Seetha Rama Serial: ‘ರಾಮನನ್ನು ಈ ಸ್ಥಿತಿಯಲ್ಲಿ ನೋಡಲಾಗ್ತಿಲ್ಲ, ಜಾಸ್ತಿ ಬೋರ್ ಹೊಡೆಸ್ಬೇಡಿ’; ಸೀತಾ ರಾಮ ಸೀರಿಯಲ್ ವೀಕ್ಷಕರ ಪ್ರಶ್ನೆ
Dec 07, 2023 10:51 AM IST
Seetha Rama Serial: ರಾಮನನ್ನು ಈ ಸ್ಥಿತಿಯಲ್ಲಿ ನೋಡಲಾಗ್ತಿಲ್ಲ, ಜಾಸ್ತಿ ಬೋರ್ ಹೊಡೆಸ್ಬೇಡಿ; ಸೀತಾ ರಾಮ ಸೀರಿಯಲ್ ವೀಕ್ಷಕರ ಪ್ರಶ್ನೆ
- Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಡಿಸೆಂಬರ್ 06ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಮನದ ನೋವನ್ನು ಬದಿಗಿಟ್ಟು, ಸೀತಾಳನ್ನು ಲಾಯರ್ ಜತೆ ಮದುವೆಗೆ ಒಪ್ಪಿಸಲು ಪ್ಲಾನ್ ಮಾಡಿದ್ದಾನೆ ರಾಮ.
Seetha Rama Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳ ಮದುವೆ ವಿಚಾರದ ಬಗ್ಗೆ ಹೆಚ್ಚು ಪ್ರಸ್ತಾಪವಾಗುತ್ತಿದೆ. ಆದರೆ, ಈ ಮದುವೆ ವಿಚಾರವೇ ಸೀತಾಳಿಗೆ ಗೊತ್ತಿಲ್ಲ. ಲಾಯರ್ ಪ್ರತಾಪ್, ಅಜ್ಜಿ ತಾತನ ಮುಂದೆ ಸೀತಾಳನ್ನ ಮದುವೆಯಾಗುವುದಾಗಿ ಹೇಳಿದ್ದಾನೆ. ಹೇಗಾದರೂ ಸರಿ ಲಾಯರ್ ಜತೆಗೆ ಸೀತಾಳ ಮದುವೆ ಮಾಡಿಸಬೇಕು ಎಂದು ರಾಮನ ಮುಂದೆ ಹೇಳಿಕೊಂಡಿದ್ದಾರೆ ಶಾಂತಮ್ಮಜ್ಜಿ.
ಸೀತಾಳ ಮೇಲೆ ಪ್ರೀತಿ, ಪ್ರೇಮ ಎಂದೆಲ್ಲ ಕನಸು ಕಂಡಿದ್ದ ರಾಮ್, ಶಾಂತಮ್ಮಜ್ಜಿಯ ಮಾತನ್ನು ನೆರವೇರಿಸಿಕೊಡಲು ಮುಂದಾಗಿದ್ದಾನೆ. ಅಶೋಕನ ಮಾತನ್ನು ಧಿಕ್ಕರಿಸಿ, ತನ್ನ ಪ್ರೀತಿಗಿಂತ ಅವರ ಮಾತೇ ಮುಖ್ಯ ಎಂದು, ಒಲ್ಲದ ಮನಸ್ಸಿನಲ್ಲಿಯೇ ರುದ್ರಪ್ರತಾಪ್ ಮತ್ತು ಸೀತಾಳನ್ನು ಒಂದಾಗಿಸಲು ಹೊರಟಿದ್ದಾನೆ. ಈ ನಡುವೆ ಲಾಯರ್ ಆಫೀಸ್‌ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೂ ಹೊರಟಿದ್ದಾಳೆ ಸೀತಾ.
ಹೀಗೆ ಹಲವು ಏರಿಳಿಗಳ ಜತೆಯಲ್ಲಿಯೇ ನೋಡಿಸಿಕೊಂಡು ಹೋಗುತ್ತಿದೆ ಸೀತಾ ರಾಮ ಸೀರಿಯಲ್. ಅಜ್ಜಿ ತಾತನ ಮುಂದೆ ತಾನೊಬ್ಬ ಸಾಚಾ ಎಂದು ತೋರಿಸಿಕೊಂಡು, ಸೀತಾಳನ್ನು ಬಲೆಗೆ ಹಾಕಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾನೆ ರುದ್ರಪ್ರತಾಪ್. ಬಗೆಬಗೆ ಉಡುಗೊರೆ ನೀಡುತ್ತ, ನೀವೆ ನನ್ನ ಅಪ್ಪ ಅಮ್ಮ ಎಂದು ಅವರ ಮುಂದೆ ಬಣ್ಣದ ಮಾತನಾಡುತ್ತ, ಮಸಲತ್ತು ಮುಂದುವರಿಸಿದ್ದಾನೆ ಲಾಯರ್. ಇತ್ತ ಅದೇ ಸೀತಾಳನ್ನು ತನ್ನ ಆಫೀಸ್‌ನಲ್ಲಿ, ತನ್ನ ಕಣ್ಣ ಮುಂದೆಯೇ ಪಾರ್ಟ್ ಟೈಮ್ ಕೆಲಸದ ನಿಮಿತ್ತ ತಂದೂ ಕೂರಿಸಿಕೊಂಡಿದ್ದಾನೆ.
ಇತ್ತ ಅಶೋಕ ಮತ್ತು ರಾಮ್ ನಡುವೆ ಮಾತುಕತೆ ಮುಂದುವರಿದಿದೆ. ಸಿಹಿಗೆ ಬೇಕಿರುವುದು ನನ್ನಂಥ ಫ್ರೆಂಡ್ ಅಲ್ಲ, ಆಕೆಗೆ ಬೇಕಿರುವುದು ಅಪ್ಪ. ಹಾಗಾಗಿ ಸಿಹಿಗೋಸ್ಕರನಾದ್ರೂ ಮದುವೆ ಆಗಿ ಎಂದು ಸೀತಾ ಅವರನ್ನು ಕನ್ವಿನ್ಸ್ ಮಾಡುತ್ತೇನೆಂದು ಅಶೋಕನ ಮುಂದೆ ಹೇಳಿಕೊಳ್ಳುತ್ತಿದ್ದಾನೆ ರಾಮ. ಆಫೀಸ್‌ನಲ್ಲಿ ಅಜ್ಜಿ ಹೇಳಿದ ಮಾತು, ಸಿಹಿಯ ಮಾತೇ ರಾಮ್ ಮನಸಲ್ಲಿ ಓಡಾಡುತ್ತಿದೆ. ಎದೆಯಲ್ಲಿರೋ ಭಾವನೆ ಮುಚ್ಚಿಟ್ಟು, ಇನ್ನೊಬ್ಬರ ಆಸೆ ಈಡೇರಿಸೋಕೆ ಸೀತಾ ಮುಂದೆ ನಿಂತಿದ್ದಾನೆ ಶ್ರೀರಾಮ.
ಗಂಭೀರವಾಗಿ ಕುಳಿತ ರಾಮನನ್ನು ನೋಡಿ ಸೀತಾ ಸಹ ಕೊಂಚ ಬೇಜಾರಾಗಿದ್ದಾರೆ. ಏನಾಯ್ತು ರಾಮ್‌ಗೆ ಎಂದು ಅಂದುಕೊಳ್ಳುತ್ತಿದ್ದಾಳೆ. ಇದೇ ವೇಳೆ ಇಬ್ಬರೂ ಮಾತಿಗಿಳಿದಿದ್ದಾರೆ. ನೀವೇ ನನ್ನ ಟ್ರೂ ಫ್ರೆಂಡ್ ಎಂದು ರಾಮ್ ಮುಂದೆ ಹೇಳಿಕೊಳ್ಳುತ್ತಿದ್ದಾಳೆ ಸೀತಾ. ನಿಮ್ಮ ಹತ್ತಿರ ಏನಾದ್ರೂ ಮುಚ್ಚಿಟ್ಟರೆ ನನಗೆ ಗಿಲ್ಟ್ ಕಾಡುತ್ತೆ. ಈಗಲೂ ಕಾಡ್ತಿದೆ ಎಂದಿದ್ದಾಳೆ ಸೀತಾ. ಆ ಗಿಲ್ಟ್ ಏನು? ಮದುವೆ ವಿಚಾರ ಪ್ರಸ್ತಾಪ ಮಾಡ್ತಾಳಾ? ಅಥವಾ ಲಾಯರ್ ಆಫೀಸ್‌ಗೆ ಕೆಲಸಕ್ಕೆ ಸೇರಿದ ವಿಚಾರ ಹೇಳಿಕೊಳ್ಳುತ್ತಾಳಾ? ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ವೀಕ್ಷಕರ ಪ್ರಶ್ನೆ..
ಆರಂಭದಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಬಂದಿರುವ ಸೀತಾ ರಾಮ ಸೀರಿಯಲ್, ಹಲವು ವಿಶೇಷತೆಗಳಿಂದಲೇ ಎಲ್ಲರ ಗಮನ ಸೆಳೆದಿದೆ. ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ. ಸೀತಾಳ ಮದುವೆ ವಿಚಾರ ಹೆಚ್ಚು ಚರ್ಚೆಯಲ್ಲಿದೆ. ಈ ಏಪಿಸೋಡ್‌ಗಳನ್ನು ನೋಡಿದ ವೀಕ್ಷಕ ಬೇಸರ ವ್ಯಕ್ತಪಡಿಸುತ್ತಿದ್ದಾನೆ. ರಾಮನ ಈ ಸ್ಥಿತಿ ನೋಡಲು ಆಗುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮೂಲಕ ತಿಳಿಸಿದರೆ, ಇನ್ನು ಕೆಲವರು ಕಥೆಯನ್ನು ಹೀಗೆ ಎಳೆಯುತ್ತಿದ್ದರೆ, ನೋಡಲು ಮನಸ್ಸಾಗುತ್ತಿಲ್ಲ, ಬೋರ್ ಹೊಡೆಸಬೇಡಿ ಎಂದೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.