ್ ಮಾಡುವ ಭಾರ್ಗವಿ, ಆಫೀಸ್ನಲ್ಲಿ ಬಾಸ್ ಇದ್ದಾನಾ ಎಂದು ಕೇಳುತ್ತಾಳೆ. ಅಶೋಕನನ್ನೇ ನೋಡಿ, ಬಾಸ್ ಇದ್ದಾರೆ. ಒಂದಷ್ಟು ಫೈಲ್ಗಳನ್ನು ಗಂಭೀರವಾಗಿ ನೋಡುತ್ತಿದ್ದಾರೆ ಎಂದು ಹೇಳುತ್ತಾನೆ. ರಜೆ ಇದ್ದರೂ ರಾಮ್ಗೆ ಆಫೀಸ್ನಲ್ಲೇನು ಕೆಲಸ ಎಂದು ಅನುಮಾನ ಪಡುತ್ತಾಳೆ ಭಾರ್ಗವಿ. ಫೋನ್ ಇಡುವುದಕ್ಕೂ ಮುನ್ನ, ನಿಮ್ಮ ಬಾಸ್ ಹಿಂದೆ ಯಾವುದೋ ಹುಡುಗಿ ಬಿದ್ದಿದ್ದಾಳಾ ನೋಡು ಎನ್ನುತ್ತಾಳೆ. ಇತ್ತ ಆಫೀಸ್ ರಜೆಯಿದ್ದರೂ, ಬಾಗಿಲ ಬಳಿ ಗೊರಕೆ ಹೊಡೆಯುತ್ತ ನಿಂತ ಮ್ಯಾನೇಜರ್ ಚರಣ್ ಅವರನ್ನು ನೋಡಿದ ಅಶೋಕನಿಗೆ ಅನುಮಾನ ಬರುತ್ತದೆ.